ಆ ದಿನಗಳು...

ಭಾನುವಾರ ಆಫೀ ಸಿಗೆ ರಜ. ಎಂದಿನ ಧಾವಂತವಿಲ್ಲದ ಕಾರಣ ಸಮಯವನ್ನು ಲೆಕ್ಕಿಸದೆ ಹಾಗೇ ಹಾಸಿಗೆಯಲ್ಲೇ ಮುರುಟಿ ಮಲಗುವ ಆಸೆಗೆ ತಡೆಯಾದದ್ದು ಅಮ್ಮನ ಫೋನ್ಕಾಲ್. ಅದೆಷ್ಟು ಅಕ್ಕರೆ, ಮಮತೆ ಅಮ್ಮನ ದನಿಯಲ್ಲಿ? ಬರೀ ಮಾತಿನಲ್ಲೇ ಆಕೆಯ ಹಿತವಾದ ಸಾಮೀಪ್ಯ ಸಿಕ್ಕಂತೆ ಭಾಸ! ಊರಲ್ಲಿ ಹನಿಕಡಿಯದ ಮಳೆ. ಈ ಮಳೆಯಲ್ಲಿ ಅಮ್ಮ ಹಾಕಿದ ಹಿತ್ತಲ ಬೀಜಗಳೆಲ್ಲ ಕೊಳೆತು, ಮತ್ತೆ ಹೊಸ ಬೀಜ ಹಾಕಬೇಕೆನ್ನುವ ಮಾತು ನನಗೆ ಮಲೆನಾಡಿನ ನನ್ನ ಮಳೆದಿನಗಳ ನೆನಪಿನಲ್ಲಿ ತೊಯ್ಯುವಂತೆ ಮಾಡಿತು.
ಮಲೆನಾಡಿನಲ್ಲಿ ಮಳೆಯನ್ನು ಬರಮಾಡಿಕೊಳ್ಳುವುದಕ್ಕೆ ಮುಂಚೆ ಎಷ್ಟೆಲ್ಲಾ ಎಚ್ಚರಿಕೆ ಕ್ರಮಗಳು? ಅಡಕೆ ಒಣಗಿಸಲು ಹಾಕಿದ ಅಟ್ಟವನ್ನೆಲ್ಲಾ ಕಿತ್ತು ಅದರ ಸಲಕರಣೆಗಳನ್ನು ಒಳಗೆ ಸಂಗ್ರಹಿಸುತ್ತಾರೆ. ಒಲೆ ಉರಿಸಲು ಸೌದೆ, ಅಡಕೆ ಹಾಳೆ ಇವನ್ನೆಲ್ಲಾ ಶೇಖರಿಸಿ ಮೊದಲೇ ಬೆಚ್ಚಗಿಡುವುದು ಅನಿವಾರ್ಯ. ತೋಟದ ಒಂದು ಹಂತದ ಕೆಲಸವನ್ನು ಮುಗಿಸುವ ಗಡಿಬಿಡಿ ಗಂಡಸರದ್ದಾದರೆ, ಹೆಂಗಸರಿಗೆ ವರ್ಷವಿಡೀ ಬೇಕಾಗುವ ಬೇಳೆ ಕಾಳುಗಳನ್ನು ಬಿಸಿಲಿನಲ್ಲಿ ಒಣಗಿಸಿ ಡಬ್ಬದಲ್ಲಿ ಸಂಗ್ರಹಿಸುವ, ಜೊತೆಗೆ ಹಲಸಿನ ಕಾಯಿ ಹಪ್ಪಳ, ಚಿಪ್ಸ್, ಸಂಡಿಗೆ ಮೆಣಸು ಇವನ್ನೆಲ್ಲ ಮಾಡುವ ಗಡಿಬಿಡಿ.
