ಬೈಟುಕಾಫಿ

ಗ್ರಾಮೀಣ ಜನರ ಜೀವನಾಡಿ

Published On :

ಇತ್ತೀಚೆಗೆ ಸಂಭವಿಸಿದ ಅಪಘಾತಗಳನ್ನು ಅವಲೋಕಿಸಿದಾಗ ಖಾಸಗಿ ಬಸ್‌ಗಳದ್ದೇ ಸಿಂಹಪಾಲು. ಮಾಲೀಕರ ಅತಿಯಾಸೆಯಲ್ಲದೆ ನಿಗದಿಗಿಂತ ಹೆಚ್ಚಿನ ಜನರನ್ನು ಕುರಿಯಂತೆ ತುಂಬಿಕೊಂಡು ಹೋಗುವುದು ಮಾಮೂಲಿ. ಬೇಕೆಂದಲ್ಲಿ ನಿಲ್ಲಿಸಬಹುದೆಂಬ ಪ್ರಯಾಣಿಕರ ಅನುಕೂಲ ಸಿಂಧುತ್ವ, ಪ್ರಯಾಣಿಕರಿಗೆ ಕಡಿಮೆ ದರದ ಲಾಲಸೆ ಖಾಸಗಿಯವರಿಗೆ ವರವಾಗಿದೆ. ಬಹುತೇಕ ಅಪಘಾತಗಳಿಗೆ ಚಾಲಕರು ಹುಂಬತನವೇ ಕಾರಣ. ಶಿಸ್ತು, ಸಮಯ ಪಾಲನೆ, ಸುರಕ್ಷತೆ, ವಿಮಾ ಸೌಲಭ್ಯಗಳಿಲ್ಲದ ಖಾಸಗಿ ಬಸ್ ಪ್ರಯಾಣ ದೇವರಿಗೇ ಪ್ರೀತಿ. ಹೀಗಿದ್ದರೂ ಚುನಾವಣೆ ಸಂದರ್ಭದಲ್ಲಿ ಮತಗಟ್ಟೆ ಸಿಬ್ಬಂದಿಯನ್ನು ಹೊತ್ತು ತಂದಾಗಲೇ ಸರ್ಕಾರಿ ಬಸ್ಸಿನ ಮುಖ ನೋಡುವ ಉತ್ತರ ಕರ್ನಾಟಕದ ಅದೆಷ್ಟೋ ಗ್ರಾಮೀಣ ಪ್ರದೇಶದ ಜನರಿಗೆ ಖಾಸಗಿ ಬಸ್ಸುಗಳೇ ಜೀವನಾಡಿ. ಅಸುರಕ್ಷಿತವೆಂದು ಗೊತ್ತಿದ್ದರೂ ಅವರಿಗೆ ಇದು ಅನಿವಾರ್ಯ. ಇನ್ನಾದರೂ ಸರ್ಕಾರ ಇಂತಹ ಕಡೆಗಣಿಸಲ್ಪಟ್ಟ ಸ್ಥಳಗಳಿಗೂ ಸಾರಿಗೆ ಸಂಪರ್ಕ ಕಲ್ಪಿಸಿ ಸುರಕ್ಷಿತ ಪ್ರಯಾಣಕ್ಕೆ ಅನುವು ಮಾಡಿಕೊಡಬೇಕು.
- ಅಶೋಕ ಬಳ್ಳಾ, ಸೂಳೇಭಾವಿ

