ನಿರುತ್ತರ ನಿಸ್ತೇಜ

ನಿರುತ್ತರ ನಿಸ್ತೇಜ
Updated on: 

ತೇಜಸ್ವಿಯವರ ಶವ ಹೊತ್ತ ವಾಹನ 'ನಿರುತ್ತರ'ದ ಅಂಗಳ ಬಿಟ್ಟು ಕಾಫಿತೋಟದ ಹಳದಿ ಗೇಟು ದಾಟುವವರೆಗೆ ಸುಮ್ಮನೆ ಮನೆಯಂಗಳದ ಅದ್ಯಾವುದೋ ಮರದ ಬೊಡ್ಡೆಗೆ ಒರಗಿ ನಿಂತಿದ್ದೆ. ಪೊಲೀಸರು ಶವಪೆಟ್ಟಿಗೆಯ ಮುಂದೆ ಸೆಲ್ಯೂಟ್ ಹೊಡೆದು ಗಾಳಿಗೆ ಗುಂಡು ಹಾರಿಸಿ ಗೌರವ ಸೂಚಿಸುವಾಗ ಹಸಿರು ಜುಬ್ಬಾ ಹಾಕಿದ್ದ ಕಡಿದಾಳು ಶಾಮಣ್ಣ ದೂರದಲ್ಲಿ ನಿಂತು ತಮ್ಮ ನಿಕಾನ್ ಕ್ಯಾಮೆರಾದಲ್ಲಿ ಆತ್ಮಮಿತ್ರನ ಕೊನೆಯ ಚಿತ್ರವನ್ನು ಕ್ಲಿಕ್ಕಿಸುತ್ತಿದ್ದರು. ಗುಂಪಿನ ಹಿಂಭಾಗದಲ್ಲಿ ಪ್ರೊ. ರಾಮದಾಸ್, ರವಿಕುಮಾರ್ ವರ್ಮ ಹೆಗಲಿಗೆ ಕೈ ಇರಿಸಿ ಕಣ್ಣೀರು ಇಡುತ್ತಿದ್ದರು. ಒಂದು ಕಡೆ ರಾಮದಾಸ್, ಮತ್ತೊಂದು ಕಡೆ ಶಾಮಣ್ಣ- ನಡುವೆ ತೇಜಸ್ವಿ ಮಲಗಿದ್ದರು.
ಸಿಡಿದ ಗೌರವದ ಸಾಲು ಗುಂಡಿಗೆ 'ನಿರುತ್ತರ'ದ ಸುತ್ತಲಿನ ಕಾಡು ನಲುಗಿತ್ತು. ಗುಂಡು, ಕೋವಿ ನಿಸ್ತೇಜಗೊಂಡಾಗ ತಿರುಗಿ ಪಕ್ಷಿಗಳ ಇಂಚರ ನಿಧಾನವಾಗಿ ಹಿಗ್ಗಿತ್ತು. ಆ ಕಾಡಿನಲ್ಲಿ ಯಜಮಾನನ ಬೇಟೆ ನಿಂತು ಬಹಳ ವರ್ಷಗಳಾಗಿರಬೇಕು. ಪಕ್ಷಿಗಳೆಲ್ಲಾ ಗುಂಡಿನ ಸದ್ದು ಮರೆತು ಬರೀ ಕ್ಯಾಮೆರಾಕ್ಕೆ ಮುಖ ಕೊಡುವ ಅಭ್ಯಾಸ ಬೆಳೆಸಿಕೊಂಡಂತಿತ್ತು. ಅಂಥ ನೀರವ, ಸ್ವಚ್ಛ ಪರಿಸರದಲ್ಲಿ ಸಾಲು ಸಾಲು ಗುಂಡು ಸಿಡಿದಾಗ ತೇಜಸ್ವಿ ಮಲಗಿದಲ್ಲೇ ಛೀ... ಥೂ... ಎಂದಿರಬೇಕು!
