ಮಾನವನ ಸ್ವಭಾವದ ಬಹುಮುಖ್ಯ ಲಕ್ಷಣವೆಂದರೆ ಒಳ್ಳೆಯ ಮಾತು, ವಿಚಾರಗಳ ಬಗ್ಗೆ ಚಿಂತಿಸದೆ ಟೀಕೆ, ನಿಂದೆ ಮತ್ತು ದುರ್ವಿಚಾರಗಳಲ್ಲಿ ಸದಾ ಮಗ್ನವಾಗಿರುವುದು. ಯಾರಾದರೂ ನಾವು ಕೈಗೊಂಡ ಕಾರ್ಯಗಳನ್ನು ಕುರಿತು ತೆಗಳಿದರೆ ಅದರ ಬಗ್ಗೆ ನಿರ್ಲಿಪ್ತರಾಗದೇ ಅದರ ಬಗ್ಗೆಯೇ ಚಿಂತಿಸುತ್ತಾ, ಹತ್ತಾರು ಜನರಿಗೆ ಹೇಳುತ್ತಾ, ಮಾತನಾಡುತ್ತಾ ನಮ್ಮ ಕಾರ್ಯವನ್ನು ನಿಲ್ಲಿಸಿಬಿಡುತ್ತೇವೆ ಅಥವಾ ನಿಧಾನಗೊಳಿಸುತ್ತೇವೆ. ಈ ಸ್ವಭಾವ ನಮ್ಮ ವ್ಯಕ್ತಿತ್ವದ ಪ್ರಬಲ ಕುಂದು. ಧೈರ್ಯದಿಂದ ಕಾರ್ಯಶೀಲರಾಗುವ ನಾವು ಜನರ ಸ್ತುತಿ ನಿಂದೆಗಳಿಗೆ ಗಮನ ನೀಡದೆ ಮುನ್ನಡೆಯಬೇಕು. ನಮ್ಮ ಮನಸ್ಸನ್ನು ಸದಾ ನಮ್ಮ ಕಾರ್ಯಗಳ ಮೇಲೆ ನೆಟ್ಟಿರಬೇಕು.
ಜಗತ್ತನ್ನು ಖುಷಿಗೊಳಿಸಲು ಹೊರಟರೆ ಅದರಿಂದ ಜಗತ್ತಿಗೆ ಹಾನಿಯೇ ಹೆಚ್ಚು. ಬಹುಸಂಖ್ಯಾತರೆಂಬುವರ ಅಭಿಪ್ರಾಯ ತಪ್ಪಾಗಿರಲೇಬೇಕು. ಏಕೆಂದರೆ ಈ ಜಗತ್ತನ್ನು ಆಳುವವರು ಅವರೇ, ಜಗತ್ತಿನ ದುಃಸ್ಥಿತಿಗೆ ಕಾರಣರೂ ಅವರೇ. ಪ್ರತಿಯೊಂದು ಹೊಸ ಆಲೋಚನೆಯೂ ವಿರೋಧವನ್ನು ಎದುರಿಸಲೇಬೇಕು. ನಾಗರಿಕ ಸಮಾಜದಲ್ಲಿ, ನಯವಾದ ತಿರಸ್ಕಾರಗಳನ್ನು ಎದುರಿಸಬೇಕಾಗಿ ಬಂದರೆ ಅಸಭ್ಯರ ಸಮಾಜದಲ್ಲಿ ಒರಟು ಬೈಗುಳಗಳನ್ನೂ, ಎದುರಿಸಬೇಕಾಗುತ್ತದೆ.
ನಮ್ಮ ಮನಸ್ಸನ್ನು ನಾವು ಇಚ್ಛಾಮಾತ್ರದಿಂದಲೇ ಯಾವುದೇ ವಸ್ತುವಿನಿಂದ ಹಿಂದೆಗೆದುಕೊಳ್ಳಬಲ್ಲೆವಾದರೆ ಯಾವ ಕಷ್ಟವೂ ಇರುವುದಿಲ್ಲ. ಕ್ರಮಬದ್ಧವಾದ ದೀರ್ಘ ಧ್ಯಾನದಿಂದ ಮನಸ್ಸಿನ ಹಲವಾರು ಸುಪ್ತಶಕ್ತಿಗಳು ಜಾಗೃತವಾಗುತ್ತವೆ ಹಾಗೂ ಅತೀಂದ್ರಿಯ ಅನುಭವಗಳಾಗುತ್ತವೆ.
-ಆನಂದ ಎಸ್.ಎನ್.