ಮಕರಂದ/ದೋಣಿ

ಸಣ್ಣ ಬೀರು

ನಾವು (ನಾನು, ನನ್ನ ತಂಗಿ) ಚಿಕ್ಕವರಿದ್ದಾಗ ನಡೆದ ಘಟನೆ. ಒಂದು ದಿನ ಹಾಗೇ ಶಿವಮೊಗ್ಗದ...

ಸಣ್ಣ ಬೀರು
Published On :

ನಾವು (ನಾನು, ನನ್ನ ತಂಗಿ) ಚಿಕ್ಕವರಿದ್ದಾಗ ನಡೆದ ಘಟನೆ. ಒಂದು ದಿನ ಹಾಗೇ ಶಿವಮೊಗ್ಗದ ಪೇಟೆಯಲ್ಲಿ ಅಡ್ಡಾಡುತ್ತಿದ್ದಾಗ ಮನೆ ಹತ್ತಿರವೇ ಒಂದು ಎಕ್ಸಿಬಿಷನ್ ನಡೆಯುತ್ತಿತ್ತು. ಸುಮ್ನೆ ಒಂದು ರೌಂಡ್ ಹಾಕಿದ್ವಿ. ನಮ್ಮನ್ನು ಬೇರೆ ಯಾವುದೂ ಸೆಳೆಯದಷ್ಟು ಒಂದು ಬೀರು ಆಕರ್ಷಿಸಿತು. ಅದಕ್ಕೆ ಆವಾಗ ಎಷ್ಟು ದುಡ್ಡು ಅಂತ ನೆನಪಿಲ್ಲ. ಆದರೆ ಖರೀದಿಸಲಾಗದಷ್ಟು ದುಬಾರಿಯೇನಿರಲಿಲ್ಲ ಅಂತ ಮಾತ್ರ ನೆನಪಿದೆ. ಸರಿ, ನಾವಿಬ್ರೂ ಮನೆಗೆ ಬಂದು ಅಮ್ಮನಿಗೆ ದಂಬಾಲು ಬಿದ್ವಿ. ಸಣ್ಣ ಬೀರು ಕೊಡಿಸು ಅಂತ. ಆ ಸಣ್ಣ ಬೀರು ದೊಡ್ಡ ಗೊಡ್ರೇಜ್ ಬೀರುವಿನ ಪ್ರತಿರೂಪದಂತಿದ್ದು, ಸಣ್ಣ ಕನ್ನಡಿಯೂ ಇತ್ತು. ಮೇಲ್ಗಡೆ ಸಣ್ಣ ತೂತಿದ್ದು ಅದರೊಳಗೆ ನಾಣ್ಯಗಳನ್ನು ಹಾಕಬಹುದಿತ್ತು. ಬಾಗಿಲು ತೆರೆಯೋಕೆ ಬರ್ತಿತ್ತಾ ಗೊತ್ತಿಲ್ಲ. ಕೀ ಹೋಲ್ ಅಂತೂ ಇತ್ತು. ಸರಿ ಅಂತ ಅಮ್ಮ ಒಪ್ಪಿದಳು. ಆದರೆ, ಮುಂದೆ ಎಷ್ಟು ದಿನವಾದರೂ ಅದರ ಬಗ್ಗೆ ಮಾತೇ ಇಲ್ಲ. ಕೊನೆಗೆ ಒಂದಿನ ಅಮ್ಮ ಪೇಟೆಗೆ ಹೊರಟಾಗ ಸಣ್ಣ ಬೀರು ತಂದುಕೊಡು ಅಂತ ಇಬ್ರೂ ಭಯಂಕರವಾಗಿ ಹಠ ಮಾಡಿದ್ವಿ. ಆಯ್ತು ಕಣ್ರೇ ತರ್ತೀನಿ ಅಂತ ಅಮ್ಮನೂ ಹೇಳಿದ್ಲು.
ಅವಳು ಹೋಗಿ ಮತ್ತೆ ಬರುವಷ್ಟು ಕಾಲವನ್ನು ನಾವಿಬ್ರೂ ಹೇಗೆ ಕಳೆದವೋ...      
ಒಂದೆರಡು ಗಂಟೆ ಕಳೆಯುವುದೇ ಒಂದು ಯುಗ ಕಳೆದ ಹಾಗೆ ಆಯಿತು. ನಾನು ಅದನ್ನು ಇಲ್ಲಿ ಇಡ್ತೀನಿ. ಅದನ್ನು ಹೀಗೆ ಮಾಡ್ತೀನಿ ಅಂತ ಇಬ್ರೂ ಕನಸು ಕಂಡೆವು! ಕೊನೆಗೊಮ್ಮೆ ಅಮ್ಮ ಪೇಟೆಯಿಂದ ಬಂದಳು. ಇಬ್ರೂ ಓಡಿ ಹೋಗಿ ಬೀರು ತಂದ್ಯಾ? ಬೀರು ತಂದ್ಯಾ ಅಂತ ಗಲಾಟೆ ಮಾಡಿದೆವು. ಅಮ್ಮ ಗದರಿಸಿ ಬ್ಯಾಗಿನಿಂದ ಎರಡು ಪ್ಲಾಸ್ಟಿಕ್ ಬಾಕ್ಸ್ ತೆಗೆದುಕೊಟ್ಟಳು. (ಗಂಡಸರು ಟೂರ್ ಹೋಗುವಾಗ ಶೇವಿಂಗ್ ವಸ್ತುಗಳನ್ನು ಹಾಕಿಕೊಳ್ತಾರಲ್ಲ ಅಂಥದ್ದು). ಸಣ್ಣ ಬೀರು ಏನಕ್ಕೂ ಉಪಯೋಗವಿಲ್ಲ. ಇದರಲ್ಲಾದ್ರೆ ನೀವೇನಾದರೂ ಹಾಕ್ಕೋಬಹುದು ಅಂತ ಅಂದ್ಲು. ಆಗ ನಮಗಾದ ನಿರಾಸೆ ವರ್ಣಿಸಲಾಗದು!!! ಆಮೇಲೆ ಏನು ಮಾಡಿದರೂ ಸಣ್ಣ ಬೀರು ನಮ್ಮ ಪಾಲಾಗಲಿಲ್ಲ.
 ಈ ಒಂದು ಘಟನೆಯನ್ನು 25 ವರ್ಷಗಳ ನಂತರವೂ ಮರೆಯಲು ಸಾಧ್ಯವಾಗಿಲ್ಲ.  ನಾವು ಇದು ಬೇಕು ಅದು  ಅಂತ ಯಾವ ವಸ್ತುವಿಗೂ ಹಠ ಹಿಡಿದವರಲ್ಲ. ಈಗ ನನ್ನಲ್ಲಿ ಎರಡೆರಡು ದೊಡ್ಡ ಬೀರುಗಳಿದ್ದರೂ ಆ ಸಣ್ಣ ಬೀರು ಮಾತ್ರ ಮರೆಯಲು ಸಾಧ್ಯವಿಲ್ಲ. ತೆಗೆದುಕೊಡಲಾರದಷ್ಟು ಬಡತನ ಖಂಡಿತ ಇರಲಿಲ್ಲ. ಆದರೆ (ತೆಗೆದುಕೊಡುವ) ಮನಸ್ಸು ಸಹಾ ಇರಲಿಲ್ಲ.

- ಡಾ. ರಶ್ಮಿ ಭಟ್ ಕೆ. ಬೆಂಗಳೂರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.