ಬೈಟುಕಾಫಿ

ಸಹಕಾರ ಹಸ್ತ

ಸಹಕಾರ ಸಂಘಗಳು ವಿಕಲಚೇತನ ಮಕ್ಕಳನ್ನು ದತ್ತು ಸ್ವೀಕರಿಸಿ ಅವರ ವಿದ್ಯಾಭ್ಯಾಸಕ್ಕೆ ನೆರವಾಗುವ ಅನುಕರಣೀಯ ವ್ಯವಸ್ಥೆಯೊಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರಂಭವಾಗಿದೆ.

ಸಹಕಾರ ಹಸ್ತ
Published On :

ಹಣಕಾಸು ಸಂಸ್ಥೆಗಳ ವ್ಯವಹಾರವೇ ಹಾಗೆ. ವರ್ಷದಿಂದ ವರ್ಷಕ್ಕೆ ಖರ್ಚು ಕಡಿಮೆ ಮಾಡಿ ಲಾಭ ಹೆಚ್ಚು ಮಾಡುವುದು ಹೇಗೆ? ಜನರಿಗೆ ಹೆಚ್ಚು ಆಕರ್ಷಣೀಯವಾದ ಯೋಜನೆಗಳನ್ನು  ತೋರಿಸಿ ಹೆಚ್ಚಿನ ಪ್ರಮಾಣದಲ್ಲಿ ಠೇವಣಿ ಸಂಗ್ರಹ ಮಾಡುವುದು ಹೇಗೆ...
ಇದು ಅವುಗಳ ವ್ಯವಹಾರದ ಸಾಮಾನ್ಯ ಲಕ್ಷಣಗಳು. ಇದು ತಪ್ಪು ಅಂತೀರಾ? ಖಂಡಿತವಾಗಿಯೂ  ಅಲ್ಲವೇ ಅಲ್ಲ. ಏಕೆಂದರೆ ಅವುಗಳೆಲ್ಲ ನ್ಯಾಯಸಮ್ಮತವಾದ ವಹಿವಾಟಿನ ಅಂಶ ಅಷ್ಟೆ. ಆದರೆ ಇಲ್ಲಿ ಉಲ್ಲೇಖಿಸಲು ಹೊರಟಿರುವುದು ಹಣಕಾಸು ಸಂಸ್ಥೆಗಳ ತೀರಾ ಭಿನ್ನವಾದ ಅಂಶ.
ಅಂಗವಿಕಲ ಮಕ್ಕಳನ್ನು ದತ್ತು ತೆಗೆದುಕೊಂಡು ಅವರಿಗೆ ಪ್ರತಿ ತಿಂಗಳು ರು. 400- 1,000  ನೀಡುವ ವಿಶೇಷ ವ್ಯವಸ್ಥೆ ದ.ಕ.ಜಿಲ್ಲೆಯಲ್ಲಿದೆ.
ನಿಮ್ಮ ಏಳಿಗೆಗೆ ನಾವು:  ಅಂಗವಿಕಲ ಮಕ್ಕಳಿಗೆಂದೇ ದ.ಕ.ಜಿಲ್ಲೆಯಲ್ಲಿ ಈ ವ್ಯವಸ್ಥೆ ಆರಂಭಿಸಲಾಗಿದೆ. ಅವರಿಗೆ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ. 'ನಿಮ್ಮ ಏಳ್ಗೆಗೆ ನಾವೂ ಇದ್ದೇವೆ' ಎನ್ನುವ ಸಂದೇಶ ರವಾನಿಸಲು ಸೇವಾ ಸಹಕಾರಿ ಬ್ಯಾಂಕ್‌ಗಳು, ಪತ್ತಿನ ಸಹಕಾರ ಸಂಘಗಳು, ಇತರ ಸಹಕಾರಿ ಸೊಸೈಟಿಗಳು ಮುಂದೆ ಬಂದಿವೆ. ಇದರ ಪರಿಣಾಮ ಅಂಗವಿಕಲ ವಿದ್ಯಾರ್ಥಿಗಳ ದತ್ತು ಸ್ವೀಕಾರ.
ಶ್ರೀಕಾರ ದ.ಕ.ಜಿಲ್ಲಾ ಪಂಚಾಯಿತಿ: ಈ ಪ್ರಯತ್ನಕ್ಕೆ ಕೈಹಾಕಿದ್ದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವಿಜಯ ಪ್ರಕಾಶ್ ಮತ್ತು ಜಿಲ್ಲಾ ಸಹಕಾರಿ ಸಂಘಗಳ ಉಪ ನಿಬಂಧಕರಾಗಿದ್ದ ಪಳಂಗಪ್ಪರ ಪ್ರಯತ್ನದ ಫಲವಾಗಿ ಸಹಕಾರಿ ರಂಗದಲ್ಲೇ ಮೊದಲ ಬಾರಿಗೆ ಇಲ್ಲಿ ಸರ್ಕಾರಿ ಶಾಲೆಗಳ ಅಂಗವಿಕಲ ಮಕ್ಕಳನ್ನು ದತ್ತು ಸ್ವೀಕರಿಸಿ ಶೈಕ್ಷಣಿಕ ಚಟುವಟಿಕೆಗೆ ಪೂರಕ ನೆರವು ನೀಡಲಾಗುತ್ತಿದೆ.
