

ಅಡಿಲೇಡ್: ತೀವ್ರ ಕುತೂಹಲ ಮೂಡಿಸಿದ್ದ ಅಡಿಲೇಡ್ ಟೆಸ್ಟ್ ಪಂದ್ಯದ ಐದನೇ ದಿನದಾಟದಲ್ಲಿ ಆಸ್ಟ್ರೇಲಿಯಾ ತಂಡ ಭಾರತದ ವಿರುದ್ಧ 48 ರನ್‌ಗಳ ಗೆಲವು ಸಾಧಿಸಿದೆ.
ಆಸ್ಟ್ರೇಲಿಯಾ ನಾಲ್ಕನೇ ದಿನದಾಟದ ಅಂತ್ಯಕ್ಕೆ 2 ನೇ ಇನ್ನಿಂಗ್ಸ್ ನಲ್ಲಿ 290 ರನ್‌ಗಳಿಸಿ 363 ರನ್‌ಗಳ ಗುರಿ ನೀಡಿ ಡಿಕ್ಲೇರ್ ಮಾಡಿತ್ತು.
ಐದನೇ ದಿನದಾಟದ ರೋಚಕ ಪಂದ್ಯದಲ್ಲಿ ಆರಂಭದಲ್ಲಿ ಭಾರತ ಚೆನ್ನಾಗಿಯೇ ಪ್ರದರ್ಶನ ನೀಡಿತ್ತು. ನಾಯಕ ವಿರಾಟ್ ಕೊಹ್ಲಿ ಮತ್ತು ಮುರಳಿ ವಿಜಯ್ ಭರ್ಜರಿ ಪ್ರದರ್ಶನ ನೀಡಿದ್ದು, ಈ ಪಂದ್ಯ ಭಾರತದ ಪರವಾಗುತ್ತದೆ ಎಂಬ ನಿರೀಕ್ಷೆ ಹುಟ್ಟಿಸಿತ್ತು.
ಕೊಹ್ಲಿ ಶತಕ ವ್ಯರ್ಥ
ಟೆಸ್ಟ್ ಪಂದ್ಯದ ನಾಯಕನ ಹೊಣೆ ಹೊತ್ತು ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದ ವಿರಾಟ್ ಕೊಹ್ಲಿ 2 ನೇ ಇನ್ನಿಂಗ್ಸ್‌ನಲ್ಲೂ ಶತಕ ಸಿಡಿಸಿದ್ದರು. ಪ್ರಸ್ತುತ ಪಂದ್ಯದಲ್ಲಿ 141 ರನ್ ಸಿಡಿಸಿದ ಕೊಹ್ಲಿ ಲಿಯೋನ್‌ಗೆ ವಿಕೆಟ್ ಒಪ್ಪಿಸಿದಾಗ ತಂಡಕ್ಕೆ ಆಧಾರವಾಗಿ ನಿಂತದ್ದು ಮುರಳಿ ವಿಜಯ್. ಆದರೆ ನಥನ್ ಲಿಯೋನ್ ಎಸೆತದಲ್ಲಿ ಮುರಳಿ ವಿಜಯ್ 99 ರನ್‌ಗೆ ಔಟಾಗುವ ಮೂಲಕ ಶತಕ ವಂಚಿತರಾದರು.
ಭಾರತದ ಪರ ಧವನ್ 9, ಪೂಜಾರಾ 21, ರೆಹಾನೆ 0, ರೋಹಿತ್ ಶರ್ಮಾ 6, ಸಾಹಾ 13, ಕರಣ್ ಶರ್ಮಾ 4 (ಔಟಾಗದೆ), ಶಮಿ 5, ವರುಣ್ ಅರೋನ್ 1, ಇಶಾಂತ್ ಶರ್ಮಾ 1 ರನ್ ಗಳಿಸಿದರು.
ಮಿಂಚಿದ ಲಿಯೋನ್
ಈ ಪಂದ್ಯದಲ್ಲಿ ಆಸಿಸ್ ಗೆಲುವಿನ ರುವಾರಿ ಆಗಿದ್ದು ನಥನ್ ಲಿಯೋನ್. ಆಫ್ ಸ್ಪಿನ್ನರ್ ಲಿಯೋನ್ 7 ವಿಕೆಟ್‌ಗಳನ್ನು ಪಡೆಯುವ ಮೂಲಕ ಪಂದ್ಯದ ದಿಶೆಯನ್ನೇ ಬದಲಿಸುವಲ್ಲಿ ಯಶಸ್ವಿಯಾದರು. ವಿರಾಟ್ ಕೊಹ್ಲಿ ಮತ್ತು ಮುರಳಿ ವಿಜಯ್ ವಿಕೆಟ್ ಉರುಳಿಸುವ ಮೂಲಕ ಭಾರತದ ರನ್‌ಗಳಿಗೆ ಕಡಿವಾಣ ಹಾಕಿದ ಲಿಯೋನ್, ಈ ಟೆಸ್ಟ್ ಪಂದ್ಯದಲ್ಲಿ ಒಟ್ಟು 12 ವಿಕೆಟ್ ಗಳಿಸಿದ್ದಾರೆ.