ತನ್ನ ಕ್ಲಿನಿಕ್ಗೆ ಬರುತ್ತಿದ್ದ ರೋಗಿಗಳಿಗೆಲ್ಲಾ ಆಪ್ತ ಸಲಹೆಯ ಮೂಲಕ ಸಮಾಧಾನ ಹೇಳಿ ಖಾಯಿಲೆ ಗುಣಪಡಿಸುತ್ತಿದ್ದ ಮನೋವೈದ್ಯನೋರ್ವ, ಗಳಿಸಿದ ಹಣವನ್ನೆಲ್ಲಾ ಬ್ಲೇಡ್ ಕಂಪನಿಯೊಂದರಲ್ಲಿ ಹೂಡಿ ಅಪಾರ ನಷ್ಟ ಅನುಭವಿಸಿ, ಮತಿಭ್ರಮಣೆಗೊಳಗಾಗಿ 'ನಿಮ್ಹಾನ್ಸ್'ಗೆ ದಾಖಲಾದರು.
ಜ್ಯೋತಿಷ್ಯದಲ್ಲಿ ವಿಪರೀತ ನಂಬಿಕೆಯಿದ್ದ ಯುವಕ, ಯಾವ ಜಾತಕದ ಹುಡುಗಿಯನ್ನು ವಿವಾಹವಾದರೆ ತಾನು ದೀರ್ಘಾಯುಷಿಯಾಗಿ ಬದುಕುತ್ತೇನೆಂದು ವಿಚಾರಿಸುತ್ತಾ ಜ್ಯೋತಿಷಿಗಳ ಮನೆಗೆ ಅಲೆದಾಡುತ್ತಿದ್ದ. ಹೀಗೆ ವಿಚಾರಿಸುತ್ತಲೇ 'ಆ ಜನ್ಮ ಬ್ರಹ್ಮಚಾರಿ'ಯಾಗಿ ಸತ್ತ ರಸ್ತೆ ಅಪಘಾತವೊಂದರಲ್ಲಿ.
ಬೆಳದಿಂಗಳ ರಾತ್ರಿಯಲ್ಲಿ, ಚಂದ್ರನ ಶೀತಲ ಕಿರಣಗಳ ನಡುವೆ, ತಂಗಾಳಿಯಂತೆ ಬಂದ ಆಕೆ ಪ್ರಿಯಕರನಿತ್ತ 'ನೆಕ್ಲೆಸ್'ನ್ನು ಧರಿಸಿ, ಅದಕ್ಕೆ ಪ್ರತಿಯಾಗಿ ತನ್ನನ್ನೇ ಅವನಿಗೆ ಅರ್ಪಿಸಿಕೊಂಡಳು. ಮಾರನೇ ಬೆಳಿಗ್ಗೆ ಸೂರ್ಯನ ಪ್ರಕಾಶಮಾನವಾದ ಬೆಳಕಿನಲ್ಲಿ ಪರೀಕ್ಷಿಸಿದಾಗ, ತನಗಿತ್ತ ನೆಕ್ಲೆಸ್ ನಕಲಿಯದ್ದು ಎಂದು ತಿಳಿಯುತ್ತಲೇ ರೌದ್ರಾವತಾರ ತಾಳಿದ ಮಹಾಕಾಳಿಯಾದಳು.
ತನ್ನ ಮಗಳು ಪ್ರೀತಿಸಿದ ಹುಡುಗ ತಿಂಗಳಿಗೆ ಲಕ್ಷರೂ. ಸಂಪಾದಿಸುವ ಭಾರೀ ಕುಳ ಎಂದರಿತ ಕನ್ಯಾಪಿತೃ, ಆ ಹುಡುಗನ ಮನೆಗೆ ಸಂಬಂಧ ಬೆಳೆಸುವ ಸಲುವಾಗಿ ಹೋಗಿ ಬಾಗಿಲು ತಟ್ಟಿದ. ಕರೆಗಂಟೆ ಸದ್ದಾಗುತ್ತಲೇ ಬಾಗಿಲು ತೆರೆದವಳನ್ನು ನೋಡಿ ಅಲ್ಲಿಂದ ಕಾಲ್ತೆಗೆದ. ಮನೆಗೆ ಬಂದು ಮಗಳಿಗೆ ಈ ವಿವಾಹ ಸಾಧ್ಯವಿಲ್ಲವೆಂದ. ಏಕೆಂದರೆ ಬಡಕುಟುಂಬದ ಹುಡುಗಿಯೆಂದು ತಾನು ವಿವಾಹವಾಗಲು ನಿರಾಕರಿಸಿದ ಹುಡುಗಿಯೇ ವರನ ತಾಯಿಯಾಗಿದ್ದಳು.
- ಸುಮಾ, ಮಂಡ್ಯ