ಬೈಟುಕಾಫಿ

ಖಾಲಿ ಗರ್ಭಗುಡಿ

ಬಂಜೆತನ ನಿವಾರಣೆ ಬಯಸಿ ಬೆಂಗಳೂರಿನ ಬಂಜೆತನ ನಿವಾರಣಾ ಕೇಂದ್ರಗಳಿಗೆ ಭೇಟಿ ನೀಡುತ್ತಿರುವ ದಂಪತಿಗಳ ಸಂಖ್ಯೆ...

ಖಾಲಿ ಗರ್ಭಗುಡಿ
Published On :

ಬಂಜೆತನ ನಿವಾರಣೆ ಬಯಸಿ ಬೆಂಗಳೂರಿನ ಬಂಜೆತನ ನಿವಾರಣಾ ಕೇಂದ್ರಗಳಿಗೆ ಭೇಟಿ ನೀಡುತ್ತಿರುವ ದಂಪತಿಗಳ ಸಂಖ್ಯೆ ಈಚಿನ ವರ್ಷಗಳಲ್ಲಿ ದಿಢೀರ್ ಹೆಚ್ಚಿದೆ.

ಕಳೆದ ಕೆಲವು ವರ್ಷಗಳಲ್ಲಿ ಬೆಂಗಳೂರು ತನ್ನ ಮೂಲ ಸೌಕರ್ಯಗಳು, ಸಂಚಾರ, ಜೀವನಶೈಲಿ, ಕೆಲಸದ ವಿಧಾನಗಳಲ್ಲಿ ಗಣನೀಯ ಬದಲಾವಣೆ ಕಂಡಿದೆ. ಇದರೊಂದಿಗೇ ನಗರದ ಜನಸಂಖ್ಯೆ ಮತ್ತು ಆರೋಗ್ಯ ಸಂಬಂಧಿ ವಿಷಯಗಳಲ್ಲಿಯೂ ಸಾಕಷ್ಟು ಬದಲಾವಣೆಗಳಾಗಿವೆ. ಬೆಂಗಳೂರಿನ ಜನರನ್ನು ಈಚಿನ ದಿನಗಳಲ್ಲಿ ಕಾಡುತ್ತಿರುವ ಬಹುಮುಖ್ಯ ಆರೋಗ್ಯ ಸಂಬಂಧಿ ವಿಷಯವೆಂದರೆ ಗರ್ಭಧಾರಣೆ ಸಮಸ್ಯೆ ಅಥವಾ ಬಂಜೆತನ.
ಸುಮಾರು ಶೇಕಡಾ 12ರಿಂದ 28ರಷ್ಟು ಜನ ಗರ್ಭಧಾರಣೆ ಬಯಸಿದ ಮೊದಲ ವರ್ಷದಲ್ಲಿ ಗರ್ಭ ಧರಿಸುವುದರಲ್ಲಿ ವಿಫಲವಾಗುತ್ತಿದ್ದಾರೆ. ಹಾಗೂ ಶೇಕಡಾ 3ರಿಂದ 7ರಷ್ಟು ಜನ ಮೊದಲ ವರ್ಷದ ನಂತರವೂ ಕೂಡ ಗರ್ಭಧಾರಣೆ ಸಾಧ್ಯವಾಗದ ಸಮಸ್ಯೆ ಎದುರಿಸುತ್ತಾರೆ.
ಪರಿಹಾರ ಬಯಸಿ ಬೆಂಗಳೂರಿನ ಬಂಜೆತನ ನಿವಾರಣಾ ಕೇಂದ್ರಗಳಿಗೆ ಭೇಟಿ ನೀಡುತ್ತಿರುವ ದಂಪತಿಗಳ ಸಂಖ್ಯೆ ಈಚಿನ ವರ್ಷಗಳಲ್ಲಿ ದಿಢೀರ್ ಹೆಚ್ಚಿದೆ. ಪ್ರಸಕ್ತ ದಿನಗಳ ಜೀವನ ಶೈಲಿ ಹಾಗೂ ಕೆಲಸದ ಒತ್ತಡ ದಂಪತಿಗಳ ಸಂತಾನ ಧಾರಣಾ ಸಾಮರ್ಥ್ಯದ ಮೇಲೆ ದುಷ್ಪರಿಣಾಮ ಬೀರಿದೆ ಎಂದು ಬಂಜೆತನ ನಿವಾರಣಾ ತಜ್ಞರು ಈಗ ಗುರುತಿಸಿದ್ದಾರೆ.
