ಆಸ್ಪಿರಿನ್ಗಿಂತ ಮಿಗಿಲಾದ ಸಹಜ ರಕ್ತಶುದ್ಧಕ!
ಭಾರತೀಯ ಆಹಾರ ಪದ್ಧತಿಯಲ್ಲಿ ಈರುಳ್ಳಿ, ಬೆಳ್ಳುಳ್ಳಿಗೆ ಪ್ರಾಚೀನ ಕಾಲದಿಂದಲೂ ಮಹತ್ವ ಇದೆ. ನಮ್ಮ ಹಿರಿಯರು ಅವುಗಳ ಔಷಧೀಯ ಮಹತ್ವ ಅರಿತಿದ್ದರು ಎನ್ನುವುದಕ್ಕೆ ಬಹುತೇಕ ಅಡುಗೆಗಳಲ್ಲಿ ಇವುಗಳ ಬಳಕೆ ಇತ್ತು ಎನ್ನುವುದೇ ಸಾಕ್ಷಿ ಆಗಬಹುದು. ಆಧುನಿಕತೆಯ ಪರಿಚಯ ಆದಂತೆಲ್ಲ ಅವುಗಳನ್ನು ಔಷಧವಾಗಿ ಬಳಸುವ ಕ್ರಮ ಕ್ರಮೇಣ ಕಡಿಮೆಯಾಗುತ್ತ ಬಂತು. 'ಈರುಳ್ಳಿ, ಬೆಳ್ಳುಳ್ಳಿ ಹಾಕಿದರೆ ರುಚಿ ಹೆಚ್ಚುತ್ತದೆ' ಎಂಬಲ್ಲಿಗೆನಮ್ಮ ಜ್ಞಾನ ನಿಂತಿತು. ಇವತ್ತು ರುಚಿಯ ಕಾರಣದಿಂದಾಗಿಯೇ ಬಹುತೇಕ ಹೋಟೆಲ್ಗಳಲ್ಲಿ ಪಲ್ಯ, ಸಾಂಬಾರ್ಗಳಲ್ಲಿ ಈರುಳ್ಳಿ ಇರಲೇಬೇಕು. ಆದರೆ ಭಾರತವಷ್ಟೇ ಅಲ್ಲ, ಜಗತ್ತಿನಾದ್ಯಂತ ಈರುಳ್ಳಿ, ಬೆಳ್ಳುಳ್ಳಿಗೆ ಔಷಧದ ಮನ್ನಣೆ ಇತ್ತು, ಅದರಲ್ಲೂ ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಇವನ್ನು ಬಳಸುತ್ತಿದ್ದರು ಎಂದರೆ ಆಶ್ಚರ್ಯ ಆಗುತ್ತದೆ.
ಪ್ರಾಚೀನ ಈಜಿಪ್ತ್ನಲ್ಲಿ ಈರುಳ್ಳಿಯನ್ನು 'ರಕ್ತದ ಟಾನಿಕ್' ಎಂದೇ ಕರೆಯುತ್ತಿದ್ದರಂತೆ. ಅಮೆರಿಕನ್ನರು ಬಹಳ ಹಿಂದೆಯೇ ಇದಕ್ಕೆ 'ರಕ್ತ ಶುದ್ಧಕ' ಎಂದು ನಾಮಕರಣ ಮಾಡಿಯಾಗಿದೆ. ಫ್ರಾನ್ಸ್ನ ರೈತರು ಕುದುರೆಯ ಕಾಲು, ಗೊರಸುಗಳಲ್ಲಿ ರಕ್ತ ಹೆಪ್ಪುಗಟ್ಟಿದಾಗ ಅದನ್ನು ಕರಗಿಸಲು ಈರುಳ್ಳಿ, ಬೆಳ್ಳುಳ್ಳಿಗಳನ್ನು ಔಷಧವಾಗಿ ಉಪಯೋಗಿಸುತ್ತಿದ್ದರಂತೆ. ವೋಡ್ಕಾ ಎನ್ನುವ ಮದ್ಯದ ಜತೆ ಬೆಳ್ಳುಳ್ಳಿ ಇದರ ಅದರ ತೀಕ್ಷ್ಣತೆ ಕಡಿಮೆಯಾಗುತ್ತದೆ ಮತ್ತು ರಕ್ತ ಸಂಚಾರ ಹೆಚ್ಚುತ್ತದೆ ಎಂದು ರಷ್ಯನ್ನರು ನಂಬಿಕೊಂಡಿದ್ದರು. ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ತನ್ನ ಗುಣದಿಂದ ಇವು ಆಧುನಿಕ ವೈದ್ಯಕೀಯ ಜಗತ್ತಿನ ಗಮನ ಸೆಳೆಯುವುದು ತಡವಾಗಲಿಲ್ಲ.
