ಹಿಂದಿನ ಕೋವಿಡ್ ಪಾಠ ಕಲಿಸಿದೆ, ಈಗ ಪರಿಸ್ಥಿತಿ ನಿಭಾಯಿಸಲು ಸಿದ್ಧರಿದ್ದೇವೆ: ಆರೋಗ್ಯ ಇಲಾಖೆ ಆಯುಕ್ತ ರಂದೀಪ್ (ಸಂದರ್ಶನ)

ರಾಜ್ಯದಲ್ಲಿ ಕೋವಿಡ್ ಸೋಂಕು ಮತ್ತೆ ಉಲ್ಭಣಗೊಳ್ಳುತ್ತಿದ್ದು, ವೈರಸ್ ಕುರಿತು ಜನರಲ್ಲಿ ಆತಂಕ ಶುರುವಾಗಿದೆ. ಆದರೂ ಯಾವುದೇ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರದೆ, ಸೋಂಕು ಹರಡುವಿಕೆಯನ್ನು ತಡೆಗಟ್ಟುವ ಪ್ರಾಮುಖ್ಯತೆ ಕುರಿತು ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಅವರು ಒತ್ತಿ ಹೇಳಿದ್ದಾರೆ.
ಆರೋಗ್ಯ ಇಲಾಖೆ ಆಯುಕ್ತ ರಂದೀಪ್
ಆರೋಗ್ಯ ಇಲಾಖೆ ಆಯುಕ್ತ ರಂದೀಪ್

ರಾಜ್ಯದಲ್ಲಿ ಕೋವಿಡ್ ಸೋಂಕು ಮತ್ತೆ ಉಲ್ಭಣಗೊಳ್ಳುತ್ತಿದ್ದು, ವೈರಸ್ ಕುರಿತು ಜನರಲ್ಲಿ ಆತಂಕ ಶುರುವಾಗಿದೆ. ಆದರೂ ಯಾವುದೇ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರದೆ, ಸೋಂಕು ಹರಡುವಿಕೆಯನ್ನು ತಡೆಗಟ್ಟುವ ಪ್ರಾಮುಖ್ಯತೆ ಕುರಿತು ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಅವರು ಒತ್ತಿ ಹೇಳಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ರಂದೀಪ್ ಅವರು, ಹೊಸ ರೂಪಾಂತರಿ ವೈರಸ್ ಹಾಗೂ ಸೋಂಕು ಹರಡುವಿಕೆ ಕುರಿತು ಇಲಾಖೆ ಕೈಗೊಂಡಿರುವ ಕ್ಮಗಳ ಕುರಿತು ಮಾತನಾಡಿದ್ದಾರೆ.

ರಾಜ್ಯದಲ್ಲಿನ ಪ್ರಸ್ತುತ ಕೋವಿಡ್ ಪರಿಸ್ಥಿತಿ ಹಾಗೂ ಹೊಸ ರೂಪಾಂತರಿ ವೈರಲ್ ಜೆನ್.1 ಬಗ್ಗೆ ಏನು ಹೇಳುತ್ತೀರಿ?
ಕೋವಿಡ್ ಇನ್ನೂ ನಮ್ಮ ನಡುವೆಯೇ ಇದೆ ಎಂಬುದನ್ನು ನಾವೆಲ್ಲರೂ ಆರಿತುಕೊಳ್ಳಬೇಕಿದೆ. ಹೊಸ ರೂಪಾಂತರಿ ವೈರಸ್ ನಲ್ಲಿ ನಾವು ಸೋಂಕು ಹರಡುವ ದರ ಮತ್ತು ತೀವ್ರತೆಯನ್ನು ನೋಡಲಾಗುತ್ತದೆ. ತೀವ್ರತೆ ಮತ್ತು ದರ ಹೆಚ್ಚಾಗಿದ್ದರೆ, ಅದು ಆರೋಗ್ಯದ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗುವುದು ಹಾಗೂ ಸಾವುಗಳಲ್ಲೂ ಹೆಚ್ಚಳವನ್ನು ಕಾಣುತ್ತೇವೆ. ಜೆಎನ್.1 ಒಮಿಕ್ರಾನ್ ರೂಪಾಂತರಿ ವೈರಸ್'ನ ಉಪರೂಪವಾಗಿದೆ. ಇದು ವೇಗವಾಗಿ ಹರಡುವ ರೂಪಾಂತರಿ ವೈರಸ್ ಗಳಲ್ಲಿ ಒಂದಾಗಿದೆ. ಮನೆಯಲ್ಲಿ ಒಬ್ಬ ವ್ಯಕ್ತಿಗೆ ಸೋಂಕು ತಗುಲಿದರೆ, ಅದು ಇಡೀ ಕುಟುಂಬಕ್ಕೆ ಹರಡುವ ಸಾಧ್ಯತೆಗಳಿವೆ. ಪ್ರಸ್ತುತ ಲಭ್ಯವಿರುವ ಮಾಹಿತಿಗಳ ಪ್ರಕಾರ ಇದರಿಂದ ಸಾವುಗಳು ಹಾಗೂ ಆಸ್ಪತ್ರೆಗೆ ದಾಖಲಾಗುತ್ತಿರುವ ಸಂಖ್ಯೆಯಲ್ಲಿ ಹೆಚ್ಚಳಗಳು ಕಂಡು ಬಂದಿಲ್ಲ. ಹಿರಿಯ ನಾಗರೀಕರು ಹಾಗೂ ದೀರ್ಘಕಾಲಿಕ ರೋಗಗಳಿಂದ ಬಳಲುತ್ತಿರುವವರು ಹೆಚ್ಚು ಸಾವಿಗೀಡಾಗುತ್ತಿದ್ದಾರೆ.

