ಸಂಬಂಧಗಳ ಕೊಲ್ಲುವ ಅಹಂ
ಕೆಲವೊಮ್ಮೆ ಇದ್ದಕ್ಕಿದ್ದ ಹಾಗೆಯೇ ಕೆಲವು ಸಂಬಂಧಗಳು ಹಳಸಿ ಹೋಗಿಬಿಡುತ್ತವೆ, ವಿನಾಕಾರಣ. ಹುಡುಕಿದರೂ, ಎಷ್ಟು ತಲೆ ಕೆಡಿಸಿಕೊಂಡರೂ ಅದಕ್ಕೆ ಕಾರಣಗಳು ಹೊಳೆಯುವುದೇ ಇಲ್ಲ. ಹೀಗೇಕೆ ಆಯ್ತು? ಆ ವ್ಯಕ್ತಿ ಇಷ್ಟು ಬೇಗ ನನ್ನಿಂದ ದೂರ ಹೋಗಲು ಕಾರಣವೇನು? ಎಲ್ಲಿ ತಪ್ಪಾಗಿದೆ ಎಂಬುದೇ ಅರಿವಿಗೆ ಬರುವುದಿಲ್ಲ. ನೀವೆಷ್ಟೇ ಸಹಜವಾಗಿ ಇರಬೇಕೆಂದುಕೊಂಡರೂ ಅವರೊಂದಿಗೆ ಮತ್ತೆ ಮೊದಲಿನ ಸಲುಗೆ ಸಾಧ್ಯವಾಗುವುದೇ ಇಲ್ಲ. ನಿಜವಾಗಿಯೂ ಅದಕ್ಕೆ ನೀವೇ ಕಾರಣರಾಗಿರುತ್ತೀರಿ. ಸಂಬಂಧಗಳು ಕಮರಿದಾಗ ನಾವು ಮೊದಲು ಮಾಡುವುದು ನಮ್ಮಿಂದ ದೂರಾದ ವ್ಯಕ್ತಿಯಲ್ಲಿನ ದೋಷ ಹುಡುಕಲಾರಂಭಿಸುವುದು. ಬ್ರೇಕ್ ಅಪ್ಗೆ ಮೂಲವೇ ಅವರಲ್ಲಿನ ತಪ್ಪುಗಳು ಎಂಬ ಭಾವನೆ ನಮ್ಮಲ್ಲಿ ಬಲಗೊಳ್ಳುತ್ತ ಸಾಗುತ್ತದೆ. ಇಬ್ಬರ ನಡುವೆ ಎಲ್ಲವೂ ಸರಿ ಇದ್ದಾಗ ಕಾಣದ ಅಥವಾ ಸಹಿಸಿಕೊಳ್ಳುತ್ತಿದ್ದ ಸ್ವಭಾವ, ದೋಷಗಳೆಲ್ಲವೂ ಈಗ ದೊಡ್ಡದಾಗಿ ಕಾಣಿಸಲಾರಂಭಿಸುತ್ತದೆ. ಅಪ್ಪಿತಪ್ಪಿಯೂ ಈ ಹಂತದಲ್ಲಿ ನಮ್ಮನ್ನು ನಾವು ಅವಲೋಕಿಸಿಕೊಳ್ಳಲು ಹೋಗುವುದಿಲ್ಲ. ಒಂದೊಮ್ಮೆ ನಮ್ಮನ್ನು ನಾವು ನೋಡಿಕೊಂಡರೂ ನಮ್ಮಿಂದ ಅವರಿಗೆ ಆದ ಒಳಿತನ್ನಷ್ಟೇ ಪಟ್ಟಿ ಮಾಡುತ್ತೇವೆಯೇ ಹೊರತೂ ನಾವು ತಪ್ಪಿದ್ದೆಲ್ಲಿ ಎಂಬುದನ್ನು ನೋಡಿಕೊಳ್ಳುವುದೇ ಇಲ್ಲ. ಇದು ಪ್ರತಿಯೊಬ್ಬರಲ್ಲೂ ಹುದುಗಿರುವ ಅಹಂ. ಬಹಳಷ್ಟು ವೇಳೆ ಇತರರೊಂದಿಗಿನ ನಮ್ಮ ಸಂಬಂಧ ಹದಗೆಡುವುದಿದ್ದರೆ ಅದಕ್ಕೆ ಕಾರಣವೇ ಅಹಮಿಕೆ. ಸಂಬಂಧ ಹಳಸಿದಾಗ ಯಾರೊಬ್ಬರೂ ತಾವೇ ಸ್ವತಃ ಮುಂದೆ ಬಂದು, ಪ್ರತಿಷ್ಠೆ ಬಿಟ್ಟು ಮೊದಲಿಗೆ ಸಂಬಂಧ ಸುಧಾರಣೆಯ ಕ್ರಮಗಳನ್ನು ತೆಗೆದುಕೊಳ್ಳುವುದೇ ಇಲ್ಲ. ಹಾಗೊಮ್ಮೆ ವರ್ತಿಸಿದ್ದರೆ ಯಾವ ಸಂಬಂಧವೂ ಹಳಸಲು ಸಾಧ್ಯವೇ ಇರುವುದಿಲ್ಲ. ಅದೇ ರೀತಿ ನಮ್ಮ ಅದೆಷ್ಟೋ ಹತಾಶೆಗಳು, ಆಕ್ರೋಶ, ನೋವು, ಮಹತ್ವಾಕಾಂಕ್ಷೆಗಳನ್ನು ಆ ಸಂದರ್ಭದಲ್ಲೇ ದೊಡ್ಡದಾಗಿ ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಅವು ಮತ್ಸರವಾಗಿ ಬೆಳೆಯಲು ಆಸ್ಪದವಾಗುತ್ತದೆ. ಅಂಥ ಮತ್ಸರವೇ ಪೈಪೋಟಿಗೆ ತಿರುಗಿ ಸಂಬಂಧಕ್ಕೆ ಹುಳಿ ಹಿಂಡುತ್ತದೆ. ಅವಕ್ಕೆ ಕಡಿವಾಣ ಹಾಕಿಕೊಳ್ಳಲು ಪ್ರಯತ್ನಿಸಿದರೆ ತನ್ನಿಂದ ತಾನೇ ವ್ಯಕ್ತಿ ಅಜಾತಶತ್ರವಾಗಲು ಸಾಧ್ಯ. ನಮಗಿಂತ ಬೇರೊಬ್ಬ ಬೆಳೆಯುತ್ತಿದ್ದಾನೆಂದರೆ ನಾವು ಕೆಳಗೆ ಹೋಗುತ್ತಿದ್ದೇವೆಂದು ಭಾವಿಸಬೇಕಾಗಿಲ್ಲ. ಅಥವಾ ಅದು ನಮ್ಮ ಸೋಲೆಂದು ಪರಿಗಣಿಸಬೇಕಾಗಿಲ್ಲ. ಅಂಥ ಮನಸ್ಥಿತಿಯಡಿಯಲ್ಲಿ ಸ್ವತಂತ್ರ ನೆಲೆಯಲ್ಲಿ ಪ್ರಯತ್ನವನ್ನು ಮುಂದುವರಿಸಿದಾಗ ಮಾತ್ರವೇ ಎಲ್ಲ ಸಂಬಂಧಗಳೂ ಆರೋಗ್ಯಕರವಾಗಿ ಇರಲು ಸಾಧ್ಯ. ಯಾರೊಬ್ಬರೂ ಜೀವನದಲ್ಲಿ ಅನಿವಾರ್ಯವಲ್ಲದೇ ಇರಬಹುದು. ಆದರೆ ಅಗತ್ಯಗಳ ವಿಚಾರಕ್ಕೆ ಬಂದಾಗ ಯಾರೂ ಅಮುಖ್ಯರಾಗುವುದಿಲ್ಲ. ಹೀಗಾಗಿ ಸಂಬಂಧಗಳಿಗೆ ನಾವು ನೀಡುವ ಬೆಲೆಯನ್ನು ಅವಲಂಬಿಸಿ ನಮ್ಮ ವ್ಯಕ್ತಿತ್ವ ನಿಂತಿರುತ್ತದೆ ಎಂಬುದನ್ನು ಮರೆಯಬೇಡಿ.
-ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

