ತಿದ್ದಿಕೊಳ್ಳುವ ಕಾಲ

ಬಹಳಷ್ಟು ಸಂದರ್ಭದಲ್ಲಿ ನಮಗೇ ಗೊತ್ತಿಲ್ಲದಂತೆ ನಾವು ವಿಕ್ಷಿಪ್ತರಾಗಿ ಬಿಟ್ಟಿರುತ್ತೇವೆ. ಅದೇ ನಮ್ಮ ಸ್ವಭಾವವೇನೋ ಎಂಬಷ್ಟರ ಮಟ್ಟಿಗೆ ಅದು ಬಲಗೊಳ್ಳುತ್ತ ಹೋಗಿರುತ್ತದೆ. ವಿಚಿತ್ರವೆಂದರೆ ನಮ್ಮ ವರ್ತನೆಗಳು ಸಹಜವಾಗಿಲ್ಲ ಎಂಬುದು ನಮಗೆ ಅರಿವಿಗೆ ಬಂದರೂ, ಏನು ವ್ಯತ್ಯಾಸವಾಗಿದೆ, ನಾವು ಹಾಗೇಕೆ ವರ್ತಿಸುತ್ತಿದ್ದೇವೆ ಎಂಬುದಕ್ಕೆ ಕಾರಣಗಳನ್ನು ಕಂಡುಕೊಳ್ಳಲು ಸಾಧ್ಯವಾಗಿರುವುದಿಲ್ಲ. ಸ್ವಲ್ಪ ಸೂಕ್ಷ್ಮವಾಗಿ ನಮ್ಮ ಮನಸ್ಸನ್ನು ನಾವೇ ಓದಿಕೊಂಡರೆ ಇದೇನೂ ಕಷ್ಟವಲ್ಲ. ಆದರೆ ಅದರ ಗೋಜಿಗೇ ಹೋಗುವುದಿಲ್ಲ. ನಾವು ಬದಲಾಗುವುದು ನಮಗೇ ಬೇಕಿರುವುದಿಲ್ಲ. ಇಂಥ ದೌರ್ಬಲ್ಯಗಳನ್ನೇ ಅಸ್ತ್ರವನ್ನಾಗಿಸಿಕೊಂಡು ಸುತ್ತಲಿನ ಪರಿಸರದಲ್ಲಿ ನಮ್ಮ ಇರುವಿಕೆಯನ್ನು ಪ್ರತಿಷ್ಠಾಪಿಸಿಕೊಳ್ಳುವ ಭ್ರಮೆ ನಮ್ಮನ್ನು ಆವರಿಸಿಕೊಂಡಿರುತ್ತದೆ. ಇಂಥ ಭ್ರಮೆಗಳಿಗೂ ಕಾರಣವಿಲ್ಲದಿಲ್ಲ. ಬಾಲ್ಯದಲ್ಲೇ ನಮ್ಮನ್ನು ತಿದ್ದಬೇಕಿದ್ದ ಹೆತ್ತವರು ಯಾವ್ಯಾವುದೋ ಕಾರಣಕ್ಕೆ ನಿರ್ಲ್ಲಕ್ಷಿಸಿಬಿಟ್ಟಿರುತ್ತಾರೆ. ಆಗಲೇ ಇದು ತಪ್ಪು, ಇದು ಸರಿ ಎಂಬುದನ್ನು ವಿಂಗಡಿಸಿ ಹೇಳಿದ್ದರೆ ಮತ್ತೆ ಬೆಳೆಯುವ ಅವಕಾಶವಿರುತ್ತಿರಲಿಲ್ಲ. ನಂತರದ ದಿನಗಳಲ್ಲಿ ಸಮಾಜವೂ ನಮ್ಮನ್ನು ಇದೇ ಕಾರಣಕ್ಕೆ ಪ್ರತ್ಯೇಕಿಸಿ ನೋಡುತ್ತ ಬಂದಿರುತ್ತದೆ. ಅದು ನಮ್ಮಲ್ಲಿನ ವಿಕ್ಷಿಪ್ತತೆ ಬೆಳೆಯಲು ಇನ್ನಷ್ಟು ಇಂಬು ನೀಡುತ್ತದೆ. ನಂತರ ಸಂಸಾರದ ನೊಗವನ್ನು ಹೆಗಲಿಗೇರಿಸಿಕೊಂಡ ಮೇಲೆ ಇದು ಸ್ಫೋಟಗೊಳ್ಳುತ್ತದೆ. ಆರಂಭದಲ್ಲೇ ಇದನ್ನು ಚಿವುಟುವ ಜಾಣ ಸಂಗಾತಿ ಇದ್ದರೆ ಸರಿ. ಇಲ್ಲದಿದ್ದರೆ, ಮುಂದಿನದೆಲ್ಲವೂ ಶೋಚನೀಯ. ಹಾಗೆಂದು ಒಂದು ಹಂತದ ನಂತರ ಏಕಾಏಕಿ ನಿನ್ನ ವರ್ತನೆ ಸರಿ ಇಲ್ಲ... ಎಂದು ದೂಷಣೆಯ, ಆಕ್ಷೇಪಣೆಯ ಧಾಟಿಯಲ್ಲಿ ಹೇಳಿದರೂ ಅದನ್ನು ಒಪ್ಪಿಕೊಂಡು, ಸರಿಪಡಿಸಿಕೊಳ್ಳಲು ಅಹಮಿಕೆ ಅಡ್ಡಿ ಬರುತ್ತದೆ. ಇಷ್ಟರವರೆಗೆ ಯಾರೂ ಹೇಳದಿದ್ದುದನ್ನು ಹೇಳಲು ಇವರಾರು ಎಂಬ ದರ್ಪವನ್ನು ಮನಸ್ಸು ತೋರುತ್ತದೆ. ನಮ್ಮಲ್ಲಿನ ತಪ್ಪನ್ನು ಯಾರೇ ಆಗಲಿ ಎತ್ತಿ ತೋರಿಸಿದಾಗ, ವ್ಯಗ್ರವಾಗುವ ಬದಲು ಸಕಾರಾತ್ಮಕವಾಗಿ ತೆಗೆದುಕೊಂಡರೆ ನಾವು ಸರಿ ಹೋಗಲು ಸಾಧ್ಯ. ಅಂಥ ವೈಶಾಲ್ಯಕ್ಕೆ 'ನಾನು' ಅಡ್ಡಿಯಾಗದಿರಲಿ.
- ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