ಈಗಾಗಲೇ ಬಹುತೇಕ ಮಂದಿ ಎರಡು ಡೋಸ್ ಲಸಿಕೆಗಳನ್ನು ಪಡೆದುಕೊಂಡಿದ್ದಾರೆ. ಇದು ಸೋಂಕಿನಿಂದ ರಕ್ಷಿಸುತ್ತದೆಯೇ?
ಜೆಎನ್1 ರೂಪಾಂತರಿ ವೈರಸ್ ಆಗಿರುವ ಕಾರಣ ಎರಡು ಡೋಸ್ ಲಸಿಕೆ ಹಾಕಿಸಿಕೊಂಡವರೂ ಕೂಡ ಸೋಂಕಿಗೊಳಗಾಗುವ ಸಾಧ್ಯತೆಗಳಿವೆ. ಆದರೂ ಲಸಿಕೆಗಳು ರಕ್ಷಣೆಯನ್ನು ನೀಡುತ್ತವೆ. ಸೋಂಕಿನ ಪ್ರಭಾವವನ್ನು ಕಡಿಮೆ ಮಾಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಈ ಲಸಿಕೆಗಳು ಮರಣ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದೆ. ಆದರೆ ಪ್ರಸ್ತುತ ಲಸಿಕೆಗಳು ಎಷ್ಟರ ಮಟ್ಟಿಗೆ ರಕ್ಷಿಸುತ್ತವೆ ಅಥವಾ ಮತ್ತಷ್ಟು ಡೋಸ್ ಅಗತ್ಯವಿದೆಯೇ ಅಥವಾ ಹೊಸ ಲಸಿಕೆಗಳು ಅಗತ್ಯವಿದೆಯೇ ಎಂಬುದರ ಕುರಿತು ಇನ್ನೂ ಯಾವುದೇ ಮಾಹಿತಿಗು ಬಂದಿಲ್ಲ. ಈ ಎಲ್ಲಾ ವಿಷಯಗಳ ಕುರಿತು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯು ನಿರ್ಧಾರ ತೆಗೆದುಕೊಂಡು, ಶಿಫಾರಸು ಮಾಡಬೇಕು.

