clean ಗ್ರೀನ್ ಲುಂಗಿ
ಈಗಷ್ಟೇ ತೆರೆಕಂಡ 'ಚೆನ್ನೈ ಎಕ್ಸ್‌ಪ್ರೆಸ್' ಸಿನಿಮಾದ ಲುಂಗಿ ಡಾನ್ಸ್ ಹಾಡಿಗೆ ಜನರೆಲ್ಲರೂ ಹೆಜ್ಜೆ ಹಾಕುತ್ತಿದ್ದರೆ, ಇತ್ತ ಬೆಂಗಳೂರಿನಲ್ಲಿ...

ಈಗಷ್ಟೇ ತೆರೆಕಂಡ 'ಚೆನ್ನೈ ಎಕ್ಸ್‌ಪ್ರೆಸ್' ಸಿನಿಮಾದ ಲುಂಗಿ ಡಾನ್ಸ್ ಹಾಡಿಗೆ ಜನರೆಲ್ಲರೂ ಹೆಜ್ಜೆ ಹಾಕುತ್ತಿದ್ದರೆ, ಇತ್ತ ಬೆಂಗಳೂರಿನಲ್ಲಿ 'ದ ಗ್ರೀನ್ ಲುಂಗಿ' ಎಂಬ ಎನ್‌ಜಿಒ ಬೆಂಗಳೂರನ್ನು ಕಸಮುಕ್ತ ನಗರವನ್ನಾಗಿ ಮಾಡಲು ಹೊರಟಿದೆ.
ಭಾನುವಾರ ಎಲ್ಲರೂ ರಜೆಯ ಮಜಾ ಅನುಭವಿಸುತ್ತಿದ್ದರೆ, ಗ್ರೀನ್ ಲುಂಗಿ ಕಾರ್ಯಕರ್ತರು ಬೆಳಗ್ಗೆ 7 ಗಂಟೆಗೇ ನಗರವನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಹಾಜರಾಗುತ್ತಾರೆ. ಈ ಮೂಲಕ ಸದ್ಯ ಗಾರ್ಬೇಜ್ ಸಿಟಿಯಾಗಿರುವ ಬೆಂಗಳೂರನ್ನು ಗಾರ್ಡನ್ ಸಿಟಿಯನ್ನಾಗಿ ಮಾಡಲು ಈ ಸಂಸ್ಥೆ ಹೊಸ ಸಾಹಸಕ್ಕೆ ಕೈ ಹಾಕಿದೆ. ಪ್ರಸ್ತುತ ಸಂಸ್ಥೆಯ ಕಾರ್ಯಕರ್ತರು ಹಸಿರು ಬಣ್ಣದ ಲುಂಗಿ ತೊಟ್ಟುಕೊಂಡೇ ಸ್ವಚ್ಛತಾ ಕಾರ್ಯದಲ್ಲಿ ತೊಡಗುವುದು ವಿಶೇಷ. ನಗರದಲ್ಲಿನ ಒಂದು ಪ್ರದೇಶವನ್ನು ಆಯ್ಕೆ ಮಾಡಿಕೊಂಡು ಅಲ್ಲಿನ ಸ್ಥಳೀಯರ ಜತೆ ಸೇರಿ ಆ ವಠಾರವನ್ನು ಸ್ವಚ್ಛಗೊಳಿಸಲಾಗುತ್ತದೆ. ಮಾತ್ರವಲ್ಲದೆ ಸೈನಿಕರು, ಬಿಬಿಎಂಪಿ ನೌಕರರು ಮತ್ತು ಪೌರ ಕಾರ್ಮಿಕರು ಕೂಡಾ ಗ್ರೀನ್ ಲುಂಗಿ ಕಾರ್ಯಕರ್ತರ ಜತೆ ಕೈಜೋಡಿಸುತ್ತಾರೆ.
ಶುರು ಹೇಗೆ?
