ಬರಿಗೈ ಫಕೀರನ ನಿತ್ಯ ಯಾತ್ರೆ...

ಮುದ್ದು ಸುಮಾ...
ಹರಿದ ಜೋಬಿನ ತುಂಬಾ ಹಿಡಿಸದ ಅಸಂಖ್ಯ ಕನಸುಗಳನ್ನು ತುಂಬಿಕೊಂಡು, ಪುಟ್ಟ ಹೃದಯದಲ್ಲಿ ಮಣಭಾರದ ಪ್ರೀತಿ ಬಂಡಿಯನ್ನು ಹೇರಿಕೊಂಡು, ಕಾಲುಗಳಲ್ಲಿ ಇನ್ನಿಲ್ಲದ ಹೊಸದುತ್ಸಾಹ ತುಂಬಿಕೊಂಡು ಬದುಕಿನ ಎಲ್ಲ ದಿನಗಳನ್ನು ಬಲು ಚೆಂದಾಗಿ ಕಳೆಯಬೇಕೆಂದು ಪ್ರತಿಕ್ಷಣವೂ ಅಂದುಕೊಳ್ಳುತ್ತೇನೆ. ವಾಸ್ತವ ಅನ್ನೋದು ಕಠೋರ ಅಂದುಕೊಂಡ ಮರುಕ್ಷಣವೇ ಅರಿವಿಗೆ ಬರುತ್ತದೆ. ಮತ್ತದೇ ಕೊರಗು ಕೊರಳು ತುಂಬಿ, ದನಿ ಬರದೆ ಬರೀ ಕಣ್ಣೀರು ಕೆನ್ನೆಯನ್ನು ಒದ್ದೆಯಾಗಿಸುತ್ತದೆ. ಜೀವನದ ಪ್ರತಿ ಹಂತದಲ್ಲೂ ಕಳೆದುಕೊಂಡ ವ್ಯಕ್ತಿಗಳು, ವಸ್ತುಗಳು ನೆನಪಿಗೆ ಬಂದು ನನ್ನದು ಬರಿಗೈ ಫಕೀರನ ನಿತ್ಯ ಯಾತ್ರೆಯಂತೆ ಭಾಸವಾಗುತ್ತದೆ. ನಿಸ್ತೇಜ ಕಂಗಳಲ್ಲಿ ನಿರೀಕ್ಷೆಗಳ ಜೋಳಿಗೆ ಹಿಡಿದು ನಿರ್ಜೀವವಾಗಿ ಬಿದ್ದುಕೊಂಡ ದಾರಿಯತ್ತ ದೃಷ್ಟಿ ಎಸೆಯುತ್ತೇನೆ. ನಿರಾಶೆಯೊಂದೇ ಕೊನೆಗೆ ಕೈ ಹಿಡಿಯುತ್ತದೆ.
ನಾನು ಹುಟ್ಟಿದ ಕೂಡಲೇ ತಾಯಿ ತೀರಿ ಹೋದಳಂತೆ. ಅಂದಿನಿಂದ ಕುಡಿತಕ್ಕಂಟಿಕೊಂಡ ತಂದೆ ಕುಡಿದು ಬಂದನೆಂದರೆ 'ಹುಟ್ಟಿದ ಕೂಡಲೇ ತಾಯಿಯನ್ನು ತಿಂದುಕೊಂಡ ಅನಿಷ್ಟ ನೀನು. ನಿನ್ನನ್ನು ಸಾಕೋಕೆ ಜೀವ ಸಣ್ಣಗೆ ಮಾಡ್ಕೊಂಡು ಸಾಕು ಸಾಕಾಗಿದೆ. ನಿನ್ನ ತಾಯಿ ಸಾಯೋ ಬದಲಿಗೆ ನಿನಾದರೂ ಸಾಯ್ಬಾರದಿತ್ತಾ ?' ಎಂದು ಹೀಯಾಳಿಸುತ್ತಿರುತ್ತಾನೆ. ಆಗೆಲ್ಲ ಅಳು ಒತ್ತರಿಸಿಕೊಂಡು ಬರುತ್ತದೆ. ಅದೇ ತಂದೆ ಬೆಳಕು ಹರಿಯಿತೆಂದರೆ ಅಗಾಧಮೌನಿ. ಅವನ ಮೌನ ನನ್ನೆಡೆಗೆ ಇರುವ ತಿರಸ್ಕಾರದ ಪ್ರತೀಕವಾಗಿರುತ್ತದೆ. ತಾಯಿಯನ್ನು ನೆನೆಯದೆ ಇರದ ದಿನ, ಕ್ಷಣಗಳಿಲ್ಲ. ಓರಗೆಯ ಹುಡುಗರೆಲ್ಲ ಹಬ್ಬ - ಹರಿದಿನಗಳಲ್ಲಿ ಹೊಸಬಟ್ಟೆ ತೊಟ್ಟು ಸಂಭ್ರಮಿಸುತ್ತಿದ್ದರೆ, ನಾನು ಹೊರಗೆ ಬರಲಾಗದೆ ಮನೆಯ ಯಾವುದೋ ಮೂಲೆಯಲ್ಲಿ, ಕತ್ತಲನ್ನು ಅವುಚಿ ಕುಳಿತು ಕಣ್ಣೀರನ್ನು ಕೆಡವುತ್ತಿದ್ದೆ. ಬದುಕು ನನ್ನ ಪಾಲಿಗೆ ಯಾವತ್ತಿಗೂ ಮಲತಾಯಿಯ ತರಹ ವರ್ತಿಸಿತು. ಅದು ಧಾರಾಳವಾಗಿ ದುಃಖ ಕೊಟ್ಟಿತೇ ಹೊರತು ಅತ್ತು ಹಗುರಾಗಲು ಒಂದು ಹೆಗಲು ಕೊಡಲಿಲ್ಲ.
