

ಬೇಸಿಗೆ ದಿನಗಳು ಬಂದರೆ ಸಾಕು, ಬಿರು ಬಿಸಿಲಿನ ಪ್ರತಾಪದಿಂದ ಮನೆ ಬಿಟ್ಟು ಹೊರ ಹೋಗಲು ಹಿಂಜರಿಯುವವರೇ ಹೆಚ್ಚು. ದೇಹ ತಂಪಾಗಿಸಿಕೊಳ್ಳಲು ಫ್ಯಾನ್, ಎಸಿ ಹಾಕಿಕೊಂಡು ಬೇಸಿಗೆ ಯಾವಾಗ ಮುಗಿಯತ್ತದೆಯೋ ಎಂದು ಶಪಿಸುತ್ತಾರೆ. ಆದರೆ, ಉತ್ತರ ಕರ್ನಾಟಕದ ಗ್ರಾಮೀಣ ಮಹಿಳೆಯರು ಈ ಬಿಸಿಲಿನಲ್ಲಿ ಶಾವಿಗೆ, ಸಂಡಿಗೆ, ಹಪ್ಪಳ ಸೇರಿದಂತೆ ವರ್ಷಪೂರ್ತಿ ಮನೆಯಲ್ಲಿ ಬೇಕಾಗುವ ಆಹಾರ ಸಾಮಗ್ರಿ ತಯಾರಿಸುತ್ತಾ ಬೇಸಿಗೆಯನ್ನು ಚೆನ್ನಾಗಿಯೇ ಬಳಸಿಕೊಳ್ಳುತ್ತಿದ್ದಾರೆ.
ಶಾವಿಗೆ ತಯಾರಿಕೆ
ಗೋಧಿಯನ್ನು 2 ದಿನ ಕಾಲ ಹದವಾಗಿ ನೆನೆಸಿ, ನೆರಳಲ್ಲಿ ಒಣಗಿಸಿ, ಬೀಸಿ ಬಂದ ರವೆಯನ್ನು ಸಣ್ಣ ರಂಧ್ರಗಳನ್ನು ಹೊಂದಿರುವ ಬಟ್ಟೆಯಲ್ಲಿ ಸಾಣಿಸಿ, ಅದಕ್ಕೆ ಬೆಳಕು ತಾಗದಂತೆ ಸಂಗ್ರಹಿಸಿಡುತ್ತಾರೆ. ಅಂದು ಶಾವಿಗೆ ಮಾಡಲು ಬೇಕಾಗುವಷ್ಟು ಹಿಟ್ಟನ್ನು ನಾಲ್ಕೈದು ಗಂಟೆ ಮೊದಲೇ ಸಿದ್ಧಪಡಿಸಿಟ್ಟುಕೊಂಡು ಮಧ್ಯಾಹ್ನದ ವೇಳೆ (ಬಿಸಿಲಿನ ಪ್ರಖರತೆ ಹೆಚ್ಚಾದ ನಂತರ) ಶಾವಿಗೆ ಹೊಸೆಯುತ್ತಾರೆ. ಶಾವಿಗೆ ಹೊಸೆಯುವುದು ಒಂದು ಕಲೆ. ಇದಕ್ಕಿಂತ ಮುಖ್ಯವಾಗಿ ಹೊಸೆದ ಶಾವಿಗೆಯನ್ನು ತುಂಡಾಗದಂತೆ ಹಿಡಿದು ಕೋಲಿಗೆ ನೇತು ಹಾಕುತ್ತಾರೆ. ಶಾವಿಗೆಯನ್ನು (ಕೋಲುಗಳಲ್ಲಿ) 6 ಗಂಟೆಗೂ ಹೆಚ್ಚು ಕಾಲ ಬಿಸಿಲಿನಲ್ಲಿ ಒಣಗಿಸಿ ನಂತರ ಅವುಗಳನ್ನು ಕಟ್ಟಿ (ಸಿವುಡು) ಸಂಗ್ರಹಿಸುತ್ತಾರೆ. ಇವುಗಳು ವರ್ಷಪೂರ್ತಿ ಕೆಡದಂತೆ ಸಂಗ್ರಹಿಸಲು ಗ್ರಾಮೀಣ ಮಹಿಳೆಯರು ಪಾರಂಪರಿಕ ಪದ್ಧತಿಯನ್ನೇ ಅನುಸರಿಸುತ್ತಿದ್ದಾರೆ. ಹೊಸ ಮಣ್ಣಿನ ಮಡಕೆ ಖರೀದಿಸಿ, ಒಳಗೂ ಹೊರಗೂ ಸುಣ್ಣದಿಂದ ಸಾರಿಸಿ, ಅದನ್ನು ಬಿಸಿಲಿನಲ್ಲಿ ಒಣಗಿಸಿ, ಅದೇ ಮಡಕೆಯಲ್ಲಿ ಈ ಶಾವಿಗೆಗಳನ್ನು ಸಂಗ್ರಹಿಸುತ್ತಾರೆ ಹಾಗಾಗಿ ಇವುಗಳು ವರ್ಷಪೂರ್ತಿ ಕೆಡುವುದಿಲ್ಲ.
ಊಟದಲ್ಲಿ ರುಚಿ ಹೆಚ್ಚಿಸಿಕೊಳ್ಳಲು ಸಂಡಿಗೆ, ಹಪ್ಪಳ ಬೇಕೇಬೇಕು. ಇಂತಹ ಹಲವಾರು ಸಿದ್ಧವಸ್ತುಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಅಕ್ಕಿ, ಗೋಧಿ, ಈರುಳ್ಳಿ, ಬೆಳ್ಳುಳ್ಳಿ, ಸಾಬಕ್ಕಿ ಹೀಗೆ ವಿವಿಧ ಬಗೆಯ ಸಂಡಿಗೆಗಳನ್ನು ತಯಾರಿಸುತ್ತಾರೆ. ತಯಾರಿಸಿದ ವಸ್ತುಗಳುವರ್ಷಪೂರ್ತಿ ಕೆಡದಂತೆ ಒಣಗಬೇಕಾದಲ್ಲಿ ಹೆಚ್ಚಿನ ಪ್ರಖರತೆ ಇರುವ ಬಿಸಿಲು ಅವಶ್ಯಕ. ಹಾಗಾಗಿ ಉ-ಕ ಭಾಗದ ಬಹುತೇಕ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಿಗೆ ತೆರಳಿದಲ್ಲಿ ಎಲ್ಲರೂ ಬಿಸಿಲಿನಿಂದ ಬಸವಳಿದು ಉಸ್ಸಪ್ಪಾ ಎನ್ನುತ್ತಿದ್ದರೆ, ಮಹಿಳೆಯರು ಮಾತ್ರ ಶಾವಿಗೆ ಹೊಸೆಯುವ, ಸಂಡಿಗೆ ತಯಾರಿಸುವುಲ್ಲಿ ನಿರತರಾಗಿರುವ ದೃಶ್ಯಗಳೇ ಕಾಣಸಿಗುತ್ತವೆ.
- ಶಿವಕುಮಾರ ಕುಷ್ಟಗಿ