ಕಾಯ್ಕಿಣಿ ಕಮ್ಮಟ

ಮೆದುಮಾತಿನ, ಹೃದಯದ ಮೇಲೆ ಪದಗಳನ್ನು ಕುಣಿಸುವ ಕವಿ ಜಯಂತ ಕಾಯ್ಕಿಣಿ.
ಕಾಯ್ಕಿಣಿ ಕಮ್ಮಟ
Updated on: 

ಮೆದುಮಾತಿನ, ಹೃದಯದ ಮೇಲೆ ಪದಗಳನ್ನು ಕುಣಿಸುವ ಕವಿ ಜಯಂತ ಕಾಯ್ಕಿಣಿ. ಜನರ ಆಡುಭಾಷೆಯ ಅಕ್ಷರಗಳನ್ನೇ ಜೋಡಿಸಿ, ಪದಮಾಲೆ ಕಟ್ಟಿದವರು. ಹಸಿ ಹಸಿಯ ಕಥೆಗಳನ್ನು ಕುಟ್ಟಿದರು. ಸೌಮ್ಯಸ್ವಭಾವದ ಈ ಮಿತಭಾಷಿ ದೋಣಿಯಲ್ಲಿ ಮಾತಿನ ವಿಹಾರ ನಡೆಸಿದರು...

ಯಾಕೆ ಬರೆಯಲು ಆರಂಭಿಸಿದಿರಿ? ಅಪ್ಪನನ್ನು ಅನುಕರಣೆ ಮಾಡಿಯೇ?
ಅನುಕರಣೆ ಮಾಡಲು ಸಾಕಷ್ಟು ಆಕರ್ಷಕ ಸಂಗತಿಗಳು (ಯಕ್ಷಗಾನ, ನಾಟಕ, ಸಿನಿಮಾ, ಜಾತ್ರೆ ಇತ್ಯಾದಿ) ಸುತ್ತ ಮುತ್ತ ಇರುವಾಗ ಅವನ್ನೆಲ್ಲ ಬಿಟ್ಟು ಅಪ್ಪನನ್ನು, ಅದರಲ್ಲೂ ಸಾಹಿತ್ಯದ ಮೂಲಕ ಅನುಕರಣೆ ಮಾಡುವ ಚಪಲ ಖಂಡಿತಾ ಇಲ್ಲ. ಯಾವ ಸಾಹಿತಿಗಳ ಮಕ್ಕಳಿಗೂ ಬಾಲ್ಯದಲ್ಲಿ ಅಂಥ ಬುದ್ಧಿ ಇರುವುದಿಲ್ಲ.
 
ನಿಮ್ಮ ಮೇಲೆ ವ್ಯಕ್ತಿತ್ವದ ಮೇಲೆ ಅಪ್ಪ ಗೌರೀಶ ಕಾಯ್ಕಿಣಿಯ ಪ್ರಭಾವ ಎಷ್ಟಿದೆ?
ಸಮತೆ ಮತ್ತು ಮಮತೆಯ ಸಾಕಾರ ಮೂರ್ತಿಯಾದ್ದ ಅಪ್ಪನಿಗಿಂತ ತತ್ಪರ, ಸರಳ, ಪಾರದರ್ಶಕ ಬೇರೆ ಯಾವ ಸತ್ಯಾರ್ಥವನ್ನೂ ನಾನು ಕಂಡಿಲ್ಲ.

ನಿಮ್ಮೊಳಗಿನ ಸಾಹಿತಿ ಪ್ರಚುರಗೊಂಡಿದ್ದು ಹೇಗೆ?
ಬರೆಯುವುದರ ಮೂಲಕ. ಎಡೆಬಿಡದ ತ್ರಿವಿಕ್ರಮನಂತೆ ಅಸ್ವೀಕೃತಗೊಂಡರೂ ಮತ್ತೆ ಮತ್ತೆ ಪತ್ರಿಕೆಗಳಿಗೆ ಕಳಿಸುವುದರ ಮೂಲಕ.

