ಸ್ನಾನ ಸೇವೆ

ಒಬ್ಬೊಬ್ಬರು ಒಂದೊಂದು ರೀತಿಯ ಸಮಾಜ ಸೇವೆಯಲ್ಲಿ ತೊಡಗಿಕೊಂಡು ತೃಪ್ತಿ ಕಾಣುತ್ತಾರೆ. ಇಲ್ಲೊಬ್ಬರು ಅಚ್ಚರಿ ಮೂಡಿಸುವ ರೀತಿಯ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಅದೇ ಶವ ಸ್ನಾನ ಸೇವೆ.
ಅವರ ಹೆಸರು ಲಿಯೋ ಥಾಮಸ್, 58ರ ಹರೆಯ. ಜನಿಸಿದ್ದು ಮುಂಬೈನಲ್ಲಾದರೂ, ಶಿವಮೊಗ್ಗದಲ್ಲಿ ನೆಲೆಸಿ ಅರ್ಧ ಶತಮಾನ ಕಳೆದಿದೆ. ಆಟೋ ಕ್ಲಚ್ ಕಾರ್ಖಾನೆಯಲ್ಲಿ ಪ್ರೊಡಕ್ಷನ್ ಮ್ಯಾನೇಜರ್, ಸೇಲ್ಸ್ ಆ್ಯಂಡ್ ಪ್ಲಾನಿಂಗ್ ಹುದ್ದೆ ಹೊಂದಿದ್ದರು. ಕೌಟುಂಬಿಕ ಸಮಸ್ಯೆ ಕಾರಣ ಕೆಲಸ ತೊರೆದಿದ್ದು, ಈ ಸೇವೆಯಲ್ಲಿ ತಮ್ಮನ್ನು ಪೂರ್ತಿಯಾಗಿ ತೊಡಗಿಸಿಕೊಂಡಿದ್ದಾರೆ.
ನಿಸ್ವಾರ್ಥ ಸೇವೆಯಲ್ಲಿ ತೊಡಗಿರುವ ಅವರು, ಜಾತಿ, ಧರ್ಮ ಎನ್ನದೆ ಪ್ರತಿಯೊಂದು ಜನಾಂಗದಲ್ಲಿ ಸಾವನ್ನಪ್ಪಿರುವವರ ಶವವನ್ನು ಸಂಕೋಚವಿಲ್ಲದೆ ಸ್ನಾನ ಮಾಡಿಸುತ್ತಾರೆ. ಅದು ಹೆಣ್ಣಾಗಲಿ- ಗಂಡಾಗಲಿ, ಇವರ ಸೇವೆಗೆ ಭೇದವಿಲ್ಲ. ಇವರ ಈ ನಿಸ್ವಾರ್ಥ ಸೇವೆಗೆ ಪ್ರೇರಣೆಯಾಗಿದ್ದು ಸ್ನೇಹಿತ ಲೋಯಾಲಾ ಮುತ್ತು. ಇಂದು ಆ ಸ್ನೇಹಿತ ಜೊತೆಗಿಲ್ಲ, ಇಹಲೋಕ ತ್ಯಜಿಸಿದ್ದಾರೆ. ಆದರೂ ಥಾಮಸ್, ತಮ್ಮ ಸ್ನೇಹಿತನಿಂದ ಬಳವಳಿಯಾಗಿ ಪಡೆದ ಶವ ತೊಳೆಯುವ ಕಾರ್ಯವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಮೃತ ವ್ಯಕ್ತಿ ಯಾವುದೇ ಕಾಯಿಲೆಯಿಂದ ಸಾವನ್ನಪ್ಪಿದ್ದರೂ ಸೇವೆ ಸಲ್ಲಿಸಲು ಮುಜುಗರ ಮಾಡಿಕೊಳ್ಳುವುದಿಲ್ಲ. ಇವರು ಸ್ವಚ್ಛಗೊಳಿಸಿದ ಶವಗಳ ಸಂಖ್ಯೆ ಶತಕ ಮುಟ್ಟಿದೆ.
ಇವರ ಪತ್ನಿ ಕೂಡ ಈ ರೀತಿಯ ಕಾರ್ಯದಲ್ಲಿ ತೊಡಗಿದ್ದರು. ಇಂದು ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಥಾಮಸ್ ತಮ್ಮ ಸೇವೆಯ ಜತೆಗೆ ಹಾಸಿಗೆ ಹಿಡಿದ ಪತ್ನಿಯ ಸೇವೆಯನ್ನೂ ಮಾಡುತ್ತಾರೆ. ಇವರ ಮಗ ದೂರದ ಊರಿನಲ್ಲಿ ಉದ್ಯೋಗದಲ್ಲಿದ್ದಾರೆ.
ಹ್ಯಾಪಿ ಹೋಮ್
ಹ್ಯಾಪಿ ಹೋಮ್ ಎಂಬ ಸಾಮಾಜಿಕ ಕಳಕಳಿ ಇರುವ ಸಂಸ್ಥೆಯೊಂದನ್ನು ಮಾಡಿಕೊಂಡಿರುವ ಇವರು, ತಮ್ಮ ಅಧ್ಯಕ್ಷತೆಯಲ್ಲಿ ಅನೇಕ ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಈ ಟ್ರಸ್ಟ್‌ನಿಂದ ಆರ್ಥಿಕವಾಗಿ ಹಿಂದುಳಿದವರನ್ನು ಗುರುತಿಸಿ, ಅವರ ಕಷ್ಟಗಳಿಗೆ ನೆರವಾಗುವುದು, ಕಾಯಿಲೆ ಇದ್ದಲ್ಲಿ ಅವರ ಚಿಕಿತ್ಸೆಗೆ ಆರ್ಥಿಕವಾಗಿ ಸಹಾಯ ಮಾಡುವ ಉದ್ದೇಶ ಟ್ರಸ್ಟ್‌ನದು. ಲಿಯೋ ಥಾಮಸ್‌ಗೆ ತಮ್ಮ ಕಾರ್ಯದ ಬಗ್ಗೆ ತೃಪ್ತಿ ಇದೆ. ಸಂಪರ್ಕ: 95356 88001, 95388 39940.
- ಮೋಹನ್ ಕುಮಾರ್ ಎನ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


