ಆಹಾರ ಸಂಸ್ಕೃತಿಯಲ್ಲೇ ಬೆರೆತಿದೆ ಶುಂಠಿ ಮದ್ದು!

ಶುಂಠಿ ನಮಗೆ ಹೊಸತೇನಲ್ಲ. ಭಾರತೀಯ ಅಡುಗೆ ಮನೆಗಳಲ್ಲಿ ಇದು ಇರಲೇಬೇಕು. ತಿಳಿದೋ, ತಿಳಿಯದೆಯೋ ಶುಂಠಿ ನಮ್ಮ ಆಹಾರ ಪದ್ಧತಿಯಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ. ಉಪ್ಪಿಟ್ಟು, ಪೊಂಗಲ್ ಇತ್ಯಾದಿ ತಿನಿಸುಗಳಲ್ಲಿ ಶುಂಠಿ ಬೇಕು. ಇನ್ನು ಶುಂಠಿ ಚಹಾ ಅಂತೂ ಬಹಳ ಪ್ರಸಿದ್ಧ. ಮಜ್ಜಿಗೆ ಜತೆಗೆ ಶುಂಠಿ ಇದ್ದರೆ ರುಚಿಯೇ ಬೇರೆ. ಕಬ್ಬಿನಹಾಲಿನೊಂದಿಗೆ ಶುಂಠಿ ಫ್ಲೇವರ್ ಇದ್ದರಂತೂ ಎಷ್ಟು ಕುಡಿದರೂ ಸಾಕು ಅಂತ ಅನ್ನಿಸುವುದೇ ಇಲ್ಲ. ಮಲೆನಾಡಿನ ಕೆಲವು ಭಾಗಗಳಲ್ಲಿ ಅನ್ನದ ಜತೆ ಬಳಸುವ ಪದಾರ್ಥವಾಗಿ ಶುಂಠಿ ತಂಬುಳಿಯನ್ನೂ ಮಾಡುತ್ತಾರೆ. ಬಹುಶಃ ಉದರ ಸಂಬಂಧಿ ವ್ಯಾಧಿಗಳಿಗೆ ಶುಂಠಿ ಅತ್ಯಂತ ಪರಿಣಾಮಕಾರಿ ಮನೆಮದ್ದು ಆಗಿರುವುದರಿಂದಲೇ ಅದು ನಮ್ಮ ಆಹಾರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿ ಬೆಳೆದು ಬಂದಿರಲಿಕ್ಕೂ ಸಾಕು. ಇವತ್ತಿನ ಪಾಶ್ಟಾತ್ಯ ವೈದ್ಯಲೋಕ ಕೂಡ ಬಹಳಷ್ಟು ಸಮಸ್ಯೆಗಳಿಗೆ ಶುಂಠಿ ಸೇವಿಸಲು ಸಲಹೆ ಮಾಡುತ್ತದೆ ಎಂದರೆ ಅದರ ಮಹತ್ವವನ್ನು ಅರ್ಥ ಮಾಡಿಕೊಳ್ಳಬಹುದು.
ಶುಂಠಿ ಸೇವನೆಯಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ ಎನ್ನುವುದು ಹತ್ತಾರು ಸಂಶೋಧನೆಗಳ ಮೂಲಕ ದೃಢಪಟ್ಟಿದೆ. ಜತೆಗೆ ಇದು ನಮ್ಮ ದೇಹದಲ್ಲಿ ಕಾರ್ಯನಿರ್ವಹಿಸುವುದು ರಕ್ತಪರಿಚಲನಾ ವ್ಯವಸ್ಥೆ ಮೂಲಕವೇ ವಿನಾ ನರವ್ಯೂಹದ ಮೂಲಕ ಅಲ್ಲ. ಹೀಗಾಗಿ ಅತ್ಯಂತ ಕ್ಷಿಪ್ರಗತಿಯಲ್ಲಿ ಪರಿಣಾಮ ಬೀರುತ್ತದೆ. ಆಸ್ಪಿರಿನ್ ಮತ್ತು ಐಬುಪ್ರೊಫೆನ್‌ನಂತಹ ನೋವು ನಿವಾರಕಗಳಿಗೆ ಪರ್ಯಾಯವಾಗಿಯೂ ಶುಂಠಿಯನ್ನು ಬಳಸಲಾಗುತ್ತಿದೆ.ಅಂದರೆ ಇದರಲ್ಲಿ ನೋವು ನಿವಾರಕ ಗುಣವಿದೆ ಎಂತಾಯಿತು.
