ಅಪರಾಧ ಸಂಭವಿಸಿದಾಗ ಠಾಣೆಗೆ ಹೋಗಿ ಹಾಗೂ ದೂರವಾಣಿ ಮೂಲಕ ದೂರು ದಾಖಲಿಸುವುದು ಎರಡು ವಿಧ. ಮತ್ತೊಂದು ವಿಧಾನವೆಂದರೆ ದೂರನ್ನು ಅಂಚೆ ಮೂಲಕ ದಾಖಲಿಸಬಹುದು.
ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲು ಸಿಬ್ಬಂದಿ ನಿರಾಕರಿಸಿದಾಗ ಅಥವಾ ತುರ್ತುಗಿ ಯಾವುದೋ ಊರಿಗೆ ಹೋಗುತ್ತಿದ್ದಾಗ ಅಪಘಾತ, ಅಪರಾಧ ನಡೆದರೆ ದೂರು ದಾಖಲಿಸಲು ಸಾಧ್ಯವಾಗದಿದ್ದಾಗ ಅಂಚೆ ಮೂಲಕ ದೂರು ಸಲ್ಲಿಸಬಹುದು.
ಆದರೆ, ಅಂಚೆ ಹಾಗೂ ದೂರವಾಣಿಯಲ್ಲಿ ಸಲ್ಲಿಸಿದ ದೂರುಗಳನ್ನು ಮೊದಲು ಪರಿಶೀಲಿಸಿ ನಂತರ ದೂರು ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಳುತ್ತಾರೆ.
ಒಂದು ವೇಳೆ ದೂರಿಗೆ ಯಾವುದೇ ಪ್ರತಿಕ್ರಿಯೆ ಬರದಿದ್ದಲ್ಲಿ, ದೂರಿನ ಅರ್ಜಿ ಬರೆದು, ಅದನ್ನು ಸಂಬಂಧಪಟ್ಟ ಪೊಲೀಸ್ ವರಿಷ್ಠಾಧಿಕಾರಿ ಅಥವಾ ನಗರ ಪೊಲೀಸ್ ಆಯುಕ್ತರಿಗೆ ಸಲ್ಲಿಸಬಹುದು.
ಪೊಲೀಸರಿಂದ ನ್ಯಾಯ ಸಿಗದಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗಬಹುದು. ನ್ಯಾಯಾಲಯದಲ್ಲಿ ನ್ಯಾಯಾಧೀಶರನ್ನು ಸಂಪರ್ಕಿಸಿ ಪಿಸಿಆರ್ ದಾಖಲಿಸಬೇಕು(ಅಂದರೆ, ಖಾಸಗಿ ದೂರಿನ ವರದಿ). ಅದನ್ನು ಪರಿಶೀಲಿಸುವ ನ್ಯಾಯಾಧೀಶರು ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸುತ್ತಾರೆ.
ಸಾಧ್ಯವಾದಷ್ಟು ದೂರುದಾರರು ಖುದ್ದಾಗಿ ಹೋಗಿ ದೂರು ದಾಖಲಿಸಿದರೆ ಅದಕ್ಕೆ ಹೆಚ್ಚು ಮಹತ್ವ ಇರುತ್ತದೆ. ದೂರವಾಣಿ ಹಾಗೂ ಅಂಚೆಯ ಮೂಲಕ ಬರುವ ದೂರುಗಳು ಹುಸಿಯಾಗಿಯೂ ಇರಬಹುದು.
ಕೆಲವೊಮ್ಮೆ ನೀವು ದೂರು ದಾಖಲಿಸುವುದು ತಡವಾದಾಗ ಆರೋಪಿಗಳು ಪರಾರಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಘಟನೆ ನಡೆದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವುದು ಸೂಕ್ತ.
ಅಂಚೆ, ದೂರವಾಣಿ ಮೂಲಕ ಬರುವ ಪ್ರಕರಣಗಳನ್ನು ಮೊದಲು ಪರಿಶೀಲಿಸಿ, ಸರಿ ಇದ್ದಲ್ಲಿ ಪೊಲೀಸರು ದೂರು ದಾಖಲಿಸಿಕೊಳ್ಳುತ್ತಾರೆ.
-ಶಾಂತ ತಮ್ಮಯ್ಯ