ಬೈಟುಕಾಫಿ

ಬಿಎಂಶ್ರೀ ಭವನದ ಬವಣೆ

ಬಿಎಂಶ್ರೀ ಭವನದ ಬವಣೆ
Published On :

ಆಂಗ್ಲ ಸಾಹಿತ್ಯದ ಪ್ರೇಮಿಯಾದರೂ 'ಕನ್ನಡವೇ ನನ್ನುಸಿರು' ಎಂದವರು ಬಿ.ಎಂ. ಶ್ರೀಕಂಠಯ್ಯ. ಕನ್ನಡದ ಹೊಸ ಛಂದಸ್ಸಿನ ಹರಿಕಾರ. ಮೂಲತಃ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರಿನವರು. ಕನ್ನಡ ಸಾಹಿತ್ಯ ನಾಡು, ನುಡಿಗೆ ಬಿಎಂಶ್ರೀ ಸಲ್ಲಿಸಿದ ಸೇವೆ ಸ್ಮರಣೀಯ. ಕುವೆಂಪು, ವಿಸೀ, ಎಂ.ವಿ. ಸೀತಾರಾಮಯ್ಯರಂಥ ಮಹಾನ್ ಸಾಹಿತಿಗಳಿಗೆ ಸಾಹಿತ್ಯ ಜೀವ ಕಲೆ ತುಂಬಿ, ಕನ್ನಡದ ಹುಚ್ಚು ಹಚ್ಚಿಸಿದವರು ಇದೇ ಇಂಗ್ಲಿಷ್ ವಿದ್ವಾಂಸ. ಆದರೆ, ಬಿಎಂಶ್ರೀಗಳ ನಿವಾಸವನ್ನು ಸ್ಮಾರಕ ರೂಪದಲ್ಲಿ ಭವ್ಯ ಭವನ ನಿರ್ಮಿಸಿದ ಸರ್ಕಾರ, ನಂತರ ನಿರ್ವಹಣೆಯನ್ನೇ ಮರೆತುಬಿಟ್ಟಿದೆ. ಬಿಎಂಶ್ರೀ ಭವನಕ್ಕೆ ಭವ್ಯ ಪರಿಕಲ್ಪನೆಯೇ ಇಲ್ಲ. ಭೂತ ಬಂಗಲೆಯಂತಾಗಿದೆ ಭವನ. ಕಾವಲೂ ಇಲ್ಲ. ಇದರೊಳಗೊಂದು ಗ್ರಂಥಾಲಯವಿದೆ. ಸದಾ ಬಾಗಿಲು ಹಾಕಿರುತ್ತದೆ. ಕಸ ಹೊಡೆಯುವವರಿಲ್ಲ. ಒಬ್ಬ ಕವಿ ಹೆಸರಿನಲ್ಲಿ ಬೆಂಗಳೂರಲ್ಲೊಂದು ಪ್ರತಿಷ್ಠಾನ, ಬೆಳ್ಳೂರಲ್ಲಿ ಮತ್ತೊಂದು. ಸರ್ಕಾರ ನಿರ್ವಹಣೆ ಹಣ ಕೊಡುತ್ತದೆ. ಅದನ್ನು ಬೆಂಗಳೂರು ಪ್ರತಿಷ್ಠಾನದವರೇ ಬಳಸಿಕೊಳ್ಳುತ್ತಾರೆಂಬುದು ಬೆಳ್ಳೂರು ಪ್ರತಿಷ್ಠಾನದವರ ದೂರು.

ಬಿಎಂಶ್ರೀ ಅವರ 'ಅಶ್ವತ್ಥಾಮ', 'ಗದಾಯುದ್ಧ', 'ಪಾರಸಿಕರು' ನಾಟಕಗಳನ್ನು ಕನ್ನಡಪ್ರಿಯರು ಎಂದಿಗೂ ಮರೆಯವರು. ಒಂದೊಮ್ಮೆ ಇವರ ಕುಟುಂಬ ವಿಪರೀತ ದುಃಖದಲ್ಲಿದ್ದಾಗ ಬೆಳ್ಳೂರಿನ ಎಸ್. ಚಂದ್ರಶೇಖರ್ ಎಂಬವರಿಗೆ ಮಾರಲಾಯಿತು. ಭವನ ನಿರ್ಮಾಣ ಮಾಡುವ ಆಶಯ ವ್ಯಕ್ತವಾದಾಗ ಚಂದ್ರಶೇಖರ್ ಉದಾರವಾಗಿ ದಾನ ಮಾಡಿದರು. ಸರ್ಕಾರ ಆ ನಿವೇಶನದಲ್ಲಿ (85x30) ಸ್ಮಾರಕ ಭವನ ನಿರ್ಮಿಸಿತೇ ಹೊರತು, ನಿರ್ವಹಣೆ ಜವಾಬ್ದಾರಿ ತೆಗೆದುಕೊಳ್ಳಲಿಲ್ಲ.

ಭವನದಲ್ಲಿ ಬಿಎಂಶ್ರೀಗಳ ಐದೂವರೆ ಅಡಿ ಎತ್ತರದ ಫೋಟೋ, ಸಾಹಿತ್ಯ ದಾಖಲೆಗಳನ್ನು ಈ ಭವನದಲ್ಲಿಡಲಾಗಿದೆ. ಕೆಲವು ವರ್ಷಗಳ ಕಾಲ ಬಿಎಂಶ್ರೀ ಹೆಸರಿನಲ್ಲಿ ಅನೇಕ ಕಾರ್ಯಕ್ರಮಗಳೂ ನಡೆದವು. ಆದರೆ, ಈಗೇನೂ ಅದರ ಸದ್ದಿಲ್ಲ. ಸರ್ಕಾರ, ಕಸಾಪ ಅಂತೂ ಈ ಭವನದ ಮೇಲೆ ನಿರ್ಲಕ್ಷ್ಯ ಹೊಂದಿವೆ. ಕಡೇಪಕ್ಷ, ಖಾಸಗಿ ಪ್ರತಿಷ್ಠಾನಗಳು  ಹಿರಿಯ ಸಾಹಿತಿಯ ಹೆಸರನ್ನು ಉಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಉಪಕಾರವಾಗಬಹುದೇನೋ?

- ಕೆ.ಎನ್. ರವಿ
ಚಿತ್ರಗಳು: ಕಡರಹಳ್ಳಿ ಸೀತಾರಾಮು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.