ಐಟಿ ಕಂಪು
ಸಂಪೂರ್ಣ ಹವಾನಿಯಂತ್ರಿತವಾದ ಬೃಹತ್ ಕಟ್ಟಡಗಳು. ಒಂದೊಂದು ಬಿಲ್ಡಿಂಗ್ನಲ್ಲೂ ಅದೆಷ್ಟೋ ಕಂಪನಿಗಳು...

ಸಂಪೂರ್ಣ ಹವಾನಿಯಂತ್ರಿತವಾದ ಬೃಹತ್ ಕಟ್ಟಡಗಳು. ಒಂದೊಂದು ಬಿಲ್ಡಿಂಗ್ನಲ್ಲೂ ಅದೆಷ್ಟೋ ಕಂಪನಿಗಳು. ದೃಷ್ಟಿ ಹಾಯಿಸಿದಷ್ಟೂ ದೂರವೂ ಕಾಣುವ ಕಂಪ್ಯೂಟರ್ಗಳು. ಅವುಗಳ ಮುಂದೆ ಕುಳಿತು ಅವಿರತವಾಗಿ ಟಕಟಕನೆ ಗುಂಡಿ ಅದುಮುತ್ತಿರುವ ಟೆಕ್ಕಿಗಳು.
ಮಾಹಿತಿ ತಂತ್ರಜ್ಞಾನ ಎಂದೊಡನೆ ನಮ್ಮ ಕಣ್ಮುಂದೆ ಬರುವ ಚಿತ್ರ ಇದೇ ತಾನೆ? 'ಪಾಪ, ಟೆಕ್ಕಿಗಳಿಗೆ ಕೆಲಸದ ನಡುವೆ ವೈಯಕ್ತಿಕ ಜೀವನವೇ ಇಲ್ಲ' ಎನ್ನುವ ಭಾವನೆಯೂ ಸಾರ್ವತ್ರಿಕ. ಇಂಥ ಕಲ್ಪನೆಗಳನ್ನು ಸುಳ್ಳಾಗಿಸುವ ಚಿತ್ರಣ ಬೆಂಗಳೂರಿನ ವೈಟ್ಫೀಲ್ಡ್ನಲ್ಲಿರುವ 'ಇಂಟರ್ನ್ಯಾಶನಲ್ ಟೆಕ್ಪಾರ್ಕ್ ಬೆಂಗಳೂರು' (ಐಟಿಪಿಬಿ) ಇಲ್ಲಿ ಕಾಣಸಿಗುತ್ತದೆ.
ಐಟಿಪಿಬಿಯಲ್ಲಿ ಟೆಕ್ಕಿಗಳು ಶಾಪಿಂಗ್ ಮಾಡಬಹುದು. ಹೊಸ ಚೈತನ್ಯ ಪಡೆಯಲು ಕ್ರೀಡಾಂಗಣದಲ್ಲಿ ಆಟವಾಡಬಹುದು. ಥಿಯೇಟರ್ ಹೋಗಿ ಸಿನಿಮಾ ನೋಡಬಹುದು. ಹಾಡಲು, ನೃತ್ಯ ಮಾಡಲು ಮುಕ್ತ ಅವಕಾಶ. ದಣಿವಾರಿಸಿಕೊಳ್ಳಲು ಪಾರ್ಕ್ಗೂ ಹೋಗಬಹುದು. 'ವರ್ಕ್-ಲೀವ್-ಪ್ಲೇ' ಎಂಬ ಕಲ್ಪನೆ ಇಲ್ಲಿ ಅಕ್ಷರಶಃ ಸಾಕಾರವಾಗಿದೆ.
