ಬೈಟುಕಾಫಿ

ದೊಡ್ಡಕರುಳು ಎನ್ನುವ ಅನಿಲ ಕಾರ್ಖಾನೆ!

ದೊಡ್ಡಕರುಳು ಎನ್ನುವ ಅನಿಲ ಕಾರ್ಖಾನೆ!
Published On :

ಸಣ್ಣಕರುಳು ಹೀರಿಕೊಳ್ಳದೇ ಬಿಟ್ಟ ವಾಯು ದೊಡ್ಡಕರುಳು ಸೇರುತ್ತದೆ, ಅಲ್ಲಿಂದ ಹೊರ ಹೋಗುತ್ತದೆ ಎನ್ನುವುದನ್ನು ತಿಳಿದಿದ್ದೇವೆ. ಈ ದೊಡ್ಡಕರುಳು ಇದೆಯಲ್ಲ, ಇದು ಒಂದು ಫ್ಯಾಕ್ಟರಿ ಥರ. ಮಾತ್ರವಲ್ಲ, ಬ್ಯಾಕ್ಟೀರಿಯಾಗಳ ಆಶ್ರಯ ತಾಣ ಕೂಡ. ಕಾರ್ಬೊಹೈಡ್ರೇಟ್‌ಗಳನ್ನು ಸೇವಿಸಿದಾಗ ಅದರಲ್ಲಿನ ಸಕ್ಕರೆ, ಪಿಷ್ಟಗಳು ಮತ್ತು ನಾರನ್ನು ಹೊಟ್ಟೆ, ಸಣ್ಣಕರುಳುಗಳು ಸಂಪೂರ್ಣವಾಗಿ ಜೀರ್ಣಿಸಿಕೊಳ್ಳುವುದಿಲ್ಲ, ಹೀರಿಕೊಳ್ಳುವುದೂ ಇಲ್ಲ. ಉಳಿದದ್ದು ದೊಡ್ಡಕರುಳು ಎನ್ನುವ ಕಾರ್ಖಾನೆಗೆ ಸೇರುತ್ತದೆ. ಅಲ್ಲಿ ಒಂದಷ್ಟು ಸಂಕೀರ್ಣ ರಾಸಾಯನಿಕ ಕ್ರಿಯೆ-ಪ್ರತಿಕ್ರಿಯೆಗಳು ನಡೆಯುತ್ತವೆ. ಆ ಪ್ರಕ್ರಿಯೆಯಲ್ಲೂ ಭಾರಿ ಪ್ರಮಾಣದ ವಾಯು ಉತ್ಪತ್ತಿಯಾಗುತ್ತದೆ. ನಾವು ತಿಂಡಿ-ಪಾನೀಯಗಳನ್ನು ಸೇವಿಸುವಾಗ ಸಹಜವಾಗಿ ಒಳಕ್ಕೆ ಎಳೆದುಕೊಳ್ಳುವ ವಾಯುವಿನಲ್ಲಿ ಸಣ್ಣಕರುಳು ಹೀರಿಕೊಳ್ಳದೆ ಬಿಟ್ಟದ್ದೂ ದೊಡ್ಡಕರುಳಿಗೆ ಬರುತ್ತದೆ; ಕಾರ್ಬೊಹೈಡ್ರೇಟ್ ಪದಾರ್ಥಗಳ ಸೇವನೆ ಪರಿಣಾಮವಾಗಿ ಉತ್ಪತ್ತಿಯಾಗುವ ವಾಯು ಅದರೊಂದಿಗೆ ಸೇರಿಕೊಳ್ಳುತ್ತದೆ. ದೊಡ್ಡಕರುಳಿನ ಮೂಲಕ ವಾಯು ನಮ್ಮ ದೇಹದಿಂದ ಹೊರಹೋಗುವುದು ಗುದದ್ವಾರದ ಮೂಲಕ. ಗ್ಯಾಸ್ ಸಮಸ್ಯೆ ತೀವ್ರವಾಗಿದ್ದಾಗ ನನ್ನ ದೊಡ್ಡಪ್ಪನಂತೆ 'ಡೊರಕ್...