ಬೈಟುಕಾಫಿ

ಯಕ್ಷಾಂಶ

ಕೇರಳ- ಕರ್ನಾಟಕದ ಗಡಿಪ್ರದೇಶವಾದ ಅಡ್ಯನಡ್ಕ ನಿವಾಸಿಗಳಾದ ಈ ದಂಪತಿಯದ್ದು ಯಕ್ಷಗಾನ, ತಾಳಮದ್ದಲೆಯಲ್ಲಿ ಎತ್ತಿದ ಕೈ.

ಯಕ್ಷಾಂಶ
Published On :

ಯಕ್ಷ ಸಂಸಾರ

ಜೀವನದ ನೋವು ನಲಿವುಗಳನ್ನು ಹಂಚಿಕೊಂಡು ಬಾಳುವ ದಂಪತಿ ಶಿಕ್ಷಕ ವೃತ್ತಿಯೊಂದಿಗೆ ಕಲಾರಾಧನೆ ಮತ್ತು ಸಮಾಜಸೇವೆಯನ್ನೂ ಮೈಗೂಡಿಸಿಕೊಂಡು ಸಹಜೀವನ ನಡೆಸುವುದು ವಿರಳ. ಅಂಥ ಅಪರೂಪದ ಜೋಡಿ ತಲಂಜೇರಿ ಕೃಷ್ಣಭಟ್ ಮತ್ತು ಟಿ.ಕೆ. ರತ್ನಾವತಿ ಭಟ್‌ರದ್ದು.
ಕೇರಳ- ಕರ್ನಾಟಕದ ಗಡಿಪ್ರದೇಶವಾದ ಅಡ್ಯನಡ್ಕ ನಿವಾಸಿಗಳಾದ ಈ ದಂಪತಿಯದ್ದು ಯಕ್ಷಗಾನ, ತಾಳಮದ್ದಲೆಯಲ್ಲಿ ಎತ್ತಿದ ಕೈ. ಕೃಷ್ಣಭಟ್ ನಿವೃತ್ತ ಶಿಕ್ಷಕ. ರತ್ನಾವತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ. ಒಂದೇ ವೃತ್ತಿಯವರಾಗಿರುವ ಈ ದಂಪತಿ ಅಪರೂಪದ ಜೋಡಿ ಎಂದು ಹೇಳಲು ಯಕ್ಷಗಾನದ ಬಗ್ಗೆ ಅವರಿಗಿರುವ ಅಭಿರುಚಿಯೇ ಕಾರಣ.
ಯಕ್ಷಗಾನ, ತಾಳಮದ್ದಲೆ, ಗಮಕ, ಅರ್ಥಗಾರಿಕೆ, ಪುರಾಣ ಪ್ರವಚನ, ಸತ್ಯನಾರಾಯಣ ಪೂಜಾ ಕಥಾ ನಿರೂಪಣೆ, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವ ಕೃಷ್ಣಭಟ್ಟರಿಗೆ ಇದೀಗ 67. ಶಿಕ್ಷಣ ಕ್ಷೇತ್ರದಲ್ಲಿ 39 ವರ್ಷ ಸುದೀರ್ಘ ಸೇವೆ ಸಲ್ಲಿಸಿ, ಜನಮೆಚ್ಚಿದ ಶಿಕ್ಷಕರಾಗಿ ಗುರುತಿಸಿಕೊಂಡವರು. ಏತನ್ಮಧ್ಯೆ, ಅಡ್ಯನಡ್ಕದಲ್ಲಿ ಮಹಿಳಾ ಯಕ್ಷಗಾನ ಸಂಘ ಕಟ್ಟಿ ಬೆಳೆಸಿದ ಕೀರ್ತಿಯೂ ಇವರಿಗೇ ಸಲ್ಲುತ್ತದೆ. ಪ್ರಸಂಗಗಳ ಆಮೂಲಾಗ್ರ ಅನುಭವ, ಪಾಂಡಿತ್ಯ, ಅರ್ಥಗಾರಿಕೆಯ ಸೂಕ್ಷ್ಮ ವಿವೇಚನೆಯುಳ್ಳ ಕೃಷ್ಣಭಟ್ಟರು ಆಟಕೂಟಗಳೆರಡರಲ್ಲೂ ಹವ್ಯಾಸಿ ಕಲಾವಿದರಾಗಿ ಕೀರ್ತಿವೆತ್ತವರು.
ರತ್ನಾವತಿ ಭಟ್‌ಗೆ ಯಕ್ಷಗಾನದಲ್ಲಿ ಸಂಪೂರ್ಣ ಸಾಥ್ ನೀಡಿದವರು ಪತಿ ಕೃಷ್ಣಭಟ್. 1978ರಲ್ಲಿ ಮದುವೆಯಾದ ರತ್ನಾವತಿ, ನಂತರವೂ ವಿದ್ಯಾಭ್ಯಾಸ ಮುಂದುವರಿಸಿ ಪರಿಪೂರ್ಣ ಯಕ್ಷ ಕಲಾವಿದೆಯಾದರು. ಯಕ್ಷಗಾನದಲ್ಲಿ ಮಹಿಳೆಯರು ಯಾಕೆ ತೊಡಗಿಸಿಕೊಳ್ಳಬಾರದು? ಎಂಬ ಯೋಚನೆ ಮನಸ್ಸಿನಲ್ಲಿ ಮೂಡಿದಾಗ ತನ್ನ ಪತ್ನಿಗೆ ಯಕ್ಷಗಾನ ಕಲಿಸಿ ರಂಗ ಪ್ರವೇಶ ಮಾಡಿಸಿದರು.
