ಶೆಟ್ಟಿ ಶಿಲ್ಪ
ಶ್ರೀಮಂತಿಕೆಗೆ ದಾನ ಗುಣದ ಕಿರೀಟ ಇಟ್ಟಂತಹ ವ್ಯಕ್ತಿತ್ವ ಡಾ.ಆರ್.ಎನ್. ಶೆಟ್ಟರದು. 1928ರ ಆಗಸ್ಟ್ 15ರಂದು ಜನಿಸಿದ ಅವರಿಗೆ...

ಶ್ರೀಮಂತಿಕೆಗೆ ದಾನ ಗುಣದ ಕಿರೀಟ ಇಟ್ಟಂತಹ ವ್ಯಕ್ತಿತ್ವ ಡಾ.ಆರ್.ಎನ್. ಶೆಟ್ಟರದು. 1928ರ ಆಗಸ್ಟ್ 15ರಂದು ಜನಿಸಿದ ಅವರಿಗೆ ನಾಳೆ 86 ತುಂಬುತ್ತಿದೆ.
'ರಾಮ ನಾಗಪ್ಪ ಶೆಟ್ಟಿ'ಯೆಂದರೆ ಯಾರಿಗೂ ಗೊತ್ತಾಗಲಾರದು. ಆದರೆ ಡಾ. ಆರ್.ಎನ್. ಶೆಟ್ಟಿ ಅಂದು ನೋಡಿ? ಮುರುಡೇಶ್ವರದ ಶಿವನೇ ಕಣ್ತೆರೆದಂತೆ, ಎಲ್ಲರಿಗೂ ಗೊತ್ತಾಗುತ್ತೆ.
ನಮ್ಮ ನಡುವಿನ ಸಾಧಕರಲ್ಲಿ ಇವರೊಬ್ಬರು. ಉದ್ಯಮಿ, ಗುತ್ತಿಗೆದಾರ ಎಂದರಷ್ಟೇ ಸಾಲದು. ದೇಶದ ಪ್ರಮುಖ ಸೇತುವೆ, ಮುಖ್ಯರಸ್ತೆ, ಸುರಂಗ, ನಾಲೆ, ಅಣೆಕಟ್ಟು, ವಿದ್ಯುತ್, ನೀರಾವರಿ, ಪ್ರಮುಖ ಕಟ್ಟಡ ಶಿಲ್ಪಗಳ ನಿರ್ಮಾಣದ ಹಿಂದೆ ಇವರ ಪರಿಶ್ರಮ ಇದೆ. ಉತ್ತರಕನ್ನಡ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮುರುಡೇಶ್ವರಕ್ಕೂ ಆರ್.ಎನ್. ಶೆಟ್ಟಿಯವರಿಗೂ ಜನುಮದ ನಂಟು. ಅವರು ತಾವೊಬ್ಬರೇ ಸಾಧನೆಯ ಮೆಟ್ಟಿಲೇರಲಿಲ್ಲ. ಹುಟ್ಟೂರಾದ ಮುರುಡೇಶ್ವರವನ್ನೂ ಉತ್ತಮ ಪ್ರವಾಸಿ ಸ್ಥಳವಾಗಿ ರೂಪಿಸಿದರು.
ಮರುಡೇಶ್ವರನ ದೇವಾಲಯದ ಜೀರ್ಣೋದ್ಧಾರ, 249 ಅಡಿ ಎತ್ತರದ ಮಹಾರಾಜ ಗೋಪುರ, ಪಕ್ಕದಲ್ಲಿಯೇ 123 ಅಡಿ ಎತ್ತರದ ಶಿವನ ಮೂರ್ತಿ ನಿರ್ಮಾಣದ ಕ್ರೆಡಿಟ್ ಇವರದೇ. ಅರಬ್ಬೀ ಸಮುದ್ರ ಕಿನಾರೆಯ ತೆರೆಗಳ ಆಟಕ್ಕೆ ಇವರ 'ನವೀಸ್ ಬೀಚ್ ರೆಸಾರ್ಟ್' ಮತ್ತು 'ಆರ್ಎನ್ಎಸ್ ರೆಸಿಡೆನ್ಸಿ'ಗಳ ಕೋಣೆಯ ಕಿಟಕಿಯಿಂದ ಕೈಚಾಚಿ ಜತೆಯಾಗಬಹುದು.
