ಜಿಂಕೆಗಳಿಗಾಗಿ 45 ಎಕರೆ ಭೂಮಿ ಮೀಸಲಿಟ್ಟ ರೈತ: ಕಳೆದ 20 ವರ್ಷಗಳಲ್ಲಿ ಜಿಂಕೆಗಳ ಸಂಖ್ಯೆ ಮೂರು ಪಟ್ಟು ಹೆಚ್ಚಳ

ಭೂ ದಾನ ಚಳವಳಿಯ ಬಗ್ಗೆ ನಾವೆಲ್ಲರೂ ಕೇಳಿದ್ದೇವೆ. ತಮಿಳುನಾಡಿನ ರೈತರೊಬ್ಬರು ಪಿತ್ರಾರ್ಜಿತವಾಗಿ ಬಂದ 45 ಎಕರೆ ಭೂಮಿಯನ್ನು ಜಿಂಕೆಗಳಿಗಾಗಿ ಮೀಸಲಿಟ್ಟು ತ್ಯಾಗ ಮನೋಭಾವ ಮೆರೆದಿದ್ದಾರೆ.
ಗುರುಸ್ವಾಮಿ ಭೂಮಿಯಲ್ಲಿನ ಜಿಂಕೆಗಳು
ಗುರುಸ್ವಾಮಿ ಭೂಮಿಯಲ್ಲಿನ ಜಿಂಕೆಗಳು

ತಿರುಪ್ಪುರ್: ತಮಿಳುನಾಡಿನ ಪುದುಪಾಳ್ಯಂ ಎಂಬಲ್ಲಿನ ರೈತ ಆರ್ ಗುರುಸ್ವಾಮಿ ಎಂಬುವವರು ಕಳೆದ 20 ವರ್ಷಗಳಿಂದ ತಮ್ಮ 45 ಎಕರೆ ಭೂಮಿಯನ್ನು ಜಿಂಕೆ ಹುಲ್ಲು ಮೇಯಲೆಂದು ಬಿಟ್ಟುಬಿಟ್ಟಿರುವ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ.ಇದರಿಂದಾಗಿ 400ರಷ್ಟಿದ್ದ ಜಿಂಕೆಗಳ ಸಂತತಿ ಇದೀಗ 1200ಕ್ಕೆ ಏರಿಕೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ರೈತನಾಗಿದ್ದರಿಂದ ಪ್ರಕೃತಿ ಜೊತೆ ವಿಶೇಷ ಬಾಂಧವ್ಯ ಹೊಂದಿರುವುದರಿಂದ ತಾವು ಜಿಂಕೆಗಳಿಗಾಗಿಯೇ ತಮ್ಮ ಭೂಮಿಯನ್ನು ಬಿಟ್ಟುಕೊಡಲು ಸಾಧ್ಯವಾಗಿದ್ದಾಗಿ ಗುರುಸ್ವಾಮಿ ಹೇಳುತ್ತಾರೆ. ಕೌಶಿಕಾ ನದಿಯ ಸನಿಹದಲ್ಲೇ ಇರುವ ತಮ್ಮ 45 ಎಕರೆ ಭೂಮಿ ಅವರ ಪಿತ್ರಾರ್ಜಿತ ಆಸ್ತಿ. 