ಹಿಂದಿನ ಕೋವಿಡ್ ಪರಿಸ್ಥಿತಿಯಿಂದ ಸರ್ಕಾರ ಪಾಠ ಕಲಿತಿದೆ. ಈ ಬಾರಿ ಎಷ್ಟರ ಮಟ್ಟಿಗೆ ಸಿದ್ಧತೆ ನಡೆಸಿದೆ?
ವ್ಯವಸ್ಥೆ ಹಾಗೂ ಪ್ರಕ್ರಿಯೆಗಳು ಜಾರಿಯಲ್ಲಿವೆ. ಪ್ರತಿಯೊಂದು ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಪ್ರೆಶರ್ ಸ್ವಿಂಗ್ ಅಡ್ಸಾರ್ಪ್ಶನ್ (ಪಿಎಸ್‌ಎ) ಪ್ಲಾಂಟ್‌ಗಳು ಮತ್ತು ಎಲ್‌ಎಂಒ ಟ್ಯಾಂಕ್‌ಗಳಿವೆ. ಆಮ್ಲಜನಕದ ಸಾಮರ್ಥ್ಯವು ಹೆಚ್ಚಾಗಿದೆ. ಇದು ಮುಂಬರುವ ದಿನಗಳಲ್ಲಿ ಸಕ್ರಿಯ ಪ್ರಕರಣಗಳು ಹೆಚ್ಚಾದರೆ ಆಸ್ಪತ್ರೆಯ ಹಾಸಿಗೆಗಳು ಮತ್ತು ಐಸಿಯುಗಳು ಮತ್ತು ಮೂಲಸೌಕರ್ಯಗಳು ಲಭ್ಯವಾಗುವಂತೆ ಮಾಡಲಿದೆ. ಕಳೆದ 3 ವರ್ಷಗಳಲ್ಲಿ ವಿಕಸನಗೊಂಡಿರುವ ಕೋವಿಡ್ ಪ್ರೋಟೋಕಾಲ್‌ಗಳ ಜೊತೆಗೆ ಇರುವ ಮೂಲಸೌಕರ್ಯ ಸೇರ್ಪಡೆ ಪರಿಸ್ಥಿತಿ ಎದುರಿಸಲು ಸಹಾಯ ಮಾಡುತ್ತದೆ,

ಪ್ರಸ್ತುತ ಕೋವಿಡ್ ಪರಿಸ್ಥಿತಿಯನ್ನ ಮತ್ತೊಂದು ಅಲೆ ಎಂದು ಕರೆಯಬಹುದೇ?
ಸೋಂಕು ಕಾಣಿಸಿಕೊಂಡ ಕೂಡಲೇ ಅದನ್ನು ಅಲೆ ಎಂದು ಹೇಳಲು ಸಾಧ್ಯವಿಲ್ಲ. ನಾವು ದಿನಕ್ಕೆ 5,000ಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಆ ಸಂಖ್ಯೆಯನ್ನು ಹೆಚ್ಚಿಸಲಾಗುವುದು.

ಮೊದಲ ಅಲೆಯಲ್ಲಿ ಸೋಂಕು ಎಲ್ಲಿಂದ ಬರುತ್ತಿದೆ ಎಂಬುದು ತಿಳಿದಿತ್ತು. ಈಗಿನ ಪರಿಸ್ಥಿತಿ ಹೇಗಿದೆ?
JN.1 ಯುರೋಪ್‌ನಲ್ಲಿ ಮೊದಲ ಬಾರಿಗೆ ಪತ್ತೆಯಾಗಿತ್ತು. ನಂತರ ಅಮೆರಿಗಾ ಮತ್ತು ಬ್ರೆಜಿಲ್‌ನಂತಹ ಇತರ ದೇಶಗಳಿಗೆ ಹರಡಿತು. ಜನಸಂಖ್ಯೆ ಹೆಚ್ಚಾಗಿದ್ದು, ಮೊದಲ ಹೊಸ ರೂಪಾಂತರವು ಎಲ್ಲಿಂದ ಬಂದಿತು ಎಂಬುದನ್ನು ಖಚಿತವಾಗಿ ಹೇಳುವುದು ಕಷ್ಟ. ಕೇರಳ ಮತ್ತು ಗೋವಾದಲ್ಲಿ ಈಗಾಗಲೇ ಸೋಂಕಿತರನ್ನು ಪತ್ತೆಹಚ್ಚಲಾಗಿದೆ. ಈಗಾಗಲೇ ಸೋಂಕು ಹೆಚ್ಚಾಗಿರುವ ವಿದೇಶಗಳಿಂದ ಬಂದವರಲ್ಲೇ ಈ ಸೋಂಕು ಪತ್ತೆಯಾಗಿರುವುದು ಖಚಿತವಾಗಿದೆ.

2023 ಅಂತ್ಯಗೊಳ್ಳುತ್ತಿದ್ದು, ಸಾಕಷ್ಟು ಮಂದಿ ಪ್ರಯಾಣ ಮಾಡುತ್ತಾರೆ. ವಿದೇಶಗಳಿಗೆ ತೆರಳಿ ಮರಳಿ ವಾಪಸ್ಸಾಗುವವರಲ್ಲಿ ಸೋಂಕು ತಗುಲುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ?
ಪ್ರಯಾಣ ಮಾಡುವಾಗ ಜನರು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಪ್ರವಾಸಕ್ಕೆ ತೆರಳಿ ವಾಪಸ್ಸಾದ ಬಳಿಕ ಆರೋಗ್ಯದ ಮೇಲೆ ಗಮನ ಹರಿಸಬೇಕು. ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಕಂಡು ಬಂದರೂ ಪ್ರತ್ಯೇಕವಾಗಿದ್ದು, ಪರೀಕ್ಷೆ ಮಾಡಿಸಿಕೊಳ್ಳಬೇಕು. ಶೀತ ಹಾಗೂ ಕೆಮ್ಮನ್ನು ನಿರ್ಲಕ್ಷಿಸಬಾರದು.

