ಶಂಭಾ ಮನೆ ಬಾಡಿಗೆಗೆ

ನಾಡಿನ ಖ್ಯಾತನಾಮ ಸಾಹಿತಿಗಳಾದ ದ.ರಾ. ಬೇಂದ್ರೆ, ಆಲೂರು ವೆಂಕಟರಾವ್ ಹಾಗೂ ಶಂ.ಬಾ. ಜೋಶಿ ಅವರ ಮನೆಗಳು ಕೂಗಳತೆಯಲ್ಲಿವೆ. ಈ ಮೂವರನ್ನು 'ಸಾಧನಕೇರಿಯ ಚೇತನಗಳು' ಎಂದು ಇವತ್ತಿಗೂ ಸಾರಿಗೆ ಸಂಸ್ಥೆ ಸಾಧನಕೇರಿಯ ಬಸ್ಸಿನ ಮೇಲೆ ಅಚ್ಚೊತ್ತಲಾಗಿದೆ. ಸಂಶೋಧನೆ ಹಾಗೂ ಸಾಂಸ್ಕೃತಿಕ ಚಿಂತನೆಯ ಕ್ಷೇತ್ರಗಳನ್ನು ತಮ್ಮ ಪ್ರತಿಭೆಯಿಂದ ಬೆಳಗಿದ, ಕನ್ನಡಿಗರ ಮೂಲ ನೆಲೆ ಬಗ್ಗೆ ಸಂಶೋಧನೆ ನಡೆಸಿದ ಶಂ.ಬಾ. ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ.
ಶಂ.ಬಾ. ಜೋಶಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಗುರ್ಲಹೊಸೂರು ಗ್ರಾಮದಲ್ಲಿ ಜನಿಸಿದವರು. ಮಲಪ್ರಭಾ ನದಿಗೆ ಅಡ್ಡಲಾಗಿ ಕಟ್ಟಲಾದ ರೇಣುಕಾಸಾಗರ ಆಣೆಕಟ್ಟಿನ ಹಿನ್ನೀರಿನಲ್ಲಿ ಈ ಗ್ರಾಮ ಈಗ ಮುಳುಗಿದೆ. 1923ರ ಸಂದರ್ಭ 10 ಗುಂಟೆ ಜಾಗದಲ್ಲಿ ಆರು ಕೋಣೆಗಳ ಮನೆಯನ್ನು ಶಂ.ಬಾ. ನಿರ್ಮಿಸಿದ್ದರು. ಅದಕ್ಕೆ 'ಶಂಕರ ಪಾರ್ವತಿ ನಿಲಯ'ವೆಂದು ಹೆಸರಿಟ್ಟಿದ್ದಾರೆ. ಇಬ್ಬರು ಗಂಡು ಮಕ್ಕಳು ಅಮೆರಿಕದಲ್ಲಿಯೇ ನೆಲೆಸಿದ್ದು, ಸದ್ಯ ಮನೆ ಬಾಡಿಗೆಗಿದೆ. ಮೊಮ್ಮಗಳು ಮುಂಬೈನಲ್ಲಿ ವಾಸಿಸುತ್ತಿದ್ದು, ಧಾರವಾಡದ ಮನೆ ಉಸ್ತುವಾರಿ ಹೊತ್ತಿದ್ದಾರೆ. ಮನೆಯನ್ನು ವಿಸ್ತರಿಸಲಾಗಿದೆ.
ಮನೆ ಬಾಡಿಗೆ ಪಡೆದವರು ಶಂ.ಬಾ. ಅವರ ಅಪ್ಪಟ ಅಭಿಮಾನಿ ವಿ.ಜಿ. ಭಟ್. ಸರ್ಕಾರ ಮಾಡಬೇಕಾದ ಅನೇಕ ಕಾರ್ಯಗಳನ್ನು ವಿ.ಜಿ. ಭಟ್ ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುತ್ತಿದ್ದಾರೆ. ಮನೆಯ ಪ್ರತ್ಯೇಕ ಕೋಣೆಯಲ್ಲಿ ಶಂ.ಬಾ. ಅವರ ಕೃತಿಗಳನ್ನು, ಅವರಿಗೆ ಸಂದಿದ್ದ ಪ್ರಶಸ್ತಿ-ಫಲಕಗಳನ್ನು ಜೋಡಿಸಿ ಇಟ್ಟಿದ್ದಾರೆ. ಶಂ.ಬಾ. ಭಾಷಾ ಸಂಶೋಧನೆಗೆ ಸ್ಥಾಪಿಸಿದ್ದ ಮಾನವ ಧರ್ಮ ಪ್ರತಿಷ್ಠಾನವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದು, ಶಂ.ಬಾ. ಹುಟ್ಟುಹಬ್ಬ, ಶಂ.ಬಾ. ಕುರಿತ ಉಪನ್ಯಾಸ ಏರ್ಪಡಿಸುತ್ತಿದ್ದಾರೆ.