<strong>ರೈತ ಆರ್ ಗುರುಸ್ವಾಮಿ</strong>
ರೈತ ಆರ್ ಗುರುಸ್ವಾಮಿ

1996ರಲ್ಲಿ ಈ ಪ್ರದೇಶದಲ್ಲಿ ಹೊಲ ಉಳುವ ಸಂದರ್ಭದಲ್ಲಿ ಜಿಂಕೆಯೊಂದು ಅವರ ಕಣ್ಣಿಗೆ ಬಿದ್ದಿತ್ತು. ಅದರ ಹಿಂದೆಯೇ ಒಂದಷ್ಟು ಜಿಂಕೆಗಳಿದ್ದವು. ಗುರುಸ್ವಾಮಿ ಅದನ್ನು ಓಡಿಸಲಿಲ್ಲ. ಅವುಗಳಿಗೆ ಏನನ್ನಿಸಿತೋ ಏನೋ, ಸ್ವಲ್ಪ ಸಮಯದ ನಂತರ ಗುರುಸ್ವಾಮಿಯವರ ಜಾನುವಾರುಗಳು ಹುಲ್ಲು ಮೇಯುತ್ತಿದ್ದಲ್ಲಿಗೆ ಹೋಗಿ ಅದರ ಜೊತೆಗೆ ಜಿಂಕೆಗಳೂ ಹುಲ್ಲು ಮೇಯತೊಡಗಿದವು. ನಂತರ ಆ ಜಿಂಕೆಗಳು ಅಲ್ಲಿಯೇ ಇರತೊಡಗಿದವು. 

ಅವರ ಭೂಮಿಯಲ್ಲಿ ವರ್ಷಪೂರ್ತಿ ಹುಲ್ಲು ಬೆಳೆದಿರುತ್ತಿತ್ತು. ಹೀಗಾಗಿ ಜಿಂಕೆಗಳೂ ಹುಲ್ಲನ್ನು ಆಹಾರಕ್ಕಾಗಿ ಅವಲಂಬಿಸಿದ್ದರಿಂದ ಅವಕ್ಕೆ ಆಹಾರ ಸಮಸ್ಯೆ ಉದ್ಭವವಾಗುವ ಪ್ರಮೇಯವೇ ಇರಲಿಲ್ಲ. ಅಲ್ಲದೆ ಹತ್ತಿರದಲ್ಲೇ ನದಿ ಇದ್ದುದರಿಂದ ನೀರಿಗೂ ಸಮಸ್ಯೆಯಿರಲಿಲ್ಲ.

ಒಮ್ಮೆ ನದಿ ನೀರು ಬತ್ತಿದಾಗ ತಮ್ಮ ಭೂಮಿಯಲ್ಲಿ ಜಿಂಕೆಗಳಿಗೆ ಗುಂಡಿ ತೋಡಿ ನೀರು ತುಂಬಿಸಿದ್ದರು ಗುರುಸ್ವಾಮಿ. ಆ ಸಮಯದಲ್ಲಿ ಜಿಂಕೆಗಳು ಮಾತ್ರವಲ್ಲದೆ ಅನೇಕ ಪ್ರಾಣಿ ಪಕ್ಷಿಗಳು ಅಲ್ಲಿಗೆ ನೀರು ಕುಡಿಯಲು ಬಂದಿದ್ದಾಗಿ ಗುರುಸ್ವಾಮಿ ನೆನಪಿಸಿಕೊಳ್ಳುತ್ತಾರೆ. 

ಪ್ರಾಣಿಗಳನ್ನು ಬೇಟೆಯಾಡಲು ಯಾವುದೇ ಮಾಂಸಭಕ್ಷಕ ಪ್ರಾಣಿಗಳು ಇಲ್ಲದೇ ಇರುವುದರಿಂದ ಪ್ರಾಣಿಗಳು ಗುರುಸ್ವಾಮಿ ಅವರ ಭೂಮಿ ಮಾತ್ರವಲ್ಲದೆ ಹತ್ತಿರದ ಹೊಲಗಳಲ್ಲಿಯೂ ಪ್ರಾಣಿಗಳು ಆಶ್ರಯ ಪಡೆದುಕೊಂಡಿವೆ. ಗುರುಸ್ವಾಮಿಯವರಿಂದ ಪ್ರೇರಣೆ ಪಡೆದ ಅದರ ಮಾಲೀಕರೂ ಪ್ರಾಣಿಗಳನ್ನು ಓಡಿಸಲು ಹೋಗಿಲ್ಲ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com