ರತ್ನಾವತಿಯವರಿಗೆ ತಮ್ಮಂತೆ ಇನ್ನಷ್ಟು ಮಹಿಳೆಯರು ಯಕ್ಷಗಾನದ ಪಾತ್ರಧಾರಿಗಳಾಗಬೇಕೆಂಬ ಆಕಾಂಕ್ಷೆ ಹುಟ್ಟಿದ್ದೇ ತಡ, 1988ರಲ್ಲಿ ಅಡ್ಯನಡ್ಕದಲ್ಲಿ ಮಹಿಳಾ ಯಕ್ಷಗಾನ ತಂಡ ಸ್ಥಾಪಿಸಿದರು. ನೂರಾರು ಮಹಿಳೆಯರು ಅಲ್ಲಿ ಯಕ್ಷಗಾನ ಕಲಿತರು. ತಮ್ಮದೇ ತಂಡ ಬೆಳೆಯಿತು. ಆ ಯಕ್ಷಗಾನ ಮಂಡಳಿ ಯಶಸ್ಸೂ ಕಂಡಿತು.
ಊರಲ್ಲಿ ರತ್ನಾವತಿ ಅವರು 'ರತ್ನಕ್ಕ' ಅಂತಲೇ ಫೇಮಸ್ಸು. ರತ್ನ ಟೀಚರ್‌ಗೆ ಈಗ 55ರ ಹರೆಯ. ಸಂಸಾರ, ಮುಖ್ಯಶಿಕ್ಷಕಿಯ ಜವಾಬ್ದಾರಿಯ ಜತೆ, ಯಕ್ಷಗಾನ, ಸಮಾಜಮುಖಿ ಕಾರ್ಯಗಳಲ್ಲಿ ಬ್ಯುಸಿಯಾಗಿರುವ ಇವರು ಸದಾ ಹಸನ್ಮುಖಿ, ನಿಗರ್ವಿ. 'ಸುದರ್ಶನ ಗರ್ವಭಂಗ'ದ ದೇವೇಂದ್ರನ ಪಾತ್ರದೊಂದಿಗೆ ಇವರ ಪ್ರಪ್ರಥಮ ರಂಗಪ್ರವೇಶ. ನಂತರ ಅರ್ಜುನ, ಕಂಸ, ಮುರಾಸುರ, ದಕ್ಷ, ಕೌರವ ಮೊದಲಾದ ಪಾತ್ರಗಳು ಜನಮನ್ನಣೆ ತಂದಿತ್ತವು. ಮುರಾಸುರ ವಧೆಯಲ್ಲಿ ಮುರಾಸುರನ ಪಾತ್ರವನ್ನು 175 ಬಾರಿ ಸಮರ್ಥವಾಗಿ ನಿರ್ವಹಿಸಿದ ಧೀಮಂತೆ. ಅಡ್ಯನಡ್ಕ ಮಹಿಳಾ ಮಂಡಳಿಯಲ್ಲಿ ನೃತ್ಯಾಸಕ್ತರಿಗಾಗಿ ಯಕ್ಷಗಾನ ನೃತ್ಯ ಸಂಘಟಿಸಿದ್ದ ಇವರು ಹವ್ಯಾಸಿ ಪತ್ರಕರ್ತೆಯೂ ಹೌದು. ಆಕಾಶವಾಣಿಯಲ್ಲಿಯೂ ಹಲವು ಬಾರಿ ಯಕ್ಷಗಾನ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಅವರ ಶಾಲೆಯಲ್ಲಿ ಶೇ.95ರಷ್ಟು ಬಡ ಮಕ್ಕಳಿದ್ದು, ಅವರ ವಿದ್ಯಾಭ್ಯಾಸಕ್ಕೆ ರತ್ನಕ್ಕ ಬಹುವಾಗಿ ನೆರವಾಗಿದ್ದಾರೆ.
2003ರಲ್ಲಿ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ, ತಾಲೂಕು ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ, ಯಕ್ಷ ಪ್ರಮೀಳಾ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ದಕ್ಕಿವೆ. ಪತಿ- ಪತ್ನಿ ಹೀಗೆ ಒಬ್ಬರನ್ನೊಬ್ಬರು ಗೌರವಿಸುತ್ತಾ, ಪರಸ್ಪರ ಪ್ರೋತ್ಸಾಹ ನೀಡುತ್ತಾ ಯಕ್ಷಗಾನ ಕಲೆಯ ಉಳಿವಿಗಾಗಿ ಅವಿರತ ಶ್ರಮ ವಹಿಸುತ್ತಿರುವ ಗಡಿನಾಡಿನ ಈ ಯಕ್ಷದಂಪತಿಗೆ ಒಂದು ಹ್ಯಾಟ್ಸ್ ಆಫ್.

ಮೊದಲ ಬಾರಿಗೆ ಮಹಿಳೆಯರು ಯಕ್ಷಗಾನದ ಪಾತ್ರ ಮಾಡಿದಾಗ ಕುಹಕವಾಡಿದವರು ಎಷ್ಟೋ ಜನ. ಮಹಿಳೆಯರು ಯಾರಿಗಿಂತಲೂ ಕಮ್ಮಿಯಿಲ್ಲ ಎಂದು ಸಾಧಿಸಿ ತೋರಿಸಲೇಬೇಕೆಂಬ ಛಲ ನಮ್ಮಲ್ಲಿ ಮೂಡಿತು.
ಆ ಛಲವೇ ನಮ್ಮ ಯಶಸ್ಸಿಗೆ ಕಾರಣ. ಜತೆಗೆ ಮಕ್ಕಳ ಹಾಗೂ ಪತಿಯ ಪ್ರೋತ್ಸಾಹ ನನಗೆ ಶಕ್ತಿ ತುಂಬಿತು.
- ಟಿ.ಕೆ. ರತ್ನಾವತಿ

-ರಶ್ಮಿ ಕಾಸರಗೋಡು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.