ಬೈಟುಕಾಫಿ

Eಪರೀತ

ಸಂವಹನ ಮತ್ತು ಮಾಹಿತಿ ವಿನಿಮಯದ ಅದ್ಭುತ ಮಾಧ್ಯಮ ಎಂದೇ ಬಿಂಬಿತವಾಗಿದ್ದ...

Eಪರೀತ
Published On :

ಈ ಜಗತ್ತಿನಲ್ಲಿ ನಿಮ್ಮ ಮಕ್ಕಳು ಅಡ್ಡಾಡುತ್ತಾರಾ?

ಸಂವಹನ ಮತ್ತು ಮಾಹಿತಿ ವಿನಿಮಯದ ಅದ್ಭುತ ಮಾಧ್ಯಮ ಎಂದೇ ಬಿಂಬಿತವಾಗಿದ್ದ ಸಾಮಾಜಿಕ ಜಾಲತಾಣಗಳು ಸಮೂಹ ವ್ಯಸನಗಳಾಗಿ ಬದಲಾಗುತ್ತಿವೆಯೇ? ಆ
ವ್ಯಸನಕ್ಕೆ ಮುಗ್ಧ ಮಕ್ಕಳು ಬಲಿಯಾಗುತ್ತಿರುವುದಕ್ಕೆ ಯಾರು ಹೊಣೆ?

ಇಂದಿನ ಅಂತರ್ಜಾಲ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಮತ್ತು ಅವುಗಳಿಂದ ಉಂಟಾಗುವ ಅನಾಹುತಗಳ ಸಣ್ಣ ಝಲಕ್ ಅಷ್ಟೇ.
ರಾತ್ರಿ 11 ಗಂಟೆ. ಮಗಳ ರೂಮಿನಲ್ಲಿ ಇನ್ನೂ ದೀಪ ಉರಿಯುತ್ತಿರುವುದನ್ನು ಕಂಡ ಅಮ್ಮ ಸಣ್ಣ ಅನುಮಾನದಿಂದ ಇಣುಕಿ ನೋಡುತ್ತಾಳೆ. ಆದರೆ ಮಂಚದ ಮೇಲೆ ಕೂತು ಮೊಣಕಾಲ ಮೇಲೆ ಪುಸ್ತಕವಿರಿಸಿಕೊಂಡು ತದೇಕಚಿತ್ತದಿಂದ ಓದುತ್ತಿರುವ ಮಗಳನ್ನು ನೋಡಿ ಹೆಮ್ಮೆಯಿಂದ ನಕ್ಕು ಸರಿದುಹೋಗುತ್ತಾಳೆ. ಇತ್ತ ಅಮ್ಮ ಇಣುಕಿ ಹೋದದ್ದನ್ನು ಅರೆಗಣ್ಣಿಂದಲೇ ಗಮನಿಸಿದ ಮಗಳು ಪುಸ್ತಕದ ಪುಟಗಳ ಮಧ್ಯೆ ಮುಚ್ಚಿಟ್ಟುಕೊಂಡ ಐಪಾಡ್‌ನಲ್ಲಿ ಈಗಷ್ಟೇ ಆನ್‌ಲೈನ್‌ನಲ್ಲಿ ಸಿಕ್ಕ ಯಾವುದೋ ಅಪರಿಚಿತ ಹುಡುಗನೊಟ್ಟಿಗೆ ಚಾಟ್ ಮುಂದುವರಿಸುತ್ತಾಳೆ! ಅಂದ ಹಾಗೆ ಅವಳಿಗೀಗ 11 ವರ್ಷ!
ಅವನು ಅಪ್ಪ ಅಮ್ಮನಿಗೊಬ್ಬನೇ ಮಗ. 13ನೇ ವರ್ಷದ ಬರ್ಥ್‌ಡೇಗೆ ಅಪ್ಪ ಬ್ಲಾಕ್‌ಬೆರ್ರಿ ಮೊಬೈಲ್ ತಂದುಕೊಟ್ಟ ಮೇಲೆ ಮೊಬೈಲ್ ಗೇಮ್ ಮತ್ತು ಇಂಟರ್‌ನೆಟ್ ಅಷ್ಟೇ ಅವನ ಜಗತ್ತು. ಹೀಗೇ ಸಾಮಾಜಿಕ ಜಾಲತಾಣದಲ್ಲಿ ಹುಡುಗಿಯೊಬ್ಬಳ ಗೆಳೆತನವಾಗುತ್ತದೆ. ಅವಳ ಬಳಿ ಇವನು ತನಗೆ 21 ವರ್ಷ ಎಂದು ಸುಳ್ಳು ಹೇಳಿದ್ದಾನೆ. ತಿಂಗಳಲ್ಲಿ ಚಾಟಿಂಗ್ ಸ್ನೇಹ-  ಪ್ರೇಮವಾಗಿ ಬದಲಾಯಿತು. ಅವನಿಗೀಗ ಅವಳೊಂದಿಗೆ ಚಾಟ್ ಮಾಡುವುದನ್ನು ಹೊರತುಪಡಿಸಿದರೆ ಇನ್ನೇನೂ ಬೇಡ. ಆನ್‌ಲೈನ್ ಪ್ರೇಮ ಉತ್ಕಟಾವಸ್ಥೆಗೆ ತಲುಪಿರುವಾಗಲೇ ಒಂದು ದಿನ ಆ ಹುಡುಗಿಯ ಖಾತೆಯೇ ನಾಪತ್ತೆ! ಒಮ್ಮಿಂದೊಮ್ಮೆಲೇ ಮಾಯವಾದವಳ ವಿವರಗಳನ್ನು ಹುಡುಕಲು ಅವನು ನಡೆಸಿದ ಶ್ರಮವೆಲ್ಲ ವ್ಯರ್ಥ. ಮರುದಿನ ಅವನ ಹೆಣ ರೂಮಿನ ಫ್ಯಾನಿಗೆ ನೇತಾಡುತ್ತಿದೆ. ಈ ಹುಡುಗನ ಸಾವಿಗೆ ಕಾರಣಳಾದ ಆ ಹುಡುಗಿ ಯಾರು ಎಂಬುದು ಪ್ರಶ್ನೆಯಾಗೇ ಉಳಿಯುತ್ತದೆ.
    