ಕಳೆದ ವರ್ಷ ನವಂಬರ್ ತಿಂಗಳಲ್ಲಿ ಮನ್‌ಪ್ರೀತ್ ಕೌರ್ ಜುನೇಜಾ ಅವರ ಗೆಳೆಯರ ಗುಂಪೊಂದು ಫೇಸ್‌ಬುಕ್ ಪೇಜ್ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿತ್ತು. ಫೇಸ್‌ಬುಕ್‌ನಲ್ಲಿ ಜನರಿಂದ ಅದ್ಭುತ ಪ್ರತಿಕ್ರಿಯೆಗಳು ಬರತೊಡಗಿದ್ದೇ ತಡ, ಈಜಿಪುರ ಜಂಕ್ಷನ್‌ನಲ್ಲಿ ಬಸ್‌ಸ್ಟಾಪ್ ಕ್ಲೀನ್ ಮಾಡುವ ಮೂಲಕ ಗ್ರೀನ್ ಲುಂಗಿ ಟೀಂ ರಸ್ತೆಗಿಳಿಯಿತು. ಇದಕ್ಕಿಂತ ಮುನ್ನ I am awake ಎಂಬ ಘೋಷಣೆಯ ಮೂಲಕ ಸ್ಥಳೀಯರಿಗೆ ಶುಚಿತ್ವದ ಬಗ್ಗೆ ಮನವರಿಕೆ ಮಾಡಿಕೊಟ್ಟು ಅವರನ್ನೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಬಿಬಿಎಂಪಿ ನೌಕರರು, ಗುತ್ತಿಗೆದಾರರು, ಪೌರಕಾರ್ಮಿಕರು ಸೇರಿದಂತೆ ಸುಮಾರು 100ರಷ್ಚು ಮಂದಿ ಭಾಗವಹಿಸಿದ್ದು, ಮೊದಲ ಕಾರ್ಯಕ್ರಮಕ್ಕೆ ಜನರಿಂದ ಅದ್ಭುತ ಬೆಂಬಲ ಲಭಿಸಿತು. ಇದಾದ ನಂತರ ವಾರಗಳ ಹಿಂದೆಯಷ್ಟೇ ಗ್ರೀನ್ ಲುಂಗಿ ಟೀಂ ಹಲಸೂರಿನ ಗಂಗಾಧರ ಚೆಟ್ಟಿ ರಸ್ತೆಯನ್ನು ಸ್ವಚ್ಛಗೊಳಿಸಿದೆ. ಪ್ರಸ್ತುತ ಪ್ರದೇಶದಲ್ಲಿ ಸಾರ್ವಜನಿಕ ಶೌಚಾಲಯಗಳಿಲ್ಲದೆ ರಸ್ತೆಯ ಇಕ್ಕೆಲಗಳು ಗಬ್ಬು ನಾರುತ್ತಿದ್ದವು. ಅದನ್ನೆಲ್ಲ ಸ್ವಚ್ಛಗೊಳಿಸಿ ರಸ್ತೆಗಳಿಗೆ ಪೇಂಟ್ ಬಳಿಯುವ ಮೂಲಕ ಗ್ರೀನ್ ಲುಂಗಿ ಕಾರ್ಯಕರ್ತರು ಸ್ಥಳೀಯರಿಗೆ ಶುಚಿತ್ವದ ಅರಿವು ಮೂಡಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಬಿಬಿಎಂಪಿ ಮತ್ತು ಬೆಸ್ಕಾಂ ನೌಕರರು ಹಾಗೂ ನೂರಕ್ಕಿಂತಲೂ ಹೆಚ್ಚು ಸೈನಿಕರು ಕೈಜೋಡಿಸಿದ್ದರು.
ಲುಂಗಿ ಗ್ರೀನ್ ಯಾಕೆ?
ಹಸಿರು ಬಣ್ಣ ಪರಿಸರವನ್ನು ಸೂಚಿಸಿದರೆ ಲುಂಗಿ ಸಾಮಾನ್ಯ ವ್ಯಕ್ತಿಯ ಸಂಕೇತ. ಭಾರತದಲ್ಲಿ ಲುಂಗಿಗೆ ಅದರದ್ದೇ ಆದ ವಿಶೇಷತೆ ಮತ್ತು ಸಂಸ್ಕೃತಿ ಇದೆ. ಲುಂಗಿ ಉಡುವವರು ಜನಸಾಮಾನ್ಯರು. ಲುಂಗಿ ಉಟ್ಟು ಕೆಲಸ ಮಾಡುವವರನ್ನೇ ನೋಡಿ, ಅವರು ಲುಂಗಿ ಉಟ್ಟ ಮೇಲೆ ಅವರಿಗೆ ಅವರದ್ದೇ ಆದ ಧೋರಣೆ ಇರುತ್ತದೆ. ಇದರಿಂದಾಗಿಯೇ ಅವರಿಗೆ ಕೆಲಸದಲ್ಲಿ ಉತ್ಸಾಹ ಬರುತ್ತದೆ. ಹೀಗೆ ಲುಂಗಿ ಸಾಮಾನ್ಯ ವ್ಯಕ್ತಿಯೊಬ್ಬನ ಧೋರಣೆಯಲ್ಲಿ ಬದಲಾವಣೆಯನ್ನು ತರಬಲ್ಲದು.
ಉದ್ದೇಶವೇನು?
