ನೆಮ್ಮದಿ ಹೊರಗಡೆ ಇಲ್ಲ
ಒಬ್ಬ ರಾಜನಿದ್ದ. ಸಂಪತ್ತು ಆತನ ಬಳಿ ಕಾಲು ಮುರಿದುಕೊಂಡು ಬಿದ್ದಿತ್ತು. ಅನೇಕ ರಾಜ್ಯಗಳನ್ನು ಯುದ್ಧದಲ್ಲಿ ಗೆದ್ದುಕೊಂಡಿದ್ದ. ಸುಖದ ವೈಭೋಗದಲ್ಲಿ ತೇಲಾಡುತ್ತಿದ್ದ. ಆದರೇನು ಮಾಡುವುದು? ಮನಸ್ಸಿಗೆ ನೆಮ್ಮದಿ ಎನ್ನುವುದು ಇರಲಿಲ್ಲ. ರಾಜರ್ಷಿಯನ್ನು ಕರೆಸಿದ, 'ನನಗೆ ಇಷ್ಟೆಲ್ಲ ಇದ್ದರೂ ನೆಮ್ಮದಿಯೇ ಇಲ್ಲವಲ್ಲ, ಏಕೆ? ನೆಮ್ಮದಿ ಪಡೆಯಲು ನಾನೇನು ಮಾಡಲಿ?' ರಾಜರ್ಷಿ ಹೇಳಿದ, 'ರಾಜನ್, ನಿನ್ನ ರಾಜ್ಯದಲ್ಲಿ ಅತ್ಯಂತ ಸಂತೋಷದಿಂದ ಇರುವ ವ್ಯಕ್ತಿ ಯಾರು ಎನ್ನುವುದನ್ನು ಹುಡುಕು. ಆತನ ಅಂಗಿಯನ್ನು ಒಮ್ಮೆ ಧರಿಸು' ಸರಿ. ಸೈನಿಕರು ರಾಜ್ಯದ ಮೂಲೆ ಮೂಲೆ ಸುತ್ತಿದರು. ಕೊನೆಗೂ ಒಬ್ಬಾತ ಸಿಕ್ಕ. ಉದ್ಯಾನವೊಂದರಲ್ಲಿ ಕುಳಿತು ಖುಷಿಯಿಂದ ಸೀಟಿ ಹೊಡೆಯುತ್ತಿದ್ದ. ಸೈನಿಕರು ಕೇಳಿದರು, 'ನೀನು ನೆಮ್ಮದಿಯಿಂದ ಇದ್ದೀಯಾ?' 'ಹೌದು. ಏಕೆಂದರೆ ನನ್ನ ಬಗ್ಗೆ ನನಗೆ ವಿಶ್ವಾಸವಿದೆ' ಸೈನಿಕರು ಆತನನ್ನು ರಾಜನ ಬಳಿ ಕರೆದೊಯ್ದರು. ರಾಜ ನೋಡುತ್ತಾನೆ, ಈತ ಅಂಗಿಯನ್ನೇ ಧರಿಸಿಲ್ಲ! ಆಗ ರಾಜನಿಗೆ ಅರ್ಥವಾಯಿತು, ಅಧಿಕಾರ ಅಥವಾ ಸಂಪತ್ತಿನಿಂದ ನೆಮ್ಮದಿ ಸಿಗುವುದಿಲ್ಲ, ಅದು ವ್ಯಕ್ತಿಗತವಾದದ್ದು ಮತ್ತು ಅದು ನಮ್ಮೊಳಗೇ ಇರುತ್ತದೆ ಎನ್ನುವುದು.
ನಾವೂ ರಾಜನಂತೇ ಅಲ್ಲವೆ? ಕೆಲವು ಸಲ ಕಾರಣಗಳೇ ಇರುವುದಿಲ್ಲ. ಆದರೂ ಕೊರಗುತ್ತಿರುತ್ತೇವೆ. ಎಲ್ಲವೂ ಇರುತ್ತದೆ, ಏನೂ ಇಲ್ಲ ಎಂದುಕೊಳ್ಳುತ್ತೇವೆ. ಒಮ್ಮೊಮ್ಮೆಯಂತೂ ಇಲ್ಲಸಲ್ಲದ್ದನ್ನು ಊಹೆ ಮಾಡಿಕೊಂಡೇ ನೆಮ್ಮದಿ ಕಳೆದುಕೊಂಡು ಬಿಡುತ್ತೇವೆ. ಯಾರಾದರೂ ಪಿಸುಮಾತಿನಲ್ಲಿ ಮಾತನಾಡುತ್ತಿದ್ದರೆ, ಗೆಳೆಯರು ನಮ್ಮನ್ನು ದೂರವಿಟ್ಟು ಏನೋ ಮಾತನಾಡಿಕೊಳ್ಳುತ್ತಿದ್ದರೆ, ಬಾಸ್ ಜತೆ ಸಹೋದ್ಯೋಗಿ ಚೆನ್ನಾಗಿದ್ದರೆ ನಮ್ಮ ನೆಮ್ಮದಿ ಕದಡಿ ಹೋಗುತ್ತದೆ. ವಿನಾಕಾರಣ ನೆಮ್ಮದಿ ಕಳೆದುಕೊಂಡ ಮೇಲೆ ಅದರ ಹುಡುಕಾಟದಲ್ಲಿ ತೊಡಗುವುದು. ಯೋಚನೆ ಮಾಡಿ. ಅಸ್ವಸ್ಥ ಮನಸ್ಸು ಇಟ್ಟುಕೊಂಡು ಯೋಗ, ಧ್ಯಾನ ಮಾಡುತ್ತಿದ್ದರೆ ಅಥವಾ ಪುಣ್ಯಕ್ಷೇತ್ರಗಳಿಗೆ ಎಡತಾಕುತ್ತಿದ್ದರೆ ಏನು ಪ್ರಯೋಜನ? ಮೊದಲು ನಮ್ಮ ಮನಸ್ಸು ಚೆನ್ನಾಗಿರಬೇಕು. ಆತ್ಮವಿಶ್ವಾಸ ಎನ್ನುವುದು ನಮ್ಮ ಅಸ್ತ್ರವಾಗಬೇಕು. ಆಗ ನೆಮ್ಮದಿಗಾಗಿ ನಾವು ಹುಡುಕಾಟ ನಡೆಸಬೇಕಿಲ್ಲ. ಏಕೆಂದರೆ ನೆಮ್ಮದಿ ನಮ್ಮನ್ನು ಬಿಟ್ಟು ಎಲ್ಲೂ ಹೋಗಿರುವುದಿಲ್ಲ, ಅದು ನಮ್ಮೊಳಗೇ ಇರುತ್ತದೆ.
-ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

