ನೀವು ಯಾವ ವರ್ಗ?
ಕೆಲವರಿರುತ್ತಾರೆ- ಜೀವನವಿಡೀ ದುಡಿಯುತ್ತಲೇ ಇರುತ್ತಾರೆ. ಮನೆಮಂದಿಯ ಮುಖ ಸಹ ನೋಡದೆ ಅಷ್ಟೊಂದು ದುಡಿತವೇಕೆ ಎಂದು ಪ್ರಶ್ನಿಸಿದರೆ ಅವರ ಉತ್ತರ- ಗಳಿಕೆ. ಗಳಿಸಿ ಏನು ಮಾಡುತ್ತಾರೆ? ಮುಂದೆಂದಾದರೂ ಉಪಯೋಗಕ್ಕೆ ಬಂದೀತೆಂದು ಕೂಡಿಡುತ್ತಾರೆ. ಅದನ್ನು ಯಾವತ್ತೂ ಬಳಸುವುದೇ ಇಲ್ಲ. ಮಗುವಿಗೆ ಜಡ್ಡಾದಾಗ, ಮನೆಯವರು ಅಸೌಖ್ಯದಿಂದಿದ್ದಾಗಲೂ ಬಳಸುವುದಿಲ್ಲ. ಹಣ ಇದ್ದರೂ ಬಳಸದ ಬಡವರಿವರು. ಇಂಥವರು ಕ್ರಮೇಣ ತಮ್ಮ ದುಡಿಮೆ, ಗಳಿಕೆ, ಉಳಿಕೆಯ ಚಕ್ರದಲ್ಲೇ ಮುಳುಗೇಳುತ್ತಾ ಬಂಧುಬಳಗದವರಿಂದ ದೂರವಾಗುತ್ತಾ ಹೋಗುತ್ತಾರೆ.
ಇನ್ನು ಕೆಲವರಿದ್ದಾರೆ. ಇವರೂ ದುಡಿಯುತ್ತಾರೆ. ಆದರೆ ತಮಗೆ ದಕ್ಕಿದ ಹಣವನ್ನಷ್ಟೂ ತಮಗಾಗಿಯೇ, ಬಿಂದಾಸ್ ಆಗಿ ಖರ್ಚು ಮಾಡುತ್ತಾರೆ. ಒಂದು ಪೈಸೆಯನ್ನೂ ಕೂಡಿಡರು. ಯಾರಿಗೂ ಸಹಾಯವನ್ನೂ ಮಾಡರು. ಕೇಳಿದವರಿಗೆ ಇಲ್ಲವೆನ್ನುತ್ತಾರೆ. ಆಪತ್ಕಾಲ ಬಂದಾಗ ಅನ್ಯರತ್ತ ಕೈಚಾಚುತ್ತಾರೆ. ಆದರೆ ಆಗ ಅನ್ಯರೂ ಅವರನ್ನು ಕೈಬಿಟ್ಟಿರುತ್ತಾರೆ.
ಇನ್ನು ಮೂರನೆಯ ವರ್ಗದವರನ್ನು ನೋಡಿ. ಇವರೂ ದುಡಿಯುತ್ತಾರೆ. ಕೆಲವೊಮ್ಮೆ ತಮಗೆಷ್ಟು ಬೇಕೋ ಅಷ್ಟನ್ನೂ ಇಟ್ಟುಕೊಳ್ಳರು. ಆದರೆ ಮಿತ್ರರು, ಬಂಧುಬಳಗ ಎಂದರೆ ಇವರಿಗೆ ಪ್ರಾಣ. ಯಾರಿಗೆ ಕಷ್ಟ- ನಷ್ಟವಾದರೂ ಧಾವಿಸಿ ಬರುತ್ತಾರೆ. ತನು- ಮನ- ಧನದ ಸಹಾಯಹಸ್ತ ಚಾಚುತ್ತಾರೆ. ಪರರಿಗೆ ಒದಗುತ್ತಲೇ ತಮ್ಮ ಕೈ ಬರಿದು ಮಾಡಿಕೊಳ್ಳುತ್ತಾರೆ. ಅನ್ಯರಿಗಾಗಿ ತಾವು ಸಾಲಗಾರರಾಗುವುದೂ ಉಂಟು. ತಮ್ಮ ಸುತ್ತಮುತ್ತಲಿನವರು ಕ್ಷೇಮವಾಗಿ ನಗುನಗುತ್ತಿರಬೇಕೆಂಬುದೇ ಇವರ ಬಯಕೆ. ಹೀಗಾಗಿಯೇ, ಇವರಿಗೆ ಕೊಂಚ ತೊಂದರೆಯಾದರೂ ಸಾಕು, ಇವರಿಂದ ಉಪಕೃತರಾದ ಒಬ್ಬರಲ್ಲಾ ಒಬ್ಬರು ಧಾವಿಸಿ ಬರುತ್ತಾರೆ. ಇವರ ಸಜ್ಜನಿಕೆಯೇ ಇವರಿಗೆ ಊರ ತುಂಬಾ ಮಿತ್ರರನ್ನೂ ಬಂಧುಗಳನ್ನೂ ಸೃಷ್ಟಿಸಿರುತ್ತದೆ.
ಈಗ ಹೇಳಿ, ನೀವು ಈ ಮೂರು ವರ್ಗದಲ್ಲಿ ಯಾವ ವರ್ಗಕ್ಕೆ ಸೇರುತ್ತೀರಿ?
-ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

