ಕೇಸರಿಯಲ್ಲೂ ಕಲಬೆರಕೆ!
ಎಷ್ಟೋ ಸಾರಿ ಸಮಾರಂಭಗಳಲ್ಲಿ ಮನೆಯ ಯಜಮಾನತಿ ಕೇಸರಿಯ ವಿಷಯದಲ್ಲಿ ಬೇಜಾರು ಮಾಡಿಕೊಳ್ಳುವುದನ್ನು ಕೇಳಿರಬಹುದು. ಕೇಸರಿಬಾತ್ನ ಬಣ್ಣ ಚೆನ್ನಾಗಿ ಬರಲಿಲ್ಲ, ಯಾಕೋ ಕೇಸರಿ ಘಮಘಮ ಸುವಾಸನೆಯೇ ಇಲ್ಲ. ಕೇಸರಿ ಯಾವ ಅಂಗಡಿಯಿಂದ ತಂದಿದ್ದೀರಿ? ಅದೇನಾದರೂ ಡೂಪ್ಲಿಕೇಟಾ? ನಾವು ಹಾಕಿದ ಅಳತೆಗೆ ಕಲರ್ ಎಷ್ಟು ಚೆನ್ನಾಗಿ ಬರಬೇಕಿತ್ತು. ಪರಿಮಳವಂತೂ ಇಡೀ ಊರಿಗೇ ಹರಡಬೇಕಿತ್ತು ಎಂದು ಅಲವತ್ತುಕೊಳ್ಳುತ್ತಾರೆ.
ಹೌದು, ಕೇಸರಿಗೆ ತುಂಬಾ ಕಲಬೆರಕೆ ಮಾಡಲಾಗುತ್ತದೆ. ಅದು ನಮ್ಮ ಗಮನಕ್ಕೇ ಬರುವುದಿಲ್ಲ. ಸಿಹಿ ತಿಂಡಿ, ಕೇಸರಿಬಾತ್ ಮಾಡಿದಾಗಲೇ ಅದರ ನಿಜ ಬಣ್ಣ ಬಯಲಾಗುವುದು. ಈ ತರಹ ಕಲಬೇರಕೆಯ ಅನುಮಾನ ವಿದ್ದರೆ ಸ್ವಲ್ಪ ಕೇಸರಿಯನ್ನು ಹಾಲಿನಲ್ಲಿ ನೆನೆಸಿಡಿ. ಅದು ಅಪ್ಪಟ ಕೇಸರಿ ಎಂಬುದು ಖಾತ್ರಿಯಾದ ಮೇಲೆ ಉಳಿದುದನ್ನು ಉಪಯೋಗಿಸಿ. ಹೀಗೆ ಮಾಡುವುದರಿಂದ ಸಮಾರಂಭ ಗಳಲ್ಲಾಗುವ ಮುಜುಗರವನ್ನು ತಪ್ಪಿಸಿಕೊಳ್ಳಬಹುದು.
ಮಾರುಕಟ್ಟೆಯಲ್ಲಿ ಮಾರಾಟವಾಗುವ ಕೇಸರಿಯು ಚಪ್ಪಟೆಯಾದ ಕೆಂಪು ಕಂದು ಬಣ್ಣದ, ಗೋಜಲಾದ ಶಲಾಕಾಗ್ರಗಳಿಂದ ಕೂಡಿರುತ್ತದೆ. ಇದರ ವಾಸನೆ ವಿಶಿಷ್ಟವಾಗಿದ್ದು, ಸ್ವಲ್ಪ ಕಹಿರುಚಿ ಹೊಂದಿರುತ್ತದೆ. ಫ್ರೆಶ್ ಆಗಿದ್ದಾಗ ಅವು ಹೊಳಪು ಹೊಂದಿರುತ್ತದೆ, ಕ್ರಮೇಣ ಬಣ್ಣ ಮಸುಕಾಗಿ, ಪೆಡಸಾಗುತ್ತದೆ.