ಈ ಮೇಲಿನ ಪ್ರಸಂಗಗಳು ಯಾವುದೋ ಸಿನಿಮಾದ ಭಾವನಾತ್ಮಕ ದೃಶ್ಯಗಳಲ್ಲ. ಆ ವ್ಯಕ್ತಿಗಳೂ ಆಧುನಿಕ ನಾಟಕದ ಪಾತ್ರಧಾರಿಗಳಲ್ಲ. ನಮ್ಮ ಅರಿವಿಗೆ ಬಾರದೆ ನಮ್ಮ ಸುತ್ತಲೇ ನಡೆಯುತ್ತಿರುವ, ಯಾವಾಗ ಬೇಕಾದರೂ ನಡೆಯಬಹುದಾದ ವಾಸ್ತವದ ತುಣುಕುಗಳು.
ಫೇಸ್‌ಬುಕ್ ಅಥವಾ ಇತರೆ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಖಾತೆ ತೆರೆಯಬೇಕಾದರೆ ಕನಿಷ್ಠ 13 ವರ್ಷಗಳಾಗಿರಬೇಕು. ಮೇಲಿನ ಎರಡು ಪ್ರಕರಣಗಳೂ ಇಂದಿನ ಅಂತರ್ಜಾಲ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಮತ್ತು ಅವುಗಳಿಂದ ಉಂಟಾಗುವ ಅನಾಹುತಗಳ ಸಣ್ಣ ಝಲಕ್ ಅಷ್ಟೇ. ಇನ್ನೂ ಆತಂಕದ ಸಂಗತಿಯೆಂದರೆ ಇಂತಹ ಚಟುವಟಿಕೆಯಲ್ಲಿ ತೊಡಗಿದವರಲ್ಲಿ ಬಹುತೇಕರು 11ರಿಂದ 17 ವರ್ಷದ ಒಳಗಿನ ಮಕ್ಕಳು. ಸುಳ್ಳು ವಯಸ್ಸನ್ನು ನಮೂದಿಸಿ ಯಾರು ಬೇಕಾದರೂ ಖಾತೆ ತೆರೆಯಬಹುದು ಎಂಬುದೂ ಅಷ್ಟೇ ಸತ್ಯ.
ಫೇಸ್‌ಬುಕ್, ಟ್ವಿಟ್ಟರ್, ಗೂಗಲ್ ಪ್ಲಸ್, ಆರ್ಕುಟ್, ಕ್ಲಬ್ ಪೆಂಗ್ವಿನ್, ಶೆಲ್ಫಾರಿ ಹೀಗೇ ಸಾಮಾಜಿಕ ಜಾಲತಾಣಗಳ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತ ಹೋಗುತ್ತಿದೆ. ಅದರ ಬಳಕೆದಾರರ ಸಂಖ್ಯೆಯೂ ಕೂಡ. ಉತ್ತಮ ಸಂವಹನ ಮತ್ತು ಮಾಹಿತಿ ವಿನಿಮಯದ ಅದ್ಭುತ ಮಾಧ್ಯಮ ಎಂದೇ ಬಿಂಬಿತವಾಗಿದ್ದ ಸಾಮಾಜಿಕ ಜಾಲತಾಣಗಳು ತಮ್ಮ ಮೂಲ ಉದ್ದೇಶಗಳನ್ನು ಮೀರಿ ಸಮೂಹ ವ್ಯಸನಗಳಾಗಿ ಬದಲಾಗುತ್ತಿವೆಯೇ? ಹೌದೆಂದಾದರೆ ಆ ವ್ಯಸನಕ್ಕೆ ಸರಿ ತಪ್ಪುಗಳ ವಿವೇಚನೆ ಇರದ ಮುಗ್ಧ ಮಕ್ಕಳು ಬಲಿಯಾಗುತ್ತಿರುವುದಕ್ಕೆ ಯಾರು ಹೊಣೆ? ಪ್ರಶ್ನೆಗಳು ಏಳುತ್ತವೆ. ಆದರೆ ಉತ್ತರ ಮಾತ್ರ ಸುಲಭದಲ್ಲಿ ಸಿಗುವುದಿಲ್ಲ.
ಕಳೆದ ವರ್ಷ ಮ್ಯಾಕೆಫೀ ಎಂಬ ಕಂಪನಿ ನಡೆಸಿದ 'ದಿ ಸಿಕ್ರೇಟ್ ಲೈವ್ಸ್ ಆಫ್ ಟೀನ್ಸ್‌' ಎಂಬ ಸಂಶೋಧನೆಯ ಪ್ರಕಾರ ಭಾರತದ ಹದಿಹರೆಯದ ಮಕ್ಕಳು ತಮ್ಮ ಬಿಡುವಿನ ಶೇ. 86 ಸಮಯವನ್ನು ಫೇಸ್‌ಬುಕ್‌ನಲ್ಲಿ ಕಳೆಯುತ್ತಾರೆ.