ಮುರುಡೇಶ್ವರ ಒಂದನ್ನೇ ಉದಾಹರಿಸಿದರೆ ಶೆಟ್ಟಿಯವರ ವ್ಯಕ್ತಿತ್ವದ ಬಗ್ಗೆ ಏನೂ ಹೇಳಿದಂತಾಗದು. ಕನಸಿಗಿಂತಲೂ ಗುರಿ ಮುಖ್ಯ ಎಂಬ ಮಾತಿಗೆ ಶೆಟ್ಟರು ಉದಾಹರಣೆ.ಅವರು ಕಂಡ ಕನಸು ನನಸಾಗಿಸಲು ತೊಡಗಿದ್ದು ಇಂದು ನಿನ್ನೆಯಲ್ಲ. ಭಾರತಕ್ಕೆ ಸ್ವಾತಂತ್ರ್ಯ ಬಂದು ಕೆಲವೇ ವರ್ಷಗಳಾಗಿತ್ತು. ಯಾವ ಸೌಲಭ್ಯಗಳೂ ಇರಲಿಲ್ಲ. ಅಂತಹ ಕಾಲದಲ್ಲಿ ಶಿರಸಿಯಲ್ಲಿ ಸಿವಿಲ್ ಗುತ್ತಿಗೆದಾರರಾಗಿ ಕೆಲಸ ಆರಂಭಿಸಿದರು. ನಂತರ ಆರ್.ಎನ್. ಶೆಟ್ಟಿ ಆ್ಯಂಡ್ ಕಂಪನಿ ಸ್ಥಾಪಿಸಿದರು. ಅಣೆಕಟ್ಟು, ನಾಲೆ, ಸೇತುವೆ, ರಸ್ತೆ, ವಿದ್ಯುತ್, ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಂಡರು. ನಂತರ ನವೀನ್ ಮೆಕನೈಸ್ಡ್ ಕನ್ಸ್ಟ್ರಕ್ಷನ್ ಕಂಪನಿಯೂ ಕೂಡ ಇದೇ ಹಾದಿಯಲ್ಲಿ ಸಾಗಿತು. ಕೊಂಕಣ ರೈಲ್ವೆಗಾಗಿ ಹಲವಾರು ಸುರಂಗ ಮಾರ್ಗಗಳನ್ನು ನಿರ್ಮಿಸಿತು.
ಸ್ಥಳೀಯ ಜನರಿಗೆ ಉದ್ಯೋಗ ನೀಡಲೆಂದು ಸೃಷ್ಟಿಯಾದದ್ದು ಮುರುಡೇಶ್ವರ ಸೆರಾಮಿಕ್ಸ್ ಮತ್ತು ಮರುಡೇಶ್ವರ ಟೈಲ್ಸ್ಗಳು. ಇವು ಕರಾವಳಿ ಕರ್ನಾಟಕದ ಅತಿ ದೊಡ್ಡ ಟೈಲ್ಸ್ ಉದ್ಯಮಗಳು. ಮಾರುತಿ ಉದ್ಯೋಗ್ ಸಹಯೋಗದಲ್ಲಿ 1995ರಲ್ಲಿ ಆರ್ಎನ್ಎಸ್ ಮೋಟಾರ್ಸ್ ಕಾರು ಮಳಿಗೆ ಹುಬ್ಬಳ್ಳಿಯಲ್ಲಿ ಆರಂಭವಾಯಿತು. ಮುರುಡೇಶ್ವರ, ಬೆಂಗಳೂರು, ವಿಜಾಪುರದಲ್ಲಿಯೂ ಮಳಿಗೆಗಳಿವೆ.
