ಪ್ರೀತಿಯ 'ಗೂಡು': ವಿಶಿಷ್ಠ ಸೇವೆ ಮೂಲಕ ಪಕ್ಷಿಗಳ ಕುರಿತು ಜಾಗೃತಿ ಮೂಡಿಸುತ್ತಿರುವ ಕರ್ನಾಟಕದ ದಂಪತಿ

ಮಾನವೀಯ ದೃಷ್ಟಿಯಿಂದ ಮನೆಯಲ್ಲಿ ಪಕ್ಷಿಗಳಿಗಾಗಿ ಗೂಡು ನಿರ್ಮಿಸುತ್ತಿದ್ದ ಕರ್ನಾಟಕದ ದಂಪತಿಗಳು ಇದೀಗ ಅದನ್ನೇ ಒಂದು ರೀತಿಯ ಹವ್ಯಾಸವಾಗಿ ಬೆಳೆಸಿಕೊಂಡು, ಆ ಮೂಲಕ ಪಕ್ಷಿಗಳ ಕುರಿತ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಗೂಡುಗಳ ನಿರ್ಮಾಣಕಾರ್ಯದಲ್ಲಿ ತೊಡಗಿರುವ ಶೆಟ್ಟಿ ದಂಪತಿ
ಗೂಡುಗಳ ನಿರ್ಮಾಣಕಾರ್ಯದಲ್ಲಿ ತೊಡಗಿರುವ ಶೆಟ್ಟಿ ದಂಪತಿ

ಮಂಗಳೂರು: ಮಾನವೀಯ ದೃಷ್ಟಿಯಿಂದ ಮನೆಯಲ್ಲಿ ಪಕ್ಷಿಗಳಿಗಾಗಿ ಗೂಡು ನಿರ್ಮಿಸುತ್ತಿದ್ದ ಕರ್ನಾಟಕದ ದಂಪತಿಗಳು ಇದೀಗ ಅದನ್ನೇ ಒಂದು ರೀತಿಯ ಹವ್ಯಾಸವಾಗಿ ಬೆಳೆಸಿಕೊಂಡು, ಆ ಮೂಲಕ ಪಕ್ಷಿಗಳ ಕುರಿತ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಈ ಹಿಂದೆ ತಮ್ಮ ಮನೆಯ ಅಂಗಳದಲ್ಲಿ ನಿರ್ಮಿಸಿದ್ದ ಗೂಡಿನಿಂದಾಗಿ ಪಕ್ಷಿಗಳಿಗೆ ಸಾಕಷ್ಟು ನೆರವಾಗಿತ್ತು. ಅದೇ ಸ್ಪೂರ್ತಿಯಿಂದ ಈ ದಂಪತಿಗಳು ಇದೀಗ ತಮ್ಮ ಸುತ್ತಮುತ್ತಲ ಪರಿಸರದಲ್ಲೂ ಪಕ್ಷಿಗಳಿಗಾಗಿ ಹಲವು ಬಗೆಯ ಗೂಡುಗಳನ್ನು ನಿರ್ಮಿಸುತ್ತಿದ್ದಾರೆ. 

ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ದಕ್ಷಿಣ ಕನ್ನಡದ ನಿವಾಸಿ 36 ವರ್ಷದ ನಿತ್ಯಾನಂದ ಶೆಟ್ಟಿ ಮತ್ತು ಅವರ ಪತ್ನಿ 26 ವರ್ಷದ ಎಂ.ಕಾಂ ಪದವೀಧರೆ ರಮ್ಯಾ ಅವರು ಕಳೆದ ಏಳು ವರ್ಷಗಳಿಂದ ಪಕ್ಷಿಗಳಿಗಾಗಿ ಸುರಕ್ಷಿತ ಗೂಡುಗಳನ್ನು ಒದಗಿಸುತ್ತಿದ್ದಾರೆ. ಗುಬ್ಬಚ್ಚಿ ಗೂಡು ಅಭಿಯಾನದ  ಸಂಸ್ಥಾಪಕರಾದ ನಿತ್ಯಾನಂದ ಶೆಟ್ಟಿ ತಮ್ಮ ಈ ನಿಸ್ವಾರ್ಥ ಕಾರ್ಯದ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ್ದು, 'ಪಕ್ಷಿಗಳನ್ನು ಸಂರಕ್ಷಿಸುವ ಧ್ಯೇಯವಾಕ್ಯದೊಂದಿಗೆ ನಾನು ಈ ವೇದಿಕೆಯನ್ನು ಆರಂಭಿಸಿದೆ. ನನ್ನ ಈ ಕಾರ್ಯಕ್ಕೆ ನನ್ನ ಮಡದಿ ಕೂಡ ಸಾಥ್ ನೀಡುತ್ತಿದ್ದಾರೆ. ಪಕ್ಷಿಗಳಿಗೆ ಮರ  ಮತ್ತು ಬಿದಿರು ಮತ್ತು ಮಣ್ಣಿನ ಮಡಕೆಗಳಿಂದ ಮಾಡಿದ ಗೂಡುಗಳನ್ನು ನಿರ್ಮಿಸುತ್ತಿದ್ದೇವೆ. ಅಲ್ಲದೆ ತಮ್ಮ ಜೀವಿತಾವಧಿವರೆಗೂ ಈ ಕಾರ್ಯ ಮಾಡುತ್ತೇವೆ ಎಂದು ಹೇಳಿದ್ದಾರೆ.

ತಮ್ಮ ಕಾರ್ಯದ ಮೂಲಕ ಈ ದಂಪತಿಗಳು ಪಕ್ಷಿಗಳ ಪ್ರಾಮುಖ್ಯತೆ ಮತ್ತು ಪರಿಸರ ವ್ಯವಸ್ಥೆಗೆ ಅವುಗಳ ಕೊಡುಗೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಶ್ರಮಿಸುತ್ತಿದ್ದಾರೆ. ಇನ್ನು ತಮ್ಮ ಜೀವನೋಪಾಯಕ್ಕೆ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಈ ರೈತ ದಂಪತಿಗಳು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ  ತಾಲ್ಲೂಕಿನ ಎಲಿಯನಾಡುಗೋಡು ಎಂಬಲ್ಲಿ ಎರಡು ಎಕರೆ ಭೂಮಿಯಲ್ಲಿ ಚಿಕ್ಕು, ಪೇರಲೆ, ಬಾಳೆಹಣ್ಣು ಮತ್ತು ಹಲಸಿನಂತಹ ವಿವಿಧ ಹಣ್ಣುಗಳನ್ನು ಹೊಂದಿರುವ ಮರಗಳನ್ನು ನೆಡುವ ಮೂಲಕ ತಮ್ಮದೇ ತೋಟದಲ್ಲಿ ಪಕ್ಷಿಗಳಿಗೆ ಸ್ವರ್ಗವನ್ನು ಸೃಷ್ಟಿಸಿದ್ದಾರೆ. ಕಳೆದ ವರ್ಷದ ಲಾಕ್‌ಡೌನ್ ಸಮಯದಲ್ಲಿ ನಡೆಸಿದ  ಸಮೀಕ್ಷೆಯ ಪ್ರಕಾರ 93 ಜಾತಿಯ ಪಕ್ಷಿಗಳು ಮಂಗಳೂರಿನಿಂದ 50 ಕಿಮೀ ದೂರದಲ್ಲಿರುವ ಶೆಟ್ಟಿ ಕುಟುಂಬದ ತೋಟಕ್ಕೆ ಬಂದಿವೆ. ಅಲ್ಲದೆ ಅಲ್ಲಿಯೇ ಮನೆಯನ್ನಾಗಿ ಮಾಡಿಕೊಂಡು ತಮ್ಮ ಜೀವನ ಸಾಗಿಸುತ್ತಿವೆ. 

