ಬೈಟುಕಾಫಿ

ಜಾಪತ್ರೆಗಿಂತ ಜಾಯಿಕಾಯಿಗೆ ಮಹತ್ವ

Published On :

ಜಾಪತ್ರೆ ಮಿರಿಸ್ಟಿಕೇಸಿ ವಂಶಕ್ಕೆ ಸೇರಿದ್ದು. ಇದಕ್ಕೆ ಮಿರಿಸ್ಟಿಕಾ ಫ್ರೇಗ್ರನ್ಸ್ ಹೈಯ್ಟ್ ಎಂದು ಹೆಸರು. ಪತ್ರೆ, ಜಾಯಿಕಾಯಿ ಒಂದೇ ರುಚಿ ಹಾಗೂ ಸುವಾಸನೆ ಹೊಂದಿದ್ದರೂ ಪತ್ರೆ ಜಾಯಿಕಾಯಿಯಷ್ಟು ಗಾಢ ವಾಸನೆ ಹೊಂದಿರುವುದಿಲ್ಲ. ಪತ್ರೆಗೆ ಅದರದೇ ಆದ ವಿಶೇಷ ಸುವಾಸನೆಯಿದೆ.
ಪತ್ರೆಯನ್ನು ಕಷಾಯಪುಡಿಗಳಲ್ಲಿ, ಅಲ್ಲದೇ ಸಿಹಿತಿಂಡಿಗಳಲ್ಲಿ, ಸಾಂಬಾರ ಅಡುಗೆಗಳಲ್ಲಿ ಬಳಸುತ್ತಾರೆ. ಇದರ ತೈಲವನ್ನು ಔಷಧ ತಯಾರಿಕೆಯಲ್ಲಿ ಬಳಸುತ್ತಾರೆ. ಜಾಪತ್ರೆಯಲ್ಲಿ 'ಬಂಡಾ ಜಾಯಿಪತ್ರೆ', 'ಜಾವಾ ಎಸ್ಟೇಟ್ ಜಾಯಿಪತ್ರೆ' 'ಸೀ ಆವ್ ಜಾಯಿಪತ್ರೆ' ಎಂಬ ಮೂರು ಬಗೆಗಳಿವೆ. ಪಪುವಾ ಜಾಯಿಪತ್ರೆ ಎಂದು ಕರೆಯುವ ನಾಲ್ಕನೆಯ ಬಗೆಯ ಪೂರ್ವ ಇಂಡೀಸ್ ಪತ್ರೆಯಲ್ಲಿ ತೈಲದ ಪ್ರಮಾಣ ತುಂಬ ಕಡಿಮೆ. ಪತ್ರೆಯನ್ನು ಕೇಕ್, ಕ್ರೀಮ್ ಪೈಗಳು, ಸೂಪ್‌ಗಳಲ್ಲಿ ಬಳಸುತ್ತಾರೆ. ಮಾಂಸದ ಅಡುಗೆಗಳಲ್ಲಿ ಇದನ್ನು ಹೆಚ್ಚಾಗಿ ಬಳಸುತ್ತಾರೆ.
ಪತ್ರೆಯು ತೆಳುವಾದ ಹೆಣಿಗೆಯ ಪಟ್ಟಿಯಂತೆ ಇರುವುದರಿಂದ ಅದು ತೂಕದಲ್ಲಿ ಕಡಿಮೆ ಇರುತ್ತದೆ. ಆದ್ದರಿಂದ ಒಂದು ಮರವು ಕೊಡುವ ಒಟ್ಟು ಜಾಯಿಕಾಯಿಯಲ್ಲಿ ಶೇಕಡ 3 ರಿಂದ 3 1/2 ಕಿಲೊ ಜಾಪತ್ರೆ ದೊರೆಯುತ್ತದೆ. ಅದರ ಕ್ವಾಲಿಟಿಯನ್ನು ಅದರಲ್ಲಿರುವ ತೈಲದ ಪ್ರಮಾಣವನ್ನು ಅನುಸರಿಸುತ್ತದೆ.
