ದೃಷ್ಟಿಕೋನದಲ್ಲೇ ಎಲ್ಲವೂ ಅಡಗಿದೆ!

ಇಲ್ಲೊಬ್ಬ ಶ್ರೀಮಂತ ತನ್ನ ಅನಾರೋಗ್ಯದಿಂದಾಗಿ ವೈದ್ಯರ ಸಲಹೆಯ ಮೇರೆಗೆ ಕಡಲ ತೀರದಲ್ಲಿ ವಾಕಿಂಗ್ ಹೊರಟಿದ್ದಾನೆ. ಅವನ ಐಷಾರಾಮಿ ಕಾರು ಅವನನ್ನು ಹಿಂಬಾಲಿಸುತ್ತಿದೆ. ಶ್ರೀಮಂತನಿಗೆ ಯಾವುದೇ ರೀತಿಯ ತೊಂದರೆ ಉಂಟಾದರೆ ತಕ್ಷಣದಲ್ಲಿ ಆತನನ್ನು ಆಸ್ಪತ್ರೆಗೆ ಕೊಂಡು ಹೋಗುವ ಮುಂಜಾಗ್ರತಾ ಕ್ರಮ ಅದು. ಅನಾರೋಗ್ಯದಿಂದ ನಡೆಯುತ್ತಿರುವ ಶ್ರೀಮಂತನ ಕಾಗದದ ಮೇಲಿರುವ ಆಸ್ತಿಯನ್ನು ಅವನ ಚಾಲಕ ವಸ್ತುಶಃ ಅನುಭವಿಸುತ್ತಿದ್ದಾನೆ. ಅದೇ ವೈದ್ಯರ ಸಲಹೆಯಂತೆ ನಡೆಯುತ್ತಿರುವ ಶ್ರೀಮಂತ ತನ್ನ ಸಮುದ್ರತಟದ ನಡಿಗೆಯನ್ನು, ಗಾಳಿಯನ್ನೂ ಅನುಭವಿಸುತ್ತಿಲ್ಲ. ಆ ಸಂದರ್ಭದಲ್ಲಿಯೂ ಅವನ ಮನದಲ್ಲಿ ಆಸ್ತಿ ವಿಸ್ತರಿಸುವುದರ ಕುರಿತು, ಅಂತಸ್ತನ್ನೂ ಘನತೆಯನ್ನೂ ಏರಿಸಿಕೊಳ್ಳುವುದರ ಕುರಿತು ಲೆಕ್ಕಾಚಾರ ನಿರಂತರ ಸಾಗಿರುತ್ತದೆ. ಇನ್ನೊಂದೆಡೆ ಇದ್ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೇ ಕಿಟಕಿಯ ಗಾಜು ಇಳಿಸಿ, ಒಂದು ಕೈ ಹೊರಗಿಟ್ಟು, ಮನದಲ್ಲಿ ಮೂಡಿದ ಯಾವುದೋ ಪದ್ಯವನ್ನು ಗುನುಗುನಿಸುತ್ತಾ ಚಾಲಕ ಕಾರು ನಡೆಸುತ್ತಿದ್ದಾನೆ.
ಇನ್ನೊಂದು ಉದಾಹರಣೆ, ಶ್ರೀಮಂತನೊಬ್ಬ ಸಮುದ್ರದ ದಡದಲ್ಲಿ ಸುಂದರವಾದ ಮನೆಯನ್ನು ಕಟ್ಟಿದ್ದಾನೆ. ಹಲವಾರು ಮನೆಗಳು ಇರುವುದರಿಂದಲೋ ಅಥವಾ ಹಲವಾರು ಕೆಲಸಗಳಿರುವುದರಿಂದಲೋ, ಕೆಲವು ವರ್ಷಗಳಿಂದ ಅವನು ಆ ಮನೆಯ ಕಡೆ ಬರಲಾಗುತ್ತಿಲ್ಲ. ಆದರೆ ಆ ಮನೆಯನ್ನು ನೋಡಿಕೊಳ್ಳಲು ಕೆಲವು ಆಳುಗಳನ್ನು ಇಟ್ಟಿದ್ದಾನೆ. ಆ ಆಳುಗಳು ಊರಲ್ಲೆಲ್ಲ ತಮಾಷೆಗಾಗಿ ಆಡಿಕೊಳ್ಳುತ್ತಾರೆ, 'ನಮ್ಮ ಧಣಿಗಳು ಎಷ್ಟು ಒಳ್ಳೆಯವರೆಂದರೆ, ನಮಗಾಗಿಯೇ ಸಮುದ್ರದ ದಡದಲ್ಲಿ ಒಂದು ಮನೆ ಕಟ್ಟಿ, ಅದರಲ್ಲಿ ಉಳಿಯಲು ಸೌಲಭ್ಯ ಒದಗಿಸಿಕೊಟ್ಟು, ಸಂಬಳದ ರೂಪದಲ್ಲಿ ಖರ್ಚಿಗೆಂದು ಹಣವನ್ನೂ ಕೊಡುತ್ತಿದ್ದಾರೆ'. ಒಂದು ವೇಳೆ ನೌಕರ ಇದನ್ನೇ ಸತ್ಯವೆಂದು ತಿಳಿದರೆ ಮನೆಯ ಒಡೆಯನಿಗೆ ಆ ಮನೆ ತನ್ನ ಹೆಸರಿನಲ್ಲಿರುವ ದಾಖಲಾತಿಯ ಬಗ್ಗೆ ಸಮಾಧಾನ, ಆಳಿಗೆ ಅದನ್ನು ವಸ್ತುಶಃ ಅನುಭವಿಸುತ್ತಿರುವುದರ ಬಗ್ಗೆ ಸಮಾಧಾನ. ವ್ಯಕ್ತಿ ಜೀವನದಲ್ಲಿ ತನ್ನ ದೃಷ್ಟಿಕೋನವನ್ನು ಬದಲಾಯಿಸಿಕೊಂಡರೆ ಹೆಚ್ಚು ಸಂತೃಪ್ತನಾಗಿರಬಹುದು.