'ವರ್ಕ್-ಲೀವ್-ಪ್ಲೇ' ಸಾಧ್ಯ ಎಂಬುದನ್ನು ಐಟಿ ಕಂಪನಿಗಳಿಗೆ ತೋರಿಸಿಕೊಟ್ಟಿದ್ದು ಎಸೆಂಡಾಸ್ ಗ್ರೂಪ್ನ ಐಟಿಪಿಬಿ ಸಂಸ್ಥೆ. 'ಟೆಕ್ಕಿಗಳ ಜೀವನ ಎಂದರೆ ಕೇವಲ ಕಂಪ್ಯೂಟರ್, ಎ.ಸಿ ರೂಮು ಅಷ್ಟೇ' ಎಂದು ಮೂಗು ಮುರಿಯುವವರಿಗೆ, 'ಇದಕ್ಕಿಂತ ಹೆಚ್ಚು ಇನ್ನೇನು ಬೇಕು' ಎಂದು ಹೆಮ್ಮೆಯಿಂದಲೇ ಕೇಳುತ್ತಿದೆ ಎಸೆಂಡಾಸ್. ಕ್ರೀಡಾಂಗಣ, ಮಲ್ಟಿಫ್ಲೆಕ್ಸ್, ಜಿಮ್, ಪಾರ್ಕ್ಗಳಷ್ಟೇ ಅಲ್ಲದೇ ಐಟಿಪಿಬಿಯಲ್ಲಿನ ಉದ್ಯೋಗಿಗಳಿಗೆ ತಮ್ಮ ಸಾಂಸ್ಕೃತಿಕ ಪ್ರತಿಭೆ ತೋರಿಸಲು ಪ್ರತಿವರ್ಷ ಸ್ಪರ್ಧೆಗಳನ್ನು ಆಯೋಜಿಸುತ್ತಿದೆ. ಈ ವರ್ಷ 'ಎಸೆಂಡಾಸ್ ವಾಯ್ಸ್' ಗಾಯನ ಸ್ಪರ್ಧೆ ಏರ್ಪಡಿಸಿತ್ತು. ಆಸ್ಪತ್ರೆ, ರೆಸ್ಟೊರೆಂಟ್, ಕೆಫೆ, ವಿಮಾ ಸೇವೆ, ಫೋರೆಕ್ಸ್ ಸೇವೆ, ಬ್ಯಾಂಕಿಂಗ್ ಸೇವೆ ಹೀಗೆ ಸೇವೆಗಳ ಆಗರವೇ ಇಲ್ಲಿದೆ. ಇಲ್ಲಿನ ಬಹುತೇಕ ಅವಿವಾಹಿತ ಉದ್ಯೋಗಿಗಳು ಐ.ಟಿ.ಪಿ.ಬಿಯ ಗೆಟ್ ಟುಗೆದರ್ ಹಾಲ್ನಲ್ಲೇ ಮದುವೆ ಮಾಡಿಕೊಳ್ಳುತ್ತಿರುವುದೂ ವಿಶೇಷ. 2000 ಕಾರ್ ನಿಲ್ಲಿಸಬಹುದಾದ 'ಮಲ್ಟಿಲೆವಲ್ ಪಾರ್ಕಿಂಗ್' ಸೌಲಭ್ಯವೂ ಇದೆ.
ಪರಿವರ್ತನೆಯ ಹರಿಕಾರ
ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಚಟುವಟಿಕೆಗಳು ಆರಂಭದಿಂದಲೂ ವ್ಯಾಪಿಸಿಕೊಂಡಿದ್ದು ವೈಟ್ಫೀಲ್ಡ್ನಲ್ಲಿ. ಆಗ ಇದು ಇಂಟರ್ನ್ಯಾಶನಲ್ ಟೆಕ್ ಪಾಕ್ ಲಿಮಿಟೆಡ್ ಅಥವಾ ಐಟಿಪಿಎಲ್ ಆಗಿತ್ತು. ಎರಡು ದಶಕಗಳ ಹಿಂದಿನ ಐಟಿಪಿಎಲ್ ನೋಡಿದ್ದವರು ಇಂದು ಕಣ್ಣರಳಿಸುತ್ತಾರೆ. ಅಲ್ಪಾವಧಿಯಲ್ಲಿ ಊಹಾತೀತ ಬೆಳವಣಿಗೆ ಆಗಿರುವುದನ್ನು ನೋಡಿ ಮೂಗಿನ ಮೇಲೆ ಬೆರಳಿಡುತ್ತಾರೆ. 1994ರಲ್ಲಿ ಸಿಂಗಾಪುರ ಮೂಲದ ಎಸೆಂಡಾಸ್ ಗ್ರೂಪ್ನ 'ಇಂಟರ್ ನ್ಯಾಷನಲ್ ಟೆಕ್ ಪಾರ್ಕ್ ಬೆಂಗಳೂರು' ವೈಟ್ಫೀಲ್ಡ್ಗೆ ಕಾಲಿಟ್ಟಿದ್ದೇ ಇಂಥದ್ದೊಂದು ಪರಿವರ್ತನೆಗೆ ಮೂಲ. ಐಟಿಪಿಎಲ್ನಲ್ಲಿನ ಶೇ 92.8ರಷ್ಟು ಶೇರುಗಳನ್ನು ಪಡೆದುಕೊಂಡ ಐಟಿಪಿಬಿ, ಈ ಟೆಕ್ ಪಾರ್ಕ್ ಅನ್ನು ಜಾಗತಿಕ ಮಟ್ಟದಲ್ಲಿ ಸಜ್ಜುಗೊಳಿಸುವ ಹೊಣೆ ಹೊತ್ತುಕೊಂಡಿತು. 1992ರಲ್ಲೇ ಅಂದಿನ ಸಿಂಗಾಪುರ ಪ್ರಧಾನಿ ಘೋ ಚೊಕ್ ತಾಂಗ್ ಹಾಗೂ ಭಾರತ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರು ಇಂಡಸ್ಟ್ರಿಯಲ್ ಪಾರ್ಕ್ ಪ್ರೊಜೆಕ್ಟ್ಗೆ ಸಹಿ ಹಾಕಿದ್ದರು.
