ಮೊನ್ನೆ ಬಿಜಾಪುರದ ಸಾಹಿತ್ಯ ಸಮ್ಮೇಳನದಲ್ಲಿ ಹೀಗಾಯ್ತು. ಪುಸ್ತಕ ಬಿಡುಗಡೆಗೆ ಅಂತ ಬಂದಿದ್ದ ಬರಗೂರು ರಾಮಚಂದ್ರಪ್ಪನವರನ್ನು ಯಾರೋ ಒಬ್ಬ ತುಂಬಾ ಹೊತ್ತಿನಿಂದ ಗಮನಿಸುತ್ತಿದ್ದ. ಅವರ ಹತ್ತಿರ ಮಾತಾಡ್ಬೇಕು, ಅವರ ಆಟೋಗ್ರಾಫ್ ತಗೊಳ್ಬೇಕು, ಅವರ ಬಳಿ ನಿಂತ್ಕೊಂಡ್ ಫೇಸ್ಬುಕ್ಕಿಗೆ ಒಂದು ಫೋಟೋ ಕ್ಲಿಕ್ಕಿಸಿಕೊಳ್ಬೇಕೆಂಬ ಉದ್ದೇಶ ಅವನದ್ದಾಗಿರ್ಲಿಲ್ಲ. ಬರಗೂರರ ಪ್ಯಾಂಟಿನ ಹಿಂಭಾಗ ತುಸು ಇಣುಕಿ ನೋಡುತ್ತಿದ್ದ ಪಾಕೆಟ್ ಅನ್ನು ಎಗರಿಸೋದು ಅವನ ಕನಸು. ಬರಗೂರರಿಗೆ ಗೊತ್ತಿಲ್ಲದಂತೆ ಅಂತೂ ಪಿಕ್ಪಾಕೆಟ್ ಮಾಡಿಯೇ ಬಿಟ್ಟ. ಅದರಲ್ಲಿ 10 ಸಾವಿರ ರು. ಇತ್ತಂತೆ. ಪಾಪ, ಬರಗೂರರು ಪೊಲೀಸರಿಗೆ ದೂರನ್ನೂ ನೀಡದೆ ಕೇವಲ ಆಪ್ತರ ಬಳಿ ಹೇಳ್ಕೊಂಡು ಪ್ರಕರಣ ಮುಚ್ಚಿಹಾಕಿದರಂತೆ. ಕೃತಿಚೌರ್ಯದಂತೆ ಕೃತಿಕಾರರ ಚೌರ್ಯವೂ ನಡೆಯುತ್ತದೆ ಎಂದುಕೊಂಡು ಸುಮ್ಮನಾದರಂತೆ. ವೇದಿಕೆಯಲ್ಲಿ ಮಾತ್ರ 'ಅನ್ಯಾಯದ ವಿರುದ್ಧ ಸಾಹಿತಿಗಳು ದನಿ ಎತ್ತಬೇಕು' ಅಂತ ಕೋ. ಚನ್ನಬಸಪ್ಪ ಭಾಷಣ ಬಿಗಿಯುತ್ತಿದ್ದರು!