ಮನೋಮೂರ್ತಿ- ಜಯಂತ ಕಾಯ್ಕಿಣಿ- ಸೋನು ನಿಗಮ್ ಮೂವರ ಕಾಂಬಿನೇಷನ್ನು ಟ್ರೆಂಡ್ ಸೆಟ್ಟಿಂಗ್ ಕಾಂಬಿನೇಷನ್ನಾ? ಅಥವಾ ಬೆಸ್ಟ್ ಸೆಲ್ಲಿಂಗ್ ಕಾಂಬಿನೇಷನ್ನಾ?
ಬಲ್ಲವರು ಹೇಳಬೇಕು.

ಕವಿಯಾದ ನೀವು ಸಿನೆಮಾ ಕಡೆ ತಿರುಗಿದ್ದೇಕೆ?
ನಾನಾಗಿಯೇ ತಿರುಗಲಿಲ್ಲ. ನನ್ನ ಕಥೆ, ಕವಿತಾ ಸಾಹಿತ್ಯದ ಅಭಿಮಾನಿಗಳಾಗಿದ್ದ ನಾಗಾಭರಣ (ಚಿಗುರಿದ ಕನಸು), ಯೋಗರಾಜ ಭಟ್ (ಮುಂಗಾರು ಮಳೆ) ಅವರೇ ನನ್ನತ್ತ ತಿರುಗಿದರು.

ತೃಪ್ತಿ ಕೊಡುವ ಕ್ಷೇತ್ರ- ಸಿನಿಮಾ ಅಥವಾ ಪುಸ್ತಕ ಪ್ರಪಂಚ?
ಪ್ರತಿ ಪ್ರಪಂಚಕ್ಕೂ ಅದರದ್ದೇ ಆದ ಚಡಪಡಿಕೆ, ಕಷ್ಟ ಸುಖ ಮತ್ತು ಅಲ್ಪ ತೃಪ್ತಿ ಇದೆ.

ದಿನದ 24 ಗಂಟೆಗಳಲ್ಲಿ ವೈಯಕ್ತಿಕ ವಿಷಯಕ್ಕೆ ಎಷ್ಟು ಸಮಯ ಮೀಸಲಿಡುತ್ತೀರಿ?

ಪೂರಾ 24 ಗಂಟೆಗಳೂ ವೈಯಕ್ತಿಕವೆಂದೇ ತಿಳಿದವನು ನಾನು.

ನಿಮ್ಮ ಮೆಚ್ಚಿನ ಪ್ರಕಾರ ಯಾವುದು? ಕಾವ್ಯ, ಗದ್ಯ, ಕಾದಂಬರಿ ಮತ್ತು ನಾಟಕ..?
ಕಾದಂಬರಿ ಇನ್ನೂ ಬರೆದಿಲ್ಲ. ಎಲ್ಲಾ ಪ್ರಕಾರಗಳೂ ಪರಿಪೂರಕ. ವೈದ್ಯಕೀಯದಲ್ಲಿ ಹೇಗೆ ಕಣ್ಣಿನ ತಜ್ಞ, ಗಂಟಲು ತಜ್ಞ, ಕಿವಿ ತಜ್ಞ ಹೀಗೆ ಬೇರೆ ಬೇರೆ ತಜ್ಞರು ಒಟ್ಟಾಗಿ ಜೀವದ ಹಿತಕ್ಕಾಗಿ ದುಡಿಯುತ್ತಾರೋ ಹಾಗೆಯೇ ಎಲ್ಲಾ ಪ್ರತ್ಯೇಕ ಪ್ರಕಾರಗಳ ಮೂಲ ಕಾಳಜಿ ಒಂದೇ- ಅಂತರಂಗದ ವಿಕಾಸ.
 
