ಆ ದಿನ...

Updated on: 

ಶಿವಾಜಿನಗರದ ಬಸ್ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ಹುಡುಗನ ಸ್ಥಿತಿ ನೋಡಿ ಮನಸ್ಸಿಗೆ ತುಂಬಾ ನೋವಾಯ್ತು. ಅವನ ತ್ಯಾಪೆ ಹಾಕಿದ ಶರ್ಟು ಅವನ ಸ್ಥಿತಿಯನ್ನು ಹೇಳ್ತಾ ಇತ್ತು. ಬಸ್ ನಿಲ್ದಾಣಕ್ಕೆ ಬರುತ್ತಿದ್ದ ಎಲ್ಲಾ ವರ್ಗದ ಜನರ ಮುಂದೆ ತುತ್ತಿಗಾಗಿ ಕೈ ಚಾಚಿ ನಿಲ್ಲುತ್ತಿದ್ದ. ಕೆಲವರು ನೀಡಿದರೆ ಮತ್ತೆ ಕೆಲವರು ಅವನನ್ನು ಗಮನಿಸುತ್ತಿರಲಿಲ್ಲ. ಇನ್ನು ಕೆಲವರು ಜೇಬಿಗೆ ಕೈ ಹಾಕಿ ಇಲ್ಲ ಎಂದು ಹೇಳುತ್ತಿದ್ದರು. ನಿರಾಸೆಗೊಳ್ಳದೇ ಹುಡುಗ ಮತ್ತೆ ಬೇಡುತ್ತಾ ಮುಂದೆ ಸಾಗಿದ್ದ. ಬಸ್ಸಿಗಾಗಿ ಕಾಯುತ್ತಿದ್ದ ನಾನು ಹುಡುಗನನ್ನು ಗಮನಿಸುತ್ತಿದ್ದೆ. ಬದುಕಬೇಕೆಂಬ ಹಂಬಲ ಅವನ ಕಣ್ಣಲ್ಲಿ ಅಚಲವಾಗಿತ್ತು. ನಮ್ಮಲ್ಲಿ ಸಾಕಷ್ಟು ಜನರಿಗೆ ಊಟ, ವಸತಿ, ವಿದ್ಯಾಭ್ಯಾಸ ಎಲ್ಲಾ ಇದ್ದೂ ಭವಿಷ್ಯದ ಬಗ್ಗೆ ಆತಂಕವಿರುತ್ತದೆ. ಆದರೆ ಆ ಹುಡುಗನಿಗೆ ಏನೂ ಇಲ್ಲ, ಬೀದಿಯಲ್ಲಿ ಒಂದು ಹೊತ್ತಿನ ಅನ್ನಕ್ಕಾಗಿ ಪರಿತಪಿಸುತ್ತಿದ್ದಾನೆ. ಆ ಹುಡುಗನಿಗೆ ಭವಿಷ್ಯದಲ್ಲಿ ಸರಿಯಾದ ಮಾರ್ಗದರ್ಶನ ಇಲ್ಲದಿದ್ದರೆ ಕಳ್ಳನೋ, ಕೊಲೆಗಾರನೋ ಅಥವಾ ಹೀಗೇ ಭಿಕ್ಷುಕನಾಗಿ ಉಳಿದುಬಿಡಬಹುದಲ್ವಾ...! ಸರ್ಕಾರದ ಕಣ್ಣಿಗೆ ಇವರೆಲ್ಲಾ ಕಾಣೋದಿಲ್ವೇ...? ಎಂದೆಲ್ಲಾ ಬುದ್ಧಿವಂತನ ರೀತಿಯಲ್ಲಿ ಸರ್ಕಾರವನ್ನು ಆಡಿಕೊಂಡೆ. ಕೆಲಸದ ಮೇಲೆ ತುರ್ತಾಗಿ ಹೋಗಬೇಕಾದ್ದರಿಂದ, ಅಲ್ಲೇ ಇದ್ದ ಬೇಕರಿಯಲ್ಲಿ ಹುಡುಗನಿಗಾಗಿ ಎರಡು ಬನ್ನು, ಬಾಳೆಹಣ್ಣು ಖರೀದಿಸಿದೆ. ಕೂಗಳತೆಯ ದೂರದಲ್ಲಿದ್ದ ಆ ಪುಟ್ಟ ಬಾಲಕನಿಗೆ ಕೈಸನ್ನೆ ಮಾಡಿ ಕರೆದೆ. ಹುಡುಗ ಆಸೆಯಿಂದ ನನ್ನತ್ತ ಹೆಜ್ಜೆ ಹಾಕುತ್ತಿರುವಾಗಲೇ ಎಲ್ಲಿಂದಲೋ ಒಬ್ಬ ದಾಂಡಿಗ ಬಂದು ಅವನಲ್ಲಿದ್ದ ಅಷ್ಟೂ ಚಿಲ್ಲರೆಯನ್ನು ತನ್ನ ಜೇಬಿನಲ್ಲಿಳಿಸಿ ಅವನನ್ನು ಹೆಗಲಿಗೇರಿಸಿ ಮುನ್ನಡೆದ. ಅವನು ಕುಡಿದ ಅಮಲಿನಲ್ಲಿದ್ದ. ಹುಡುಗನ ಹೆಸರಿನಲ್ಲಿದ್ದ ಬನ್ನು-ಬಾಳೆಹಣ್ಣು ನನ್ನಲ್ಲೇ ಉಳಿದವು. ಆ ಮನುಷ್ಯ ಪುಟ್ಟ ಹುಡುಗನನ್ನು ಹೊತ್ತೊಯ್ದದದ್ದನ್ನು ನೋಡಿ ಅಚ್ಚರಿಯಾಯಿತು. ಕಳ್ಳನಿರಬಹುದೇ...? ಹುಡುಗನಿಗೆ ಸಹಾಯ ಮಾಡಲು ಬಂದಿರಬಹುದೇ...? ಎಂದೆಲ್ಲಾ ಯೋಚಿಸುವಷ್ಟರಲ್ಲಿ ತಿಳಿದ ಸಂಗತಿಯೆಂದರೆ ಆ ದಾಂಡಿಗ ಆ ಪುಟ್ಟ ಹುಡುಗನ ತಂದೆ! ತಂದೆಯೇ ಸ್ವಂತ ಮಗನನ್ನು ಭಿಕ್ಷೆಗೆ ಬಿಟ್ಟಿರುವುದು ನೋಡಿ ಮನಸ್ಸಿಗೆ ತುಂಬಾ ಬೇಜಾರಾಯಿತು. ಆ ಪುಟ್ಟ ಮಗು ಬೇಡಿ ತಂದ ಹಣವನ್ನು ಈತ ಕುಡಿತಕ್ಕೆ ಬಳಸುತ್ತಾನೆ. ಥೂ...! ಅದೆಂಥ ಜನ್ಮ, ಯಾವ ಪುರುಷಾರ್ಥಕ್ಕಾಗಿ ಆ ಪಾಪದ ಹುಡುಗನಿಗೆ ಜನ್ಮ ನೀಡಬೇಕಿತ್ತು? ಆ ರಾತ್ರಿ ನನಗೆ ನಿದ್ದೆ ಬರಲಿಲ್ಲ.

 ಶ್ರೀಕಾಂತ್.ಎನ್.ಎಸ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com