ಆರಂಭಿಕ ಹಂತದಲ್ಲಿ ಸೋಂಕು ಹರಡುವಿಕೆಯನ್ನು ತಡೆಯಲು ಸರ್ಕಾರ ಯಾವ ರೀತಿಯ ಕಟ್ಟುನಿಟ್ಟಾದ ನಿರ್ಬಂಧಗಳನ್ನು ವಿಧಿಸಲಿದೆ?
ನಮ್ಮ ಮುಂದೆ ಎರಡು ಆಯ್ಕೆಗಳಿವೆ -- ನಿಯಂತ್ರಣ ಮತ್ತು ಪ್ರಯಾಣವನ್ನು ನಿಗ್ರಹಿಸುವುದಾಗಿದೆ. ಆದರೆ ಪ್ರಸ್ತುತದ ವರದಿಗಳು ಕಠಿಣ ನಿರ್ಧಾರಗಳನ್ನು ಬೆಂಬಲಿಸುವುದಿಲ್ಲ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹಾಗೂ ಮರಣ ಸಂಖ್ಯೆ ಹೆಚ್ಚಾಗಿದ್ದರೆ, ಕಠಿಣ ನಿರ್ಬಂಧಗಳನ್ನು ವಿಧಿಸಬಹುದು. ಆದರೆ, ಅಂತಹ ಪರಿಸ್ಥಿತಿ ಎದುರಾಗಿಲ್ಲ. ಹೀಗಾಗಿ ಅನಗತ್ಯವಾಗಿ ಆಂತಕಪಡುವ ಅಗತ್ಯವಿಲ್ಲ. ಕೋವಿಡ್ ಕುರಿತು ಇತ್ತೀಚೆಗೆ ರಚಿಸಲಾದ ಸಂಪುಟ ಉಪಸಮಿತಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ.

ಕೋವಿಡ್ ಇನ್ನೆಷ್ಟು ಕಾಲ ಮುಂದುವರಿಯುತ್ತದೆ?
ಪ್ರತಿ ಬಾರಿ ಸೋಂಕು ಎದುರಾದರೂ ಅದನ್ನು ಎದುರಿಸುವಲ್ಲಿ ನಮ್ಮ ವಿಧಾನಗಳಲ್ಲಿ ಗಮನಾರ್ಹ ಬದಲಾವಣೆಗಳಿವೆ. ಸೋಂಕು ನಿಯಂತ್ರಿಸುವುದು, ನಿರ್ವಹಿಸುವುದು ಹೇಗೆ ಎಂಬುದು ಜನರಿಗೆ ಉತ್ತಮವಾಗಿ ತಿಳಿದಿದೆ. ಆಹಾರ ಪದ್ಧತಿ ವ್ಯಕ್ತಿ ಶೀಘ್ರಗತಿಯಲ್ಲಿ ಚೇತರಿಸಿಕೊಳ್ಳುವಲ್ಲಿ ಗಣನೀಯ ಪಾತ್ರವಹಿಸುತ್ತದೆ. ಕೋವಿಡ್ ನಮ್ಮ ನಡುವೆಯೇ ಇದ್ದು, ಅದರೊಂದಿಗೆ ಬದುಕಬೇಕೆಂಬುದನ್ನು ನಾವು ಒಪ್ಪಿಕೊಳ್ಳುವುದು ಬಹಳ ಮುಖ್ಯವಾಗಿದೆ.