ಜಗತ್ತಿನ ಹೆಸರುವಾಸಿಯಾದ, ಅತಿದೊಡ್ಡ ಕಂಪನಿಯೊಂದಕ್ಕೆ ನಷ್ಟವಾದ ವಾರ್ತೆ ಬಂತು ಎಂದಿಟ್ಟುಕೊಳ್ಳೋಣ. ಕಳೆದ ಹಲವಾರು ವರ್ಷಗಳಿಂದ ಉತ್ತಮ ಲಾಭಾಂಶ ತೋರಿಸುತ್ತ ಬೆಳೆದು ಬಂದ ಈ ಕಂಪನಿಯಲ್ಲಿ ಎಲ್ಲವೂ ಸರಿಯಾಗಿತ್ತು. ಬಂಡವಾಳ ಮಾರುಕಟ್ಟೆಯಲ್ಲಿ ಶೇರಿನ ದರ, ವಾರ್ಷಿಕ ಲಾಭಾಂಶ ತೋರಿಸುವ ಲೆಕ್ಕಪಟ್ಟಿ, ಎಲ್ಲಿಯೂ ಯಾವುದೇ ರೀತಿಯ ತೊಂದರೆ ಇದ್ದಂತೆ ಕಾಣುತ್ತಿರಲಿಲ್ಲ. ಆದ್ದರಿಂದ ಕಂಪನಿಯೊಂದಿಗೆ ಒಡನಾಟ ಹೊಂದಿದವರೂ, ಪಾಲುದಾರರು, ಶೇರು ಹೋಲ್ಡರ್ಗಳೂ ಸಂತಸದಲ್ಲಿಯೇ ಇದ್ದರು. ಒಂದು ದಿನ ಆ ಕಂಪನಿಯಲ್ಲಿ ದೊಡ್ಡ ಹಗರಣವೊಂದು ನಡೆದಿದ್ದು, ಅದರಲ್ಲಿ ಕೆಲವು ಪ್ರಭಾವಿ ವ್ಯಕ್ತಿಗಳ ಕೈವಾಡವಿದೆ ಎಂದು ತಿಳಿದಾಗ ಎಲ್ಲರಿಗೂ ಸಿಡಿಲು ಬಡಿದಂತಾಗಿತ್ತು. ವಾರ್ಷಿಕ ಆದಾಯದಲ್ಲಿ ಮೋಸದಿಂದ ಲಾಭಾಂಶ ತೋರಿಸಿದ್ದರಿಂದ, ಹಗರಣ ಬಯಲಾದೊಡನೆ ಮಾರುಕಟ್ಟೆಯಲ್ಲಿ ಆ ಕಂಪನಿಯ ಶೇರಿನ ದರ ಪಾತಾಳಕ್ಕೆ ಕುಸಿದಿತ್ತು. ವಾಸ್ತವ ಎಂದರೆ, ಕಂಪನಿ ಕೆಲವು ವರ್ಷಗಳ ಹಿಂದಿನಿಂದಲೇ ನಷ್ಟದಲ್ಲಿತ್ತು. ಆದರೆ ಅದು ಎಲ್ಲರಿಗೆ ತಿಳಿದದ್ದು ಮಾತ್ರ ಹಗರಣ ಬಯಲಾದಾಗ.
(ಮುಂದುವರಿಯುವುದು)
- ಕಿರಣ್ ಉಪಾದ್ಯಾಯ,
keyrun1970@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