ಮಾಹಿತಿ ತಂತ್ರಜ್ಞಾನ ಉದ್ಯಮ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿರುವ ಈ ದಿನಗಳಲ್ಲಿ ಅನೇಕ ಉದ್ಯೋಗಿ ಪುರುಷರು ಮತ್ತು ಮಹಿಳೆಯರು ತಡವಾಗಿ ಮದುವೆಯಾಗುತ್ತಿದ್ದಾರೆ. ಬಂಜೆತನಕ್ಕೆ ಇದೂ ಒಂದು ಬಹುಮುಖ್ಯ ಕಾರಣ ಎಂದು ಬೆಂಗಳೂರಿನ ಬಸವನಗುಡಿಯ ಗುಣಶೀಲ ಐವಿಎಫ್ ಕೇಂದ್ರದ ಬಂಜೆತನ ನಿವಾರಣಾ ತಜ್ಞೆ ಹಾಗೂ ಸ್ತ್ರೀರೋಗ ತಜ್ಞೆ ಡಾ.ದೇವಿಕಾ ಗುಣಶೀಲ ಹೇಳುತ್ತಾರೆ. ವೃತ್ತಿ ಜೀವನದಲ್ಲಿ ಮೇಲೇರುತ್ತಿರುವ ಯುವತಿಯರು ಕುಟುಂಬಕ್ಕೆ ಹೊಚ್ಚಿನ ಆದ್ಯತೆ ಕೊಡದಿರುವುದರಿಂದ ಅವರಿಗೆ ಗೊತ್ತಿಲ್ಲದಂತೆಯೇ, ಸಣ್ಣ ವಯಸ್ಸಿನಲ್ಲಿ ಗರ್ಭ ಧರಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. 30ನೇ ವಯಸ್ಸಿನ ನಂತರ ಮದುವೆಯಾಗುವ ಯುವತಿಯರನ್ನು ಇಂದು ಸಾಕಷ್ಟು ಕಾಣಬಹುದು. ಹಿಂದಿನ ದಿನಗಳಲ್ಲಿ ಯುವತಿಯರ 20-22ನೇ ವಯಸ್ಸಿನ ವೇಳೆಗೆ ಮೊದಲ ಮಗು ಜನಿಸಿರುತ್ತಿತ್ತು ಎನ್ನುತ್ತಾರೆ ಅವರು.
ಗರ್ಭಧಾರಣೆ ಯಶಸ್ವಿಯಾಗಲು ಸತಿ-ಪತಿಯ ಉತ್ತಮ ಸಾಂಸಾರಿಕ ಬದುಕು ಅಗತ್ಯ. ಇಂದು ಬಹುತೇಕ ಕುಟುಂಬಗಳಲ್ಲಿ ಅದು ಕಾಣದಾಗಿದೆ. ಇದಕ್ಕೆ ಬೇರೆ ಬೇರೆ ಶಿಫ್ಟ್‌ಗಳಲ್ಲಿ ಪತಿ ಪತ್ನಿ ಇಬ್ಬರೂ ಕೆಲಸ ಮಾಡುವುದು ಒಂದು ಕಾರಣ. ಅನೇಕ ದಂಪತಿ ಒಂದೇ ಸೂರಿನ ಕೆಳಗೆ ವಾಸಿಸುತ್ತಿದ್ದರೂ, ಒಬ್ಬರನ್ನೊಬ್ಬರು ನೋಡುವುದೂ ಕಷ್ಟವಾಗಿದೆ. ಇನ್ನು ಅನೇಕರು ಕೆಲಸಕ್ಕಾಗಿ ಬೇರೆ ಬೇರೆ ಊರುಗಳಲ್ಲಿ ವಾಸಿಸುವುದರಿಂದ, ಮಹಿಳೆಯ ಫಲವತ್ತಾದ ದಿನಗಳಲ್ಲಿ ಲೈಂಗಿಕ ಸಂಪರ್ಕ ಆಗದೆ ಹೋಗುತ್ತದೆ.