ಉದರಶೂಲಗಳ ವಿಚಾರಕ್ಕೆ ಬರೋಣ. ಶುಂಠಿಯಲ್ಲಿ ಜಿಂಜರೋಲ್ಸ್ ಮತ್ತು ಶೊಗಲೋಸ್ ಎನ್ನುವ ರಾಸಾಯನಿಕಗಳಿರುತ್ತವೆ. ಹೊಟ್ಟೆ ಕೆಟ್ಟಾಗ ಶುಂಠಿ ಸೇವಿಸಿದಾಗ ಈ ರಾಸಾಯನಿಕಗಳು ನೇರವಾಗಿ ಕರುಳಿನ ಭಾಗದ ಮೇಲೆ ಪರಿಣಾಮ ಬೀರುತ್ತವೆ. ಆ ಭಾಗದಲ್ಲಿನ ಒತ್ತಡ ಕಡಿಮೆ ಮಾಡು ಕರುಳುಗಳ ಮೇಲಿನ ಭಾರ ತಗ್ಗಿಸುತ್ತವೆ. ಇದರಿಂದ ಮಲಬದ್ಧತೆ, ವಾಂತಿ, ವಾಕರಿಕೆ, ಹೊಟ್ಟೆ ಕಲಕಿದಂತಾಗುವುದು ಇತ್ಯಾದಿ ತೊಂದರೆಗಳು ಬಹಳ ಬೇಗ ನಿಯಂತ್ರಣಕ್ಕೆ ಬರುತ್ತವೆ. ತಲೆಸುತ್ತು, ಗ್ಯಾಸ್ ಮೊದಲಾದ ಸಮಸ್ಯೆಗಳಿಗೂ, ಅತಿಸಾರ ನಿಯಂತ್ರಣಕ್ಕೂ ಇದನ್ನು ಔಷಧವಾಗಿ ಬಳಸುವುದುಂಟು. ಬ್ರಿಟಿಷ್ ಮೆಡಿಕಲ್ ಜರ್ನಲ್ 'ಲ್ಯಾನ್ಸೆಟ್' 1982ರಲ್ಲಿಯೇ ಉದರ ಶೂಲೆಗಳಿಗೆ ಶುಂಠಿ 'ಅತ್ಯಂತ ಪರಿಣಾಮಕಾರಿ ಔಷಧ' ಎಂದು ವರ್ಣಿಸಿದೆ. ವಿದೇಶಗಳಲ್ಲಿ ಶುಂಠಿ ಕ್ಯಾಪ್ಸೂಲ್‌ಗಳು ಸಿಗುತ್ತವೆ. ನಮ್ಮಲ್ಲಿ ಈ ಮಾತ್ರೆಗಳು ಇನ್ನೂ ಅಷ್ಟಾಗಿ ಪ್ರಚಲಿತದಲ್ಲಿ ಇಲ್ಲ. ನಮ್ಮ ಆಹಾರ ಸಂಸ್ಕೃತಿಯಲ್ಲೇ ಶುಂಠಿ ಬೆರೆತಿರುವುದರಿಂದ ಅದರ ಅಗತ್ಯವೂ ಅಷ್ಟಾಗಿ ಇಲ್ಲ. ಉದರ ಸಮಸ್ಯೆ ಕಂಡುಬಂದಾಗ ನಿಮಗೆ ಅನುಕೂಲ ಆಗುವ ರೀತಿಯಲ್ಲಿ ಶುಂಠಿಯನ್ನು ಸೇವಿಸಿದರೆ ಆಯಿತು.
ಶುಂಠಿ ಕುರಿತು ಆಸಕ್ತಿದಾಯಕವಾದ ಇನ್ನೊಂದು ಸಂಗತಿ ಇದೆ. ಅದನ್ನು ಮುಂದಿನ ಸಂಚಿಕೆಯಲ್ಲಿ ಹೇಳುತ್ತೇನೆ.
- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