ಇತ್ತೀಚೆಗೆ ಭ್ರೂಣ ಲಿಂಗ ಪತ್ತೆ ಹಾಗೂ ಭ್ರೂಣ ಹತ್ಯೆ ಪ್ರಕರಣ ಬೆಳಕಿಗೆ ಬಂದಿತ್ತು. ಈ  ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಕೈಗೊಂಡ ಕ್ರಮಗಳೇನು?
ಕಠಿಣ ಕಾನೂನು ಕ್ರಮಗಳ ಹೊರತಾಗಿಯೂ ಭ್ರೂಣ ಹತ್ಯೆ ನಡೆಯುತ್ತಿರುವುದು ಕಳವಳಕಾರಿ ವಿಚಾರವಾಗಿದೆ. ಗರ್ಭಪಾತ ಸಂಖ್ಯೆ ಏರಿಕೆಗೆ ಕಾರಣಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ. ತಪಾಸಣೆಗೆ ಹಾಜರಾಗದ ಗರ್ಭಿಣಿ ಮಹಿಳೆಯರ ಪರಿಶೀಲನೆ ನಡೆಸುವಂತೆ ಆಶಾ ಕಾರ್ಯಕರ್ತೆಯರಿಗೆ ಸೂಚಿಸಲಾಗಿದೆ. ಈ ಸಮಸ್ಯೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಪರಿಹರಿಸಲು ನಾವು ಸಂಬಂಧಿತ ಇಲಾಖೆಗಳೊಂದಿಗೆ ಸಹಕರಿಸುತ್ತಿದ್ದೇವೆ.

ಪ್ರತೀ ಗರ್ಭಿಣಿ ಮಹಿಳೆಯರ ಮೇಲೆ ಕಣ್ಗಾವಲು ಇರಿಸಲಾಗಿದೆಯೇ?
ಯಾವುದೇ ಹಂತದಲ್ಲಿ ಮಹಿಳೆಯು ಗರ್ಭಾವಸ್ಥೆ ನಿಂತನೆ ಅದಕ್ಕೆ ಕಾರಣ ಮತ್ತು ಎಳ್ಲಿ ನಡೆಯಿತು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಸಂಗ್ರಹಿಸುತ್ತಿದ್ದೇವೆ. MTP ಕಾಯಿದೆಗೆ ಅನುಗುಣವಾಗಿ ಕಡ್ಡಾಯ ದಾಖಲಾತಿ ಅಗತ್ಯತೆಗಳೊಂದಿಗೆ ನೋಂದಾಯಿತ ಚಿಕಿತ್ಸಾಲಯಗಳಲ್ಲಿ ಮಾತ್ರ ಗರ್ಭಪಾತಗಳನ್ನು ನಡೆಸಬೇಕು. ಈ ಬಗ್ಗೆ ಜಾಗೃತಿ ಮೂಡಿಸುವುದೂ ಅಗತ್ಯವಾಗಿದೆ.

ವಲಸೆ ಮತ್ತು ಕಾರ್ಮಿಕ ವರ್ಗದ ಮಹಿಳೆಯರ ಗರ್ಭಾವಸ್ಥೆಗೆ ಸಂಬಂಧಿಸಿದ ಕಾರ್ಯವಿಧಾನಗಳ ಮೇಲ್ವಿಚಾರಣೆ ಮತ್ತು ಕ್ರಮಗಳನ್ನು ಹೇಗೆ ಕಾರ್ಯಗತಗೊಳಿಸಲಾಗುತ್ತಿದೆ?
ವಲಸೆ ಹೋಗುವವರು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಾರೆ. ಅವು ನಿರ್ದಿಷ್ಠ ಸ್ಥಳದಲ್ಲಿ ವಾಸಿಸುವುದಿಲ್ಲ. ಇದರಿಂದ ಮೇಲ್ವಿಚಾರಣೆ ಮಾಡುವುದು ಕಷ್ಟಕರವಾಗಿರುತ್ತದೆ. ಅದಾಗ್ಯೂ ಅಂತರ್ ರಾಜ್ಯ ಮತ್ತು ಅಂತರ್ ಜಿಲ್ಲಾ ಸಮನ್ವಯದೊಂದಿಗೆ ಸಮಸ್ಯೆಯನ್ನು ಪರಿಹರಿಸಬಹುದು.