ಯಾಕೆ ಮಕ್ಕಳು ಇವುಗಳತ್ತ ಆಕರ್ಷಿತರಾಗುತ್ತಾರೆ?
ಮಕ್ಕಳು ಇಂತಹ ಅಂತರ್ಜಾಲ ಅಪರಾಧಗಳತ್ತ ಆಕರ್ಷಿತಗೊಳ್ಳಲು ಮುಖ್ಯ ಕಾರಣ ಕುತೂಹಲ. ಆಗ ತಾನೆ ಚಿಗುರೊಡೆಯುತ್ತಿರುವ ಹರೆಯಕ್ಕೆ ಲೈಂಗಿಕತೆಯ ಬಗ್ಗೆ ಕುತೂಹಲ, ಜನಪ್ರಿಯರಾಗುವ ಆಸೆ ಇದ್ದೇ ಇರುತ್ತದೆ. ಇಂಥ ವಿಷಯಗಳನ್ನು ಪಾಲಕರ ಅಥವಾ ಗೆಳೆಯರ ಜೊತೆ ಮುಕ್ತವಾಗಿ ಚರ್ಚಿಸುವುದೂ ಸಾಧ್ಯವಾಗುವುದಿಲ್ಲ. ಇದು ಅವರನ್ನು ಮುಕ್ತ ಸ್ವಾತಂತ್ರ್ಯ ನೀಡುವ ಅಂತರ್ಜಾಲದ ಕಡೆ ಹೋಗುವಂತೆ ಮಾಡುತ್ತದೆ. ಪಾಲಕರ ನಿರ್ಲಕ್ಷ್ಯ, ಏಕಾಕಿತನ, ಕೀಳರಿಮೆಗಳೂ ಅವರನ್ನು ಅಂತರ್ಜಾಲ ಅಪರಾಧಗಳತ್ತ ಪ್ರೇರೇಪಿಸುತ್ತವೆ.
ಇದು ಎಲ್ಲಿಗೆ ತಲುಪಬಹುದು?
ಆರಂಭದಲ್ಲಿ ಲಘುವಾಗಿ, ಕ್ಷಣಹೊತ್ತಿನ ಮಜಾಕ್ಕಾಗಿಯೇ ಆರಂಭಗೊಳ್ಳುವ ಈ ಚಟುವಟಿಕೆಗಳು ಕೊನೆಕೊನೆಗೆ ಗಂಭೀರವಾಗಿ ಎಳೆಯರ ಬದುಕನ್ನೇ ಬಲಿ ತೆಗೆದುಕೊಳ್ಳಬಹುದು. ಪಾಲಕರಿಂದ, ಹೊರಜಗತ್ತಿನಿಂದ ದೂರವಾಗಿ ಡಿಪ್ರೆಶನ್‌ಗೆ ಒಳಗಾಗುತ್ತಾರೆ. ಡ್ರಗ್ಸ್, ಮದ್ಯಪಾನ, ಧೂಮಪಾನಗಳಂತಹ ಚಟಗಳ ದಾಸರೂ ಆಗಬಹುದು. ಜಾಲತಾಣಗಳಲ್ಲಿ ಅನಾಮಿಕರ ಜೊತೆ ಜೋಡಿಸಿಕೊಳ್ಳುವ ಹೊಸ ಸಂಬಂಧಗಳು ಕೆಲವೊಮ್ಮೆ ವಿಪರೀತಕ್ಕೆ ಹೋಗಿ ಜೀವಕ್ಕೆ ಎರವಾಗುವ ಸಂದರ್ಭವೂ ಇಲ್ಲದಿಲ್ಲ.