ತರಬೇತಿಗೆ ಹೆಚ್ಚಿನ ಆದ್ಯತೆ ಇರಲಿ
ಪ್ರಯಾಣವೆಂದಾಕ್ಷಣ ಪ್ರತಿಯೊಬ್ಬ ಪ್ರಯಾಣಿಕನೂ ಆಲೋಚಿಸುವುದು ಸುರಕ್ಷತೆ, ಸೌಲಭ್ಯ. ನಂತರದ ನಿರ್ಧಾರ ಖಾಸಗಿ ಬಸ್ ಪ್ರಯಾಣವೋ ಸರ್ಕಾರಿ ಬಸ್ ಪ್ರಯಾಣವೋ ಎಂದು. ಇಂದು ಜೀವ ರಕ್ಷಣೆ ಮತ್ತು ಮಾನ ರಕ್ಷಣೆ ಎರಡರ ಕಡೆಗೂ ಗಮನಕೊಡಬೇಕಾಗಿದೆ. ಇತ್ತೀಚೆಗಷ್ಟೇ ರಾಜ್ಯದಲ್ಲಿ ನಡೆದ ಖಾಸಗಿ ಬಸ್ ದುರಂತಗಳನ್ನು ನೋಡಿದರೆ ಜನರ ಪ್ರಾಣಕ್ಕಿಲ್ಲ ರಕ್ಷಣೆ. ಖಾಸಗಿ ಬಸ್ ಮಾಲೀಕರು ಹೆಚ್ಚಿನ ಲಾಭದಾಸೆಗೆ ಸಿಬ್ಬಂದಿಗೆ ಕಡಿಮೆ ಸಂಬಳ ಕೊಟ್ಟು ದೂರ ಪ್ರಯಾಣಗಳಿಗಲ್ಲದೇ, ರಾತ್ರಿ ಪಾಳಿಗಳಿಗೂ ವಿಶ್ರಾಂತಿ ಕೊಡದೆ ದುಡಿಸಿಕೊಂಡರೆ ಅಪಘಾತಗಳು ಆಗುವುದೇನು ಸೋಜಿಗವೇನಲ್ಲ. ಖಾಸಗಿ ಬಸ್ ಮಾಲೀಕರು ಚಾಲಕರಿಗೆ ಬೇಕಾದ ತರಬೇತಿಗಳನ್ನು ಕೊಡಿಸಿದ ನಂತರವಷ್ಟೇ ಬಸ್ ಚಾಲನೆ ಮಾಡಲು ಕಳುಹಿಸಬೇಕು.
- ಪ್ರತಿಮಾ ಪ್ರದೀಪ ಮರಳಿ, ಬೆಂಗಳೂರು

ಸರ್ಕಾರದ ನಿರ್ಲಕ್ಷ್ಯ
ನಮ್ಮ ನಾಗರೀಕರು ಹಣದ ಉಳಿತಾಯಕ್ಕಾಗಿ ಖಾಸಗಿ ಬಸ್‌ಗಳಲ್ಲಿ ಪ್ರಯಾಣ ಬೆಳೆಸುತ್ತಾರೆ. ಇವರು ನಿಲ್ದಾಣವಲ್ಲದ ಕಡೆಯು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಬಸ್ ನಿಲ್ಲಿಸಿ ಸಹಕರಿಸುತ್ತಾರೆ. ಹಾಗಾಗಿ ಪ್ರಯಾಣಿಕರು ಖಾಸಗಿ ಬಸ್ಸಿಗೆ ಜೋತು ಬೀಳುತ್ತಾರೆ. ದೂರದ ಪ್ರಯಾಣದಲ್ಲಿ ಚಾಲಕರು ತಮ್ಮ ಕ್ಲೀನರ್‌ಗೆ ಬಸ್ ಚಲಾಯಿಸಲು ಬಿಟ್ಟು ತಾವು ವಿಶ್ರಾಂತಿ ತೆಗೆದು ಕೊಳ್ಳುತ್ತಾರೆ. ಇಂತಹ ಸಂದರ್ಭಗಳಲ್ಲಿ ಅಪಘಾತ ಸಂಭವಿಸಿ ಪ್ರಯಾಣಿಕರ ಜೀವಕ್ಕೆ ಹಾನಿಯಾಗುತ್ತದೆ. ಕೆಲವು ನಗರ, ತಾಲೂಕು ಕೇಂದ್ರಗಳಿಗೆ ಈಗಲೂ ಸಹ ಸರಿಯಾದ ಸಮಯಕ್ಕೆ ಸರ್ಕಾರಿ ಬಸ್‌ಗಳು ಬರುವುದಿಲ್ಲ. ಅಲ್ಲದೆ ಸರ್ಕಾರಿ ಬಸ್‌ಗಳಲ್ಲಿ ಸರಿಯಾದ ಸೌಲಭ್ಯಗಳಿರುವುದಿಲ್ಲ. ಬೇರೆ ದಾರಿಕಾಣದೇ ಪ್ರಯಾಣಿಕರು ಖಾಸಗಿಯವರ ಲೋಪದೋಷಗಳು ಗೊತ್ತಿದ್ದರೂ ಕೂಡ ಅವನ್ನೇ ಆಶ್ರಯಿಸಬೇಕಾಗಿದೆ.
- ಎಸ್.ಶ್ನವ್ಯ, ಮಾಲೂರು

'ಜಗುಲಿ'ಯಲ್ಲಿ ಈ ಸಲದ ವಿಷಯ 'ಖಾಸಗಿ ಬಸ್ ಪ್ರಯಾಣ ಎಷ್ಟು ಸುರಕ್ಷಿತ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.