ಡೊರಕ್...' ಎಂದು ಸದ್ದು ಬರುವುದು ಏಕೆ ಎನ್ನುವುದು ಈಗ ಅರ್ಥವಾಯಿತು ತಾನೆ? ಯಾವ ಪದಾರ್ಥದಿಂದ ಎಷ್ಟು ಗ್ಯಾಸ್ ಉತ್ಪತ್ತಿಯಾಗುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಅದು ಆಯಾ ವ್ಯಕ್ತಿಯ ಜೀರ್ಣಾಂಗ ವ್ಯೂಹದ ಸಾಮರ್ಥ್ಯ ಮತ್ತು ದೇಹಪ್ರಕೃತಿಯನ್ನು ಆಧರಿಸಿರುತ್ತದೆ.
ಹಾಗಾದರೆ ಯಾವ ಪದಾರ್ಥಗಳನ್ನು ಜಾಸ್ತಿ ತಿಂದರೆ ಗ್ಯಾಸ್ಟ್ರಿಕ್ ಸಮಸ್ಯೆ ಉಲ್ಬಣಿಸುತ್ತದೆ ಎನ್ನುವ ಪ್ರಶ್ನೆ. ಇಡೀ ಜಗತ್ತು ಒಪ್ಪಿಕೊಂಡಿರುವ ಅಪಾಯಕಾರಿ ಅನಿಲ ಉತ್ಪಾದಕ ಎಂದರೆ ಅದು ಕಾರ್ಬೊಹೈಡ್ರೇಟ್‌ಗಳು. ಅದರಲ್ಲಿಯೂ ಮೋನೋಸಾಕರೈಡ್ ಅಣುಗಳ ಸಂಯೋಜನೆಯಿಂದ ಉತ್ಪಾದನೆಯಾಗುವ ಕಾರ್ಬೊಹೈಡ್ರೇಟ್‌ಗಳು ಅಥವಾ ಒಲಿಗೊಸಾಕರೈಡ್‌ಗಳು. ಸಕ್ಕರೆ ಇದಕ್ಕೊಂದು ಸ್ಪಷ್ಟ ಉದಾಹರಣೆ. ಸಿಹಿಗೆಣಸು, ಧಾನ್ಯಗಳು; ಹುರಳಿ, ಆಲಸಂದೆ, ಅವರೆ ಮೊದಲಾದ ಬೀನ್ಸ್‌ಗಳಲ್ಲಿ ಇಂಥ ಸಕ್ಕರೆ ಅತ್ಯಧಿಕ ಪ್ರಮಾಣದಲ್ಲಿರುತ್ತದೆ. ಕೆಲವು ತರಕಾರಿಗಳಲ್ಲಿಯೂ ಇದು ಇರುತ್ತದೆಯಾದರೂ, ಆ ಪ್ರಮಾಣ ಬಹಳ ಕಡಿಮೆ. ಇವುಗಳನ್ನು ಪೂರ್ತಿಯಾಗಿ ಅರಗಿಸಿಕೊಳ್ಳಲು ಕಿಣ್ವಗಳ ಕೊರತೆ ಎದುರಾದಾಗ ಒಲಿಗೊಸಾಕರೈಡ್‌ಗಳು ನೇರವಾಗಿ ತಲುಪುವುದು ದೊಡ್ಡಕರುಳನ್ನು. ಅಲ್ಲಿನ ಪ್ರಕ್ರಿಯೆ ಗೊತ್ತೇ ಇದೆ...
ಇಂಥ ಧಾನ್ಯಗಳನ್ನು ಸೇವಿಸಲೇಬಾರದು ಎಂದಲ್ಲ. ಅವನ್ನು ಸೇವಿಸಿದಾಗ ನಿಮಗೆ ಗ್ಯಾಸ್ಟ್ರಿಕ್ ತೊಂದರೆಯ ಅನುಭವ ಆದರೆ ಅಂಥವುಗಳ ಸೇವನೆಯನ್ನು ಮಿತಿಗೊಳಿಸುವುದು ಒಳ್ಳೆಯದು.

- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.