ಪಾಲಕರು ಏನು ಮಾಡಬೇಕು?
ಇಷ್ಟೆಲ್ಲ ಅಪಾಯಗಳಿದ್ದರೂ ಮಕ್ಕಳನ್ನು ಸಾಮಾಜಿಕ ಜಾಲತಾಣಗಳಿಂದ ಪೂರ್ತಿಯಾಗಿ ನಿರ್ಬಂಧಿಸಲು ಸಾಧ್ಯವೂ ಇಲ್ಲ ಮತ್ತು ಅದು ಸಾಧುವೂ ಅಲ್ಲ. ಪಾಲಕರು ಮಕ್ಕಳನ್ನು ನಿಯಂತ್ರಿಸಲು ಒಂದು ದಾರಿ ಹುಡುಕಿದರೆ ಅವರ ಕಣ್ತಪ್ಪಿಸಲು ಮಕ್ಕಳು ನೂರು ದಾರಿ ಹುಡುಕಿಕೊಳ್ಳುತ್ತಾರೆ. ಬಲವಂತದಿಂದ, ಶಿಕ್ಷೆಯಿಂದ ಮಕ್ಕಳನ್ನು ಬದಲಾಯಿಸಲು ಸಾಧ್ಯವಿಲ್ಲ. ಸಾಧ್ಯವಾದಷ್ಟೂ ಮಕ್ಕಳ ಜೊತೆ ಸ್ನೇಹದಿಂದಿರಿ. ಬಹುತೇಕ ಅಪರಾಧಗಳು ಅರೆಬರೆ ತಿಳಿವಳಿಕೆಯಿಂದಲೇ ಆಗಿರುತ್ತವೆ. ಅಂತರ್ಜಾಲದ ಬಗ್ಗೆ, ಅದರ ಅಪರಾಧಗಳ ಬಗ್ಗೆ ವಿವರವಾಗಿ ತಿಳಿಸಿಕೊಡಿ. ನೀವೂ ಕೂಡ ಸಾಮಾಜಿಕ ಜಾಲತಾಣಗಳ ಚಟುವಣಿಕೆಗಳಲ್ಲಿ ಅವರ ಜೊತೆ ಭಾಗವಹಿಸಿ. ಅವುಗಳನ್ನು ಯಾವ ರೀತಿ ಸಕಾರಾತ್ಮಕವಾಗಿ ಬಳಸಿಕೊಳ್ಳಬಹುದು ಎಂಬುದನ್ನು ತಿಳಿಸಿಕೊಡಿ. ಮಕ್ಕಳಿಗೆ ಎಂದೂ ಏಕಾಕಿತನ ಕಾಡದಂತೆ ಎಚ್ಚರವಹಿಸಿ. ಸಾಮಾಜಿಕ ಜಾಲತಾಣಗಳ ಹೊರತಾಗಿಯೂ ಬದುಕಿನಲ್ಲಿ ಸಂತೋಷ ನೀಡುವ ಸಂಗತಿಗಳು ಇವೆ ಎಂಬುದನ್ನು ತಿಳಿಸಿ, ಅವುಗಳತ್ತ ಗಮನ ಸೆಳೆಯಿರಿ. ಓದು, ಸಂಗೀತ, ಆಟ ಹೀಗೆ ಉತ್ತಮ ಹವ್ಯಾಸವನ್ನು ಬೆಳೆಸಿಕೊಳ್ಳಲು ಪ್ರೋತ್ಸಾಹಿಸಿ.
ಹೀಗಾಗಿಯೂ ಮಕ್ಕಳಲ್ಲಿ ಒಮ್ಮಿಂದೊಮ್ಮೆಲೆ ಖಿನ್ನತೆ, ವ್ಯಗ್ರತೆ, ಹತಾಶೆ, ನಿದ್ರಾಹೀನತೆ, ಊಟಮಾಡದಿರುವುದು, ಅಭ್ಯಾಸದಲ್ಲಿ ನಿರಾಸಕ್ತಿ ಕಾಣಿಸಿದರೂ ನಿರ್ಲಕ್ಷಿಸದೆ ತಕ್ಷಣ ಮಕ್ಕಳ ತಜ್ಞರನ್ನು ಸಂಪರ್ಕಿಸಿ.

- ಪದ್ಮನಾಭ ಭಟ್ ಶೇವ್ಕಾರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.