ಬೈಟುಕಾಫಿ

ಹಳಿ ಮೇಲೆ ಆರೋಗ್ಯ

ಹಳಿ ಮೇಲೆ ಆರೋಗ್ಯ
Published On :

ಲೈಫ್‌ಲೈನ್ ಎಕ್ಸ್‌ಪ್ರೆಸ್ ಎಂಬ ಸಂಚಾರಿ ರೇಲ್ವೆ ಆಸ್ಪತ್ರೆ ಯೋಜನೆ ಇಂದು ಭಾರತ ಸೇರಿದಂತೆ 20 ದೇಶಗಳ ಬಡಬಗ್ಗರ ಪಾಲಿನ ಧನ್ವಂತರಿ ದೇವತೆ.

ಗ್ರಾಮ ಸಮುದಾಯಕ್ಕೆ ವೈದ್ಯಕೀಯ ಮೂಲ ಸೌಕರ್ಯ ಗಗನ ಕುಸುಮವಾಗಿಯೇ ಉಳಿಯಬೇಕೆ? ಬರೋಬ್ಬರಿ 30 ವರ್ಷ ಹಿಂದೆ ಇಂಥ ಆತಂಕದ ಅಂಶವನ್ನೇ ತನ್ನ ಚಿಂತನೆಯಾಗಿಸಿಕೊಂಡ ಸಮಾನ ಮನಸ್ಕರು ಒಂದಾದಾಗ ಹುಟ್ಟಿಕೊಂಡಿದ್ದು ಇಂಪ್ಯಾಕ್ ಇಂಡಿಯಾ ಫೌಂಡೇಷನ್. ಅದರ ಮಹತ್ವದ ಕಾರ್ಯಕ್ರಮವಾಗಿ ಅನುಷ್ಠಾನಕ್ಕೆ ಬಂದಿದ್ದೇ ಲೈಫ್‌ಲೈನ್ ಎಕ್ಸ್‌ಪ್ರೆಸ್ ಎಂಬ ಸಂಚಾರಿ ರೇಲ್ವೆ ಆಸ್ಪತ್ರೆ ಯೋಜನೆ. ಈ ರೈಲಾಸ್ಪತ್ರೆ ಇಂದು ಭಾರತ ಸೇರಿದಂತೆ 20 ದೇಶಗಳ ಬಡಬಗ್ಗರ ಪಾಲಿನ ಧನ್ವಂತರಿ ದೇವತೆ.
ಮಹಾತ್ಮಾ ಗಾಂಧೀಜಿಯವರ 114ನೇ ಜನ್ಮೋತ್ಸವ ಸಂದರ್ಭ (1983ರ ಗಾಂಧೀ ಜಯಂತಿ) ಜನ್ಮ ತಾಳಿದ ಲೈಫ್‌ಲೈನ್ ರೈಲು ಚಿಕಿತ್ಸೆ ಮತ್ತು ನಿರೋಧಕ ಸೇವೆಗಳ ಮೂಲಕ ಗ್ರಾಮ ಭಾರತದಲ್ಲಂತೂ ಕ್ರಾಂತಿ ಮಾಡಿದೆ. ಮಾನವ ವೈಕಲ್ಯಗಳನ್ನು ಕಡಿಮೆಗೊಳಿಸಲು ಆರೋಗ್ಯ ಶಿಕ್ಷಣದ ಮೂಲಕ ಇಂಪ್ಯಾಕ್ ಇಂದು ಜಗತ್ತಿನ 20 ದೇಶಗಳಲ್ಲಿ ಸಂಚಾರಿ ರೈಲಾಸ್ಪತ್ರೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ.

