ನಿಮಗೆ ಪ್ರಾಮಾಣಿಕರಾಗಿ
ಬದುಕಿನಲ್ಲಿ ಪ್ರಾಮಾಣಿಕತೆ ಎನ್ನುವುದಕ್ಕೆ ಬಹುದೊಡ್ಡ ಅರ್ಥವಿದೆ. ಪ್ರಾಮಾಣಿಕವಾಗಿರುವುದು ಎಂದರೆ ಕೇವಲ ಬೇರೆಯವರ ವಸ್ತುವನ್ನು ತೆಗೆದುಕೊಳ್ಳದಿರುವುದು, ಇನ್ಯಾರಿಗೋ ಹಣ ಕೊಡದೇ ಮೋಸ ಮಾಡುವುದು, ಲಂಚ ರುಶುವತ್ತುಗಳಿಗೆ ಪಕ್ಕಾಗದಿರುವುದು ಎಂದಷ್ಟೇ ಅಲ್ಲ. ಅದಕ್ಕಿಂತಲೂ ವಿಶಾಲ ಅರ್ಥದಲ್ಲಿ ಪ್ರಾಮಾಣಿಕತೆಯನ್ನು ನೋಡಬೇಕಿದೆ. ಇನ್ನೊಬ್ಬರಿಗೆ ನಾವು ಪ್ರಾಮಾಣಿಕರಾಗಿರುವುದಕ್ಕಿಂತ ನಮಗೆ ನಾವೇ ಪ್ರಾಮಾಣಿಕರಾಗಿರುವುದು ಹಿರಿದಾದದ್ದು. ಮತ್ತು ಇದು ತೀರಾ ಕಷ್ಟ ಸಾಧ್ಯ. ಹೆಚ್ಚಿನವರಿಗೆ ಈ ತತ್ವ ಅರಿವಾಗುವುದೇ ಇಲ್ಲ. ನಿಮ್ಮನ್ನು ನೀವೇ ಸೂಕ್ಷ್ಮ ಅವಲೋಕನಕ್ಕೆ ಒಳಪಡಿಸಿಕೊಳ್ಳಿ. ದಿನದಲ್ಲಿ ನೀವು ಹೇಗೆ, ಎಷ್ಟು ಬಾರಿ ನಿಮಗೆ ಅಪ್ರಾಮಾಣಿಕರಾಗುತ್ತೀರಿ ಎಂಬುದು ಗೊತ್ತಾಗುತ್ತದೆ. ಅದು ವ್ಯಾವಹಾರಿಕವೇ ಇರಬಹುದು. ನಿಮ್ಮ ಸ್ನೇಹಿತರೊಬ್ಬರಿಗೆ ಚಿಕ್ಕದೊಂದು ಸುಳ್ಳು ಹೇಳಿಬಿಡುತ್ತೀರಿ. ಅದರಿಂದ ಯಾರಿಗೂ ಹಾನಿಯಿಲ್ಲ. ಆದರೆ ಮನಸ್ಸಿನ ಮೂಲೆಯಲ್ಲೆಲ್ಲೋ ಅದು ನಿಮ್ಮನ್ನು ಕೊರೆಯುತ್ತದೆ. ನೀವೇನೋ ತಪ್ಪು ಮಾಡಿರುತ್ತೀರಿ. ಅದರ ಅರಿವೂ ನಿಮಗೆ ಇರುತ್ತದೆ, ಹೇಳಿಕೊಳ್ಳಲಾಗುವುದಿಲ್ಲ. ಮುಚ್ಚಿಟ್ಟುಕೊಂಡು ಸುಮ್ಮನಿದ್ದುಬಿಡುತ್ತೀರಿ. ಆ ಕ್ಷಣ ನಿಮ್ಮಲ್ಲಿ ಅಪರಾಧಿ ಪ್ರಜ್ಞೆ ಕಾಡಲಾರಂಭಿಸುತ್ತದೆ. ನೀವೇ ಮಾಡಬೇಕಾದ ಕೆಲಸವೊಂದಿರುತ್ತದೆ. ಆದರೆ ಇನ್ನಿಲ್ಲದ ಸೋಮಾರಿತನ ಕಾಡುತ್ತದೆ. ಯಾವುದೋ ನೆಪವೊಡ್ಡಿ ಅದನ್ನು ಬೇರೆಯವರಿಗೆ ಹಸ್ತಾಂತರಿಸುತ್ತೀರಿ. ಅದಕ್ಕೆ ಬೇರೆಯವರನ್ನು ಹೊಣೆಗಾರರನ್ನಾಗಿಸುತ್ತೀರಿ. ಛೇ, ಹಾಗೆ ಮಾಡಬಾರದಿತ್ತು ಎಂಬ ಪಾಪಭೀತಿಗೆ ನೀವು ಒಳಗಾಗುತ್ತೀರಿ. ಒಂದೇ ಒಂದು ಮಾತು ಹೇಳಿದ್ದರೆ ಅವರ ಎಲ್ಲ ಸಮಸ್ಯೆಗೆ ಪರಿಹಾರ ಸಿಗುತ್ತಿತ್ತು. ಅದರೆ ಇನ್ನೊಬ್ಬರ ಉಸಾಬರಿ ನಮಗೇಕೆ ಎಮದುಕೊಂಡು ಸುಮ್ಮನಿದ್ದುಬಿಡುತ್ತೀರಿ. ನಿಮ್ಮಲ್ಲಿನ ಗಿಲ್ಟ್‌ಗೆ ನೀವು ಉತ್ತರಿಸಿಕೊಳ್ಳಲಾಗುವುದೇ ಇಲ್ಲ. ಇನ್ನೆಂದೂ ಸಿಗರೇಟ್ ಸೇದುವುದಿಲ್ಲ ಎಂದೋ, ಕುಡಿಯುವುದಿಲ್ಲ ಎಂದೋ ಸಂಗಾತಿಗೆ ಮಾತು ಕೊಟ್ಟಿರುತ್ತೀರಿ. ಆಕೆಯ ಅನುಪಸ್ಥಿತಿಯಲ್ಲಿ ಅದು ಜರುಗಿಹೋಗುತ್ತದೆ. ಆದರೂ ನಿಮ್ಮೊಳಗೆ ಕುರಿಕುರಿ... ಇಂಥ ಹತ್ತಾರು ಸನ್ನಿವೇಶವನ್ನು ದಿನದಲ್ಲೊಮ್ಮೆಯಾದರೂ ಎದುರಿಸಿಯೇ ಇರುತ್ತೀರಿ. ಆಗೆಲ್ಲ ಇನ್ನೊಬ್ಬರಿಗೆ ನೀವು ಹಾಗೆ ಮಾಡಿದ್ದೀರಿ ಎಂಬುದು ಗೊತ್ತಾಗುವುದೇ ಇಲ್ಲ. ಆದರೂ ನೀವು ನಿಮಗೇ ಪ್ರಾಮಾಣಿಕರಲ್ಲದ ಒಳಗುದಿ ನಿಮ್ಮೊಳಗೆ ಉಳಿದೇ ಹೋಗುತ್ತದೆ. ಜೀವನದಲ್ಲಿ ಬೇರೆಯವರಿಗೆ ಪ್ರಾಮಾಣಿಕರಾಗಿರುವುದು ಬೇಡ. ಸೋಲನ್ನು ಸೋಲೆಂದು ಸ್ವೀಕರಿಸಲು ಛಾತಿ ಬೇಕು. ಅಂಥ ಛಾತಿ ನಮ್ಮೊಳಗಿನ ಪ್ರಾಮಾಣಿಕತೆಯಿಂದ ಮಾತ್ರ ದಕ್ಕುವಂಥದ್ದು. ಹಾಗೆ ಇದ್ದಾಗ ನಿಮ್ಮೊಳಗೆ ಅನುರಣಿಸುವ ಅವರ್ಣನೀಯ ಆನಂದ ಜೀವನದುದ್ದಕ್ಕೂ ನಿಮ್ಮನ್ನು ಹಗುರಾಗಿಯೇ ಇಡುತ್ತದೆ. ನಿಮ್ಮ ಅತ್ಮವಿಶ್ವಾಸವನ್ನು ವೃದ್ಧಿಸುತ್ತದೆ. ಯಶಸ್ಸಿನ ಗುಟ್ಟು ನಿಮ್ಮ ಪ್ರಾಮಾಣಿಕತನದಲ್ಲಡಗಿದೆ, ನೆನಪಿರಲಿ.
-ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