ನಿಮ್ಮ ಸಿನಿಮಾ ಗೀತೆಗಳಲ್ಲಿ ಹಿಂದಿಗೀತೆಗಳಲ್ಲಿ ಬಳಸುವಂಥ ಉಪಮೆಗಳು ಹೆಚ್ಚು. ಕಾರಣ?
ಉಪಮೆ, ರೂಪಕಗಳು ಭಾಷಾತೀತ. ನನ್ನದು ಕನ್ನಡ, ಮರಾಠಿ, ಕೊಂಕಣಿ, ಹಿಂದಿ ಎಲ್ಲಾ ಭಾಷೆಗಳನ್ನೂ ಆಸ್ವಾದಿಸುತ್ತಾ ಬೆಳೆದು ಬಂದ ಸಂಯುಕ್ತ ಸಂವೇದನೆ. ಉತ್ತರ ಕನ್ನಡದ ಕರಾವಳಿಯ ನಡೆನುಡಿಯಲ್ಲಿ ಇವೆಲ್ಲಾ ಸಹಜವಾಗಿಯೇ ಇವೆ.

ಸಿನಿಮಾ ಸಾಹಿತ್ಯದಲ್ಲಿ ಬ್ಯುಸಿಯಾದ ಮೇಲೆ, ಬೇರೆ ಬರಹಗಳು ಕಡಿಮೆಯಾಗುತ್ತಿವೆ. ಹೌದೇ?
ಮೊದಲಿಂದಲೂ ನನ್ನದು prolific ಬರವಣಿಗೆ ಅಲ್ಲ. ಕಳೆದ ವರ್ಷವೇ ನನ್ನ ಹೊಸ ಕಥಾಸಂಕಲನ 'ಚಾರ್‌ಮಿನಾರ್‌' ಬಂದಿದೆ. ಪ್ರಬಂಧ ಸಂಕಲನ 'ಟೂರಿಂಗ್ ಟಾಕೀಸ್‌' ಕಳೆದ ತಿಂಗಳು ಹೊರಬಂದಿದೆ. ಇವೆಲ್ಲಾ ಒಟ್ಟಿಗೆ ನಡೆಯುವ ಸರ್ವಾಂಗ ಸುಂದರ ವ್ಯಾಯಾಮದ ಬೇರೆ ಬೇರೆ ಎಕ್ಸರ್‌ಸೈಜ್‌ಗಳಷ್ಟೇ.

ಕಾಯ್ಕಿಣಿ ಆಟೋಗ್ರಾಫ್

ಇಷ್ಟವಾದ ಸಾಹಿತಿ
ಯಶವಂತ ಚಿತ್ತಾಲ
ಇಷ್ಟದ ಕವಿ
ಕೆ.ವಿ. ತಿರುಮಲೇಶ್ (ಕನ್ನಡ)
ಗ್ರೇಸ್ (ಮರಾಠಿ)
ಇಷ್ಟದ ಸ್ಥಳ
ಮಾಥೆರಾನ್ (ಮಹಾರಾಷ್ಟ್ರ)
ಇಷ್ಟದ ಕನ್ನಡ ಸಿನಿಮಾ ಹಾಡು
ಆಕಾಶವೇ ಬೀಳಲಿ ಮೇಲೆ...
ಇಷ್ಟದ ಕನ್ನಡ ಸಿನಿಮಾ
ಸಂತ ತುಕಾರಾಂ
ಎದೆಯಲಿ ಗುನುಗುವ ಹಾಡು
ಆಜ್ ಫಿರ್ ಜೀನೇಕಿ ತಮನ್ನಾ ಹೈ (ಗೈಡ್)
ಇಷ್ಟದ ಕಾದಂಬರಿ
ಮರಳಿ ಮಣ್ಣಿಗೆ, ಕಾನೂರು ಸುಬ್ಬಮ್ಮ ಹೆಗ್ಗಡತಿ.
ಇಷ್ಟದ ಕ್ರೀಡೆ
ಕ್ರಿಕೆಟ್ (ಟಿವಿಯಲ್ಲಿ ನೋಡೋಕೆ ಮಾತ್ರ)
ಮೆಚ್ಚಿನ ನಟ
ಡಾ. ರಾಜ್‌ಕುಮಾರ್
ನಟಿ
ಜ್ಯೂಲಿಯಾ ರಾಬರ್ಟ್ಸ್

-ನಳಿನ ಡಿ.
nalina200082@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com