ಇನ್ನೊಂದು ಜೀವದ ಜತೆ
ಒಳ್ಳೆಯ ವ್ಯಕ್ತಿ, ಒಳ್ಳೆಯ ಬಾಸ್, ಒಳ್ಳೆಯ ಲೀಡರ್ ಅಥವಾ ಒಳ್ಳೆಯ ಶಿಕ್ಷಕ ಅಂತ ಅನ್ನಿಸಿಕೊಳ್ಳೋದು ಹೇಗೆ?
ಇವತ್ತಿನ ಮ್ಯಾನೇಜ್ಮೆಂಟ್ ಗುರುಗಳು ಅದಕ್ಕೆ ನೂರಾರು ದಾರಿಗಳನ್ನು ತೋರಿಸಬಹುದು. ಎಲ್ಲಕ್ಕಿಂತ ಮುಖ್ಯವಾದ ಮತ್ತು ಅತಿ ಸುಲಭವಾದ ಹಾದಿಯೊಂದಿದೆ. ಅದನ್ನು ನಿಮಗೆ ಬೇರೊಬ್ಬರು ಹೇಳಿಕೊಟ್ಟು ಕಲಿತುಕೊಳ್ಳುವಂಥದ್ದಲ್ಲ. ನೀವೇ ಕಲಿತುಕೊಳ್ಳುವಂಥದು. ನಿಮ್ಮೊಂದಿಗೆ ಕೆಲಸ ಮಾಡುವವರ ಸಮಸ್ಯೆ, ಸಂಕಷ್ಟಗಳನ್ನು ಅರ್ಥ ಮಾಡಿಕೊಂಡರೆ ನಿಮ್ಮಂಥ ಅತ್ಯುತ್ತಮ ಬಾಸ್ ಅಥವಾ ಲೀಡರ್ ಬೇರಾರೂ ಇಲ್ಲ. ದಡ್ಡ ವಿದ್ಯಾರ್ಥಿಯ ತೊಂದರೆಯನ್ನು ಅರಿತುಕೊಂಡು ಆತನಲ್ಲಿ ಕಲಿಕೆ ಬಗ್ಗೆ ಆಸಕ್ತಿ ಮೂಡಿಸುವಂತೆ ಮಾಡುವುದಿದೆಯಲ್ಲ, ಅದಕ್ಕಿಂತ ದೊಡ್ಡ ಸಾಧನೆ ಬೇರೆ ಇದೆಯಾ? ಶಿಕ್ಷಕನಲ್ಲಿ ತಾಳ್ಮೆ ಮತ್ತು ದಡ್ಡ ವಿದ್ಯಾರ್ಥಿಗಳ ಬಗ್ಗೆ ಪ್ರೀತಿ ಇದ್ದರೆ ಮಾತ್ರ ಈ ಸಾಧನೆ ಮಾಡಲು ಸಾಧ್ಯ. ಬದುಕಿನಲ್ಲಿ ನಮ್ಮ ಸುಖವನ್ನಷ್ಟೇ ನೋಡಿಕೊಳ್ಳುವುದು ಮುಖ್ಯವಲ್ಲ. ಬೇರೆಯವರ ದುಃಖಕ್ಕೆ ಸ್ಪಂದಿಸುವುದನ್ನು ಕಲಿತುಕೊಂಡರೆ ನೀವೇ ಪರಮ ಸುಖಿ. 'ಪರೋಪಕಾರಂ ಇದಂ ಶರೀರಂ' ಎಂಬ ನಮ್ಮ ಸಂಸ್ಕೃತದ ಮಾತಾಗಲೀ, 'ನಿಮ್ಮ ನೋವು ನನ್ನ ಹೃದಯದಲ್ಲಿ' ಎನ್ನುವ ಪಾಶ್ಚಾತ್ಯ ತತ್ವಶಾಸ್ತ್ರಜ್ಞ ಜೆಸ್ಸಿ ಲಿಯರ್ ಮಾತಾಗಲೀ ಧ್ವನಿಸುವುದು ಇದೇ ಅರ್ಥವನ್ನು.
ಒಬ್ಬ ಹುಡುಗ ನಾಯಿ ಮರಿ ಕೊಳ್ಳಲು ಹೋಗುತ್ತಾನೆ. ಅಂಗಡಿಯಾತ ಚೆಂದಚೆಂದದ ಪಪ್ಪಿಗಳನ್ನು ತೋರಿಸಿದ. ಬಾಲಕನ ಗಮನ ಒಂದು ಮೂಲೆಯಲ್ಲಿ ಮುದುರಿಕೊಂಡಿದ್ದ ಮರಿಯತ್ತ. ಅದನ್ನು ನೋಡುತ್ತ ಕೇಳಿದ, 'ಇದೊಂದೇ ಮರಿ ಏಕೆ ಅಲ್ಲಿ ಕುಳಿತಿದೆ?' ಅಂಗಡಿಯವನೆಂದ, 'ಹುಟ್ಟುವಾಗಲೇ ಅದರ ಒಂದು ಕಾಲು ಸೊಟ್ಟಗೆ'. ಅಪ್ಪ-ಮಗನ ಮಧ್ಯೆ ಸಣ್ಣದೊಂದು ಚರ್ಚೆ. ಕೊನೆಗೆ ಅದೇ ಮರಿಯನ್ನು ಕೊಳ್ಳುವುದೆಂದು ನಿರ್ಧಾರವಾಯಿತು. ಅಂಗಡಿಯವನಿಗೆ ಆಶ್ಚರ್ಯ. 'ಇಷ್ಟೇ ಮೊತ್ತಕ್ಕೆ ಇನ್ನೂ ಒಳ್ಳೆಯ ಮರಿಗಳು ಸಿಗುತ್ತವೆ. ನೀವೇಕೆ ಇದನ್ನೇ ಆರಿಸಿಕೊಂಡಿರಿ?' ಪುಟ್ಟ ಹುಡುಗ ತನ್ನ ಕೃತಕ ಕಾಲು ತೋರಿಸಿ ಹೇಳಿದ, 'ಮೂಲತಃ ನಾನೂ ಕುಂಟ. ಆ ಮರಿಯ ಕಷ್ಟ ಏನು ಎನ್ನುವುದು ನನಗೆ ಚೆನ್ನಾಗಿ ಗೊತ್ತು. ನಾನು ಅದನ್ನು ಆರೈಕೆ ಮಾಡುವೆ'.
ಬದುಕಿನಲ್ಲಿ ಕಷ್ಟ ಅನುಭವಿಸಿದವರಿಗೆ ಮಾತ್ರ ಬೇರೊಬ್ಬರ ಕಷ್ಟ ಅರ್ಥವಾಗುವುದು ಎನ್ನುತ್ತಾರೆ. ಜೀವನದಲ್ಲಿ ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಕಷ್ಟ ಅನುಭವಿಸಿರುವವರೇ. ಹಾಗಂತ ನಮಗೆ ಒಳ್ಳೆಯ ಕಾಲ ಬಂದಾಗ ಇತರರನ್ನು ಕಾಲ ಕಸದಂತೆ ಕಾಣುವುದು ಸಲ್ಲದು. ನಮ್ಮ ಸಂತೋಷವನ್ನು ಬೇರೆಯವರೊಂದಿಗೆ ಹಂಚಿಕೊಂಡು, ಬೇರೆಯವರ ಕಷ್ಟದಲ್ಲಿ ನಾವು ಭಾಗಿಯಾದರೆ ಅದುವೇ ಜೀವನದ ನಿಜವಾದ ಸಾರ್ಥಕ್ಯ.
-ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