46ನೇ ಲೈಫ್ ಲೈನ್ ಎಕ್ಸಪ್ರೆಸ್
ಕಡಿಮೆ ವೆಚ್ಚದ ತಂತ್ರಜ್ಞಾನ ನಿಜವಾಗಿಯೂ ಹಳ್ಳಿಮಟ್ಟದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬುದು ಸಾಬೀತಾಗಿದ್ದೇ 'ಲೈಫ್ ಲೈನ್ ರೈಲಾಸ್ಪತ್ರೆ' ಎಂದರೂ ತಪ್ಪೇನಿಲ್ಲ. ಕರ್ನಾಟಕದಲ್ಲಿ ಸಂಚಾರದಲ್ಲಿರುವ ಲೈಫ್ ಲೈನ್ ರೈಲು ಗುಲ್ಬರ್ಗ ಜಿಲ್ಲೆಯ ವಾಡಿಯಲ್ಲಿ ಕಳೆದ 2 ವಾರಗಳಿಂದ ಜನತೆಗೆ ಸೇವೆ ನೀಡುತ್ತಿದೆ. ಇದು ಇಂಪ್ಯಾಕ್ 146ನೇ ಲೈಫ್ ಲೈನ್ ಯೋಜನೆ. ಅಕ್ಟೋಬರ್ ಇಡೀ ತಿಂಗಳು ಈ ರೈಲು ಇಲ್ಲಿದ್ದು ಹಿಂದುಳಿದ ನೆಲದ ಬಡಬಗ್ಗರ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುವ ಪ್ರಯತ್ನದಲ್ಲಿದೆ. ಈಗಾಗಲೇ ವಾಡಿಯಲ್ಲಿ 500ಕ್ಕೂ ಹೆಚ್ಚು ಜನ ಲೈಫ್ ಲೈನ್ ಎಕ್ಸ್‌ಪ್ರೆಸ್ ಹತ್ತಿಳಿದು ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ. ಆರೋಗ್ಯ ಸಂಬಂಧಿ ಸಲಹೆ, ಸೂಚನೆ ಪಡೆದುಕೊಂಡಿದ್ದಾರೆ.

ಲೈಫ್ ಲೈನ್ ಎಕ್ಸ್‌ಪ್ರೆಸ್ ಮೈಲಿಗಲ್ಲು

  • ರೈಲಿನಲ್ಲಿ ಜಗತ್ತಿನ ಮೊದಲ ಆಸ್ಪತ್ರೆ ಇದು
  • ಗುಲ್ಬರ್ಗ ಜಿಲ್ಲೆ ವಾಡಿಯಲ್ಲಿ ಸದ್ಯ ಸೇವೆಯಲ್ಲಿರುವುವುದು 146 ನೇ ಲೈಫ್‌ಲೈನ್ ಎಕ್ಸ್‌ಪ್ರೆಸ್
  • ಇಂಪ್ಯಾಕ್ 30 ವರ್ಷಗಳ ತನ್ನ ಅಸ್ತಿತ್ವದಲ್ಲಿ 22 ವರ್ಷಗಳಿಂದ ರೈಲಾಸ್ಪತ್ರೆ ಯೋಜನೆ ರೂಪಿಸಿ ಯಶಸ್ಸು ಗಳಿಸಿದೆ.
  • 8 ಲಕ್ಷ ಗ್ರಾಮೀಣ ಅಂಗವಿಕಲ ಬಡವರಿಗೆ ಲೈಫ್‌ಲೈನ್ ಎಕ್ಸ್‌ಪ್ರೆಸ್‌ನಲ್ಲಿ ಸಂಪೂರ್ಣ ಉಚಿತ ಚಿಕಿತ್ಸೆ.
  • 1.51 ಲಕ್ಷ ವೃತ್ತಿಪರರ ದಾನ ಸೇವೆಗಳಿಂದ ಲೈಫ್‌ಲೈನ್ ರೈಲು ಕಾರ್ಯನಿರ್ವಹಣೆ.
  • 8 ತರಹದ ತೊಂದರೆಗಳ ತಪಾಸಣೆ- ಚಿಕಿತ್ಸೆ (ಕೇಳುವಿಕೆ, ಸೀಳ್ದುಟಿ, ಸುಟ್ಟ ಗಾಯ, ಮೂಳೆ ಚಿಕಿತ್ಸೆ, ಪೋಲಿಯೋ, ಕಣ್ಣಿನ ಪೊರೆ, ದಂತ ಹಾಗೂ ಮೂರ್ಛೆರೋಗ)
ಉಚಿತ ಸೇವೆ
ಆನ್‌ಲೈನ್ ವಿಳಾಸ
ಆನ್‌ಲೈನ್ ದಾನ ವಿಳಾಸ-
ಫೇಸ್ ಬುಕ್ ವಿಳಾಸ
- ಚಿತ್ರ-ಲೇಖನ: ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.