

ಹುಬ್ಬಳ್ಳಿ: ಬ್ಯಾಟಿಂಗ್‍ನಲ್ಲಿ ಕಂಡುಬಂದ ಪ್ರಾಬಲ್ಯವು ಬೌಲಿಂಗ್‍ನಲ್ಲಿ ವ್ಯಕ್ತವಾಗದ ಫಲವಾಗಿ ಪ್ರವಾಸಿ ದೆಹಲಿ ವಿರುದ್ಧದ ರಣಜಿ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ಗೆಲುವು ಸಾಧಿಸಲು ವಿಫಲವಾಗಿ ಮೂರು ಅಂಕಗಳಿಗೆ ತೃಪ್ತಿಪಟ್ಟುಕೊಂಡಿದೆ.
ಕಳೆದ ನಾಲ್ಕು ದಿನಗಳಿಂದ ಇಲ್ಲಿನ ರಾಜನಗರದ ಕೆಎಸ್‍ಸಿಎ ಮೈದಾನದಲ್ಲಿ ನಡೆಯುತ್ತಿದ್ದ `ಎ' ಗುಂಪಿನ ಲೀಗ್ ಪಂದ್ಯವು ಅಂತಿಮವಾಗಿ ಡ್ರಾನಲ್ಲಿ ಪರ್ಯವಸಾನವಾಯಿತು. ಬೋನಸ್ ಅಂಕದ ಗೆಲುವಿನ ಕನಸಿನಲ್ಲಿದ್ದ ವಿನಯ್ ಪಡೆಯನ್ನು ಧ್ರುವ್ ಶೋರೆ (107) ಹಾಗೂ ನಿತೀಶ್ ರಾಣಾ (132) ಅವರ ಜಂಟಿ ಶತಕವು ನಿರಾಸೆಗೊಳಿಸಿತು. ಈ ಇಬ್ಬರ ಮನೋಜ್ಞ ಬ್ಯಾಟಿಂಗ್‍ನಿಂದಾಗಿ ದೆಹಲಿ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 92 ಓವರ್‍ಗಳಲ್ಲಿ 2 ವಿಕೆಟ್‍ಗೆ 290 ರನ್ ಗಳಿಸಿದ್ದಾಗ ಇತ್ತಂಡಗಳ ನಾಯಕರ ಸಮ್ಮತಿಯ ಮೇರೆಗೆ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು.
ಮೊದಲ ಇನ್ನಿಂಗ್ಸ್ ಮುನ್ನಡೆಯ ಆಧಾರದಲ್ಲಿ ಕರ್ನಾಟಕಕ್ಕೆ 3 ಅಂಕ ಲಭ್ಯವಾಗಿದ್ದು, ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲೇ ಮುಂದುವರಿದಿದ್ದು, 1 ಅಂಕ ಪಡೆದಿರುವ ದೆಹಲಿ, ಅಗ್ರಸ್ಥಾನದಲ್ಲೇ ಮುಂದುವರಿದಿದೆ. ಕರ್ನಾಟಕ ತಂಡ ತನ್ನ ಲೀಗ್ ಹಂತದ ಕೊನೇ ಪಂದ್ಯವನ್ನು ಡಿ. 1ರಿಂದ ಮಹಾರಾಷ್ಟ್ರ ವಿರುದ್ಧ ಪುಣೆಯಲ್ಲಿ ಆಡಲಿದೆ.
ಕೈಕೊಟ್ಟ ಬೌಲಿಂಗ್: ಇನ್ನು ಕರ್ನಾಟಕದ ಮೊದಲ ಇನ್ನಿಂಗ್ಸ್ ನ (542) ಬೃಹತ್ ಮೊತ್ತಕ್ಕೆ ಉತ್ತರವಾಗಿ ಮೂರನೇ ದಿನದಂದು ವಿಕೆಟ್ ನಷ್ಟವಿಲ್ಲದೆ 22 ರನ್ ಮಾಡಿದ್ದ ದೆಹಲಿ, ಕೊನೆಯ ದಿನದಂದು ಎಚ್ಚರಿಕೆಯಿಂದಲೇ ಬ್ಯಾಟಿಂಗ್ ಮಾಡಲು ಮುಂದಾಯಿತಾದರೂ, ಭೋಜನ ವಿರಾಮಕ್ಕೂ ಮೊದಲೇ ಪ್ರಮುಖ ಎರಡು ವಿಕೆಟ್ ಗಳನ್ನು ಕಳೆದುಕೊಂಡಿತು. ವೇಗಿ ಶ್ರೀನಾಥ್ ಅರಂದ್ ಆರಂಭಿಕರಾದ ಉನ್ಮುಕ್ತ್ ಚಾಂದ್ ಮತ್ತು ಗೌತಮ್ ಗಂಭೀರ್ ಅವರುಗಳನ್ನು ಪೆವಿಲಿಯನ್‍ಗೆ ಅಟ್ಟುವ ಮೂಲಕ ತಂಡಕ್ಕೆ ಗೆಲುವಿನ ಆಸೆ ಚಿಮ್ಮಿಸಿದರು.
13 ರನ್ ಗಳಿಸಿದ್ದ ನಾಯಕ ಗಂಭೀರ್ ಕೇವಲ 2 ರನ್ ಗಳಿಸಿ ಶ್ರೀನಾಥ್ ಬೌಲಿಂಗ್ ನಲ್ಲಿ ವಿಕೆಟ್ ಕೀಪರ್ ಗೌತಮ್ ಗೆ ಕ್ಯಾಚಿತ್ತು ಕ್ರೀಸ್ ತೊರೆದರೆ 3 ರನ್ ಗಳಿಸಿದ್ದ ಉನ್ಮುಕ್ತ್ ಚಾಂದ್ 12 ರನ್ ಪೇರಿಸಿ ಇದೇ ಶ್ರೀನಾಥ್ ಗೆ ಎಲ್ ಬಿಡಬಲ್ಯೂ ಆಗಿ ಪೆಲಿಯನ್ ಸೇರಿಕೊಂಡರು. ಈ ಹಂತದಲ್ಲಿ ಜತೆಯಾದ ಧ್ರುವ್ ಶೋರೆ ಮತ್ತು ನಿತೀಶ್ ರಾಣಾ 3ನೇ ವಿಕೆಟ್‍ಗೆ ಮುರಿಯದ 240 ರನ್ ಕಲೆಹಾಕಿ ತಂಡವನ್ನು ಸೋಲಿನಿಂದ ಪಾರು ಮಾಡಿದರು. ಈ ಜೋಡಿಯನ್ನು ಬೇರ್ಪಡಿಸಲು ಬೌಲರ್ ಗಳಿಗೆ ಸಾಧ್ಯವಾಗದೆ ಅಂತಿಮವಾಗಿ ವಿನಯ್ ಪಡೆ ಜಯದ ಆಸೆ ಕೈಬಿಡಬೇಕಾಯಿತು.