

ಪರ್ತ್: ಪ್ರಸಕ್ತ ಸಾಲಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ದಾಖಲೆಗಳು ಸಾಲುಸಾಲಾಗಿ ಮುರಿಯಲ್ಪಡುತ್ತಿದ್ದು, ಈ ಹಿಂದೆ ಭಾರತ ನಿರ್ಮಿಸಿದ್ದ ದಾಖಲೆಯನ್ನು ಆಸ್ಟ್ರೇಲಿಯಾ ತಂಡ ಮುರಿದಿದೆ.
ಈ ಹಿಂದೆ ವಿಶ್ವಕಪ್ ಟೂರ್ನಿಯಲ್ಲಿ ಬರ್ಮುಡಾ ತಂಡದ ವಿರುದ್ಧ ಭಾರತ ತಂಡ 413 ರನ್ ಗಳಿಸಿತ್ತು. ಇದು ವಿಶ್ವಕಪ್ ಇತಿಹಾಸದಲ್ಲಿಯೇ ತಂಡವೊಂದರ ಅತಿದೊಡ್ಡ ರನ್ ಗಳಿಕೆಯಾಗಿತ್ತು. ಆದರೆ ಈ ದಾಖಲೆಯನ್ನು ಇಂದು ಆಸ್ಟ್ರೇಲಿಯಾ ತಂಡ ಬದಿಗೊತ್ತಿದೆ. ಪರ್ತ್ ನಲ್ಲಿ ಆಫ್ಘಾನಿಸ್ತಾನ ತಂಡದ ವಿರುದ್ಧ ಇಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ಬರೊಬ್ಬರಿ 417 ರನ್ ಸಿಡಿಸಿದೆ. ಆ ಮೂಲಕ ವಿಶ್ವಕಪ್ ಇತಿಹಾಸದಲ್ಲಿ ಅತಿದೊಡ್ಡ ರನ್ ಗಳಿಕೆ ಮಾಡಿದ ತಂಡ ಎಂಬ ದಾಖಲೆಗೆ ಆಸ್ಟ್ರೇಲಿಯಾ ಪಾತ್ರವಾಗಿದೆ.
ಅಲ್ಲದೇ ಇದೇ ವಿಶ್ವಕಪ್ ಮತ್ತೊಂದು ದಾಖಲೆ ನಿರ್ಮಾಣವಾಗಿದ್ದು, ವಿಶ್ವಕಪ್ 2015 ಟೂರ್ನಿಯಲ್ಲಿ ಸತತ ಮೂರು ಬಾರಿ 400ಕ್ಕೂ ಅಧಿಕ ರನ್ ಪೇರಿಸಲ್ಪಟ್ಟಿದೆ. 40 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ರೀತಿ 400 ಪ್ಲಸ್ ರನ್ ಗಳು ಹರಿದು ಬಂದಿದೆ.
ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ಟೀಂ ರನ್ ಗಳಿಸಿರುವ ತಂಡಗಳು
417/6, ಆಸ್ಟ್ರೇಲಿಯಾ vs ಅಫ್ಘಾನಿಸ್ತಾನ (2015)
413/5, ಭಾರತ vs ಬರ್ಮುಡಾ, 2007
411/4, ದಕ್ಷಿಣ ಆಫ್ರಿಕಾ vs ಐರ್ಲೆಂಡ್, 2015
408/5, ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್, 2015
398/5, ಶ್ರೀಲಂಕಾ vs ಕೀನ್ಯಾ (1996)