ಅಳಿವಿನಂಚಿನಲ್ಲಿರುವ ಪಕ್ಷಿಸಂತತಿಯ ಬಗ್ಗೆ ಸದಾ ಚಿಂತಿಸುವ ಈ ದಂಪತಿ ಮನೆಯ 2 ಎಕರೆ ಜಾಗದಲ್ಲಿ 'ಗುಬ್ಬಚ್ಚಿಗೂಡು' ಎಂಬ ಹೆಸರಿನಲ್ಲಿ ಪಕ್ಷಿಗಳಿಗೆ ಆವಾಸಸ್ಥಾನ ಮಾಡಿದ್ದಾರೆ. ಪ್ರತಿದಿನ ಹತ್ತಾರು ಜಾತಿಯ ನೂರಾರು ಪಕ್ಷಿಗಳು ಗುಬ್ಬಚ್ಚಿಗೂಡಿಗೆ ಭೇಟಿ ನೀಡುತ್ತವೆ. ಬೇಸಿಗೆ ಕಾಲದಲ್ಲಿ ಆಹಾರ ಕೊರತೆಯಿಂದ  ವಲಸೆ ಹೋಗುವ ಪಕ್ಷಿಗಳಿಗೆ ಇವರು ಆಪತ್ಭಾಂದವರಾಗಿದ್ದಾರೆ. ಶೆಟ್ಟಿ ಅವರ ಮನೆಗೆ ಭೇಟಿ ನೀಡಿದಾಗ ಮೊದಲು ಅವರ ತೋಟದಲ್ಲಿರುವ ಈ ಹಕ್ಕಿಗಳ ಚಿಲಿಪಿಲಿ ಸದ್ದು ಸ್ವಾಗತ ಕೋರುತ್ತವೆ. 

'ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ' ಎಂಬ ಸಂದೇಶದೊಂದಿಗೆ ರಾಜ್ಯದ 168 ಶಾಲೆಗಳಿಗೆ ಭೇಟಿ ನೀಡಿ ಉಚಿತವಾಗಿ ಪಕ್ಷಿಗಳ ಕುರಿತು ಜಾಗೃತಿ ಮೂಡಿಸಿದ್ದಾರೆ. ಅಲ್ಲದೆ, ಪಕ್ಷಿಗಳಿಗೆ ನೀರು, ಆಹಾರ ಇಡಲು ಮಣ್ಣಿನ ಪಾತ್ರೆಗಳನ್ನೂ ಕೂಡ ನೀಡಿದ್ದಾರೆ. ಇದಲ್ಲದೆ ಮನೆ-ಮನಗಳಲ್ಲಿ  ಗುಬ್ಬಚ್ಚಿಗೂಡು' ಅಭಿಯಾನದಲ್ಲಿ 600 ಮನೆಗಳಿಗೆ ಮಣ್ಣಿನ ಪಾತ್ರೆಗಳನ್ನು ಉಚಿತವಾಗಿ ನೀಡಿದ್ದಾರೆ. ಪ್ರತಿ ಭಾನುವಾರ ಒಂದೊಂದು ಹಳ್ಳಿಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಜಮ್ಮು ಕಾಶ್ಮೀರ, ಪಂಜಾಬ್‌, ಉತ್ತರಾಖಂಡ, ದೆಹಲಿ ಮುಂತಾದ ರಾಜ್ಯಗಳಲ್ಲಿ ಸಂಚರಿಸಿ ಪಕ್ಷಿ ಉಳಿವಿನ ಬಗ್ಗೆ  ಸಾರ್ವಜನಿಕರಿಗೆ ಅರಿವು ನೀಡುತ್ತಿದ್ದಾರೆ. ಎಂ.ಕಾಂ. ಪದವೀಧರೆಯಾಗಿರುವ ರಮ್ಯಾ, ಪ್ರಸ್ತುತ ಮೂಡುಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ಪ್ರಥಮ ವರ್ಷ ಬಿ.ಇಡಿ ವ್ಯಾಸಂಗ ಮಾಡುತ್ತಿದ್ದಾರೆ.

