'ಟೈಮ್ ಈಸ್ ದಿ ಬೆಸ್ಟ್ ಆನ್ಸರ್ ಫಾರ್ ಎವ್ವೆರಿ ಥಿಂಗ್' - ಬಹುಶಃ ಸಾರ್ವಕಾಲಿಕ ಸತ್ಯಗಳಲ್ಲಿ ಇದೂ ಒಂದು. ನೀವೆಷ್ಟೇ ತಲೆ ಕೆಡಿಸಿಕೊಳ್ಳಿ, ಎಷ್ಟೇ ಪರದಾಡಿ. ಹಗಲು ರಾತ್ರಿ ಎನ್ನದೇ ಯೋಚನೆ ಮಾಡಿ... ಊಹೂಂ, ಯಾವುದೇ ಪ್ರಯೋಜನವಾಗುವುದಿಲ್ಲ. ಬದಲಾಗಿ ನಿದ್ರೆ- ಊಟಗಳಿಂದ ನೀವು ದೂರವಾಗುತ್ತಾ ಹೋಗುತ್ತೀರಿ. ಮನಸ್ಸಿನ ನೆಮ್ಮದಿಯನ್ನು ಕಳೆದುಕೊಳ್ಳುತ್ತೀರಿ. ನೆಮ್ಮದಿ ಕಳೆದುಕೊಂಡು ಪರದಾಡುತ್ತೀರಿ. ಯಾವುದನ್ನೂ ಗಮನಿಸುವ ವ್ಯವಧಾನವೇ ನಿಮ್ಮಲ್ಲಿ ಉಳಿಯುವುದಿಲ್ಲ. ಯಾರೊಂದಿಗೂ ಮಾತು ಬೇಡವಾಗುತ್ತದೆ. ಯಾವ ಕೆಲಸದಲ್ಲೂ ಆಸಕ್ತಿ ಉಳಿಯುವುದಿಲ್ಲ. ಅದು ಹಾಗೆಯೇ, ಕೆಲವೊಂದು ಸಮಸ್ಯೆಗಳಿಗೆ ಏನು ಮಾಡಿದರೂ ಪರಿಹಾರವೇ ಸಿಗುವುದಿಲ್ಲ. ಇದ್ದರೆ ತಾನೆ ಸಿಗುವುದು? ಹೌದು ಕೆಲ ಸಂದರ್ಭದಲ್ಲಿ ಏನಾಗಬೇಕೋ ಅದೇ ಆಗುವುದು. ಅದನ್ನು ತಪ್ಪಿಸಲು ಮನುಷ್ಯ ಪ್ರಯತ್ನದಿಂದ ಸಾಧ್ಯವೇ ಆಗುವುದಿಲ್ಲ. ಆ ಸತ್ಯವನ್ನು ನಾವು ಮೊದಲು ಅರಿಯಬೇಕಿದೆ. ಅಂಥ ಸಂದರ್ಭದಲ್ಲಿ ನಾವು ಇನ್ನಿಲ್ಲದ ಚಿಂತೆಗೆ ಕುಳಿತುಕೊಂಡು ಏನೆಲ್ಲ ಮಾಡಲು ಹೋದರೆ ಏನಾಗಬಾರದು ಎಂದು ಕೊಂಡಿರುತ್ತೇವೋ ಅದೇ ಆಗುವ ಸಾಧ್ಯತೆಗಳೇ ಹೆಚ್ಚು. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ನೆಮ್ಮದಿಯನ್ನು ನಾವೇ ಹಾಳುಮಾಡಿಕೊಳ್ಳುತ್ತೇವೆ. ಚಿಂತೆಯ ಸರಣಿಯೆಂದರೆ ಅಂಥದ್ದೇ. ಅದು ಒಂದು ಹಂತದಲ್ಲಿ ನಿಲ್ಲುವುದೇ ಇಲ್ಲ. ಊಹಾ ಪ್ರಪಂಚಕ್ಕೆ ನಮ್ಮನ್ನು ಎಳೆದುಕೊಂಡು ಹೋಗುತ್ತಲೇ ಇರುತ್ತದೆ. ಅದು ಹೀಗಿರಬಹುದಾ? ಹೀಗಾಗಿಬಿಡುತ್ತದೇನೋ? ಒಂದೊಮ್ಮೆ ಹಾಗಿದ್ದರೆ ಮುಂದೇನು ಗತಿ... ಇಂಥ ಸರಣಿಯ ಚಿಂತೆ ವೃಥಾ ನಮ್ಮನ್ನು ಆತಂಕಕ್ಕೆ ದೂಡಿಬಿಡುತ್ತದೆ. ಇಂಥ ಆತಂಕ ನಿಜವಾದುದನ್ನು ಮರೆಸಿಬಿಡುತ್ತದೆ. ವಿವೇಚನೆ ಕೈಕೊಡುತ್ತದೆ. ಆಗಲೇ ಆಗಬಾರದ್ದು ಆಗುವುದು. ಅದು ಯಾವುದೇ ವಿಚಾರವಿರಬಹುದು, ಎಂಥದ್ದೇ ಸಮಸ್ಯೆ ಇರಬಹುದು. ನಿಮ್ಮ ಪ್ರಯತ್ನವನ್ನು ನೀವು ಮಾಡಿದ್ದೀರಲ್ಲಾ? ಸರಿ ಬಿಡಿ. ಒಂದು ಹಂತಕ್ಕೆ ಅದನ್ನು ನಿರ್ಲಕ್ಷ್ಯಿಸಿಬಿಡಿ. ಅದು ಸರಿ ಹೋಗುತ್ತದೋ, ಇಲ್ಲವೋ. ಸರಿ ಹೋಗಲಿ ಎಂಬ ಆಶಯದೊಂದಿಗೆ ನಿಮ್ಮ ಮನಸ್ಸನ್ನು ಮೊದಲು ಸರಿಪಡಿಸಿಕೊಂಡುಬಿಡಿ. ಹಾಗೂ ಸರಿ ಹೋಗದಿದ್ದರೆ ಹಣೆಬರಹ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಬದುಕು ಹೀಗೆಯೇ ಅಂದುಕೊಂಡುಬಿಡಿ. ಮುಂದಿನದನ್ನು ಎದುರಿಸಲು ನಿಮ್ಮನ್ನು ನೀವು ಸಜ್ಜುಗೊಳಿಸಿಕೊಳ್ಳಿ. ಬದಲಾಗಿ ಧೃತಿಗೆಡುವುದರಲ್ಲಿ ಅರ್ಥವಿಲ್ಲ. ಸಮಯ ಎಲ್ಲದಕ್ಕೂ ಉತ್ತರಿಸುತ್ತದೆ. ಅಲ್ಲಿಯವರೆಗೆ ಕಾಯುವ ತಾಳ್ಮೆ ನಮ್ಮದಾಗಬೇಕಿದೆ. ಪುಟ್ಟದೊಂದು ಕಿರು ನಗೆಯೊಂದಿಗೆ ಸುಮ್ಮನೆ ನಿರುಕಿಸಿರಿ. ವಿಶ್ವಾಸ ತುಂಬಿದ ನಿರುಮ್ಮಳೆತೆಯೊಂದಿಗೆ ಇದ್ದುಬಿಡಿ. ನೀವು ಗೆದ್ದೇ ಗೆಲ್ಲುತ್ತಿರಿ ಒಂದು ದಿನ. ಅದು ಯಾವುದೇ ರೂಪದಲ್ಲಾದರೂ. ಸೋತರೆ, ಕಳಕೊಳ್ಳುವುದು ಏನೂ ಇಲ್ಲ. ಏಕೆಂದರೆ ಅದು ನಿಮ್ಮದು ಅಲ್ಲವೇ ಅಲ್ಲವೆಂಬ ನಿರ್ಧಾರವನ್ನು ಈಗಾಗಲೇ ತೆಗೆದುಕೊಂಡಾಗಿದೆಯಲ್ಲಾ, ಮತ್ತೇಕೆ ಚಿಂತೆ?
- ಸಹನೆ