ಬೆಳ್ಳುಳ್ಳಿಯಲ್ಲಿರುವ ಅಜೋನ್ (ಸ್ಪ್ಯಾನಿಶ್ ಭಾಷೆಯಲ್ಲಿ ಅಜೋ ಎಂದರೆ ಬೆಳ್ಳುಳ್ಳಿ. ಅದರಿಂದಲೇ ಅಜೋನ್ ಬಂದಿದ್ದು) ಎನ್ನುವ ಧಾತುವಿನಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಗುಣವಿದೆ. ಇದು ಆಸ್ಪಿರಿನ್ಗೆ ಸಮನಾದ ಅಥವಾ ಅದಕ್ಕಿಂತ ಹೆಚ್ಚಿನ ಪರಿಣಾಮ ಬೀರುತ್ತದೆ ಎಂದು ಅಮೆರಿಕದ ಸ್ಟೇಟ್ ಯೂನಿವರ್ಸಿಟಿ ಆಫ್ ನ್ಯೂಯಾರ್ಕ್ನ ಪ್ರಾಧ್ಯಾಪಕರಾಗಿದ್ದ ಡಾ.ಎರಿಕ್ ಬ್ಲಾಕ್ ಪತ್ತೆ ಮಾಡಿದರು. ಹೆಪ್ಪುಗಟ್ಟುವುದನ್ನು ತಡೆಯಲು ರಕ್ತದಲ್ಲಿರುವ ಆಸ್ಪಿರಿನ್ ಥ್ರೋಂಬೋಕ್ಸೇನ್ ಉತ್ಪಾದನೆ ತೀವ್ರಗೊಳಿಸುವ ಕೆಲಸವನ್ನಷ್ಟೇ ಮಾಡುತ್ತದೆ. ಆದರೆ ಬೆಳ್ಳುಳ್ಳಿ ಏಳು ಕಾರ್ಯಗಳನ್ನು ನಿರ್ವಹಿಸುತ್ತದೆ. ಅದರ ಮೆಕ್ಯಾನಿಸಂ ಅದ್ಭುತವಾದದ್ದು ಎನ್ನುತ್ತಾರೆ ಬೆಳ್ಳುಳ್ಳಿ ಕುರಿತು ಆಳ ಸಂಶೋಧನೆ ನಡೆಸಿರುವ ಯೂನಿವರ್ಸಿಟಿ ಆಫ್ ಡೇಲ್ವೇರ್ನ ಪ್ರಾಧ್ಯಾಪಕ ಡಾ.ಮಹೇಂದ್ರ ಕೆ.ಜೈನ್. ರಕ್ಕ ಹೆಪ್ಪುಗಟ್ಟುವುದರ ವಿರುದ್ಧ ಬೆಳ್ಳುಳ್ಳಿ ಪರಿಣಾಮಕಾರಿ ಎನ್ನುವುದನ್ನು ಅನೇಕ ಕ್ಲಿನಿಕಲ್ ಅಧ್ಯಯನಗಳು ಕೂಡ ನಿರೂಪಿಸಿವೆ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

