ಆಲಿಸುವ ಪಾಲಿಸಿ
ನಿಮಗೂ ಅಂತಹ ಅನುಭವ ಆಗಿರಬಹುದು ಅಥವಾ ನೀವೂ ಒಮ್ಮೊಮ್ಮೆ ಆ ಥರ ವರ್ತಿಸಿರಲಿಕ್ಕೆ ಸಾಕು. ಎದುರಿನವರು ಏನು ಹೇಳುತ್ತಿದ್ದಾರೆ ಎನ್ನುವುದನ್ನು ಕೇಳಿಸಿಕೊಳ್ಳುವ ತಾಳ್ಮೆಯೇ ಇರುವುದಿಲ್ಲ. ಅವರು ವಿಷಯ ಪ್ರಸ್ತಾಪಿಸುತ್ತಿದ್ದಂತೆ ಇವರು ಏನೇನೋ ಹೇಳಲಾರಂಭಿಸುತ್ತಾರೆ. ಹೇಳುವವನಿಗೆ ಕಿರಿಕಿರಿಯಾಗಿ ಮಾತು ನಿಲ್ಲಿಸಿದರೂ ನಿಲ್ಲಿಸಬಹುದು. ಒಂದು ನೆನಪಿಟ್ಟುಕೊಳ್ಳಿ. ಕೇಳಿಸಿಕೊಳ್ಳುವುದು ಮತ್ತು ಮೌನವಾಗಿರುವುದು ಎರಡೂ ಅಕ್ಕತಂಗಿಯರ ಹಾಗೆ. ಬೇಕಿದ್ದರೆ ಒಂದು ಸಲ ಪ್ರಯತ್ನಿಸಿ ನೋಡಿ. ನೀವು ಮಾತನಾಡುತ್ತಲೇ ಬೇರೆಯವರು ಹೇಳುವುದನ್ನು ಕೇಳಿಸಿಕೊಳ್ಳಲು ಸಾಧ್ಯವಾಗುತ್ತದಾ ಎಂದು? ಉಹುಂ. ಅದು ಸಾಧ್ಯವೇ ಇಲ್ಲ. ಬೇರೆಯವರ ಮಾತು ಕೇಳಿಸಿಕೊಳ್ಳಬೇಕು ಅಂತಾದರೆ ನಾವು ಮೌನವಾಗಿರಬೇಕು. ವೈದ್ಯರು ಹಾಗೆಯೇ ಅಲ್ಲವೆ? ನಾವು ಸಮಸ್ಯೆ ಹೇಳಿಕೊಳ್ಳುತ್ತಿದ್ದಂತೆ ಇಂಥದ್ದೇ ಕಾಯಿಲೆ ಎನ್ನುವುದು ಅವರಿಗೆ ಗೊತ್ತಾಗಿಬಿಡುತ್ತದೆ. ಆದರೂ ಅವರು ನಾವು ಹೇಳುವುದನ್ನು ನಿಲ್ಲಿಸುವವರೆಗೆ ಮೌನವಾಗಿದ್ದುಕೊಂಡು ಎಲ್ಲವನ್ನೂ ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಾರೆ. ಮೌನವಾಗಿ ಆಲಿಸುವುದು ನಮ್ಮ ವ್ಯಕ್ತಿತ್ವದ ಪ್ರತಿಬಿಂಬವೂ ಹೌದು ಎನ್ನುವುದು ನಮಗೆ ಗೊತ್ತೇ ಆಗುವುದಿಲ್ಲ. ಬೇರೆಯವರು ಮಾತನಾಡುವಾಗಲೇ ನಾವು ಬಾಯಿ ತೂರಿಸುವುದು ನಮ್ಮಲ್ಲಿ ಸಹನೆ, ತಾಳ್ಮೆ ಇಲ್ಲ ಎನ್ನುವುದನ್ನು ತೋರಿಸಿಕೊಡುವುದಿಲ್ಲವೆ? ನಿಮ್ಮ ಉದ್ದೇಶ ನನಗೆ ಎಲ್ಲ ಗೊತ್ತಿದೆ ಎನ್ನುವುದನ್ನು ತೋರಿಸಿಕೊಳ್ಳುವುದು ಆಗಿಲ್ಲದೇ ಇರಬಹುದು. ಆದರೆ ನಿಮ್ಮ ವರ್ತನೆ ಅದೇ ಅರ್ಥ ಕೊಟ್ಟು ನಿಮಗೆ 'ಅಹಂಕಾರಿ' ಎನ್ನುವ ಪಟ್ಟವನ್ನೂ ದೊರಕಿಸಿಬಿಡುವ ಸಾಧ್ಯತೆಯೂ ಇದೆ ಅಲ್ಲವೆ? ವೈದ್ಯರಿಗೆ ಮಾತ್ರವೇ ಅಲ್ಲ, ಮೌನವಾಗಿ ಕೇಳಿಸಿಕೊಳ್ಳುವುದಿದೆಯಲ್ಲ. ಅದು ನಮ್ಮ ಯಶಸ್ಸಿನ ರಹದಾರಿಯೂ ಹೌದು. ಯೋಚಿಸಿ ನೋಡಿ. ಮೌನವಾಗಿ ಆಲಿಸುವುದು ನಮ್ಮ ಸಂವಹನವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವುದಿಲ್ಲವೆ? ಒಮ್ಮೊಮ್ಮೆ ಎದುರಿದ್ದವರು ಏನು ಹೇಳುತ್ತಾರೆ ಎನ್ನುವುದನ್ನು ಸರಿಯಾಗಿ ಕೇಳಿಸಿಕೊಳ್ಳದೆ ನಾವೇ ಮಾತನಾಡಲು ಶುರುವಿಟ್ಟುಕೊಂಡರೆ ಅಮೂಲ್ಯ ಅವಕಾಶಗಳನ್ನು ಹಾಳು ಮಾಡಿಕೊಳ್ಳುವ ಸಂಭವವೂ ಇಲ್ಲದಿಲ್ಲ. ಆತ ನಿಮಗೆ ಯಾವುದೋ ಅವಕಾಶಗಳ ಬಗ್ಗೆ ಹೇಳುತ್ತಿದ್ದಿರಬಹುದು, ನಿಮ್ಮ ಬಾಯಿ ತೂರಿಸುವಿಕೆಯಿಂದ ಬೇಸತ್ತು ಮಾತು ನಿಲ್ಲಿಸಿಬಿಡಬಹುದು ಅಲ್ಲವೆ? ಅಷ್ಟಕ್ಕೂ 'ಮಾತು ಬೆಳ್ಳಿ ಮೌನ ಬಂಗಾರ' ಎಂದು ಹಿರಿಯರು ಹೇಳಿದ್ದು ಸುಮ್ಮನೇ ಅಲ್ಲ.
- ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

