ಈ ಹೃದಯ ಹಾಡಿದೆ

ಹೊಸ ವರ್ಷದ ಹರುಷವೇ.....
ಒಂದಿಡೀ ವರ್ಷ ಹೇಗೆ ಉರುಳಿ ಹೋಯಿತು ಎಂಬುದೇ ಗೊತ್ತಾಗಲಿಲ್ಲ. ಜೊತೆಯಲ್ಲಿ ನೀನಿರಲು ಗಂಟೆಗಳಷ್ಟೇ ಅಲ್ಲ. ವರ್ಷಗಳೂ ಈ ರೀತಿ ವೇಗವಾಗಿ ಮರಳಿ ಬಾರದ ದಾರಿಯತ್ತ ಹೆಜ್ಜೆ ಹಾಕುತ್ತವೆ ಎಂದು ಯಾರಿಗೆ ಗೊತ್ತು? ವರ್ಷದುದ್ದಕ್ಕೂ ನಿನ್ನ ಜೊತೆ ಕಳೆದ ಮಧುರ ದಿನಗಳ ನೆನಪು ಮಾತ್ರ ಚಿರಾಯು. ನನ್ನ ವರ್ಷದ ಹೆಗ್ಗಳಿಕೆ, ಸಾಧನೆ ಎಂದರೆ ಏಳೇಳು ಜನ್ಮಕ್ಕಾಗುವಷ್ಟು ನಿನ್ನೊಡನೆ ನಲಿದ ಸಿಹಿ ಕ್ಷಣಗಳನ್ನು ಬಾಚಿಕೊಂಡು ಎದೆಯ ಗೂಡಲ್ಲಿ ಬೆಚ್ಚಗೆ ಬಚ್ಚಿಟ್ಟುಕೊಂಡಿರುವುದು. ಉಳಿದವರೆಲ್ಲ ಮನೆ ಮಾಡಬೇಕು, ಆಸ್ತಿ ಗಳಿಸಬೇಕು, ಒಡವೆ ಖರೀದಿಸಬೇಕು, ನೌಕರಿ ಗಿಟ್ಟಿಸಿಕೊಳ್ಳಬೇಕು ಎಂದೆಲ್ಲ ಹಪಹಪಿಸಿ ಪರದಾಡುತ್ತಿರುವಾಗ ನಿನ್ನದೇನಿದು ಪ್ರೀತಿಯ ಹುಚ್ಚು ? ಅಂತ ಚಿಂತೆ ಮಾಡುತ್ತಿದ್ದೀಯಾ. ನೋ ವೇ.... ಮನುಷ್ಯ ಎಷ್ಟು ಗಳಿಸಿದರೂ ನೆಮ್ಮದಿ ಇರದಿದ್ದರೆ ಎಲ್ಲ ವ್ಯರ್ಥ ಅಲ್ಲವೇ? ನನ್ನೊಂದಿಗೆ ನೀನಿರುವಷ್ಟು ದಿನ ಅಂಥ ಕ್ಷುಲ್ಲಕ ಯೋಚನೆಗಳನ್ನು ನಾನು ಮಾಡಲಾರೆ.
ಯಾವ ಯಾವುದೋ ತಿರುವು ತಲುಪಿ ಹಿಡಿತ ಕಳೆದುಕೊಳ್ಳುತ್ತಿದ್ದ ಬದುಕಿಗೆ ಲಗಾಮು ಹಾಕಿ ನಿಯಂತ್ರಿಸಿದವಳು ನೀನು. ನೀನು ಬಂದ ಮೇಲೇ ಅಲ್ಲವೇ ಹುದುಗಿ ಹೋಗಿದ್ದ ಹಂಬಲಗಳೆಲ್ಲ ಚಿಗಿತುಕೊಳ್ಳಲು ಪ್ರಾರಂಭಿಸಿದ್ದು? ಆ ದಿನ ಇಂದಿಗೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ಅಡಿಯಿಂದ ಮುಡಿಯವರೆಗೆ ವ್ಯಾಪಿಸಿಕೊಂಡಿದ್ದ ಸಮಸ್ಯೆಗಳಿಗೆ ಕುಡಿತವೊಂದೇ ಪರಿಹಾರವೆಂದುಕೊಂಡು ಪೆಗ್ಗಿನ ಮೇಲೆ ಪೆಗ್ಗು ಏರಿಸುತ್ತಾ ಹಗಲು ರಾತ್ರಿಗಳನ್ನು ಒಂದು ಮಾಡುತ್ತಿದ್ದ ನನಗೆ, ನಿನ್ನ ಭೇಟಿ ಸೋಜಿಗವೆನಿಸಿತ್ತು. ಯಾರ ಮಾತಿಗೂ ಜಗ್ಗದ ನಾನು, ನನ್ನ ಕುಡಿತ, ನಿನಗೆ, ನಿನ್ನ ಜೇನದನಿಗೆ ಸಂಪೂರ್ಣ ಸೋತು ಶರಣಾಗಿದ್ದು ಆಶ್ಚರ್ಯವಲ್ಲದೆ ಮತ್ತಿನ್ನೇನು ?