ಗರ್ಭಪಾತಕ್ಕೆ ಸಂಬಂಧಿಸಿದ ಅಭಿಯಾನಗಳು ಮತ್ತು ನಿರ್ಬಂಧಗಳು ಗರ್ಭಾವಸ್ಥೆಯನ್ನು ಅಂತ್ಯಗೊಳಿಸಲು ಮಹಿಳೆಯ ಹಕ್ಕುಗಳಿಗೆ ತಡೆಯೊಡ್ಡಲಿವೆಯೇ?
ಕಾನೂನು 24 ವಾರಗಳ ಗರಿಷ್ಠ ಮಿತಿಯೊಂದಿಗೆ ಸಮಯದ ಚೌಕಟ್ಟಿನೊಳಗೆ ಗರ್ಭಪಾತ ಮಾಡಬಹುದು ಎಂದು ಸ್ಪಷ್ಟವಾಗಿ ಹೇಳಿದೆ. ಮಗುವಿನಲ್ಲಿ ಅಸಹಜತೆಗಳು ಅಥವಾ ಹದಿಹರೆಯದ ಗರ್ಭಧಾರಣೆಗಳು ಅಥವಾ ವೈವಾಹಿಕ ಸ್ಥಿತಿ ಬದಲಾದಾಗ ಗರ್ಭಧಾರಣೆಗೆ ವಿನಾಯಿತಿಗಳನ್ನು ನೀಡಲಾಗುತ್ತದೆ. ಜನರು ಕಾನೂನಿನ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳುವುದು. ಗರ್ಭಪಾತ ಮಾಡಿಸುವಾದ ಇದನ್ನು ಪರಿಶೀಲಿಸುವುದು ಮುಖ್ಯವಾಗುತ್ತದೆ. ಆದರೆ, ಭ್ರೂಣದ ಲಿಂಗದ ಆಧಾರದ ಮೇಲೆ ಗರ್ಭಪಾತ ಮಾಡಿಸಿಕೊಳ್ಳುವುದು ಕಾನೂನುಬಾಹಿರವಾಗುತ್ತದೆ.

ಬಾಡಿಗೆ ತಾಯ್ತನಕ್ಕೆ ಸಂಬಂಧಿಸಿದ ವಂಚನೆಗಳ ತಡೆಗಟ್ಟಲು ಕ್ರಮಗಳ ಕೈಗೊಳ್ಳಲಾಗಿದೆಯೇ?
ಬಾಡಿಗೆ ತಾಯ್ತನ ವಾಣಿಜ್ಯೀಕರಣ ತಡೆಗಟ್ಟಲು ಕ್ರಮಗಳ ಕೈಗೊಳ್ಳಲಾಗುತ್ತಿದೆ. ಸಮಸ್ಯೆಗಳ ಪರಿಹರಿಸಲು ಕಾನೂನು ಚೌಕಟ್ಟುಗಳು ಜಾರಿಯಲ್ಲಿವೆ.

ರಾಜ್ಯದಲ್ಲಿ ಮಾನಸಿಕ ಆರೋಗ್ಯ ಸೇವೆಗಳ ಬಗ್ಗೆ ಏನು ಹೇಳುತ್ತೀರಿ?
ಈ ನಿಟ್ಟಿನಲ್ಲಿ ಬೇರೆ ರಾಜ್ಯಗಳಿಗಿಂತಲೂ ನಮ್ಮ ರಾಜ್ಯ ಬಹಳ ಮುಂದಿದೆ. ನಾವು 2016ರಲ್ಲೇ ಎಲ್ಲಾ ಜಿಲ್ಲೆಗಳಲ್ಲಿ DMHP ಅನ್ನು ಜಾರಿಗೊಳಿಸಿದ್ದೇವೆ. ಮಾನಸಿಕ ಆರೋಗ್ಯ ಕಾರ್ಯಕ್ರಮ ತಾಲೂಕುಗಳನ್ನೂ ತಲುಪಿದೆ. ಮಾನಸಿಕ ಆರೋಗ್ಯ ಸಮಸ್ಯೆಗಳಿಗಾಗಿ ನಾವು PHI ಗಳಲ್ಲಿ ಸುಮಾರು 10 ಲಕ್ಷ ಸಮಾಲೋಚನೆಗಳನ್ನು ನೀಡುತ್ತೇವೆ. ನಿಮ್ಹಾನ್ಸ್‌ನಂತಹ ಪ್ರಮುಖ ಸಂಸ್ಥೆಗಳೊಂದಿಗೂ ಸಹಯೋಗ ಹೊಂದಿದ್ದೇವೆ, ಇದು ರಾಜ್ಯದ ಮಾನಸಿಕ ಆರೋಗ್ಯ ಉಪಕ್ರಮಗಳೊಂದಿಗೆ ವಿಶೇಷವಾಗಿ ಇ-ಮನಸ್, ಆತ್ಮಹತ್ಯೆ ತಡೆಗಟ್ಟುವ ಕಾರ್ಯಕ್ರಮ, ಕಿಶೋರ ಸ್ವಾವಲಂಬನ್ ಕಾರ್ಯಕ್ರಮ, ನೆರವಿನ ಮನೆ ಆರೈಕೆ, ಮಾತೃಚೈತನ್ಯ, ಮೆದುಳಿನ ಆರೋಗ್ಯ ಉಪಕ್ರಮ ಮತ್ತು ಮುಂತಾದ ಆವಿಷ್ಕಾರಗಳೊಂದಿಗೆ ನಮ್ಮ ಪ್ರಯತ್ನಗಳನ್ನು ಒಗ್ಗೂಡಿಸಿದ್ದೇವೆ.

