ಅನೇಕ ಸಲ ಅಂಥ ವಿಮರ್ಶೆಗಳಲ್ಲಿ ಅರ್ಥವೇ ಇರುವುದಿಲ್ಲ. ಒಂದೊಮ್ಮೆ ಹಾಗೆ ವಿಮರ್ಶಿಸಿಕೊಳ್ಳುತ್ತ ಸಾಗಿದರೆ ನಮ್ಮ ತಪ್ಪುಗಳಿಗೆ, ನಮ್ಮೆಲ್ಲ ಕೃತ್ಯಗಳಿಗೆ ಒಂದಿಲ್ಲೊಂದು ಸಮರ್ಥನೆ ಸಿಗುವುದು ದೊಡ್ಡದೇನಲ್ಲ. ಅದು ಸಮರ್ಥನೀಯವಲ್ಲದಿದ್ದರೂ ನಮ್ಮ ಮನಸ್ಸು ಹಾಗೊಂದು ಚೌಕಟ್ಟನ್ನು ನಿರ್ಮಿಸಿಕೊಳ್ಳುತ್ತದೆ. ಸಂಭಾವಿತತನಕ್ಕೆ ಒಂದಿಲ್ಲೊಂದು ಹೆಸರೂ ಹುಟ್ಟಿಕೊಳ್ಳಲೂಬಹುದು. ಅದಕ್ಕೂ ಮೀರಿ ಇಂಥದ್ದೇ ಹಿಂದಿನ ಹಲವಾರು ಘಟನೆಗಳನ್ನು, ಬೇರೆ ಬೇರೆ ವ್ಯಕ್ತಿಗಳನ್ನು ಉದಾಹರಣೆಯಾಗಿ ನಿಲ್ಲಿಸಿ ವಕಾಲತ್ತನ್ನೂ ಆರಂಭಿಸಿ ಬಿಡಬಹುದು. ಅದೇನೇ ಆದರೂ ಇಂಥವುಗಳಿಂದ ನಮ್ಮ ಆತ್ಮ ತಣಿಯುವುದಿಲ್ಲ.
ಪ್ರತಿದಿನವೂ ಪ್ರತೀ ಹೆಜ್ಜೆಯನ್ನೂ ಹೀಗೆ ನಾವು ಒರೆಗೆ ಹಚ್ಚಲು ಕುಳಿತುಬಿಟ್ಟರೆ ಮುಂದಿನ ದೇನನ್ನೂ ಮಾಡಲೂ ಸಾಧ್ಯವೇ ಆಗುವುದಿಲ್ಲ. ಸರಿ ತಪ್ಪುಗಳ ವಿವೇಚನೆ, ವಿಮರ್ಶೆಯೇ ಬೇಡವೆಂದು ಹೇಳುತ್ತಿಲ್ಲ. ಅದು ಆರಂಭದ ಹೆಜ್ಜೆಯಾಗಬೇಕು. ಒಮ್ಮೆ ಹೆಜ್ಜೆಯನ್ನು ಕಿತ್ತಿಟ್ಟ ಮೇಲೆ ಹಿಂದಿನ ಹೆಜ್ಜೆ ಹೇಗಿತ್ತು? ಅದನ್ನು ನಾವು ಎತ್ತಿಡಬೇಕಿತ್ತೇ? ಇಲ್ಲವೇ? ಅದರ ಬದಲು ನನಗೆ ಬೇರೆ ಮಾರ್ಗವೇನಿತ್ತು...? ಎಂಬಿತ್ಯಾದಿ ಗೊಂದಲಕ್ಕೆ ಒಳಗಾಗುವುದರಲ್ಲಿ, ಅದನ್ನು ಯೋಚಿಸುತ್ತ ಕಳೆಯುವುದರಲ್ಲಿ ಏನರ್ಥವಿದೆ ಹೇಳಿ? ನಿಜಕ್ಕೂ ಹೆಜ್ಜೆ ಕಿತ್ತಿಟ್ಟ ನಂತರ ಯೋಚಿಸಬೇಕಾದದ್ದು ಮುಂದಿನ ಹೆಜ್ಜೆಯ ಬಗ್ಗೆಯೇ ಹೊರತೂ ಹಿಂದಿನದರ ಬಗ್ಗೆ ಅಲ್ಲ. ಒಂದೊಮ್ಮೆ ಮುಂದಿನಕ್ಕೆ ಧೈರ್ಯ ಸಾಲದೆಂದಾದರೆ ನಮ್ಮ ತಕ್ಷಣದ ಅಗತ್ಯ ಇಟ್ಟ ಹೆಜ್ಜೆಯನ್ನು ದೃಢಪಡಿಸಿಕೊಳ್ಳುವುದು. ಹಿಂದಿನದನ್ನು ಯೋಚಿಸುತ್ತಾ ಮುಂದಿನ ಬಗ್ಗೆ ಅಳುಕುತ್ತಾ ಮೈಮರೆತರೆ ನಿಂತ ಹೆಜ್ಜೆಯೂ ಸಮತೋಲನ ತಪ್ಪಿ ಮುಗ್ಗರಿಸುವ ಸಾಧ್ಯತೆ ಇದೆ.
ಬಿಟ್ಹಾಕಿ, ಸರಿಯೋ ತಪ್ಪೋ, ಬದುಕನ್ನು ಬಂದಂತೆ, ಹಸಿಹಸಿಯಾಗಿ ಸ್ವೀಕರಿಸುವುದರಲ್ಲಿದೆ ನೆಮ್ಮದಿ. ಹೇಗೂ ಹೊರಟಾಗಿದೆ. ಹೇಗೆ ದಾರಿ ಸಾಗುತ್ತೋ ಹಾಗೆ ಹೊರಟು ಬಿಡೋಣ. ಅದೆಲ್ಲಿಗೆ ಹೋಗಿ ತಲುಪುತ್ತೋ ತಲುಪಲಿ. ಎದುರಾದ ಎಲ್ಲವನ್ನೂ ಎದುರಿಸುವ ಧೈರ್ಯ ಜತೆಗೂಡಿಸಿಕೊಳ್ಳುವುದಷ್ಟೇ ನಮ್ಮ ಗುರಿಯಾಗಲಿ. ಹೋಗಿ ನಿಂತಲ್ಲಿಯೇ ಕಾಲೂರುವುದು ಜಾಣತನವಲ್ಲವೇ?
- ಸಹನೆ