

ಖರ್ಚಿಲ್ಲದೆ ಸುಲಭವಾಗಿ ತಯಾರಿಸಬಹುದಾದ ಅನೇಕ ಉಪಕರಣಗಳು ಇಂದಿಗೂ ಗ್ರಾಮ ಸಾಮ್ರಾಜ್ಯ ಆಳುತ್ತಿದ್ದರೆ ಅದು ಹಿರೀಕರ ಬಳುವಳಿ. ಅಂಥವುಗಳಲ್ಲಿ ಪತ್ತಾಯವೂ ಒಂದು. ಪತ್ತಾಯದಲ್ಲಿ ಬತ್ತದ ಜತೆ ಲಕ್ಕಿ ಸೊಪ್ಪು, ಒಣಮೆಣಸಿನಕಾಯಿ ಬೆರೆಸಿ ಇಟ್ಟರೆ ಬತ್ತಕ್ಕೆ ಹುಳ ಹಿಡಿಯಲ್ಲ, ಜೇಡ ಕಟ್ಟಲ್ಲ, ತೂತು ಬೀಳಲ್ಲ. ಅಷ್ಟೇ ಅಲ್ಲ, ಎರಡು- ಮೂರು ವರ್ಷ ಬತ್ತ ಹಾಳಾಗಲ್ಲ! ಪತ್ತಾಯದಲ್ಲಿ ಬತ್ತ ಸುಭದ್ರ ಎಂಬುದು ಮೂಡಿಗೆರೆ ತಾಲೂಕಿನ ದೇವವೃಂದದ ರೈತ ಡಿ.ಆರ್. ಸುಧಾಕರ್ ಅನುಭವದ ಮಾತು.
ಹೀಗಿದೆ ಇದರ ಆಕಾರ
ಸುಧಾಕರ್ ಅವರ ಮನೆಯಲ್ಲಿರುವ ಪತ್ತಾಯದಲ್ಲಿ 120 ಚೀಲ ಬತ್ತ ಸಂಗ್ರಹಿಸಬಹುದು. 8 ಅಡಿ ಉದ್ದ, 12 ಅಡಿ ಅಗಲ, 8 ಅಡಿ ಎತ್ತರವಿರುವ ಪತ್ತಾಯದ ಒಳ ಭಾಗದಲ್ಲಿ 3 ಪೆಟ್ಟಿಗೆಗಳಲ್ಲಿ ಪ್ರತ್ಯೇಕವಾಗಿ ಸಂಗ್ರಹಿಸಬಹುದು.
ಪತ್ತಾಯದಲ್ಲಿ ಮೇಲಿನಿಂದ ಬತ್ತ ಹಾಕಲು ಅನುಕೂಲವಾಗುವಂತೆ ಮೆಟ್ಟಿಲು ವ್ಯವಸ್ಥೆ ಇದೆ. ಬೇಕೆಂದಾಗ ಮನೆ ಬಳಕೆಗೆ ಬತ್ತ ಪಡೆಯಲು ಸುಲಭವಾಗುವಂತೆ ಪತ್ತಾಯದ ಕೆಳ ಮಟ್ಟದಲ್ಲಿ ಚಿಕ್ಕ ಅಗಳಿ (ಕಿಂಡಿ ಮುಚ್ಚುವ ಕಟ್ಟಿಗೆ ಸಾಧನ) ಹೊಂದಿದ ಕಿಂಡಿ ಇದೆ.
10 ಸಾವಿರ ಖರ್ಚು
ಇದನ್ನು ಸುಧಾಕರ್ ಅವರ ತಂದೆ ರಾಮೇಗೌಡರು 60 ವರ್ಷಗಳ ಹಿಂದೆ ಮಾಡಿಸಿದ್ದರು. ತಗುಲಿದ ಖರ್ಚು 10 ಸಾವಿರ. ಬಳಸಿದ್ದು 200 ಘನ ಅಡಿ ಹೊನ್ನೆ.
ಬಳಕೆಗೆ ಕಾರಣವೇನು?
ರಾಮೇಗೌಡರು ಪತ್ತಾಯ ಮಾಡಿಸಲು ಕಾರಣ ಅವರದು ಅವಿಭಕ್ತ ಕುಟುಂಬ. ತಿಂಗಳಿಗೆ 3 ಕ್ವಿಂಟಲ್ ಬತ್ತ ಮನೆ ಬಳಕೆಗೆ ಬೇಕಿತ್ತಂತೆ. ಹೀಗಾಗಿ ಹೆಚ್ಚು ಬತ್ತ ಸಂಗ್ರಹಿಸುವ ಹೊಣೆಗಾರಿಕೆ ಅವರದಾಗಿತ್ತು. ಆದರೆ, ಈಗ ಸುಧಾಕರ್ ಅವರದು ವಿಭಕ್ತ ಕುಟುಂಬ ಆದರೂ ಪತ್ತಾಯ ಬಳಕೆಯಲ್ಲಿದೆ.
'ನಾಲ್ಕು ಎಕರೆ ಜಮೀನಿನಲ್ಲಿ ಸಾವಯವ ಬತ್ತ ಬೆಳಿತೀನಿ, ನನ್ನ ಮನೆ ಬಳಕೆಗೆ ವರ್ಷಪೂರ್ತಿ ಬೇಕಾಗುವ ಬತ್ತವನ್ನು ಪತ್ತಾಯದಲ್ಲಿ ಸಂಗ್ರಹಿಸಿ ಇಡುತ್ತೇನೆ. ಆರೋಗ್ಯ ಕೊಡೋ ಸಾವಯವ ಬತ್ತ ಪತ್ತಾಯದಲ್ಲಿ ಹಾಯಾಗಿದೆ! ಮನೆ ಬಳಕೆಗೆ ಮಿಕ್ಕಿದರೆ ಬತ್ತವನ್ನು ಗೆಳೆಯರಿಗೆ, ಬಂಧುಗಳಿಗೆ ಕೊಡ್ತೇನೆ' ಎಂದು ಹೆಮ್ಮೆಯಿಂದ ಹೇಳುತ್ತಾರೆ ಸುಧಾಕರ್. ನಮ್ಮ ಸಾಂಪ್ರದಾಯಕ ಕೃಷಿ ವಸ್ತು- ಉಪಕರಣಗಳು ಉಳಿದುಕೊಂಡು ಬರಲು ಸಕಾರಣ ಹುಡುಕಿ ಬಳಸಿದರೆ ಎಷ್ಟು ಚೆನ್ನ, ಇದರಲ್ಲಿ ನಮ್ಮ ಕೃಷಿ ಸಂಸ್ಕೃತಿ ಅಡಗಿದೆ ಅಲ್ಲವೇ? <
-ಶಂಕ್ರಯ್ಯ ಕೆ. ಅಬ್ಬಿಗೇರಿಮಠ