ನಾವು ಹಾಗೂ ನನ್ನಂಥ ಮಕ್ಕಳಿಗೋ, ಮಳೆಯಲ್ಲಿ 2-3 ಕಿಲೋಮೀಟರ್ ನಡೆದು ಶಾಲೆಗೆ ಹೋಗುವುದೇ ದೊಡ್ಡ ಮೋಜು. ದಾರಿಯಲ್ಲಿ ಹೇರಳವಾಗಿ ಸಿಗುತ್ತಿದ್ದ ಸಳ್ಳೇಹಳ್ಳು, ನೆವಳೆಹಣ್ಣುಗಳನ್ನು ಕೊಯ್ದು ಮೆಲ್ಲುತ್ತಾ ಕೈಯಲ್ಲಿರುವ ಕೊಡೆಯನ್ನು ಗಾಳಿಗೆ ಸಂಭಾಳಿಸಲಾಗದೆ ಉಲ್ಟಾಪಲ್ಟಾ ಆದ ಕೊಡೆಯೊಂದು ಕಡೆ, ಬಟ್ಟೆ, ಪುಸ್ತಕದ ಚೀಲವೆಲ್ಲಾ ಒದ್ದೆಯಾಗುವುದೊಂದು ಕಡೆಯಾಗಿ ಶಾಲೆ ಸೇರುವುದೇ ಸಾಹಸವಾಗಿತ್ತು. ಸಂಜೆ ಶಾಲೆ ಬಿಡುವ ಸಮಯಕ್ಕೆ ಬಟ್ಟೆ ಒಣಗಿರುತ್ತಿತ್ತು. ಮತ್ತದೇ ಮಳೆಯಲ್ಲಿ ರಸ್ತೆಯ ಇಕ್ಕೆಲಗಳಲ್ಲೂ ಹರಿಯುವ ಪುಟ್ಟ ಪುಟ್ಟ ಝರಿಯಲ್ಲಿ ಆಟವಾಡುತ್ತಾ ಮನೆಗೆ ನಡೆಯುವ ಖುಷಿ. ಯಾವುದೇ ಹೋಂವರ್ಕ್ ಇಲ್ಲದ ಸಂತಸದ ದಿನಗಳವು. ಅಮ್ಮ ಮಾಡಿದ ಪಳದ್ಯ, ನಮ್ಮದೇ ಆಕಳಿನ ಗಟ್ಟಿ ಮೊಸರು, ನೆಂಚಿಕೊಳ್ಳಲು ಪರಿಮಳದ ಮಾವಿನ ಮಿಡಿ, ಜೊತೆಗೆ ಹಪ್ಪಳ, ಅಬ್ಬಾ! ಅದೆಷ್ಟು ಸೊಗಸಾಗಿರುತ್ತಿತ್ತು ಆ ಊಟ!
ಊಟ ಮಾಡದಿದ್ದಲ್ಲಿ ಹಲಸಿನ ಹಣ್ಣು, ಸುಟ್ಟ ಹಲಸಿನ ಬೇಳೆ ದಿನಾಲೂ ತಿನ್ನಲಿರುತ್ತಿತ್ತು. ಬೇಸಿಗೆಯಲ್ಲಿ ಮಕ್ಕಳೆಲ್ಲ ಸೇರಿ ಗೇರುಬೀಜ ಕೊಯ್ದು ಒಣಗಿಸಿದರೆ ಮಳೆ ಬಂದಾಗ ಅಪ್ಪ ಅದನ್ನು ಸುಟ್ಟು, ಸಿಪ್ಪೆ ತೆಗೆದು ನಮಗೆಲ್ಲ ಸಮಪಾಲು ಹಂಚುತ್ತಿದ್ದರು. ಎಂಥ ಘಮಘಮದ ಗೋಡಂಬಿ, ಅದರ ರುಚಿಯೇ ರುಚಿ! ತಿಂದುಳಿದ ಗೋಡಂಬಿ ಶಾಲೆಯ ಚೀಲ ಸೇರುತ್ತಿತ್ತು. ಆಪ್ತ ಗೆಳತಿಗೆ ನೀಡಲು. ಸಂಜೆ ದೇವರಿಗೆ ಭಜನೆ ಮಾಡದೆ ನಮಗೆ ರಾತ್ರಿ ಊಟವಿರಲಿಲ್ಲ. ಮಂಟಪದಲ್ಲಿರುವ ಅಷ್ಟೂ ದೇವರಿಗೂ ಒಂದೊಂದು ನಾಮ ಹೇಳುವಷ್ಟರಲ್ಲೇ 15-16 ಹಾಡು ಪೂರ್ಣವಾಗುತ್ತಿತ್ತು. ನಮಗೇನಾದರೂ ನಿಬಂಧನೆಗಳಿದ್ದರೆ, ಅದು ದೇವಿಗೆ ಹೂ ಕೊಯ್ಯುವುದು ಹಾಗೂ ಭಜನೆ ಮಾಡುವುದು ಮಾತ್ರ!