ಇನ್ನು ತಮ್ಮ ಕಾರ್ಯದ ಬಗ್ಗೆ ಕುರಿತು ಖುಷಿಯಿಂದಲೇ ಮಗುವಾಗಿದ್ದಾಗ, ತನ್ನ ತಾಯಿ ಯಾವಾಗಲೂ ಪಕ್ಷಿಗಳ ಮೇಲೆ ಕರುಣೆ ತೋರಿ ಅವುಗಳಿಗೆ ನೆರವು ನೀಡುತ್ತಿದ್ದರು. ಅದು ನನ್ನ ಮೇಲೆ ಅಗಾಧವಾದ ಪರಿಣಾಮ ಬೀರಿತು. ನನ್ನ ಜೀವನವನ್ನು ಬದಲಾಯಿಸುವ ಪರಿಣಾಮವನ್ನು ಬೀರಿತು, ಆದ್ದರಿಂದ ನಾನು ಈಗ  ಪಕ್ಷಿಗಳಲ್ಲೇ ನನ್ನ ಜೀವನ ನೋಡುತ್ತಿದ್ದೇನೆ ಎಂದು ಹೇಳಿದರು.

ಪಕ್ಷಿಗಳು ಸಹ ಹಸಿವು ಮತ್ತು ಬಾಯಾರಿಕೆಯನ್ನು ಅನುಭವಿಸುತ್ತವೆ. ನಮಗೆ ಆಹಾರ ಮತ್ತು ನೀರು ಲಭ್ಯವಿಲ್ಲದಿದ್ದರೆ ನಾವು ಎಷ್ಟು ಅಸಹಾಯಕರಾಗಿದ್ದೇವೆ? ಅವರ ನಿಸ್ವಾರ್ಥ ಕೆಲಸದ ಹಿಂದಿನ ಉದ್ದೇಶದ ಬಗ್ಗೆ ಕೇಳಿದಾಗ ಉತ್ತರಿಸಿದ ಅವರು, ನನಗೆ ಒಮ್ಮೆ ಅಪರಿಚಿತರೊಬ್ಬರು ಕರೆ ಮಾಡಿ ತಮ್ಮ ಮನೆಯ  ಹೊರಗಿನ ಮರಗಳ ಮೇಲೆ ತೂಗಾಡಲು ಎರಡು ಗೂಡುಗಳನ್ನು ಒದಗಿಸಬಹುದೇ ಎಂದು ಕೇಳಿದ್ದರು. ಕೆಲವೇ ಗಂಟೆಗಳಲ್ಲಿ, ಶೆಟ್ಟಿ ತಮ್ಮ ದ್ವಿಚಕ್ರ ವಾಹನದಲ್ಲಿ ಹೊರಟು, ತಮ್ಮೊಂದಿಗೆ ಮೂರು ಗೂಡುಗಳನ್ನು ಹೊತ್ತು ಅವರು ಕರೆ ಮಾಡಿದ ಸ್ಥಳಕ್ಕೆ ತೆರಳಿ ತಲುಪಿಸಿದರು. ಅಲ್ಲದೆ ಹೆಚ್ಚುವರಿ ಗೂಡುಗಳು ಬೇಕು ಎಂದು  ಯಾರಾದರೂ ಬಯಸಿದರೆ ಅವರಿಗೂ ನೀಡುತ್ತೇನೆ ಎಂದು ಹೇಳಿದರು. ಈ ವೇಳೆ ಗೂಡು ಪಡೆದವರು ಶೆಟ್ಟಿ ಅವರಿಗೆ ಹಣ ನೀಡಲು ಮುಂದಾದಾಗ ಅವರು ಅದನ್ನು ಬೇಡ ಎಂದು ಹೇಳಿದರು. 

ಶೆಟ್ಟಿ ದಂಪತಿಗಳು ತಮ್ಮ ಉದಾತ್ತ ಕೆಲಸಕ್ಕಾಗಿ ಯಾವುದೇ ಹಣವನ್ನು ಸ್ವೀಕರಿಸುವುದಿಲ್ಲ ಮತ್ತು ಸಣ್ಣ ಜೀವಿಗಳ ಕಾರಣಕ್ಕಾಗಿ ತಮ್ಮ ಕಷ್ಟಪಟ್ಟು ಸಂಪಾದಿಸಿದ ಹಣದಿಂದ ಒಂದು ಭಾಗವನ್ನು ಖರ್ಚು ಮಾಡುತ್ತಾರೆ. ದಂಪತಿಗಳು ತಮ್ಮ ಎರಡು ವರ್ಷದ ಮಗುವಿನೊಂದಿಗೆ ವಾಸಿಸುತ್ತಿದ್ದು, ಸರಳ ಜೀವನ  ನಡೆಸುತ್ತಿದ್ದಾರೆ. ಧೋತಿ ಪ್ಯಾಂಟ್ ತೊಡುವ ಶೆಟ್ಟಿ ಅವರು ಪಾದರಕ್ಷೆಗಳನ್ನು ಸಹ ಧರಿಸುವುದಿಲ್ಲ. ಅಂತಹ ಸರಳ ಜೀವಿ ಶೆಟ್ಟಿ.