ನಮ್ಮಲ್ಲಿ ವಿಶೇಷ ಕಾರ್ಯಕ್ರಮ ‘ಮನೋ ಚೈತನ್ಯ’ ಕೂಡ ಇದೆ, ಅದನ್ನು ನಾವು ಸೂಪರ್ ಟ್ಯೂಸ್ಡೇ ಕ್ಲಿನಿಕ್ ಎಂದು ಹೆಸರಿಸಿದ್ದೇವೆ. ಈ ಕಾರ್ಯಕ್ರಮದಲ್ಲಿ ಮಾನಸಿಕ ಅಸ್ವಸ್ಥರು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲೂಕಾ ಆಸ್ಪತ್ರೆಗಳಿಗೆ ಬಂದು ಸಮಾಲೋಚನೆ ನಡೆಸಿ ಚಿಕಿತ್ಸೆ ಪಡೆಯುತ್ತಾರೆ. ಭಾರತ ಸರ್ಕಾರವು 'ಟೆಲಿ ಮನಸ್' -14416 ಅನ್ನು ಪ್ರಾರಂಭಿಸಿತು,

ಇಂದು ಲಭ್ಯವಿರುವ ವೇದಿಕೆಗಳಿಂದ ಸಾಕಷ್ಟು ಜನರು ಮಾನಸಿಕ ಆರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ನಂತರ, ಅನೇಕ ಜನರು ಈ ಸಮಸ್ಯೆಯನ್ನು ಎದುರಿಸಲು ಆರಂಭಿಸಿದರು. ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾತನಾಡಲು ಆರಂಭಿಸಿದರು. ರಾಜ್ಯವು ಮಾನಸಿಕ ಆರೋಗ್ಯ ಕಾರ್ಯಕ್ರಮಗಳನ್ನು ಬೆಂಬಲಿಸುತ್ತಿದೆ ಮತ್ತು ಬಹಳಷ್ಟು NGO ಗಳು ಸಹ ನಮ್ಮೊಂದಿಗೆ ಕಾರ್ಯನಿರ್ವಹಿಸುತ್ತಿವೆ.