ಆರ್ಥಿಕ ಸ್ವಾತಂತ್ರ್ಯವು ಕೆಲವೊಮ್ಮೆ ದಾಂಪತ್ಯದಲ್ಲಿ ಸಮರಸವನ್ನು ಕಡಿಮೆಗೊಳಿಸುವುದೂ ಕಂಡುಬಂದಿದೆ. ಈಗಿನ ಅನೇಕ ಆಧುನಿಕ ದಂಪತಿಗಳು ಮದುವೆಯಾದ ನಂತರ ವರ್ಷಗಳ ವರೆಗೆ ದೂರವೇ ಉಳಿದುಬಿಡುತಿರುವ ವಿಚಿತ್ರವೂ ಇದೆ. ಇದಕ್ಕೆ ಕಾರಣ ಹೊಂದಾಣಿಕೆ ಅಥವಾ ಲೈಂಗಿಕಾಸಕ್ತಿಯ ಕೊರತೆ.
ಸೋಮಾರಿತನದ ಜೀವನ ಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಗಳು ಮಹಿಳೆಯರಲ್ಲಿ ಬೊಜ್ಜು ತರುತ್ತಿವೆ. ಈ ಬೊಜ್ಜಿನಿಂದ ಪಿಸಿಓ ಸಮಸ್ಯೆ ಉಂಟಾಗುತ್ತಿದೆ. ಇಂದು ಬೆಂಗಳೂರಿನಲ್ಲಿ ಇದೊಂದು ದೊಡ್ಡ ಸಮಸ್ಯೆ. ಸುಮಾರು ಇಪ್ಪತ್ತಕ್ಕೆ ಒಬ್ಬ ಮಹಿಳೆಯಲ್ಲಿ ಪಿಸಿಓ ಇರುವುದನ್ನು ಬಂಜೆತನ ನಿವಾರಣಾ ಆಸ್ಪತ್ರೆಗಳಿಗೆ ಬರುವವರಲ್ಲಿ ಕಾಣಬಹುದು. ಅಲ್ಲದೆ ಋತುಚಕ್ರದಲ್ಲಿ ಸಮರ್ಪಕತೆ ಇಲ್ಲದ ಸುಮಾರು ಶೇಕಡಾ 83ರಷ್ಟು ಮಹಿಳೆಯರು ಪಿಸಿಓಗಳಿಂದ ಬಳಲುತ್ತಾರೆ ಎಂದು ದೇವಿಕಾ ಹೇಳುತ್ತಾರೆ.
ಪುರುಷರನ್ನು ತೆಗೆದುಕೊಂಡರೆ, ಧೂಮಪಾನ, ಕುಡಿತ, ಅನಾರೋಗ್ಯಕರ ಆಹಾರ ಸೇವನೆ ವಿಧಾನ, ಅವಧಿ ಮೀರಿ ಕಂಪ್ಯೂಟರಿನಲ್ಲಿ ಕೆಲಸ, ಪರಿಸರ ಮಾಲಿನ್ಯಗಳಿಂದ ವೀರ್ಯಾಣುಗಳ ಸಂಖ್ಯೆಯ ಮೇಲೆ ದುಷ್ಪರಿಣಾಮ ಕಂಡುಬರುತ್ತಿದೆ. ಬಂಜೆತನ ನಿವಾರಿಸಿಕೊಳ್ಳಲು ಆಸ್ಪತ್ರೆಗೆ ಬರುವ ದಂಪತಿಗಳಲ್ಲಿ ಶೇಕಡಾ 40ರಷ್ಟು ಪುರುಷರಿಂದ ಈ ಸಮಸ್ಯೆ ಉಂಟಾಗಿರುವುದನ್ನು ಕಾಣಬಹುದು ಎಂಬುದು ದೇವಿಕಾ ವಿವರಣೆ. ಹೆಚ್ಚಿನ ಮಾಹಿತಿಗೆ: 080-41312600 / 26673585