ಶವ ಮೂಡಿಗೆರೆಯ ಪೇಟೆ ದಾಟಿರಬಹುದು. 'ನಿರುತ್ತರ' ನಿಧಾನವಾಗಿ ಖಾಲಿಯಾಗುತ್ತಿತ್ತು. ಹೂವು, ಏಲಕ್ಕಿ, ಕಾಫಿ ಗಿಡಗಳ ಮಧ್ಯೆ ಜಾಗ ಮಾಡಿಕೊಂಡು ತೂರಿಕೊಂಡಿದ್ದ ಅಷ್ಟೂ ಜನ ಶವದ ಬೆನ್ನಿಗೆ ನಿಂತು ಪೇಟೆ ಕಡೆಗೆ ನಡೆದರು. ಬೈಕು, ಕಾರು, ಜೀಪುಗಳು ಖಾಲಿಯಾದವು. ಗೆಳೆಯ ಪ್ಯಾಟಿ ಯಜಮಾನನಿಲ್ಲದ 'ನಿರುತ್ತರ'ದ ಫೋಟೋ ತೆಗೆಯುತ್ತಿದ್ದ. ಅಷ್ಟರವರೆಗೆ ತೇಜಸ್ವಿ ಮಲಗಿದ್ದ ಮಂಚ
ಖಾಲಿಯಾಗಿ ಅದರ ಮೇಲೆ ಗುಲಾಬಿಯ ಎರಡು ಪಕಳೆಗಳಷ್ಟೇ ಉಳಿದಿದ್ದವು. ವರಾಂಡದ ಫೋನು ಬಡಕೊಳ್ಳುತ್ತಿತ್ತು.
ಆಗ ಅಂಗಳದಲ್ಲಿ ಉಳಿದದ್ದು ಒಂದೇ ಒಂದು ಜತೆ ಚಪ್ಪಲಿ! ಆವರೆಗೆ ಅದರ ಅಕ್ಕಪಕ್ಕದಲ್ಲಿ ರಾಶಿ ರಾಶಿಯಾಗಿ ಬಿದ್ದಿದ್ದ ನೂರಾರು ಚಪ್ಪಲಿಗಳು ಅವುಗಳ ಯಜಮಾನರ ಕಾಲಿಗೆ ಅಂಟಿಕೊಂಡು ಖಾಲಿಯಾದವು. ರಾಶಿಯ ಮಧ್ಯೆ ಆವರೆಗೆ ಅಡಿಗೆ ಬಿದ್ದು ಅಸ್ತವ್ಯಸ್ತಗೊಂಡು ಉಳಿದ ಆ ಜತೆ ಚಪ್ಪಲಿ ತೇಜಸ್ವಿಯವರದ್ದೇ! ಮುಂಜಾನೆ ಅದನ್ನೇ ಮೆಟ್ಟಿಕೊಂಡು ಯಜಮಾನರು ಪೇಟೆ ಸುತ್ತಿದ್ದರು. ಈಗ ಅದನ್ನು ಆವರಿಸಿಕೊಳ್ಳುವ ಕಾಲಿಲ್ಲ. ಶೆಡ್ ಒಳಗಡೆ ನಿಂತ ಸ್ಕೂಟರ್‌ನಲ್ಲಿ ಕೀ ಹಾಗೆಯೇ ಇದೆ. ಚೀಲ ಹ್ಯಾಂಡಲ್ ಮೇಲೆ ನೇತಾಡುತ್ತಿತ್ತು. ಅದರೊಳಗೆ 'ಹ್ಯಾಂಡ್‌ಪೋಸ್ಟ್‌'ಗೆ ಬಂದ ಪತ್ರಗಳಿರಬಹುದು.