ಕರ್ನಾಟಕದಲ್ಲಿ ಟೆಲಿಮೆಡಿಸಿನ್ ಕಾರ್ಯಕ್ರಮ ಹೇಗಿದೆ?
ಇದು ಬಹಳ ಮುಖ್ಯವಾದ ಅಂಶವಾಗಿದೆ. ಎಲ್ಲಾ ರೀತಿಯ ಹೃದಯ ಚಿಕಿತ್ಸೆಗಾಗಿ, ಜನರು ಜಯದೇವ ಅಥವಾ ಪ್ರಮುಖ ವೈದ್ಯಕೀಯ ಆಸ್ಪತ್ರೆಗಳಿಗೆ ಬರಬೇಕಾಗಿತ್ತು. ಈಗ 'ಹಬ್ ಮತ್ತು ಸ್ಪೋಕ್ಸ್ STEMI ಮ್ಯಾನೇಜ್ಮೆಂಟ್ ಮಾಡೆಲ್', ಅಲ್ಲಿ ಹೃದ್ರೋಗ ತಜ್ಞರ ಸಮಾಲೋಚನೆ ವೀಡಿಯೊ ಕರೆ ಮೂಲಕ ಲಭ್ಯವಿದ್ದು, ತಾಲೂಕುಗಳಲ್ಲಿ ಸಕಾಲಿಕ ಹೃದಯ ಸೇವೆಗಳಿಗೆ ಸಹಾಯ ಮಾಡುತ್ತಿದೆ. ತಾಲೂಕು ಆಸ್ಪತ್ರೆಗಳಲ್ಲಿ 10 ಹಾಸಿಗೆಗಳ ಐಸಿಯುಗಳನ್ನು ಹೊಂದಿದ್ದೇವೆ, ಮೈಸೂರಿನ ಹಬ್ ಆಸ್ಪತ್ರೆಯಿಂದ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಶೀಘ್ರದಲ್ಲೇ, ಹುಬ್ಬಳ್ಳಿಯನ್ನು ಕೇಂದ್ರವಾಗಿಟ್ಟುಕೊಂಡು ರಾಜ್ಯ ಸರ್ಕಾರವು ತಾಲ್ಲೂಕಿನಾದ್ಯಂತ 10 ಹಾಸಿಗೆಗಳ ಐಸಿಯುಗಳ ಮತ್ತೊಂದು ಬ್ಯಾಚ್ ಅನ್ನು ಪ್ರಾರಂಭಿಸಲಿದೆ. ಹೃದ್ರೋಗ ತಜ್ಞರು ಮತ್ತು ಇತರ ತಜ್ಞರನ್ನು ಸಂಪರ್ಕಿಸಲು ನಾವು ವೈದ್ಯಕೀಯ ಕಾಲೇಜುಗಳನ್ನು ಕೇಂದ್ರವಾಗಿ ಬಳಸುತ್ತೇವೆ. ಆಸ್ಪತ್ರೆಗಳು ವೀಡಿಯೊ ಕರೆಗಳ ಮೂಲಕ ಸಮಾಲೋಚನೆಗಳನ್ನು ಮಾಡಬಹುದಾದ್ದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳು / ತಾಲೂಕು ಆಸ್ಪತ್ರೆಗಳಿಂದ ಸಂಭವಿಸುವ ಅನಗತ್ಯ ಶಿಫಾರಸುಗಳು ಕಡಿಮೆಯಾಗುತ್ತವೆ. ಆಸ್ಪತ್ರೆಗಳಲ್ಲಿ ಕ್ಯಾಮೆರಾವನ್ನು ಅಳವಡಿಸಲಾಗಿದೆ ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಕುಳಿತಿರುವ ತಜ್ಞರು ಪರದೆಯ ಮೇಲೆ ಕಾಣಿಸುತ್ತಾರೆ. ಇದರಿಂದ ರೋಗಿಗಳು ಜಿಲ್ಲಾ ಆಸ್ಪತ್ರೆಗಳಿಗೆ ಬರುವ ಬದಲು ತಾಲೂಕು ಆಸ್ಪತ್ರೆಯ ಐಸಿಯುಗಳಲ್ಲಿಯೇ ಇದ್ದು ಚಿಕಿತ್ಸೆ ಪಡೆಯಬಹುದಾಗಿದೆ.

ಕೋವಿಡ್ ಭಯದಿಂದ ಇನ್ನೆಷ್ಟು ದಿನ ಬದುಕಬೇಕಾಗಬಹುದು?
ಕೋವಿಡ್ ನಿಂದ ದೂರ ಇರಲು ಸಾಧ್ಯವಿಲ್ಲ. ವೈರಸ್ ವಿಕಸನಗೊಳ್ಳುವುದಕ್ಕೂ ಮುನ್ನ ನಾವು ಜಾಗರೂಕತೆಯಿಂದ ಒಂದು ಹೆಜ್ಜೆ ಮುಂದೆ ಇರಬೇಕು. ಜಾಗರೂಕತೆಯಿಂದ ನೀವು ಏನನ್ನೂ ಕಳೆದುಕೊಳ್ಳುವುದಿಲ್ಲ. ಆದರೆ, ಹಿಂದಿನ ಕೋವಿಡ್ ಅಲೆಗಳ ಸಮಯದಲ್ಲಿ ನೋಡಿದಂತೆ ಅಸಡ್ಡೆ ಹೊಂದಿದರೆ, ಸಾಕಷ್ಟು ಕಳೆದುಕೊಳ್ಳಬೇಕಾಗುತ್ತದೆ. ಈ ಹಿಂದಿನ ಅಲೆಯಲ್ಲಿ ಸಾಕಷ್ಟು ಮಂದಿ ತಮ್ಮ ಪ್ರೀತಿಪಾತ್ರರು, ಆತ್ಮೀಯರು ಹಾಗೂ ಹತ್ತಿರದವರನ್ನು ಕಳೆದುಕೊಂಡಿದ್ದಾರೆ. ಪದೇ ಪದೇ ಸೋಂಕಿಗೊಳಗಾಗುವುದೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಏಕೆಂದರೆ ಇದು ಜೀವಿತಾವಧಿಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಜಾಗರೂಕರಾಗಿದಿದ್ದು, ವೈರಸ್‌ನಿಂದ ತಪ್ಪಿಸಿಕೊಳ್ಳೋಣ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com