ಬೆಲೆ ಹೆಚ್ಚಿರುವುದರಿಂದ ಕೇಸರಿಗೆ ಕಲಬೆರಕೆ ಸಾಮಾನ್ಯವಾಗಿದೆ. ಶಲಾಕ ಮತ್ತು ಹೂವಿನ ಎಸಳುಗಳನ್ನು ಕೇಸರಿಯಲ್ಲಿ ಸೇರಿಸುತ್ತಾರೆ. ಇಷ್ಟೇ ಅಲ್ಲ ಮುಸುಕಿನ ಜೋಳದ ಜುಟ್ಟು ಮತ್ತು ಕೋಲ್ಟಾರ್ ಬಣ್ಣಗಳನ್ನು ಹಾಕಿದ ಇತರ ಪದಾರ್ಥಗಳನ್ನೂ ಕಲಬೆರಕೆಗೆ ಉಪಯೋಗಿಸುತ್ತಾರೆ. ತೂಕ ಹೆಚ್ಚಿಸಲು ನೀರು, ಎಣ್ಣೆ, ಗ್ಲಿಸರಿನ್ ಕೂಡ ಸೇರಿಸುತ್ತಾರೆ.
ಇದನ್ನು ಆಯುರ್ವೇದ ವೈದ್ಯದಲ್ಲಿಯೂ ಉಪಯೋಗಿಸಲಾಗುತ್ತದೆ. ಜ್ವರಗಳಲ್ಲಿ, ವಿಷಣ್ಣತೆ ರೋಗಗಳಲ್ಲಿ, ಪಿತ್ತಾಶಯಕ್ಕೆ ಸಂಬಂಧಿಸಿದ ಕಾಯಿಲೆಗಳಲ್ಲಿ ಉಪಯೋಗಿಸುತ್ತಾರೆ. ಇದಕ್ಕೆ ಉತ್ತೇಜಕ ಮತ್ತು ಜಠರೋತ್ತೇಜಕ ಗುಣಗಳಿವೆ. ಮಕ್ಕಳ ಶೀತಬಾಧೆಗಳಿಗೆ ಔಷಧವಾಗಿ ಉಪಯೋಗಿಸಲಾಗುತ್ತದೆ. ಇದನ್ನು ವಿಶೇಷವಾಗಿ ಪೇಯಗಳಲ್ಲಿ ಉಪಯೋಗಿಸುತ್ತಾರೆ. ಔಷಧಗಳಿಗೆ ಬಣ್ಣ ಕೊಡಲು ಕೇಸರಿ ಉಪಯೋಗವಾಗುತ್ತದೆ. ಕೇಸರಿ ಮೂತ್ರನಾಳ, ಜೀರ್ಣಾಂಗ ಮತ್ತು ಗರ್ಭಕೋಶದ ತೊಂದರೆಗಳಿಗೆ ಉಪಯೋಗವಾಗುತ್ತದೆ. ಋತುಸ್ರಾವ ಕ್ರಮಬದ್ಧಗೊಳಿಸಲೂ ಇದನ್ನು ಉಪಯೋಗಿಸುತ್ತಾರೆ.
ಕೇಸರಿಯ ತೈಲವನ್ನು ಗರ್ಭಕೋಶದ ಹುಣ್ಣುಗಳಿಗೆ ಹಚ್ಚುತ್ತಾರೆ. ಕೇಸರಿಯನ್ನು ತುಪ್ಪದೊಂದಿಗೆ ಕುಟ್ಟಿ ಸೇವಿಸಿದಾಗ ಡಯಾಬಿಟಿಸ್ನಂಥ ಕಾಯಿಲೆಗಳು ಹತೋಟಿಗೆ ಬರುತ್ತವೆಂದು ವರದಿಯಾಗಿದೆ. ಅಲ್ಲದೇ ಹೃದಯ ಮತ್ತು ಮಿದುಳಿನ ಬಲವರ್ಧನೆಗೂ ಉಪಯೋಗಿಸುತ್ತಾರೆ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