ಕಳೆದ ಏಳು ವರ್ಷಗಳಲ್ಲಿ, ದಂಪತಿಗಳು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ನೂರಾರು ನಿವಾಸಿಗಳಿಗೆ 1,000 ಕ್ಕೂ ಹೆಚ್ಚು ಗೂಡುಗಳನ್ನು ವಿತರಿಸಿದ್ದಾರೆ. ಅವರು ಶಾಲೆಗಳು ಮತ್ತು ಹಳ್ಳಿಗಳಲ್ಲಿ ಪಕ್ಷಿಗಳ ಸಂರಕ್ಷಣೆಯ ಮಹತ್ವದ ಕುರಿತು ನೂರಾರು ಕಾರ್ಯಕ್ರಮ ನೀಡಿದ್ದಾರೆ.

"ಒಮ್ಮೆ ನಾವು ಜಮ್ಮು ಮತ್ತು ಕಾಶ್ಮೀರಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆವು ... ನಮ್ಮ ನೂರಾರು ಸಹ ಪ್ರಯಾಣಿಕರಿಗೆ ಪಕ್ಷಿಗಳನ್ನು ರಕ್ಷಿಸುವ ಅಗತ್ಯವನ್ನು ಒತ್ತಿಹೇಳುವ ಹ್ಯಾಂಡ್‌ಬಿಲ್‌ಗಳನ್ನು ನಾವು ವಿತರಿಸಿದ್ದೇವೆ" ಎಂದು ಶೆಟ್ಟಿ ಹೇಳಿದ್ದಾರೆ.

ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ತಮ್ಮ ಜಾಗೃತಿ ಅಭಿಯಾನದ ಕುರಿತು ಮಾಹಿತಿ ಸಾರುವ ಮೂಲಕ ಮತ್ತಷ್ಟು ಜನರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಈ ದಂಪತಿಗಳು ನಿಯಮಿತವಾಗಿ ಯೂಟ್ಯೂಬ್‌ನಲ್ಲಿ ವೀಡಿಯೊಗಳನ್ನು ಅಪ್‌ಲೋಡ್ ಮಾಡುತ್ತಾರೆ. ಪಕ್ಷಿಗಳನ್ನು ಸಂರಕ್ಷಿಸುವ ಮಹತ್ವದ ಬಗ್ಗೆ  ಜನರಿಗೆ ಶಿಕ್ಷಣ ನೀಡುತ್ತಾರೆ. ಯಾರಾದರೂ ತಮ್ಮ ಮನೆಯ ಸುತ್ತ ಗೂಡು ಇಡಲು ಮುಂದೆ ಬಂದರೆ ನಮಗೆ ತುಂಬಾ ಸಂತೋಷವಾಗುತ್ತದೆ. ಅವರು ನಿಜವಾಗಿಯೂ ಪಕ್ಷಿಗಳ ಬಗ್ಗೆ ಕಾಳಜಿ ವಹಿಸುತ್ತಾರೆ ಎಂಬುದನ್ನು ಇದು ತೋರಿಸುತ್ತದೆ ಎಂದು ಶೆಟ್ಟಿ ಹೇಳುತ್ತಾರೆ. 