ಇನ್ನು ಭಾನುವಾರ ಬಂತೆಂದರೆ ತಲೆ ಸ್ನಾನದ ಸುಖ. ಮತ್ತಿಸೊಪ್ಪಿನ ಗುಳದೊಂದಿಗೆ ಸೀಗೆಪುಡಿ ಹಾಕಿ, ಹಂಡೆಯಲ್ಲಿ ಹದವಾಗಿ ಕಾದ ನೀರಿನ ಅಭ್ಯಂಗ, ಅದೆಷ್ಟು ತಂಪು, ಸಹಜವಾದ ಪರಿಮಳ ನೆತ್ತಿ ಹಾಗೂ ಕೂದಲಿನಲ್ಲಿ! ಮಿಂದು ಕನ್ನಡಿ ಮುಂದೆ ನಿಂತರೆ ಸುಖಾಸುಮ್ಮನೆ ನಮಗೆ ಕನ್ನಡಿ ಆಪ್ತವಾಗುತ್ತಿರಲಿಲ್ಲ. ಚರ್ಮ ಯಾವುದೇ ಮಾಯಿಶ್ಚರೈಸರ್, ಫೇಸ್ಪ್ಯಾಕ್ ಏನೂ ಇಲ್ಲದೆ ಲಕಲಕ ಹೊಳೆಯುತ್ತಿತ್ತು. ನೀಳ ಕೇಶರಾಶಿಯ ಸೊಬಗಿನ ಹಮ್ಮಿನಲ್ಲಿ ದ್ರೌಪದಿಯೋ, ದಮಯಂತಿಯೋ ಮನಸಿನಲ್ಲಿ ಕುಣಿಯತೊಡಗಿದರೆ ಅಮ್ಮನ ಪಟ್ಟಿಗೆಯಿಂದ ಜರಿಸೀರೆ ತೆಗೆದು ಯಕ್ಷಗಾನ ಕುಣಿಯುತ್ತಿದ್ದೆವು.
ಎಷ್ಟೊಂದು ಸ್ವಚ್ಛಂದವಾಗಿದ್ದವು ನಮ್ಮ ಬಾಲ್ಯದ ದಿನಗಳು. ಈವಾಗಿನಂತೆ ಟ್ಯೂಶನ್, ಹೋಂವರ್ಕ್ ಏನೂ ಇಲ್ಲದೆಯೂ ನಮಗೆ ಪಾಠವೆಲ್ಲಾ ಕಂಠಪಾಠವಾಗಿರುತ್ತಿತ್ತು. ಎಲ್ಲಿ ಪ್ರಶ್ನೆ ಕೇಳಿದರೂ ಉತ್ತರಿಸುತ್ತಿದ್ದೆವು. ಅಪ್ಪನ ಬೀರುವಿನಲ್ಲಿ ಹಣವಿರದಿದ್ದರೂ, ಒಳ್ಳೊಳ್ಳೆಯ ಪುಸ್ತಕಗಳಿದ್ದವು.
ನನ್ನ ಸ್ವಂತ ನಿರ್ಧಾರದ ಮೇಲೆ ಪಟ್ಟಣ ಸೇರಿದ ನನಗೀಗ ಬದುಕು ಯಾಂತ್ರಿಕ, ಏನಿದೆ ಇಲ್ಲಿ ? ಎಲ್ಲವೂ ಕೃತಕ, ರಸಹೀನ, ಸಪ್ಪೆ ಜೀವನ, ಸ್ವಂತ ಕಾಲಮೇಲೆ ನಿಂತು ಸ್ವತಂತ್ರ ಬದುಕು ನಡೆಸಬೇಕೆನ್ನುವ ಹುಮ್ಮಸ್ಸಿನಲ್ಲಿ ನಾನು ಎಷ್ಟನ್ನೆಲ್ಲಾ ಮಿಸ್ಮಾಡಿಕೊಂಡೆ! ಎಷ್ಟೇ ಆರ್ಥಿಕವಾಗಿ ಸ್ವತಂತ್ರಳಾದರೂ, ಅಮ್ಮನ ಮುಖದಲ್ಲಿ ಜಿನುಗುವ ಕಾಂತಿ, ಆರೋಗ್ಯ, ತೃಪ್ತಿ ನನಗೆಂದೂ ಲಭಿಸಲಿಲ್ಲ. ಹಳ್ಳಿಯಲ್ಲಿ ತೋಟದ ಸಣ್ಣಪುಟ್ಟ ಕೆಲಸಮಾಡುತ್ತಾ, ಕೊಟ್ಟಿಗೆಯಲ್ಲಿ ಆಕಳಿನ ಮೈದಡವುತ್ತಾ, ಹಿತ್ತಲಿನಲ್ಲಿ ತರಕಾರಿ, ಬಗೆಬಗೆಯ ಹೂಗಳ ಬೆಳೆಸುತ್ತಾ, ಆಳುಗಳ ಕ್ಷೇಮ ವಿಚಾರಿಸುತ್ತಾ, ಗಟ್ಟಿಹಾಲಿನ ಕೆನೆ ಮೊಸರನ್ನು ದೇವಿಗೆ ನಿವೇದಿಸಿ ಇನ್ನೆಲ್ಲಿಲ್ಲದ ಕಕ್ಕುಲಾತಿಯಿಂದ ಅಪ್ಪನಿಗೆ ಬಡಿಸುವ ಅಮ್ಮ ಅದೆಷ್ಟು ಸುಖಿ, ತೃಪ್ತೆ!
-ಉಷಾ ಶಶಿಧರ್ ನಿಟ್ಟೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