7.87 ಲಕ್ಷ ನೆರವು: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿರುವ ಅಂಗವಿಕಲ ವಿದ್ಯಾರ್ಥಿಗಳ ಅಭ್ಯುದಯ ಕುರಿತಂತೆ ನವೆಂಬರ್‌ನಲ್ಲಿ ಜಿಲ್ಲೆಯ ಎಲ್ಲ ಸಹಕಾರಿ ಸಂಘಗಳಿಗೆ ಜಿ.ಪಂ.ವಿಜ್ಞಾಪನಾ ಪತ್ರ ಕಳುಹಿಸಿತ್ತು. ಜಿಲ್ಲೆಯಲ್ಲಿ 1,407 ವಿವಿಧ ಬಗೆಯ ಸಹಕಾರಿ ಸಂಘಗಳಿವೆ. ಈ ಪತ್ರಕ್ಕೆ ಸ್ಪಂದಿಸಿದ್ದು 87 ಸಹಕಾರಿ ಸಂಘಗಳು ಮಾತ್ರ. ಪ್ರಥಮ ಹಂತದಲ್ಲಿ 500 ರಿಂದ 20 ಸಾವಿರ ವರೆಗೆ ಆರ್ಥಿಕ ನೆರವು ನೀಡಿದ್ದು, ಇನ್ನೂ ಕೆಲವು ಸೊಸೈಟಿಗಳು ವಸ್ತು ರೂಪದಲ್ಲಿ ಸಹಾಯಹಸ್ತ ಚಾಚಿವೆ. ಫೆಬ್ರವರಿವರೆಗೆ ಒಟ್ಟು 567 ಮಂದಿ ಅಂಗವಿಕಲ ವಿದ್ಯಾರ್ಥಿಗಳಿಗೆ 7,87,271 ಲಕ್ಷ ನೆರವು ಬಂದಿದೆ.
ಎಲ್ಲಿಂದ ಎಷ್ಟು?: ಸುಳ್ಯ 8, ಪುತ್ತೂರು 7, ಮೂಡುಬಿದಿರೆ 8, ಮಂಗಳೂರು ದಕ್ಷಿಣ 11, ಮಂಗಳೂರು ಉತ್ತರ 9, ಬೆಳ್ತಂಗಡಿ 14 ಹಾಗೂ ಬಂಟ್ವಾಳದಲ್ಲಿ 30 ಸಹಕಾರಿ ಸಂಘಗಳು ನೆರವು ನೀಡಿವೆ. ಆಯಾ ಸಹಕಾರಿ ಸಂಘಗಳ ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿರುವ ಅಂಗವಿಕಲ ವಿದ್ಯಾರ್ಥಿಗಳಿಗೆ ನೆರವು ಲಭಿಸುತ್ತಿದೆ. ಪ್ರತಿ ವಿದ್ಯಾರ್ಥಿಗೆ ನಗದು ಮಾತ್ರವಲ್ಲದೆ ಪುಸ್ತಕ, ಬ್ಯಾಗ್, ಸಮವಸ್ತ್ರ, ಹಾಸಿಗೆ, ವ್ಹೀಲ್‌ಚೇರ್, ರೈನ್‌ಕೋಟ್ ನೀಡುತ್ತಿವೆ.

  • 5,186 ಅಂಗವಿಕಲ ಮಕ್ಕಳು
  • 87 ನೆರವು ನೀಡುತ್ತಿರುವ ಸಹಕಾರಿ ಸಂಘಗಳು
  • 567 ಸದ್ಯ ನೆರವು ಪಡೆಯುತ್ತಿರುವ ಮಕ್ಕಳು 
  • 1,400 ಜಿಲ್ಲೆಯಲ್ಲಿರುವ ಸಹಕಾರಿ ಸಂಘಗಳು
  • 7.87 ಲಕ್ಷ ರು. ಹಂಚಿಕೆಯಾದ ಮೊತ್ತ
-ಆತ್ಮಭೂಷಣ್
     athmaatlar@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.