ಇನ್ನು ಶೆಟ್ಟಿ ಅವರು ತಮ್ಮ ಈ ಕಾರ್ಯಕ್ಕಾಗಿ ಸ್ನೇಹಿತರು ಮತ್ತು ಸಂಬಂಧಿಕರಿಂದ ಬಿದಿರನ್ನು ಪಡೆಯುತ್ತಾರೆ, ಅವರು ಸ್ಥಳೀಯ ಮಾರುಕಟ್ಟೆಯಿಂದ ಮಣ್ಣಿನ ಮಡಕೆಗಳು ಮತ್ತು ಮರವನ್ನು ಖರೀದಿಸುತ್ತಾರೆ. 

ಪಕ್ಷಿಗಳನ್ನು ಆಕರ್ಷಿಸಲು ಗೂಡುಗಳನ್ನು ಇರಿಸಲು ಸೂಕ್ತ ಸ್ಥಳವನ್ನು ಪತ್ತೆ ಮಾಡಲು ತಮ್ಮದೇ ಆದ ವಿಶಿಷ್ಠ ತಂತ್ರ ಬಳಕೆ ಮಾಡುತ್ತಾರೆ. ಬೆಕ್ಕುಗಳಂತಹ ಸಾಕುಪ್ರಾಣಿಗಳ ಹಾವಳಿ, ವಾಹನ ಶಬ್ದ ಮತ್ತು ಚಲನೆಯು ಪಕ್ಷಿಗಳಿಗೆ ಗಂಭೀರ ಅಪಾಯವನ್ನುಂಟುಮಾಡುತ್ತದೆ. ಹಾಗಾಗಿ, ಮಳೆಯಿಂದ ಗೂಡುಗಳನ್ನು ರಕ್ಷಿಸಲು  ನಾವು ಶಾಂತ ಮತ್ತು ನೆರಳಿನಲ್ಲಿರುವ ಸ್ಥಳವನ್ನು ಆರಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಬೇಸಿಗೆಯ ತಿಂಗಳುಗಳಲ್ಲಿ ಪಕ್ಷಿಗಳಿಗೆ ನೀರು ಮತ್ತು ಧಾನ್ಯಗಳನ್ನು ನೀಡುವಂತೆ ಅವರು ಜನರಿಗೆ ಮನವಿ ಮಾಡುತ್ತಿದ್ದು, ಮಳೆಗಾಲದಲ್ಲಿ ಸಸಿಗಳನ್ನು ನೆಟ್ಟು ಭವಿಷ್ಯದಲ್ಲಿ ಪಕ್ಷಿಗಳನ್ನು ಆಕರ್ಷಿಸುವ ಕಾರ್ಯಕ್ಕೂ  ಮುಂದಾಗುತ್ತಾರೆ.

ಪಕ್ಷಿಗಳು ಮಾನವನ ವಾಸದ ಆರೋಗ್ಯದ ಸಂಕೇತ ಎಂದು ಶೆಟ್ಟಿ ಹೇಳಿದ್ದು, ನಾವು ಕಾಗೆಗಳನ್ನು ಓಡಿಸುತ್ತೇವೆ. ಆದರೆ ಅದು ಮನುಷ್ಯರಿಗೆ ಸ್ಕಾವೆಂಜರ್‌ಗಳಾಗಿ ಸಹಾಯ ಮಾಡುತ್ತದೆ. ಗುಬ್ಬಚ್ಚಿಗಳು ಸಹ ಕಾಣೆಯಾಗಿವೆ ... ಅದೇ ನೈಟಿಂಗೇಲ್‌ನ ವಿಷಯಕ್ಕೆ ಬಂದರೆ, ಪಕ್ಷಿಗಳು ಸಂತಾನೋತ್ಪತ್ತಿ ಉದ್ದೇಶಗಳಿಗಾಗಿ  ದೂರದ ಸ್ಥಳಗಳಿಗೆ ವಲಸೆ ಹೋಗುವುದು ಸಾಮಾನ್ಯವಾಗಿದೆ. ಆದರೆ ಅವರು ಆಹಾರ ಮತ್ತು ನೀರಿಗಾಗಿ ವಲಸೆ ಹೋದರೆ, ಅದು ಮಾನವರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಶೆಟ್ಟಿ ಅವರು ಎಚ್ಚರಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com