ಎಸೆಂಡಾಸ್ ಗ್ರೂಪ್ನ ಐಟಿಪಿಬಿ ಸಂಸ್ಥೆಯ ನಡೆ 2000ನೇ ಇಸವಿಯಲ್ಲಿ ವೇಗ ಕಂಡುಕೊಂಡಿತು. ಜಗತ್ತಿನ ಬೇರೆ ಬೇರೆ ಪ್ರತಿಷ್ಠಿತ ಕಂಪನಿಗಳು ಮಾಲ್ಗಳನ್ನು ಹಾಕಲು ಮುಂದೆ ಬಂದವು. 2007ರಲ್ಲಿ 200 ಕೊಠಡಿಗಳ ಪಂಚತಾರಾ ಹೋಟೆಲ್ 'ವಿವಾಂತ' ಅನ್ನು ತಾಜ್ ಗ್ರೂಪ್ ಐಟಿಪಿಬಿಯಲ್ಲಿ ಪ್ರಾರಂಭಿಸಿತು. 2011ರಲ್ಲಿ ಪಾರ್ಕ್ ಸ್ಕ್ವೇರ್ ಮಾಲ್ ಇಲ್ಲಿಗೆ ಬಂದಿತು. ಇದು ಐಟಿ ಕ್ಷೇತ್ರದಲ್ಲೇ ವಿನೂತನ ಮೈಲಿಗಲ್ಲು. ದೇಶ ವಿದೇಶಗಳ 140 ಪ್ರಖ್ಯಾತ ಕಂಪನಿಗಳ ಮಳಿಗೆಗಳು ಇಲ್ಲಿವೆ. ಐಟಿಪಿಬಿಯಲ್ಲಿ ಕೆಲಸ ನಿರ್ವಹಿಸುವವರೊಂದಿಗೆ ವೈಟ್ಫೀಲ್ಡ್ನ ಜನತೆಗೂ ಪಾರ್ಕ್ ಸ್ಕ್ವೇರ್ ಮಾಲ್ ಖರೀದಿಗೆ ಅವಕಾಶ ಕಲ್ಪಿಸಿದೆ.
ಇಂದು ಐಟಿಪಿಬಿಯಲ್ಲಿ ಆರು ಬೃಹತ್ ಸಮುಚ್ಚಯಗಳಿವೆ. ಸುಮಾರು 20 ಲಕ್ಷ ಚದರ ಅಡಿ ವಿಸ್ತೀರ್ಣದ ಕಟ್ಟಡಗಳಲ್ಲಿ ನೂರಾರು ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಅಂದಾಜು 30,000 ಉದ್ಯೋಗಿಗಳಿದ್ದಾರೆ. ಇಂಥ ಬೃಹತ್ ಸಂಖ್ಯೆಯ ಉದ್ಯೋಗಿಗಳಿಗೆ ಎಲ್ಲಾ ರೀತಿಯ ಸೌಕರ್ಯ ಒದಗಿಸಿರುವುದು ಐಟಿಪಿಬಿ ಹೆಗ್ಗಳಿಕೆ.
ಐಟಿಪಿಬಿ ತನ್ನದೇ ಆದ ವಿದ್ಯತ್ ತಯಾರಿಕ ಘಟಕ ಹೊಂದಿದೆ. ಸಂಸ್ಥೆಯಡಿ ಬರುವ ಎಲ್ಲಾ ಮಳಿಗೆ ಹಾಗೂ ಕಂಪನಿಗಳಿಗೆ ವಿದ್ಯುತ್ ಹರಿಸುತ್ತಿದೆ. ಕೆಲ ಸಂದರ್ಭಗಳಲ್ಲಿ ಮಾತ್ರ ಬೆಸ್ಕಾಂ ಸಂಸ್ಥೆಯನ್ನು ಅವಲಂಬಿಸುತ್ತಿದೆ.
- ಮಂಜುನಾಥ್ .ಎಲ್.ಕೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