ಇದ್ದ ಮಗನೊಬ್ಬ ಕೈ ಬಿಟ್ಟು ಹೋಗುತ್ತಿರುವುದನ್ನು ಕಂಡು ಒಳಗೊಳಗೇ ಕೊರಗಿ ಹತಾಶ ಸ್ಥಿತಿ ತಲುಪಿದ್ದ ನನ್ನ ತಾಯಿ, ದಿಢೀರನೆ ನನ್ನಲ್ಲಾದ ಬದಲಾವಣೆಗೆ ಅದೆಷ್ಟು ಹರುಷಪಟ್ಟಿದ್ದಳೋ. ಆದರೆ ನಾನು ಕೃತಜ್ಞನಾಗಿರಬೇಕಾದದ್ದು ನಿನಗೆ ತಾನೇ?
ಅಂದು ನೀನು ಹೇಳಿದ ಮಾತುಗಳು ಎದೆಗೆ ನಾಟುವಂತಿದ್ದವು; 'ಯಾರ ಬದುಕಿನಲ್ಲಿ ಸಮಸ್ಯೆಗಳಿಲ್ಲ ಹೇಳು? ಪ್ರತಿಯೊಬ್ಬರೂ ಒಂದಿಲ್ಲ ಒಂದು ಸಮಸ್ಯೆಯಲ್ಲಿ ನರಳುತ್ತಿರುವವರೇ. ಹಾಗಂತ ಎಲ್ಲರೂ ಕುಡಿತಕ್ಕೆ ಅಂಟಿಕೊಂಡು ಬಿಟ್ಟರೆ ಸಮಸ್ಯೆಗಳು ಪರಿಹಾರವಾಗುತ್ತವಾ ? ಈ ಬದುಕನ್ನು ಶೂನ್ಯದಿಂದಲೂ ಪ್ರಾರಂಭಿಸಬಹುದು ಕಣೋ. ಇರುವಾಗ ಒಂದೇ ಜನ್ಮದಲ್ಲಿ ಎಲ್ಲರಿಗೂ ಬೇಕಾದವನಾಗಿ, ಹಲವರ ನೋವಿಗೆ ಕಿವಿಯಾಗಿ, ಕೆಲವರ ಖುಷಿಗೆ ಸಂಭ್ರಮಪಟ್ಟು ಬದುಕುವ ಕಲೆ ರೂಢಿ ಮಾಡಿಕೊಂಡಂದೇ ನಮ್ಮ ಸಮಸ್ಯೆಗಳು ಇನ್ನೊಬ್ಬರಿಗಿಂತ ದೊಡ್ಡವಲ್ಲ ಎಂಬುದು ಗೊತ್ತಾಗುತ್ತದೆ. ನೀನು ಕುಡಿತ ಬಿಟ್ಟ ದಿನವೇ ಹೊಸ ಮನುಷ್ಯನಾಗುತ್ತೀಯಾ. ಪ್ಲೀಸ್ ಚೇಂಜ್ ಯುವರ್ ಲೈಫ್" ಎಂದವಳು ನೀನು. ಅಂದು ಗ್ಲಾಸು ಕೆಳಗಿಳಿಸಿದವನು ಇದುವರೆಗೂ ಮುಟ್ಟಿಲ್ಲ. ಬದುಕು ಬದಲಾಯಿಸೋಕೆ ಭಗವಂತನೇ ಧರೆಗಿಳಿದು ಬರಬೇಕಿಲ್ಲ. ಅವನು ನಿನ್ನಂಥವರ ರೂಪದಲ್ಲಿಯೂ ಬರಬಹುದು ಎಂಬುದು ನನ್ನ ನಂಬಿಕೆ.
ನನ್ನ ನಿನ್ನ ಸ್ನೇಹ, ಪ್ರೀತಿಯಾಗಿ ತಿರುಗಿ ಇಂದಿಗೆ ಒಂದು ವರ್ಷ ಉರುಳಿತು. ಅದೆಷ್ಟು ಬೇಗ ದಿನಗಳು ಉರುಳಿ ಹೋದವು ಎಂಬುದೇ ಯಕ್ಷಪ್ರಶ್ನೆ. ಹೊಸವರ್ಷ ನಮ್ಮ ಕನಸುಗಳನ್ನೆಲ್ಲ ಈಡೇರಿಸಲಿ. ಎಲ್ಲಕ್ಕಿಂತ ಹೆಚ್ಚು ಪ್ರೀತಿಸುತ್ತಿರುವ ನೀನು ನಗುನಗುತಾ ಇರುವ ಹಾಗೆ ದೇವರು ವರ ಕರುಣಿಸಲಿ.
ನಿನ್ನವನು
-ನಾಗೇಶ್ ಜೆ. ನಾಯಕ ಉಡಿಕೇರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