ಜಾಯಿಕಾಯಿ ಹಾಗೂ ಜಾಪತ್ರೆ ವಾತಹರ, ಸ್ಥಂಭಕ ಮತ್ತು ಕಾಮೋತ್ತೇಜಕ ಗುಣಗಳನ್ನು ಹೊಂದಿದೆ. ಇವುಗಳನ್ನು ರಕ್ತಭೇದಿ, ಹೊಟ್ಟೆನೋವು, ವಾತ, ವಾಕರಿಕೆ, ವಾಂತಿ, ಮಲೇರಿಯಾ, ಸಂಧಿವಾತ, ಕಟಿವಾಯು ಮತ್ತು ಪ್ರಾರಂಭದ ಹಂತದ ಕುಷ್ಟರೋಗಗಳಿಗೆ ಕೊಡುವ ಔಷಧಗಳಲ್ಲಿ ಬಳಸುತ್ತಾರೆ. ಮದ್ಯಪಾನೀಯಗಳಲ್ಲಿ, ದಂತಚೂರ್ಣದಲ್ಲೂ ಬಳಸುತ್ತಾರೆ. ಇದಕ್ಕೆ ಮಾದಕ ಗುಣವಿರುವುದರಿಂದ ನಿದ್ರಾಹೀನತೆಯುಳ್ಳವರಿಗೆ ಇದನ್ನು ಬಳಸಿದ ಔಷಧವನ್ನು ಕೊಡುತ್ತಾರೆ. ಆಯುರ್ವೇದ ವೈದ್ಯದಲ್ಲಿ ಜಾಪತ್ರೆಗಿಂತ ಜಾಯಿಕಾಯಿಗೇ ಹೆಚ್ಚು ಪ್ರಾಧಾನ್ಯ.
ಮಾರುಕಟ್ಟೆಯಲ್ಲಿ ಜಾಪತ್ರೆಯು ಪೂರ್ತಿ ಒಡೆದ ಅಥವಾ ಪುಡಿಮಾಡಿದ ರೂಪದಲ್ಲಿ ದೊರೆಯುತ್ತದೆ. ದೇಶದ ಕೇರಳ, ತಮಿಳುನಾಡು ಹಾಗೂ ಕರ್ನಾಟಕದ ಕೆಲವು ಭಾಗಗಳಲ್ಲಿ ಇದನ್ನು ಬೆಳೆಯಲಾಗುತ್ತದೆ.
ಜಾಯಿಕಾಯಿ ಕೊಡುವ ಎಣ್ಣೆಗಿಂತ ಜಾಯಿಪತ್ರೆ ಕಡಿಮೆ ಕೊಡುತ್ತದೆ. ಮಾರುಕಟ್ಟೆಯಲ್ಲಿ ಜಾಪತ್ರೆ ಪುಡಿಯನ್ನು ಖರೀದಿಸುವಾಗ ಎಚ್ಚರವಹಿಸಬೇಕು. ಏಕೆಂದರೆ ಶುದ್ಧ ಜಾಪತ್ರೆಯಲ್ಲಿ ಕೆಲವೊಮ್ಮೆ ಕಡಿಮೆ ದರ್ಜೆಯ ಕಾಡು ಜಾಪತ್ರೆ ಕಲಬೆರಕೆ ಮಾಡುವ ಸಾಧ್ಯತೆ ಇರುತ್ತದೆ. ಪುಡಿ ಮಾಡಿದ ಜಾಪತ್ರೆಯಲ್ಲಿ ಸಾಮಾನ್ಯವಾಗಿ ಪಿಷ್ಟವಿರುವ ಹಿಟ್ಟುಗಳು ಅಥವಾ ಪುಡಿಮಾಡಿದ ಅಗ್ಗದ ಕಾಡು ಜಾಪತ್ರೆ ಸೇರಿರುತ್ತದೆ. <

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
ಮೊ.9900113699 (ಎಸ್‌ಎಂಎಸ್‌ಗೆ ಮಾತ್ರ)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.