ಇಂತಹ ಕಡು ಕಷ್ಟದ ದಿನಗಳಲ್ಲಿಯೇ ಅಲ್ಲವೆ ನಿನ್ನ ಪರಿಚಯವಾದದ್ದು? ಪರಿಚಯ ಸಲುಗೆಯಾಗಿ, ಸಲುಗೆ ಪ್ರೀತಿಯ ರೂಪು ತಾಳಿ ಮುಗಿದು ಹೋದ ಬದುಕಿನಲ್ಲಿ ಬದುಕುವ ಬಲ ತುಂಬಿದ್ದು. ಅದೆಷ್ಟು ಹಚ್ಚಿಕೊಂಡು ಬಿಟ್ಟಿದ್ದೆ ಗೊತ್ತಾ ನಿನ್ನ? ತಬ್ಬಲಿಯಾಗಿದ್ದ ನನ್ನನ್ನು ಅಕ್ಕರೆಯಿಂದ ಅಪ್ಪಿಕೊಂಡೆ. ಯಾರೂ ಕೊಡದ ಪ್ರೀತಿ ವಿಶ್ವಾಸವನ್ನು ಮೊಗೆದು ಮೊಗೆದು ಕೊಟ್ಟೆ. ಬರಿದಾಗಿ ಮರುಭೂಮಿಯಾಗಿದ್ದ ಎದೆಯ ನೆಲದಲ್ಲಿ ಪ್ರೀತಿಯುಕ್ಕಿಸಿದವಳು ನೀನು. ನಿರಾಶೆಯ ತಳದಲ್ಲಿ ನೆಲಕಚ್ಚಿ ನಿಂತಿದ್ದ ಬದುಕಿನ ನಾವೆಯನ್ನು ಪ್ರೀತಿ ತೀರಕ್ಕೆ ಕರೆತಂದವಳು. ನಿನ್ನ ಪುಟ್ಟ ಎದೆಯಲ್ಲಿ ಬಚ್ಚಿಟ್ಟುಕೊಂಡು, ಒಲವ ಸುಧೆಯಲ್ಲಿ ಅನುಗಾಲ ಮಿಂದು, ಸಾವಿರ ಜನ್ಮಕ್ಕಾಗುವಷ್ಟು ಖುಷಿಯನ್ನು ಪಡೆಯುವ ಬಯಕೆ ಕಣೇ ನನಗೆ. ನಿನ್ನ ಒಪ್ಪಿಗೆಗೊಸ್ಕರ ಕಾದಿದ್ದೇನೆ. ಹೆಜ್ಜೆ ಹೆಜ್ಜೆಗೂ ನೋವು ನೀಡಿ ನಗುವ ಈ ಜನರ ಹಂಗು ತೊರೆದು ದೂರ, ಬಲುದೂರ ಹೋಗಿ ಹೊಸ ಬದುಕು ಕಟ್ಟಿಕೊಳ್ಳೋಣ. ಕಷ್ಟಗಳೆಷ್ಟೇ ಬರಲಿ ಕಣೇ... ಒಟ್ಟಾಗಿ ಎದುರಿಸೋಣ.
-ನಾಗೇಶ್ ಜೆ. ನಾಯಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