ಸ್ವತಃ ಶೆಟ್ಟಿಯವರಿಗೆ ಪ್ರೌಢಶಿಕ್ಷಣದ ನಂತರ ಕಲಿಕೆ ಅಸಾಧ್ಯವಾಗಿದ್ದರೂ, ಹಳ್ಳಿಯಿಂದ ಪಟ್ಟಣಕ್ಕೆ ಬಂದು ಕಾಲೇಜು ಶಿಕ್ಷಣ ಪಡೆಯುವವರ ಬಗ್ಗೆ ಹೆಚ್ಚಿನ ಒಲವು. ಇತರರಿಗೆ ಕಲಿಸಲು ಶೆಟ್ಟರು ಹಿಂದೆ ಬೀಳಲಿಲ್ಲ. ಆರ್.ಎನ್. ಶೆಟ್ಟಿ ಟ್ರಸ್ಟ್ ಹುಟ್ಟು ಹಾಕಿ ಮುರುಡೇಶ್ವರದಲ್ಲಿ ಪಾಲಿಟೆಕ್ನಿಕ್, ಪದವಿ ಪೂರ್ವ ಕಾಲೇಜು ಆರಂಭಿಸಿದರು. ಹುಬ್ಬಳ್ಳಿಯಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್, ಬೆಂಗಳೂರಿನಲ್ಲಿ ಪಬ್ಲಿಕ್ ಸ್ಕೂಲ್ನಿಂದ ಹಿಡಿದು ಪಿಯುಸಿ, ಡಿಗ್ರಿ, ಮಾಸ್ಟರ್ ಡಿಗ್ರಿ, ಇಂಜಿನಿಯರಿಂಗ್ ಕಾಲೇಜುಗಳಿವೆ. ಬೆಂಗಳೂರಿನಲ್ಲಿರುವ ಕ್ಯಾಂಪಸ್ನಲ್ಲಿ ಸುಂದರವಾದ ಶಿವ ದೇವಾಲಯ ವಿಶೇಷ.
ತಮ್ಮ ಟ್ರಸ್ಟ್ನಿಂದ ಬೇರೆ ಶಾಲೆಗಳಿಗೆ ಕಟ್ಟಡ, ಕ್ಲಾಸ್ರೂಂ, ಸ್ಕಾಲರ್ಶಿಪ್, ಸಮವಸ್ತ್ರ, ಪಠ್ಯಪುಸ್ತಕ ನೀಡುವ ಕಾರ್ಯಕ್ರಮಗಳು ನಿರಂತರ. ತಾವು ಕಲಿತ ಶಾಲೆಗೆ ನೂರು ವರ್ಷವಾದಾಗ ಅದನ್ನು ನವೀಕರಿಸಿ ಹೊಸ ಕಟ್ಟಡ ನಿರ್ಮಿಸಿ ಕೊಟ್ಟಿದ್ದು ಅವರ ಗುಣಕ್ಕೊಂದು ಸಣ್ಣ ಉದಾಹರಣೆ.
ಕೆಲವು ಧಾರ್ಮಿಕ ಮಠಗಳಿಗೆ ಸ್ಥಳದಾನ ಮಾಡಿ ಅಲ್ಲಿನ ಶೈಕ್ಷಣಿಕ ಸಂಸ್ಥೆಗಳ ಏಳಿಗೆ, ಬಡ ಮಕ್ಕಳ ಉದ್ಧಾರಕ್ಕಾಗಿ ಶ್ರಮಿಸಿದರು. ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಎಂಟು ಚಿನ್ನದ ಪದಕ ನೀಡಲು ವ್ಯವಸ್ಥೆ ಮಾಡಿದ್ದಾರೆ.
ಶೆಟ್ಟರ ಸೇವೆ ಗಮನಿಸಿ ವಿಶ್ವೇಶ್ವರ ಮೆಮೋರಿಯಲ್ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೆಎಸ್ಎಸ್ಐಎ ಕೈಗಾರಿಕಾ ರತ್ನ ಪ್ರಶಸ್ತಿ, ಬೆಂಗಳೂರು ವಿವಿ ಗೌರವ ಡಾಕ್ಟರೇಟ್ಗಳು ಸಂದಿವೆ. ಸರಳ ಸಜ್ಜನಿಕೆಯಿಂದ ಗುರುತಿಸಿಕೊಂಡ ಆರ್.ಎನ್. ಶೆಟ್ಟಿ ಹುಟ್ಟಿದ್ದು ಆಗಸ್ಟ್ 15, 1928ರಂದು. ನಾಳೆ 86ನೇ ವರ್ಷಕ್ಕೆ ಕಾಲಿಡಲಿದ್ದಾರೆ.
ಶೆಟ್ಟಿಯವರ ವ್ಯಕ್ತಿತ್ವ ಹೇಗೆ ಅನನ್ಯವೋ, ಅವರ ನಿರ್ಮಾಣದ ಕಟ್ಟಡಗಳೂ. ಬಿಳಿ ಹಾಗೂ ಕಂದು ಪಟ್ಟಿಯ ಟೈಲ್ಸ್ಗಳ ಬಳಕೆಯಿಂದಲೇ ಇವನ್ನು ಗುರುತಿಸಬಹುದು!
- ಸುಧೀರ್ ಪೈ ಕೆ.ಎಲ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