ಚಿಕಿತ್ಸೆಗಳು
ಮಹಿಳೆಯಲ್ಲಿನ ಗರ್ಭಧಾರಣೆ ಸಾಮರ್ಥ್ಯದ ಕೊರತೆಗೆ ಈ ಚಿಕಿತ್ಸೆಗಳು ಲಭ್ಯ:
ಸಂಪೂರ್ಣ ಪ್ರಾಥಮಿಕ ತಪಾಸಣೆ

ಐಸಿಎಸ್‌ಐ (ಇಕ್ಸಿ)
ಕೃತಕ ಗರ್ಭಧಾರಣೆಗಳು
ಐವಿಎಫ್
ಐಯುಐ
ಓವಲೇಷನ್ ಇಂಡಕ್ಷನ್
ವೀರ್ಯಾಣು ದಾನ
ಎಂಬ್ರಿಯೋ ಡೊನೇಷನ್
ಎಂಬ್ರಿಯೋ ಫ್ರೀಜಿಂಗ್

ಪುರುಷರಲ್ಲಿನ ಸಾಮರ್ಥ್ಯ ಕೊರತೆಗೆ ಈ  ಚಿಕಿತ್ಸೆಗಳು ಲಭ್ಯ:

ಪ್ರಾಥಮಿಕ ತಪಾಸಣೆ
ವೆರಿಕೋಸಿಲ್ ಸರ್ಜರಿ,
ವ್ಯಾಸೋ-ವ್ಯಾಸಸ್ಟೊಮಿ,
ವ್ಯಾಸೋ-ಎಪಿಡೈಮಲ್ ಅನಸ್ಟೊಮೊಸಿಸ್,
ಟಿಇಎಸ್ ಎ/ಎಂಇಎಸ್‌ಎ/ಪಿಇಎಸ್‌ಎ
ಸಿಮೆನ್ ಫ್ರೀಜಿಂಗ್

ಬಂಜೆತನ ಎಂದರೇನು?
ಗರ್ಭಧಾರಣೆ ಸಾಮರ್ಥ್ಯ ಇಲ್ಲದಿರುವಿಕೆಯನ್ನು ಬಂಜೆತನ ಎಂದು ಹೇಳಲಾಗದು. ಇವೆರಡಕ್ಕೂ ವ್ಯತ್ಯಾಸವಿದೆ. ವರ್ಷಗಳ ಪ್ರಯತ್ನದ ನಂತರವೂ ಗರ್ಭಧಾರಣೆಯಾಗದಿರುವುದಕ್ಕೆ ಗರ್ಭಧಾರಣೆ ಸಾಮರ್ಥ್ಯ ಇಲ್ಲದಿರುವುದು ಎನ್ನಬಹುದು. ಬಂಜೆತನ ಎಂದರೆ ಯಾವುದೇ ವೈದ್ಯಕೀಯ ವಿಧಾನಗಳಿಂದಲೂ ಶಾಶ್ವತವಾಗಿ ಮಕ್ಕಳನ್ನು ಪಡೆಯಲಾಗದ ಸ್ಥಿತಿ. ಗರ್ಭಧಾರಣೆ ಸಾಮರ್ಥ್ಯ ಇಲ್ಲದಿರುವಿಕೆಯಲ್ಲಿ ಎರಡು ವಿಧ. ಒಂದು- ಪ್ರಾಥಮಿಕ. ಅಂದರೆ ಒಂದು ಬಾರಿಯೂ ಗರ್ಭಧಾರಣೆ ಆಗದಿರುವುದು. ಎರಡು- ಮೊದಲ ಗರ್ಭಧಾರಣೆಯ ನಂತರ ಮತ್ತೆ ಗರ್ಭಧಾರಣೆಯಾಗದೆ ಇರುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.