ಬೈಟುಕಾಫಿ

ಕ್ಲಾಸ್ ಫಿಲ್ಮ್

ಪುತ್ತೂರಿನ ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು ತಯಾರಿಸಿದ...

ಕ್ಲಾಸ್ ಫಿಲ್ಮ್
Published On :

ಪುತ್ತೂರಿನ ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು ತಯಾರಿಸಿದ 2 ಚಲನಚಿತ್ರಗಳು ತೆರೆ ಕಂಡು ನೋಡುಗರ ಪ್ರಶಂಸೆಗೆ ಕೂಡಾ ಪಾತ್ರವಾಗಿವೆ.  

ಪತ್ರಿಕೋದ್ಯಮ ಡಿಗ್ರಿ ಪಡೆದು ಬರುವ ಹೆಚ್ಚಿನ ಮಂದಿಗೆ ಪ್ರಾಯೋಗಿಕ ಅನುಭವವಿಲ್ಲ ಎಂಬ ಆರೋಪ ಬಹುಮಟ್ಟಿಗೆ ನಿಜ. ಆದರೆ ಪುತ್ತೂರಿನ ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳ ಕತೆ ಬೇರೆ. ಇವರು ಮೀಡಿಯಾಕ್ಕಿಂತಲೂ ಕೊಂಚ ಮುಂದೆ ಹೋಗಿ, ಸಿನಿಮಾ ತಯಾರಿಸಿ ಸೈ ಎನಿಸಿಕೊಂಡಿದ್ದಾರೆ.
ಇವರ ಎರಡು ಚಲನಚಿತ್ರಗಳಲ್ಲಿ ಒಂದು ಕನಸಿನ ಕುರಿತಾದದ್ದು. 2011ರ ಡಿ.26ರಂದು '?' ಎಂಬ ಶೀರ್ಷಿಕೆಯಡಿ ಚಿತ್ರೀಕರಣ ಪ್ರಾರಂಭ. ಚಿತ್ರೀಕರಣವಾದ ಮೇಲೆ ಶೀರ್ಷಿಕೆ 'ಹಿಂಬಾಲಿಸುವೆಯಾ...' ಎಂದು ಬದಲಾಯಿತು. ಮನಸ್ಸಿನ ಗೊಂದಲಗಳು, ತುಮುಲ ಮತ್ತು ಭಯವನ್ನು ಅನಾವರಣಗೊಳಿಸುವ ಈ ಚಿತ್ರವನ್ನು ರಾತ್ರಿಯ ವೇಳೆ ಚಿತ್ರಿಸಲಾಗಿದೆ.
'ಇದು ನಮ್ಮ ತಂಡದ ಪ್ರಥಮ ಪ್ರಯತ್ನ. ಚಿತ್ರೀಕರಣದಿಂದಾಗಿ ಅದರ ಆಳ- ಅಗಲ ಅರಿವಾಯಿತು. ತಡರಾತ್ರಿ 3 ಗಂಟೆಯವರೆಗೂ ಚಿತ್ರೀಕರಿಸಿದೆವು. ಭಯದ ಕುರಿತ ಚಿತ್ರ, ರಾತ್ರಿಯ ವೇಳೆ ಹಾಗೂ ತೋಟ, ಗುಡ್ಡಗಳ ಮಧ್ಯೆ ಚಿತ್ರೀಕರಿಸಿದ್ದರಿಂದ ನಾವೂ ಭಯಪಡುವ ಸನ್ನಿವೇಶಗಳು ಎದುರಾದವು' ಎನ್ನುತ್ತಾರೆ ಈ ಚಿತ್ರತಂಡದ ವಿದ್ಯಾರ್ಥಿಗಳು. 20 ಸಾವಿರ ರು. ವೆಚ್ಚದಲ್ಲಿ ಚಿತ್ರ ಮುಗಿಸಬೇಕೆಂದಿತ್ತು. ಮುಕ್ತಾಯದ ವೇಳೆಗೆ ಭಾರಿ ಮೊತ್ತವನ್ನೇ ತೆರಬೇಕಾಯಿತು. 3ಡಿ, ಗ್ರಾಫಿಕ್ಸ್, ಎನಿಮೇಷನ್‌ನ ಟಚ್ ಕೊಡಬೇಕಾಯಿತು. ಜತೆಗೆ ಹಾಡಿನ ಅಳವಡಿಕೆ. ಎಲ್ಲ ವಿದ್ಯಾರ್ಥಿಗಳೇ ನಿರ್ವಹಿಸಿದ್ದಾರೆ. ಒಂದೂವರೆ ವರ್ಷದ ಚಿತ್ರೀಕರಣ.
ಮಿನುಗು ಕ್ರಿಯೇಷನ್ಸ್ ಬ್ಯಾನರ್‌ನಡಿ ತಯಾರಾದ 'ಹಿಂಬಾಲಿಸುವೆಯಾ...' ಚಿತ್ರಕ್ಕೆ ಆ್ಯಕ್ಷನ್- ಕಟ್ ನೀಡಿದವರು ಪ್ರಸಾದ್ ಆಚಾರ್ಯ ಕೆ. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಜಿ. ಶ್ರೀಧರ್ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ.
ಇನ್ನೊಂದು ಚಿತ್ರ 'ಜೀವನಂ'. ಇದು ನೀರಿನ ಪೋಲು ಮತ್ತು ಅದನ್ನು ಉಳಿಸುವಿಕೆಯ ಬಗೆಗಿನ ಚಿತ್ರ. ನೀರಿನ ಬಗ್ಗೆ ಸಮಗ್ರ ಅಧ್ಯಯನ ಮಾಡಿದ ವಿದ್ಯಾರ್ಥಿ ತಂಡ ಅದನ್ನು ಚಲನಚಿತ್ರ ರೂಪದಲ್ಲಿ ತೆಗೆಯಿತು. ಜೀವನಂ ಚಿತ್ರದ ನಿರ್ದೇಶನ ಪ್ರದೀಪ್ ಕೋಡಿಂಬಾಡಿಯದು. ರಾಜೇಶ್ ಪಲ್ಲತ್ತಾರು, ರಾಜೇಶ್ ಭಟ್, ಅಭಿಷೇಕ್ ಡಿ.ಪುಂಡಿತ್ತೂರು, ಅಕ್ಷಯ್ ನಾಯಕ್, ಯಶ್ವಿತ್ ಕುಮಾರ್, ಆರ್‌ಜೆ ವರುಣ್, ಸಂದೀಪ್ ಪಿ., ನವೀನ್, ಗಣೇಶ್, ಮಂಜುನಾಥ್ ಎಲ್.ಕೆ., ರಶ್ಮಿ ಬನಾರಿ, ಸ್ವಾತಿ ಎಂ., ಸ್ವಾತಿ ಸುಬ್ರಹ್ಮಣ್ಯ, ಪ್ರವೀಣ್, ಮಾ. ಕೌಶಿಕ್ ಎರಡೂ ತಂಡದಲ್ಲಿದ್ದವರು.
' ಸಿನಿಮಾದಿಂದ ವಿದ್ಯಾರ್ಥಿಗಳು ಸಾಕಷ್ಟು ತಾಂತ್ರಿಕತೆ ಕಲಿತುಕೊಳ್ಳಲು ಅವಕಾಶವಾಗಿದೆ' ಎನ್ನುತ್ತಾರೆ ಇಲ್ಲಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ.

- ಉದಯ್ ವಿಟ್ಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.