ನಂಬಿಕೆಯಿರದ ಬಂಧವಿಲ್ಲ
ಅದ್ಯಾವುದೋ ಕ್ಷಣದಲ್ಲಿ ಅವರಿಗೆ ಹಾಗನಿಸಿರುತ್ತದೆ. ಆ ಭಾವನೆಯನ್ನು ಮೀರಿ ಚಿಂತಿಸಲು ಅವರಿಗೆ ಸಾಧ್ಯವಾಗುವುದೇ ಇಲ್ಲ. ಪರಿಸ್ಥಿತಿಯ ಬಗ್ಗೆ ಎಷ್ಟು ಕನ್ವಿನ್ಸ್ ಮಾಡಿದರೂ ಅಷ್ಟೇ. ಪ್ರಯೋಜನವಾಗುವುದಿಲ್ಲ. ಅವರ ಹಠ ಮೊಂಡುತನದಂತೆ ನಮಗೆ ಭಾಸವಾಗಬಹುದು. ಆಗ ನಮ್ಮ ಸ್ವಾಭಿಮಾನವೂ ಹೆಡೆಯಾಡುತ್ತದೆ. ಏಕಾಏಕಿ ಹೀಗೇಕೆ ವರ್ತಿಸುತ್ತಾರೆ ಎನಿಸುತ್ತದೆ. ಆದರೆ, ಅದು ಹಾಗಲ್ಲ, ಮನದ ಮೂಲೆಯಲ್ಲೆಲ್ಲೋ ಮೊಳೆತ ಸಣ್ಣ ಸಂಶಯದ ಬಿಂದು ದೊಡ್ಡ ಹೆಮ್ಮರವಾಗಲು ಸ್ವಲ್ಪವಾದರೂ ಕಾಲಾವಕಾಶ ಬೇಕಾಗಿಯೇ ಇರುತ್ತದೆ. ಅವರ ಮನದಲ್ಲಾಗುವ ಆ ಬೆಳವಣಿಗೆಯನ್ನು ನಾವು ಗಮನಿಸಿರುವುದಿಲ್ಲ. ಬದಲಿಗೆ ನಮ್ಮ ಯಾವುದೋ ಸ್ವಭಾವದಿಂದ ಅದಕ್ಕೆ ಇನ್ನಷ್ಟು ಬೆಂಕಿಯನ್ನು ಗೊತ್ತಿಲ್ಲದೇ ಊದುತ್ತಿರುತ್ತೇವೆ. ಯಾವುದೇ ಸಂಬಂಧದಲ್ಲೂ ಸಂಶಯ ಮೊಳೆತರೆ ಸಹಿಸಿಕೊಳ್ಳುವುದು ಅಸಾಧ್ಯ. ಅಂತಹ ಸಂಶಯ ಗಂಡ-ಹೆಂಡಿರಂತಹ ಸೂಕ್ಷ್ಮ ಬಂಧದಲ್ಲಿ ಆರಂಭವಾದರೆ ಅದಕ್ಕೆ ಕೊನೆ ಮೊದಲು ಇರುವುದಿಲ್ಲ. ಅದರ ಬದಲು ಅವರಿಗೆ ಹಾಗ್ಯಾಕೆ ಅನಿಸುತ್ತಿದೆ? ನಿಜವಾಗಿಯೂ ನಮ್ಮ ಬಗ್ಗೆ ಅವರಿಗೆ ನಂಬಿಕೆಯಿಲ್ಲವೇ ಅಥವಾ ಆ ಭಾವನೆ ಕೇವಲ ಸಾಂದರ್ಭಿಕವಾಗಿದೆಯೇ ಎಂದು ಚಿಂತಿಸಬಹುದಲ್ಲವೇ? ಹೌದು, ಹಾಗೆ ಸಂಶಯಿಸುವುದು ತಪ್ಪೇ. ಅನುಮಾನವೇ ಇಲ್ಲ. ಆದರೆ, ಅವರ ಮನಸ್ಥಿತಿಯನ್ನೂ ನಾವು ಚಿಂತಿಸಬೇಕಲ್ಲವೇ? ನಾವೇನೂ ತಪ್ಪು ಮಾಡಿಲ್ಲ ಎಂದ ಮಾತ್ರಕ್ಕೆ ಅದು ಅವರನ್ನು ಕನ್ವಿನ್ಸ್ ಮಾಡಲು ಯತ್ನಿಸುವುದೇ ಬೇಡ ಎಂದಲ್ಲವಲ್ಲ. ಇಲ್ಲಿ ಅಹಂ ಇಣುಕಿದರೆ ರಾಡಿಯಾಗುವುದು ನಮ್ಮ ಬದುಕೇ. ಆದ್ದರಿಂದ ಸ್ವಲ್ಪ ಶಾಂತಚಿತ್ತರಾಗಿ ಆ ಬಗ್ಗೆ ಗಮನ ಹರಿಸುವುದೊಳಿತು. ನಂಬಿಕೆ ಮೂಡುವಂತೆ ವರ್ತಿಸುವುದೂ ಮುಖ್ಯ. ಯಾರೇನು ಅಂದುಕೊಂಡರೆ ನನಗೇನು ಎಂಬಂತಿದ್ದರೆ, ಅಲ್ಲಿ ಮತ್ತಷ್ಟು ಹೂಳು ತುಂಬುವುದು ಗ್ಯಾರಂಟಿ. ಜೀವನದಲ್ಲಿ ಅತ್ಯಂತ ಮಹತ್ವದ ಸಂಬಂಧವೆಂಬುದೊಂದಿದ್ದರೆ ಅದು ಭಾರತದಲ್ಲಿ ಮಾತ್ರ. ಅದರಲ್ಲೂ ನಮ್ಮ ಕೌಟುಂಬಿಕ ವ್ಯವಸ್ಥೆ, ಇಲ್ಲಿನ ದಾಂಪತ್ಯ ಪದ್ಧತಿ ಅತ್ಯಂತ ಮೌಲ್ಯಯುತವಾದದ್ದು. ಜೀವನದ ಕೊನೆಯವರೆಗೆ ಇರುವ ಸಂಬಂಧ ಅಂತಿದ್ದರೆ ಅದು ದಾಂಪತ್ಯ ಮಾತ್ರವೇ. ಅತ್ಯಂತ ಸುಂದರ ದಾಂಪತ್ಯ, ಕೌಟುಂಬಿಕ ವಾತಾವರಣದಲ್ಲಿರುವ ವ್ಯಕ್ತಿಯೇ ಗರಿಷ್ಠ ಸುಖಿಯೂ ಆಗಿರುತ್ತಾನೆ. ಅಂಥ ವ್ಯಕ್ತಿಯ ಆಯುಸ್ಸು ಸಹ ಹೆಚ್ಚಿರುತ್ತದೆ. ಹಾಗೆಂದು ಸಂಶೋಧನೆಗಳೇ ದೃಢಪಡಿಸಿವೆ. ಹಾಗೆ ಬಂದು ಹೀಗೆ ಸುಳಿದು ಹೋಗುವ ಆಧಾರರಹಿತ ಸಂಶಯಗಳಿಗಾಗಿ ಸುಂದರ ಸಂಬಂಧವನ್ನು ಕಳಕೊಳ್ಳಬೇಕಿಲ್ಲ. ಅಷ್ಟಕ್ಕೂ ನಂಬಿಕೆಯಿಲ್ಲದ ಬಂಧಕ್ಕೇನು ಬೆಲೆ ಹೇಳಿ?
-ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

