

ಹಿಮದಂತೆ- ಹಿಡಿಯಲು ಪ್ರೀತಿ, ಹಿಡಿದರೆ ತಣ್ಣಗೆ ಕೊರೆಯುವ ರೀತಿ ಅವನದು. ಹಿಮ ಹೊಳೆಯುತ್ತದೆ, ಸೆಳೆಯುತ್ತದೆ. ಚಳಿ ಎಂದು ದೂರ ನಿಂತರೆ ರಚ್ಚೆ ಹಿಡಿದು ಆಟ ಆಡಿಸುತ್ತದೆ. ಹಿಮದ ಸಾಗರವೇ ಹರಡಿದ್ದರೂ ತೀರದ ದಾಹ. ಅದು ನೀರಾಗುವುದೇ? ಕಾಯುತ್ತಲೇ ಇರಬೇಕು. ನೀರಾದರೆ ಹಿಮವಿಲ್ಲ. ಕಳೆದುಕೊಳ್ಳುವ ಭಯ ಕಬಂಧವಾಗಿ ಹರಡುತ್ತದೆ. ಯಾವುದಾದರೂ ಒಂದರ ಆಯ್ಕೆಗೆ ಸತಾಯಿಸುತ್ತದೆ. ಎರಡೂ ಬೇಕು ನನಗೆ. ಕೊನೆಗೆ ಅದೂ ಇಲ್ಲ, ಇದೂ ಇಲ್ಲವಾದರೆ?!!
ಸದಾ ವಿಲವಿಲನೆ ಒದ್ದಾಡುವ ಯೋಚನೆಗಳು. ತುಂತುರುವಿನಂತೆ ಬಂದು ತಂತುವನ್ನು ಎತ್ತೆತ್ತಲೋ ಎಳೆದುಕೊಂಡು ಹೋಗಿ ತನ್ನಂತಾನೇ ತಾಳ ಮರೆತು ನಿಂತಾಗ ತತ್ತರಿಸಿಬಿಡುತ್ತೇನೆ. ಇದೆಲ್ಲವೂ ಅವನಿಗೆ ತಿಳಿವುದೇ? ಹೌದು ಎಂಬುದು ನನ್ನ ನಂಬಿಕೆ. ಅದರಲ್ಲೇ ಒಂಥರಾ ಸಂತೋಷ. ತಿಳಿಯದ ಹಾಗೆ ನಟಿಸುವುದರಲ್ಲಿ ಅವ ಚತುರ. ನಟ ಭಯಂಕರ.
ಹೊಸ್ತಿಲಲ್ಲಿ ಒಲವು. ಹೊರಗೋ ಒಳಗೋ ಜಿಗಿತ ಎಂದು ನನ್ನೊಳಗು ಅಲುಗಿನ ಮೇಲೆ ನಿಂತು ಕಾಯುತ್ತಿದೆ. ಶಬರಿ ನಿಂತು ಪ್ರತಿಸ್ಪರ್ಧಿಯಂತೆ ನಗುತ್ತಾಳೆ. ಶಬರಿಗೆ ಹರಿ. ಇವ ನನಗೆ ಎಂದಿಗೂ ಬಗೆಹರಿಯದ ಲಹರಿ. ಭಾವದ ಜಿಗಿದಾಟದಲ್ಲಿ ಜೀವ ಹೈರಾಣು.
ಕೆಲವೊಮ್ಮೆ ಮನಸ್ಸಿನ ಖೋಲಿಗಳು ಖಾಲಿಯಾದಂತೆನಿಸುತ್ತವೆ. ಆಗೆಲ್ಲಾ ಅಬ್ಬಾ ಎಂದು ನಿಟ್ಟುಸಿರು ಬಿಡುತ್ತೇನೆ. ಹಳೇ ಪಾತ್ರೆ ಹಳೇ ಕಬ್ಣಾ ತರಾ ಅವನ ನೆನಪುಗಳೂ ಹೋಯ್ ಅಂತ ಹಾಡಬಯಸುತ್ತೇನೆ. ಆದರೆ ಬಾಯ್ಬಿಡುವ ಮುಂಚೆಯೇ ನಾನಿಲ್ಲದೇ ನೀ ಹಾಡಲಾರೆ ಎಂದೆನ್ನುತ್ತಾ ಬಚ್ಚಿಕೊಂಡ ಬಾಗಿಲ ಹಿಂದಿನಿಂದ ಘಕ್ಕನೆ ಎದುರಿಗೆ ಹಾರುತ್ತಾನೆ. ಆಗೆಲ್ಲಾ ಖುಷಿಯೇ ಅಗುತ್ತದೆ ಎಂಬುದೇ ನನ್ನ ಸಂದಿಗ್ಧ.
ಇನ್ನೊಂದು ದ್ವಂದ್ವ. ಅವನ ನೋಟಕ್ಕೂ, ಮಾತಿಗೂ ಎಂದಿಗೂ ತಾಳ ಕೂಡುವುದೇ ಇಲ್ಲ. ನೋಟ ಹೇಳುವುದನ್ನು ಕೇಳುವುದೇ ಸುಖ. ನೋಟ ನಾ ನಿನ್ನ ಸಖ ಎಂದರೆ ಮಾತು ನಮಗಿದೆಲ್ಲ ಬೇಕಾ ಎಂಬಂತೆ. ಒಟ್ಟಿನಲ್ಲಿ ನನ್ನ ಸ್ಥಿತಿ ವಾಖಾ ವಾಖಾ ಆಫ್ರಿಕಾ! ಎಂಥದೂ ಅರ್ಥವಾಗಲ್ಲ.
- ರೇಶ್ಮಾ ರಾವ್ ಸೊನ್ಲೆ