ಹಂಪಿ ವಿವಿಯಲ್ಲಿ ರು. 10 ಲಕ್ಷ ವೆಚ್ಚದಲ್ಲಿ ಅಭಿಮಾನಿಗಳು ಶಂ.ಬಾ. ಪೀಠ ಸ್ಥಾಪಿಸಿದ್ದಾರೆ. ಅಲ್ಲಿ ಶಂ.ಬಾ. ಸಂಶೋಧನೆ ಕುರಿತು ಸಂಶೋಧನೆಗಳು ನಡೆಯುತ್ತಿವೆ. ಬೆಂಗಳೂರಿನಲ್ಲಿ ಶಂ.ಬಾ. ವಿಚಾರ ವೇದಿಕೆ ಹಾಗೂ ಶಿವಮೊಗ್ಗದ ಕನ್ನಡ ಸಂಘ ಪ್ರತಿ ವರ್ಷ ಶಂ.ಬಾ. ಕುರಿತ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿವೆ.
ಏನಾಗಬೇಕು?
ಧಾರವಾಡದಲ್ಲಿ ಶಂ.ಬಾ. ಅವರ ಸ್ಮಾರಕ ಭವನ ಆಗಬೇಕು. ಧಾರವಾಡದ ಪ್ರಮುಖ ರಸ್ತೆ ಅಥವಾ ವರ್ತುಲಕ್ಕೆ ಅವರ ನಾಮಕರಣವಾಗಬೇಕು. ಅವರ ಸಂಶೋಧನೆ ಬಗ್ಗೆ ಅಧ್ಯಯನಗಳು ನಡೆಯಬೇಕಿದೆ. ಇದು ಕರ್ನಾಟಕ ವಿವಿಯಿಂದ ಆಗಬೇಕು ಎಂಬುದು ಅವರ ಅಭಿಮಾನಿಗಳ ಒತ್ತಾಸೆ.
ನಾವು ಮುಂಬೈನಲ್ಲಿ ವಾಸಿಸುತ್ತಿರುವುದರಿಂದ ಮನೆ ಬಾಡಿಗೆ ಕೊಡಲಾಗಿದೆ. ಶಂ.ಬಾ. ಅವರ ಅಪ್ಪಟ ಅಭಿಮಾನಿ ಎಂದೇ ವಿ.ಜಿ. ಭಟ್ ಅವರಿಗೆ ಮನೆ ನೀಡಿದ್ದು, ನಮಗಿಂತಲೂ ಹೆಚ್ಚು ಶಂ.ಬಾ. ಅವರ ಬಗ್ಗೆ ಪ್ರೀತಿ ಇವರಿಗಿದೆ. ಹೀಗಾಗಿಯೇ ನಮ್ಮಜ್ಜನ ಕುರುಹುಗಳು ಇನ್ನೂ ಈ ವಿಶಾಲವಾದ ಪರಿಸರದ ಮನೆಯಲ್ಲಿ ಉಳಿದುಕೊಂಡಿವೆ. ಅಜ್ಜನ ಕುರಿತು ಸರ್ಕಾರ ಇದುವರೆಗೂ ನಮ್ಮನ್ನು ಸಂಪರ್ಕಿಸಿಲ್ಲ.
- ವೈಶಾಲಿ ಅಳವಣಿ, ಶಂ.ಬಾ. ಜೋಶಿ ಮೊಮ್ಮಗಳು
ಶಂ.ಬಾ. ಜೋಶಿ ಹಾಗೂ ವರಕವಿ ದ.ರಾ. ಬೇಂದ್ರೆ ಇವರಿರ್ವರೂ 1996ರ ಜನವರಿ ತಿಂಗಳಿನಲ್ಲಿಯೇ ಜನಿಸಿದವರು. ಶಂ.ಬಾ. ಜನವರಿ 4ರಂದು ಜನಿಸಿದರೆ, ಅದೇ ತಿಂಗಳ 31ರಂದು ಬೇಂದ್ರೆ ಜನಿಸಿದ್ದು. ವಿಕ್ಟೋರಿಯಾ ಹೈಸ್ಕೂಲ್ನಲ್ಲಿಯೇ (ಈಗಿನ ವಿದ್ಯಾರಣ್ಯ ಹೈಸ್ಕೂಲ್) ಇಬ್ಬರೂ ಸೇವೆ ಸಲ್ಲಿಸಿದ್ದರು. ಇಬ್ಬರೂ ಬಡತನದಲ್ಲಿ ಬೆಂದವರು. ವೈಚಾರಿಕ ಕುರುಕ್ಷೇತ್ರದಲ್ಲಿ ಗದಾಯುದ್ಧ ನಡೆಸಿದ ಈ ಮಲ್ಲರು ಕೊನೆಗಾಲದಲ್ಲಿ ಶಾಂತಿಮಂತ್ರ ಪಠಿಸಿದರು ಎಂಬುದು ನಿಜ.
- ಬಸವರಾಜ ಹಿರೇಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


