ಬೈಟುಕಾಫಿ

ನಿಜವಾದ ಊಟ

Published On :

ಶ್ರೀಮಂತನೊಬ್ಬ ತಾನು ಸಾಯುವ ಮೊದಲು ತನ್ನ ಮೂವರು ಗಂಡುಮಕ್ಕಳನ್ನು ಕರೆದು 'ನೀವು ದಿನಾಲೂ ರುಚಿಯಾಗಿ ಅಡುಗೆ ಮಾಡಿಸಿಕೊಂಡು ಊಟ ಮಾಡಿ' ಎಂದಿದ್ದ. ಅದಾಗಿ ಸ್ವಲ್ಪ ದಿನದಲ್ಲೇ ಆ ಶ್ರೀಮಂತ ತೀರಿಕೊಂಡ. ತಂದೆಯ ಮಾತಿನಂತೆ ಮಕ್ಕಳು ಪ್ರತಿ ದಿನ ಪಂಚಭಕ್ಷಗಳನ್ನು ಮಾಡಿಸಿಕೊಂಡು ಭರ್ಜರಿಯಾಗಿ ಊಟಮಾಡತೊಡಗಿದರು. ಆದರೆ ಐದಾರು ದಿನಗಳಲ್ಲೇ ಅವರಿಗೆ ಊಟ ಸೇರದಾಯಿತು. ಈ ವಿಷಯವನ್ನು ಅವರು ತಂದೆಯ ಗೆಳೆಯನ ಬಳಿ ಹೇಳಿಕೊಂಡರು. ಅದಕ್ಕವರು 'ಹಾಗಾದರೆ ನಾಳೆ ನಮ್ಮ ಮನೆಗೆ ಊಟಕ್ಕೆ ಬನ್ನಿ. ಅದಕ್ಕೂ ಮೊದಲು ನಿಮ್ಮ ತಂದೆಯ ಹೆಸರಿನಲ್ಲಿ ನಿಮ್ಮ ಹೊಲದಲ್ಲಿ ಒಂದು ಗುಡಿ ಕಟ್ಟಬೇಕಾಗಿದೆ. ನೀವೆಲ್ಲಾ ಗುದ್ದಲಿ, ಸನಿಕೆ ತೆಗೆದುಕೊಂಡು ನಿಮ್ಮ ಹೊಲಕ್ಕೆ ಬನ್ನಿ. ಅಲ್ಲಿ ಕೆಲಸ ಮಾಡೋಣ' ಎಂದರು. ಅವರ ಮಾತಿಗೆ ಮೂವರೂ ಒಪ್ಪಿಗೆ ಸೂಚಿಸಿದರು. ಸರಿ, ಮನೆಯಲ್ಲಿ ಅಡುಗೆಯವನಿಗೆ, ಅನ್ನ-ತಿಳಿಸಾರು, ರಾಗಿಮುದ್ದೆ, ಉಪ್ಪಿನಕಾಯಿ ಮಾಡಲು ಹೇಳಿದರು ತಂದೆಯ ಗೆಳೆಯ. ಮಾರನೇ ದಿನ ಮೂವರೂ ಹೊಲಕ್ಕೆ ಬಂದರು. ಹೊಲವನ್ನು ಅಗೆದರು. ಮಧ್ಯಾಹ್ನವಾಯಿತು. ಮೂವರಿಗೂ ಹೊಟ್ಟೆ ಚುರುಗುಡಲಾರಂಭಿಸಿತು. ಊಟಕ್ಕೆ ಕುಳಿತರು. 'ಆಹಾ, ಎಂಥ ರುಚಿಕರ ಅಡುಗೆ. ಇಂಥ ಊಟವನ್ನು ನಾವು ಇದುವರೆಗೂ ಮಾಡಿದ್ದೇ ಇಲ್ಲ' ಎಂದು ಬಾಯಿ ಚಪ್ಪರಿಸುತ್ತಾ ಊಟ ಮಾಡಿದರು. ಆಗ ಹಿರಿಯರು 'ಇದು ಅಡುಗೆಯ ರುಚಿ ಅಲ್ಲ. ನೀವು ಮೈ ಮುರಿದು ದುಡಿದು, ಹಸಿದು ಊಟ ಮಾಡಿದುದರ ಫಲ. ಇಷ್ಟು ದಿನ ದೇಹವನ್ನು ದಂಡಿಸದೇ ಊಟ ಮಾಡುತ್ತಿದ್ದಿರಿ. ಬರೀ ಊಟ-ನಿದ್ದೆ ಮಾಡುತ್ತಿದ್ದರೆ ಊಟ ರುಚಿಹತ್ತೀತು ಹೇಗೆ?' ಎಂದರು. ಸಹೋದರರಿಗೆ ಜ್ಞಾನೋದಯವಾಯಿತು. ಅಂದಿನಿಂದ ದಿನಾಲೂ ದುಡಿದು ಉಣ್ಣತೊಡಗಿದರು.
- ರುಕ್ಮಿಣಿ ಕೃ. ದೇಶಪಾಂಡೆ, ಗೋಕಾಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.