ನಮ್ಮ ಪರಿಸರ ಶುಚಿಯಾಗಿಲ್ಲ, ಗಬ್ಬು ನಾರುತ್ತಿವೆ, ರಸ್ತೆಗಳು ಸರಿಯಾಗಿಲ್ಲ, ಎಂದು ಸರ್ಕಾರವನ್ನು ಬೈದುಕೊಂಡು ಕೂರುವ ಬದಲು ನಾವೇ ಯಾಕೆ ಈ ಕಾರ್ಯಕ್ಕೆ ಮುಂದಾಗಬಾರದು? ಎಂಬ ಉದ್ದೇಶದಿಂದಲೇ ನಾವು ಈ ಕಾರ್ಯಕ್ಕೆ ಕೈ ಹಾಕಿದ್ದು. ಆದರೆ ಇಂಥ ಕಾರ್ಯಗಳನ್ನು ಮಾಡುವಾಗ ಜನರ ಶ್ರದ್ಧೆಯನ್ನು ನಮ್ಮೆಡೆಗೆ ಸೆಳೆಯುವುದು ಅತ್ಯಗತ್ಯ. ಅದಕ್ಕಾಗಿ ನಾವು ಹಸಿರು ಲುಂಗಿ ತೊಟ್ಟು ಕಾರ್ಯಪ್ರವೃತ್ತರಾಗಲು ಯೋಚಿಸಿದ್ದು. ಜನರಿಗೆ ನಾವೇನು ಮಾಡುತ್ತಿದ್ದೇವೆ ಎಂದು ತಿಳಿಯುವ ಕುತೂಹಲ ಹುಟ್ಟಿದಾಗಲೇ ಅವರು ನಮ್ಮತ್ತ ಆಕರ್ಷಿತರಾಗುತ್ತಾರೆ. ಇದೀಗ ನಾವು ಮಾಡಿದ ಎಲ್ಲ ಕಾರ್ಯಗಳಿಗೂ ಜನರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದ್ದು, ಅಧಿಕಾರಿಗಳೂ ಮೆಚ್ಚುಗೆ ಸೂಚಿಸಿದ್ದಾರೆ. ನಗರವನ್ನು ಶುಚಿಯಾಗಿಡಲು ಪ್ರತಿಯೊಬ್ಬ ನಾಗರಿಕರು ಯತ್ನಿಸಬೇಕು. ಎಲ್ಲರೂ ಜತೆಯಾಗಿ ಸೇರಿ ಇಂಥಾ ಕಾರ್ಯಗಳನ್ನು ಮಾಡಿದರೆ ಮಾತ್ರ ಬೆಂಗಳೂರು ಸ್ವಚ್ಛ ಸುಂದರ ನಗರವಾಗಬಹುದು ಎಂಬುದನ್ನು ನಾವು ಜನರಿಗೆ ಕಾರ್ಯರೂಪದಲ್ಲಿ ಮನವರಿಕೆ ಮಾಡಿಕೊಡುತ್ತಿದ್ದೇವೆ ಅನ್ನುತ್ತಾರೆ ಗ್ರೀನ್ ಲುಂಗಿ ಟೀಂ ಕಾರ್ಯಕರ್ತರು.
ಮುಂದಿನ ಹೆಜ್ಜೆ ಏನು?
ಮುಂದಿನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನೂ ಭಾಗವಹಿಸುವಂತೆ ಮಾಡಲು ನಾವು ಯೋಚಿಸುತ್ತಿದ್ದೇವೆ. ಯಾಕೆಂದರೆ ಸಮಾಜದಲ್ಲಿನ ಪ್ರತಿಯೊಂದು ಸ್ತರದಲ್ಲಿರುವ ವ್ಯಕ್ತಿಗಳಿಗೂ ನಮ್ಮ ಸಂದೇಶ ತಲುಪಿದರೆ ಮಾತ್ರ ಸ್ವಚ್ಛ ಬೆಂಗಳೂರು ಕನಸು ನನಸಾಗುವುದು.
ಎಲ್ಲರಿಗೂ ತಮ್ಮ ನಗರ ಸ್ವಚ್ಛ ಸುಂದರವಾಗಿರಬೇಕು ಎಂಬ ಕನಸು ಇದ್ದೇ ಇರುತ್ತದೆ. ಆದರೆ ಯಾರೂ ಅದನ್ನು ನನಸಾಗಿಸಲು ಪ್ರಯತ್ನಿಸುವುದೇ ಇಲ್ಲ. ಬಿಬಿಎಂಪಿಯವರು ಎಷ್ಟೇ ಶುಚಿಗೊಳಿಸಿದರೂ ಮರುದಿನ ರಸ್ತೆಗಳು ಗಬ್ಬೆದ್ದು ನಾರುತ್ತಿರುತ್ತವೆ. ನಾವೇ ನಮ್ಮ ಪರಿಸರ ಶುಚಿಯಾಗಿ ಇಟ್ಟುಕೊಳ್ಳಬಹುದು ಎಂದು ಜನರಿಗೆ ಕಲಿಸಿಕೊಡುತ್ತಿದ್ದೇವೆ. ಎಲ್ಲರೂ ಒಗ್ಗೂಡಿ ಸ್ವಚ್ಛತಾ ಕಾರ್ಯಗಳಲ್ಲಿ ಭಾಗವಹಿಸುವ ಮೂಲಕ ಜನರೊಂದಿಗಿನ ಸಂವಹನ ಮತ್ತು ಒಗ್ಗಟ್ಟು ಇನ್ನೂ ಬಲವಾಗುತ್ತದೆ.
- ಮನ್‌ಪ್ರೀತ್ ಕೌರ್, ಗ್ರೀನ್ ಲುಂಗಿ ಕಾರ್ಯಕರ್ತೆ
ಹೆಚ್ಚಿನ ವಿವರಗಳಿಗೆ ಫೇಸ್‌ಬುಕ್‌ನಲ್ಲಿ https://www.facebook.com/GreenLungi?fref=ts ಪೇಜ್ ಲೈಕ್ ಮಾಡಿ.
- ರಶ್ಮಿ ಕಾಸರಗೋಡು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