'ಮಾಯಾಲೋಕದ ಎರಡನೇ ಸಂಪುಟ ಯಾವಾಗ?' ಎಂದು ಪ್ರಶ್ನಿಸಿ ಬರೆದ ಕಾರ್ಡು ಇರಬಹುದು. 'ಪರಿಸರ ಕಥೆ'ಯ ಒಂದು ಪ್ರತಿಯನ್ನು ನಿಮ್ಮ ಹಸ್ತಾಕ್ಷರದೊಂದಿಗೆ ಕಳಿಸಿ ಕೊಡಿ ಎಂದು ಅಭಿಮಾನಿ ಓದುಗನ ಪತ್ರವಿರಬಹುದು. ಅವೆಲ್ಲವನ್ನೂ ಓದಲು ತೇಜಸ್ವಿಯೀಗ ಇಲ್ಲ. ಯಾರಿಗೂ ಇನ್ನು ತೇಜಸ್ವಿ ಉತ್ತರ ಬರೆಯಲಾರರು. ರಘು ಶವದ ಸುತ್ತ ಆ ಕಡೆ ಈ ಕಡೆ ಓಡುತ್ತಿದ್ದಾರೆ. ತೇಜಸ್ವಿಯವರ ಆತ್ಮೀಯ ಸಹಾಯಕರವರು. ದಿನಕ್ಕೊಮ್ಮೆ ಮನೆಗೆ ಬರುವವರು. ಪುಸ್ತಕ ಪ್ರಕಾಶನದ ಪುಸ್ತಕಗಳನ್ನು ಅಜ್ಞಾತ ದೂರದ ಓದುಗರಿಗೆ ತಲುಪಿಸುವವರು. ತೇಜಸ್ವಿಯವರು ಬರೆದಿಟ್ಟ ಪತ್ರಗಳನ್ನು ವಿಳಾಸ ಬರೆದು ಡಬ್ಬಿಗೆ ಹಾಕುವವರು. ತೇಜಸ್ವಿ ನಾಳೆಯಿಂದ ಯಾರಿಗೂ ಪತ್ರ ಬರೆಯಲಾರರು.
ಮನೆಯೊಳಗಡೆ ಒಂದು ಮೂಲೆಯಲ್ಲಿ ತೇಜಸ್ವಿಯವರ ಪ್ರೀತಿಯ ಶಿವ ಕೂತಿದ್ದಾನೆ. ಇಪ್ಪತ್ತು ವರ್ಷಗಳಿಂದ ಕಾಡಿನ ನಡುವಿನ 'ನಿರುತ್ತರ'ದಲ್ಲಿ ದುಡಿದವನು. ದೂರದ ಕೊಪ್ಪಳದ ಆನಂದ ಪ್ಯಾಟಿ ತೇಜಸ್ವಿಯವರನ್ನು ನೋಡಿದ್ದು ಪುಸ್ತಕದಲ್ಲಿ. ಆದರೆ, ಶಿವು ಹಾಗಲ್ಲ. ಅವನಿಗೆ ಸಾಹಿತ್ಯ ಗೊತ್ತಿಲ್ಲ. ಮೀಮಾಂಸೆ ಓದಿಲ್ಲ. ಜಾಗತೀಕರಣ- ಜಾತ್ಯತೀತತೆ ಗೊತ್ತಿಲ್ಲ. ಕಾವೇರಿ- ಕನ್ನಡ ಮಾಧ್ಯಮ ಯಾವುದೂ ತಿಳಿದಿಲ್ಲ. ಆದರೆ, ಅವನಿಗೆ ಕಾಫಿ ಗಿಡ ಹೇಗೆ ಚಿಗುರುತ್ತದೆ ಎಂಬುದು ಗೊತ್ತು. ತೇಜಸ್ವಿಯವರೊಂದಿಗೆ ಏಗುವುದು ಗೊತ್ತು. ಯಜಮಾನನ ಓಡಾಟ, ತೋಟದ ಪ್ರೀತಿ, ಕೀಟ- ಹಕ್ಕಿಗಳೊಂದಿಗೆ ತೇಜಸ್ವಿಯವರ ಪ್ರೀತಿ ಎಲ್ಲವೂ ಗೊತ್ತು. ಅಂಥ ಶಿವು ಈಗ ರೋದಿಸುತ್ತಿದ್ದಾನೆ. ಇನ್ನು ಮುಂದೆ 'ಛೀ... ಥೂ...' ಅನ್ನುವವರಿಲ್ಲ ಎಂಬುದಕ್ಕಿಂತ ದಿನವಿಡೀ ಶಿವು, ಶಿವಾ ಎಂದು ಕಾಫಿ ತೋಟ ಮೂಲೆಯಿಂದ, ಮನೆಯ ಜಗುಲಿಯಿಂದ ಕರೆಯುವ ಧ್ವನಿ- ಧಣಿ ಇಲ್ಲವಲ್ಲ ಎಂಬ ಯಾತನೆ ಅವನದ್ದು. ತೇಜಸ್ವಿಯವರ ಹೆಗಲಿನಿಂದ ಕೋವಿ ಇಳಿದಾಗ, ಹೊಸದಾಗಿ ಕ್ಯಾಮೆರಾ ಏರಿದಾಗ ಶಿವನ ಕಾರ್ಯಾಚರಣೆಗಳೂ ಬದಲಾಗಿವೆ. ಯಾವ ಕಿಂಡಿಯಲ್ಲಿ ಯಾವ ಪ್ರಾಣಿ ಹಾರುತ್ತೆ, ಜಾರುತ್ತದೆ, ಮೊಲ- ಕಾಡುಹಂದಿ ಎಲ್ಲೆಲ್ಲಿ ನುಸುಳುತ್ತವೆ ಎಂದೆಲ್ಲ ತಿಳಿದಿದ್ದ ಶಿವು ಯಾವ ಮರದಲ್ಲಿ ಯಾವ ಗೂಡಲ್ಲಿ ಯಾವ ಹಕ್ಕಿಗಳು ಕೂರುತ್ತವೆ ಎಂದೆಲ್ಲಾ ತೇಜಸ್ವಿಯವರಿಗೆ ಮಾಹಿತಿದಾರನಾಗುತ್ತಿದ್ದ.
ಮಾರ್ಚ್ ತಿಂಗಳಲ್ಲಿ ಮಳೆ ಸುರಿದಾಗ ಎಲ್ಲರಿಗಿಂತ ಶಿವನಿಗೇ ಹೆಚ್ಚು ಖುಷಿ. ಅದು ಕಾಫಿಯ ಪಾಲಿಗೆ ಹೂವು ಮಳೆ. ಆ ಮಳೆ ಬಿಟ್ಟು ಎರಡು ದಿನಗಳಾದರೆ ಹೂವು ಘಮ್ ಎನ್ನುತ್ತದೆ. ತೇಜಸ್ವಿ- ಶಿವು ತೋಟದ ತುಂಬಾ ಓಡಾಡುತ್ತಾರೆ. ಕವಿ ಮನಸ್ಸಿಗೆ ಆ ಹೂವು, ಪರಿಮಳ ಎಲ್ಲವೂ ಉನ್ಮಾದ. ಕೃಷಿಕನ ಮನಸ್ಸಿಗೆ ಭದ್ರತೆ.
'ನಿರುತ್ತರ'ದ ಮೂಲೆಯಲ್ಲಿ ಕೂತ ಶಿವ ಮತ್ತೆ ಎಚ್ಚರಗೊಂಡದ್ದು, ಕಣ್ಣು ಉಜ್ಜಿಕೊಂಡದ್ದು ತೇಜಸ್ವಿ ಶವವಾಹನದ ಏರಿದ ಮೇಲೆ. ರಾಜೇಶ್ವರಿ ತೇಜಸ್ವಿಯೊಂದಿಗೆ ಕೂತು 'ಶಿವ ಶಿವ' ಎಂದು ಕರೆಯುತ್ತಲೇ ಇದ್ದರು. ಅವರು ಬೇರೆ ಯಾರನ್ನೂ ಕರೆದಿರಲಿಲ್ಲ. ಈಶಾನ್ಯ, ತಾರಿಣಿ ಎಲ್ಲರೂ ತಾವೇ ಹೋಗಿ ಕೂತರು. ಅಮ್ಮ ಮತ್ತೆ ಮತ್ತೆ ಶಿವುನನ್ನು ಕರೆಯುತ್ತಿದ್ದರು. ಅಮ್ಮನ ಕೂಗು 'ನಿರುತ್ತರ'ದ ಒಳಮನೆಗೂ ಕೇಳಿಸುತ್ತಿತ್ತು. ಶಿವ ಆಗ ಎದ್ದು ಬಂದ. ಅಮ್ಮನ ಪಕ್ಕ ಕೂತ.

-ನರೇಂದ್ರ ರೈ ದೇರ್ಲ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com